ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಾಸರಿ ವಿದ್ಯಾರ್ಥಿನಿಯಿಂದ ಡಿಸಿಪಿವರೆಗೆ

ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್‌
Last Updated 8 ಮಾರ್ಚ್ 2020, 10:57 IST
ಅಕ್ಷರ ಗಾತ್ರ

ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಂತಹ ಮಹತ್ವದ ಹುದ್ದೆ ನಿರ್ವಹಿಸುತ್ತಿರುವ ಐಪಿಎಸ್‌ ಅಧಿಕಾರಿ ಸೀಮಾ ಲಾಟ್ಕರ್‌ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ. ಉತ್ಸಾಹದ ಚಿಲುಮೆಯಾಗಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

***

ಬೆಳಗಾವಿ: ಶಾಲೆಯಲ್ಲಿದ್ದಾಗ ನಾನು ಕೂಡ ಸರಾಸರಿ ವಿದ್ಯಾರ್ಥಿನಿಯೇ. ಒಮ್ಮೆಯೂ ಶಾಲೆಯ ತರಗತಿಯಲ್ಲಿ ಎದ್ದು ‍ಶಿಕ್ಷಕರನ್ನು ಪ್ರಶ್ನೆ ಕೇಳಿರಲೇ ಇಲ್ಲ. ಆದರೆ, ಕ್ರಮೇಣ ಸಾಮರ್ಥ್ಯ ಹಾಗೂ ಕೌಶಲಗಳನ್ನು ವೃದ್ಧಿಸಿಕೊಂಡೆ. ಈಗ ಸಾವಿರಾರು ಮಂದಿ ಮುಂದೆ ಧೈರ್ಯವಾಗಿ ನಿಂತು ಮಾತನಾಡುತ್ತೇನೆ. ಸಂವಾದ ನಡೆಸುತ್ತೇನೆ. ಇದು ಶಿಕ್ಷಣದಿಂದ ಸಾಧ್ಯವಾಗಿದೆ.

ಕಂಪ್ಯೂಟರ್‌ ಸೈನ್ಸ್‌ ಸ್ನಾತಕೋತ್ತರ ಪದವೀಧರೆಯಾದ ನಾನು, ನಾಗರಿಕ ಸೇವೆಯಲ್ಲಿ ಸಮರ್ಪಿಸಿಕೊಳ್ಳಬೇಕೆಂದು 2005ರಲ್ಲಿ ಪೊಲೀಸ್‌ ಸೇವೆಗೆ ಸೇರಿದೆ.

ಸಮಯವಿಲ್ಲ ಎನ್ನುವುದನ್ನು ಒಪ್ಪಲಾಗದು. ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಕೌಶಲ ಕಲಿಯಬೇಕು. ಈಗಲೂ ನಾನು ನಿತ್ಯ ಒಂದಿಲ್ಲೊಂದು ಹೊಸ ಶಬ್ದ ಕಲಿಯುತ್ತೇನೆ. ಆಗಾಗ ನನ್ನಿಷ್ಟದ ಸಿತಾರ್ ನುಡಿಸುತ್ತೇನೆ. ಪುಸ್ತಕ ಓದುತ್ತೇನೆ. ಇದೆಲ್ಲದಕ್ಕೂ ಪರಿಶ್ರಮವೇ ದಾರಿ. ಯಶಸ್ಸು ಎನ್ನುವುದು ಮ್ಯಾಜಿಕ್ ಅಲ್ಲ. ಉತ್ತಮ ಹವ್ಯಾಸಗಳಿಂದ ಅದು ಬರುತ್ತದೆ. ಸಮಾನತೆಗಾಗಿ ಸಂಘರ್ಷಕ್ಕಿಳಿಯುವುದೂ ಸಲ್ಲ. ನಮ್ಮ ಕ್ಷೇತ್ರದಲ್ಲಿ ನಾವು ಶ್ರದ್ಧೆಯಿಂದ ದುಡಿದರೆ ಮುಂದೆ ಬರುತ್ತೇವೆ.

ಮದುವೆಯಾದ ಮೇಲೆ ಕಲಿಕೆ ನಿಲ್ಲಿಸಿಲ್ಲ. ಐಪಿಎಸ್‌ ಅಧಿಕಾರಿಯಾದ ಬಳಿಕ ಡಿ‍ಪ್ಲೊಮಾ ಮಾಡಿ ಜರ್ಮನ್‌ ಭಾಷೆ ಕೋರ್ಸ್‌ ಮಾಡಿ ಜರ್ಮನ್‌ ಭಾಷೆ ಕಲಿತೆ. ಸಿತಾರ್ ಕಲಿತೆ.

ಸವಾಲುಗಳು ಎಲ್ಲರಿಗೂ ಇರುತ್ತವೆ. ಅವುಗಳನ್ನು ಮೀರಿ ನಿಲ್ಲುವುದಕ್ಕೆ ಜ್ಞಾನ ಸಂಪಾದನೆ ಬೇಕಾಗುತ್ತದೆ. ಇದಕ್ಕೆ ಶಿಕ್ಷಣ ಅತ್ಯಗತ್ಯ. ನಮ್ಮ ಸಾಮರ್ಥ್ಯ ತಿಳಿದುಕೊಂಡು, ಅದನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರಬೇಕು. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಕಾರ್ಯನಿರ್ವಹಿಸುವಾಗ ಹಲವು ಸವಾಲುಗಳು ಸಹಜವಾಗಿಯೇ ಎದುರಾಗುತ್ತವೆ. ಅವುಗಳನ್ನು ಎದುರಿಸುವ ಧೈರ್ಯವನ್ನು ಅನುಭವವೇ ಕಲಿಸುತ್ತಿದೆ. ಸಹೋದ್ಯೋಗಿಗಳ ಸಹಕಾರವೂ ಇದೆ. ಸಮಾನತೆಯ ಯುಗದಲ್ಲಿದ್ದೇವೆ ನಿಜ. ಅದಕ್ಕೆ ಕುಟುಂಬದ ಬೆಂಬಲವೂ ಬೇಕಾಗುತ್ತದೆ. ಅದು ನನಗೆ ಸಿಕ್ಕಿದೆ. ಸಂಗಾತಿಯೂ ಸಹಕರಿಸುತ್ತಿದ್ದಾರೆ.

ಈಗ, ಮಹಿಳೆ ಎಲ್ಲ ರಂಗಗಳಲ್ಲೂ ಸಾಧನೆ ಮಾಡಿ ತೋರಿಸಿದ್ದಾಳೆ. ಯಾವುದರಲ್ಲೂ ಹಿಂದಿಲ್ಲ. ಚಾಲಕಿಯಿಂದ ಹಿಡಿದು ಪೈಲಟ್‌ವರೆಗೆ ಇದ್ದಾರೆ. ಪಂಚಾಯಿತಿ ಅಧ್ಯಕ್ಷರಿಂದ ಉನ್ನತ ಹುದ್ದೆಯನ್ನೂ ಏರಿದ್ದಾರೆ. ವಿಜ್ಞಾನಿಗಳಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ್ದಾರೆ. ಪೊಲೀಸ್ ಅಧಿಕಾರಿಗಳಾಗಿದ್ದಾರೆ. ಇತರರಿಗೂ ಪ್ರೇರಣೆಯೂ ಆಗಿದ್ದಾರೆ. ಉದ್ಯಮಿಗಳಾಗಿದ್ದಾರೆ. ಆರ್ಥಿಕವಾಗಿ ಸಬಲರಾದವರೂ ಇದ್ದಾರೆ. ನಾಲ್ಕು ಗೋಡೆಗಳ ಚೌಕಟ್ಟಿನಿಂದ ಹೊರ ಬರುತ್ತಿದ್ದಾರೆ. ಸರ್ಕಾರಗಳಿಂದಲೂ ಬೆಂಬಲ ದೊರೆಯುತ್ತಿದೆ. ಇದು ಗ್ರಾಮೀಣ ಪ್ರದೇಶದಲ್ಲೂ ಪ್ರತಿಫಲಿಸಬೇಕು. ಇದೇ ಈಗಿರುವ ಸವಾಲು. ಅಲ್ಲಿನ ಯುವತಿಯರು, ಮಹಿಳೆಯರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದಕ್ಕಾಗಿ ಗ್ರಾಮೀಣ ಭಾರತದ ಮನೋಭಾವ ಬದಲಾಗಬೇಕು. ಜಾಗೃತಿಯ ದೀಪ ಬೆಳಗಲು ಎಲ್ಲರೂ ಕೈಜೋಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT