ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮಹಾಮಳೆ; ಸಂಕಷ್ಟಕ್ಕೆ ಸಿಲುಕಿದ 51 ಸಾವಿರ ಜನ

15 ಸಾವಿರ ಜನರ ರಕ್ಷಣೆ l 340 ಸೇತುವೆ ಮುಳುಗಡೆ
Last Updated 7 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಕೊಲ್ಹಾಪುರ/ ಭುವನೇಶ್ವರ: ಮಹಾರಾಷ್ಟ್ರ, ಒಡಿಶಾ ಸೇರಿದಂತೆ ದೇಶದ ಹಲವೆಡೆ ಬುಧವಾರವೂ ಮಳೆಯ ರೌದ್ರ ನರ್ತನ ಮುಂದುವರೆದಿದೆ.

ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮಹಾಮಳೆಯಿಂದಾಗಿ 204 ಗ್ರಾಮಗಳ 51 ಸಾವಿರ ಜನರು ತೊಂದರೆಗೆ ಸಿಲುಕಿದ್ದಾರೆ. ಅಲ್ಲದೆ 342 ಸೇತುವೆಗಳು ಮುಳುಗಡೆಯಾಗಿವೆ.

ಕೊಲ್ಹಾಪುರ, ಸಾಂಗ್ಲಿ ಜಿಲ್ಲೆಯಲ್ಲಿ ನೌಕಾ ಪಡೆಯ ಐದು ರಕ್ಷಣಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. 15 ಸಾವಿರ ಜನರನ್ನು ಬುಧವಾರ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.ರಕ್ಷಣಾ ಕಾರ್ಯಕ್ಕೆ 45 ಬೋಟ್‌ಗಳನ್ನು ಬಳಸಲಾಗುತ್ತಿದೆ ಎಂದು ಕೊಲ್ಹಾಪುರದ ಜಿಲ್ಲಾಧಿಕಾರಿ ಸಂಜಯ್‌ ಶಿಂಧೆ ತಿಳಿಸಿದ್ದಾರೆ.

ಮುಳುಗಡೆಯಾಗಿರುವ ಸೇತುವೆಗಳು ಸೇರಿದಂತೆ 29 ರಾಜ್ಯ ಹೆದ್ದಾರಿ, 56 ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಮುಂಬೈ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ– 4, ಕೊಲ್ಹಾಪುರ– ರತ್ನಗಿರಿ ಹೆದ್ದಾರಿಯಲ್ಲೂ ಸಂಚಾರ ನಿಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮಳೆಯಿಂದಾಗಿ ಬುಧವಾರವೂ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳ ಶಾಲಾ– ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಒಡಿಶಾ– ಎರಡು ಜಿಲ್ಲೆಗಳಲ್ಲಿ ಪ್ರವಾಹ:

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಒಡಿಶಾದ ಕೆಲವೆಡೆ ತೀವ್ರ ಮಳೆಯಾಗಿದ್ದು, ಎರಡು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ.

ಅಂಬಡೋಲಾ ರೈಲ್ವೆ ನಿಲ್ದಾಣದ ಬಳಿ ಸರಕು ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ. ಅಲ್ಲದೆ ಹಳಿಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಈ ಭಾಗದಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಅಥವಾ ಬೇರೆಡೆಗೆ ತಿರುಗಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದಕ್ಷಿಣ ಒಡಿಶಾದ ಮಲ್ಕನ್‌ಗಿರಿ, ರಾಯಗಡ, ಕೊರಾಪುಟ್‌, ಕಂಧಮಾಲ್‌ ಮತ್ತು ಗಜಪತಿ ಜಿಲ್ಲೆಗಳಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಮಲ್ಕನ್‌ಗಿರಿ ಮತ್ತು ರಾಯಗಡ ಜಿಲ್ಲೆಗಳು ಪ್ರವಾಹದ ಭೀತಿ ಎದುರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಲ್ಕನ್‌ಗಿರಿ ಜಿಲ್ಲೆಯಲ್ಲಿ 21 ಕಡೆ ಪುನರ್‌ವಸತಿ ಶಿಬಿರಗಳನ್ನು ತೆರೆಯಲಾಗಿದೆ. ಜಿಲ್ಲೆಯ ಮರೂನ್ಡ್‌ ಪ್ರದೇಶದ ಜನರನ್ನು ಈ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ಹರಿಯುವ ಸಿಲೆರು, ಸಬೆರಿ ಮತ್ತು ಸಪ್ತಧಾರಾ ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ. ತೀವ್ರ ಮಳೆಯ ಕಾರಣ ಜಿಲ್ಲೆಯ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಲ್ಕನ್‌ಗಿರಿಯಲ್ಲಿ ಮಂಗಳವಾರ 129.26 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ ಇದೇ 9ರವರೆಗೆ ತೀವ್ರ ಮಳೆಯಾಗುತ್ತದೆ ಎಂಬ ಮುನ್ಸೂಚನೆಯನ್ನೂ ನೀಡಿದೆ.

ಸಂಕಷ್ಟಕ್ಕೆ ಸಿಲುಕಿರುವವರ ರಕ್ಷಣೆಗೆ ಒಡಿಶಾ ವಿಪತ್ತು ನಿರ್ವಹಣಾ ಕಾರ್ಯ ಪಡೆ (ಒಡಿಆರ್‌ಎಎಫ್‌) ಶ್ರಮಿಸುತ್ತಿದೆ. ಜಲಾವೃತಗೊಂಡಿರುವ ರಸ್ತೆಗಳು ಮತ್ತು ಸೇತುವೆಗಳ ಮೇಲೆ ವಾಹನ ಚಲಿಸದಂತೆ ನಿಯಂತ್ರಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟ

ಶಿಮ್ಲಾ (ಪಿಟಿಐ): ಹಿಮಾಚಲ ಪ್ರದೇಶದಲ್ಲಿ ಬುಧವಾರ ಮೇಘ ಸ್ಫೋಟ ಸಂಭವಿಸಿದ್ದು, ಭಾರಿ ಮಳೆ ಸುರಿದಿದೆ. ಇದರಿಂದ ರಾಜ್ಯದ ಕೆಲವೆಡೆ ಪ್ರವಾಹ ಎದುರಾಗಿದೆ.

ಶಿಮ್ಲಾದ ಸಬ್ಜಿ ಮಂಡಿ ಬಳಿ ನುಗ್ಗಿದ ದೊಡ್ಡ ಪ್ರಮಾಣದ ನೀರು, ಅಲ್ಲಿದ್ದ ಕಾರೊಂದನ್ನು ಕೊಚ್ಚಿಕೊಂಡು ಹೋಯಿತು. ಈ ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಇಲ್ಲಿನ ಪೊಲೀಸ್‌ ವರಿಷ್ಠಾಧಿಕಾರಿ ಗೌರವ್‌ ಸಿಂಗ್‌ ತಿಳಿಸಿದ್ದಾರೆ.

ಮೇಘ ಸ್ಫೋಟದಿಂದ ಆಗಿರುವ ನಷ್ಟದ ಅಂದಾಜು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT