ಭಾನುವಾರ, ಮಾರ್ಚ್ 29, 2020
19 °C
ಅರಬ್ಬಿ ಸಮುದ್ರದ ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತ * ಇಂದು ಚಂಡಮಾರುತ ಸೃಷ್ಟಿ ಸಂಭವ

ಕರಾವಳಿ, ಮಲೆನಾಡು: ಭಾರಿ ಮಳೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅರಬ್ಬಿ ಸಮುದ್ರ ಮತ್ತು ಲಕ್ಷ ದ್ವೀಪ ‍ಪ್ರದೇಶದಲ್ಲಿ ವಾಯುಭಾರ ಕುಸಿತವಾಗಿದೆ. ಇದರ ಪರಿಣಾಮ ಶುಕ್ರವಾರದ ವೇಳೆಗೆ ಮತ್ತಷ್ಟು ತೀವ್ರಗೊಂಡು ಚಂಡಮಾರುತ ಉಂಟಾಗುವ ಲಕ್ಷಣ ಘೋಚರಿಸಿದ್ದು, ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆ
ಯಾಗುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ‘ರೆಡ್‌ ಅಲರ್ಟ್‌’ ಘೋಷಣೆ ಮಾಡಿದ್ದು, ಸಮುದ್ರದಲ್ಲಿ ಭಾರಿ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ತುರ್ತು ಪರಿಹಾರಕ್ಕಾಗಿ ತಟರಕ್ಷಕ ದಳದ ಘಟಕಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ಕರಾವಳಿ ತಟರಕ್ಷಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಅಂಕೋಲಾದ ಬಳಿ ಗುರುವಾರ ಸಂಜೆ ಸಮುದ್ರದಲ್ಲಿ ಚಂಡಮಾರುತದ ಸುಳಿಗೆ ಸಿಲುಕಿದ್ದ ‘ಸಾಯಿ ಕಲಾಶ್’ ಎಂಬ ಬಾರ್ಜ್‌ನಲ್ಲಿದ್ದ ಒಂಬತ್ತು ಜನರನ್ನು ಕರಾವಳಿ ಕಾವಲು ಪಡೆಯ ಪೊಲೀಸರು ರಕ್ಷಿಸಿದ್ದಾರೆ. ಈ ಬಾರ್ಜ್‌ ಮಂಬೈನಿಂದ ಮಂಗಳೂರಿಗೆ ತೆರಳುತ್ತಿತ್ತು.

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಬುಧವಾರ ರಾತ್ರಿ ಶುರುವಾದ ಮಳೆ, ಗುರುವಾರ ಮಧ್ಯಾಹ್ನದವರೆಗೂ ಮುಂದುವರಿಯಿತು. ಮುರ್ಡೇಶ್ವರದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಮೀಪದಲ್ಲಿದ್ದ ಅಂಗಡಿ ಮುಂಗಟ್ಟುಗಳು ಮುಳುಗಿವೆ. ಭಟ್ಕಳ, ಕಾರವಾರದ ದೇವಭಾಗದ ದಡದಲ್ಲಿ ನಿಲ್ಲಿಸಿದ್ದ ಮೂರು ನಾಡದೋಣಿಗಳಿಗೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ತುಂಬಿ ಹರಿಯುತ್ತಿದ್ದ ಗರ್ಜಿಹಳ್ಳದಲ್ಲಿ ಯುವಕನೊಬ್ಬ ಕೊಚ್ಚಿಹೋಗಿದ್ದಾನೆ.

ಬೆಳಗಾವಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಕೃಷ್ಣಾ ನದಿಯ ಪ್ರವಾಹವೂ ಇಳಿಮುಖವಾಗಿದೆ. ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳಹರಿವು ಮತ್ತು ಹೊರಹರಿವು ಗುರುವಾರ ಮತ್ತಷ್ಟು ತಗ್ಗಿದೆ.

ಮಲಪ್ರಭಾ ನದಿ ಪ್ರವಾಹದಿಂದ ಗದಗ- ಬಾಗಲಕೋಟೆ ರಸ್ತೆಯ ಚೊಳಚಗುಡ್ಡ ಗ್ರಾಮದ ಸೇತುವೆಯಲ್ಲಿ ಪ್ರವಾಹ ಕಡಿಮೆ ಆಗಿದ್ದು ರಸ್ತೆ ಸಂಚಾರ ಆರಂಭವಾಗಿದೆ. ಆದರೆ ಸತತ ನಾಲ್ಕನೇ ದಿನವೂ ಹುಬ್ಬಳ್ಳಿ– ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಆರಂಭವಾಗಿಲ್ಲ.

ಬೆಳಗಾವಿ ಜಿಲ್ಲೆಯ ವಿವಿಧೆಡೆ ಮಳೆಯ ರಭಸ ಕಡಿಮೆಯಾಗಿದೆ. ಜಲಾವೃತವಾಗಿರುವ ಸೇತುವೆಗಳು ಯಥಾಸ್ಥಿತಿಯಲ್ಲಿವೆ.

ಕಲಬುರ್ಗಿ, ರಾಯಚೂರು, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಗುರುವಾರವೂ ಕೆಲಹೊತ್ತು ಮಳೆಯಾಗಿದೆ. 

ಪ್ರವಾಹದಿಂದ ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಡ್ಜ್‌ ಕಂ ಬ್ಯಾರೇಜ್‌, ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ, ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿವೆ. ಸೇನಾ ತಂಡವೊಂದು ರಾಯಚೂರು ಜಿಲ್ಲೆಗೆ ಬಂದಿದ್ದು, ನದಿತೀರದಲ್ಲಿ ಕಟ್ಟೆಚ್ಚರ ವಹಿಸಿದೆ.

ಯಾದಗಿರಿಯ ಕೊಳ್ಳೂರ(ಎಂ) ಗ್ರಾಮದ ಬಳಿಯ ಕೃಷ್ಣಾ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಶಹಾಪುರ –ದೇವದುರ್ಗ ಹೆದ್ದಾರಿ ಸಂಪೂರ್ಣ ಸ್ಥಗಿತವಾಗಿದೆ.

ಪುತ್ತೂರು ತಾಲ್ಲೂಕಿನಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಪುತ್ತೂರು-ಕುಂಜೂರುಪಂಜ- ಪಾಣಾಜೆ ರಸ್ತೆಯಲ್ಲಿನ ಚೆಲ್ಯಡ್ಕ ಸೇತುವೆ ಜಲಾವೃತಗೊಂಡಿದೆ. ಉಚ್ಚಿಲ ಸೋಮೇಶ್ವರ ಪ್ರದೇಶದಲ್ಲಿ ತೀವ್ರ ಕಡಲ್ಕೊರೆತ ಕಾಣಿಸಿಕೊಂಡಿದೆ.

ಶೃಂಗೇರಿಯಲ್ಲಿ ತುಂಗಾನದಿ ಉಕ್ಕಿ ಹರಿಯುತ್ತಿದ್ದು, ಶಾರದಾ ಪೀಠದ ಕಪ್ಪೆ ಶಂಕರ ದೇವಾಲಯ ಮುಳುಗಿದೆ. 

ಕಾಲುಜಾರಿ ಬಿದ್ದು ವೃದ್ಧೆ ನದಿಪಾಲು: ಕಡೂರು ತಾಲ್ಲೂಕಿನ ಮಲ್ಲಿದೇವಿಹಳ್ಳಿ ಬಳಿಯ ಶಂಖತೀರ್ಥದಲ್ಲಿ (ವೇದಾವತಿನದಿ) ಕಾಲುಜಾರಿ ಬಿದ್ದು ಕರಿಯಮ್ಮ (82) ಎಂಬುವವರು ನೀರುಪಾಲಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವ ಹೊರ ತೆಗೆದಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ, ತಲಕಾವೇರಿ, ಮದೆನಾಡು, ಮೂರ್ನಾಡು ವ್ಯಾಪ್ತಿಯಲ್ಲಿ ‌ಗುರುವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದೆ.

ಮೈಸೂರಿನಲ್ಲಿ ಅರ್ಧತಾಸು ಬಿರುಸಿನ ಮಳೆಯಾಗಿದೆ.

ಶಿವಮೊಗ್ಗ ನಗರ ಸುತ್ತಮುತ್ತ, ಸಾಗರ, ಜೋಗ–ಕಾರ್ಗಲ್‌ ವ್ಯಾಪ್ತಿಯಲ್ಲಿ, ತೀರ್ಥಹಳ್ಳಿ, ಕೋಣಂದೂರು, ಶಿಕಾರಿಪುರ, ಶಿರಾಳಕೊಪ್ಪ, ಸೊರಬ, ಹೊಸನಗರ, ರಿಪ್ಪನ್‌ಪೇಟೆ, ಭದ್ರಾವತಿ ಸುತ್ತಮುತ್ತ ಸಾಧಾರಣ ಮಳೆಯಾಗಿದೆ.

ದಾವಣಗೆರೆ ನಗರದಲ್ಲಿ ಮಧ್ಯಾಹ್ನ ವೇಳೆಗೆ ಉತ್ತಮ ಮಳೆಯಾಯಿತು. ಹರಪನಹಳ್ಳಿ, ಉಚ್ಚಂಗಿದುರ್ಗ, ಮಲೇಬೆನ್ನೂರಿನಲ್ಲಿ ಉತ್ತಮ ಮಳೆಯಾಗಿದೆ. ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗ್ರಾಮದಲ್ಲಿ ಎರಡು ಮನೆಗಳು ಕುಸಿದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು