ಸೋಮವಾರ, ಆಗಸ್ಟ್ 26, 2019
21 °C

ಶಿವಮೊಗ್ಗ: ಮಳೆ ಅಬ್ಬರ – ಇಬ್ಬರ ಸಾವು

Published:
Updated:

ಶಿವಮೊಗ್ಗ: ಜಿಲ್ಲೆಯ ಎಲ್ಲೆಡೆ ಬುಧವಾರವೂ ಮಳೆಯ ಅಬ್ಬರ ಮುಂದುವರಿದಿದೆ.

ಶಿವಮೊಗ್ಗದಲ್ಲಿ ತುಂಬಿ ಹಿರಿಯುತ್ತಿರುವ ತುಂಗಾ ನದಿಯಲ್ಲಿ ಮಹಿಳೆಯೊಬ್ಬರು ಕೊಚ್ಚಿಹೋಗಿದ್ದಾರೆ.

ಮಹಿಳೆ ನೀರು ಪಾಲಾಗುತ್ತಿರುವ ವಿಡಿಯೊವನ್ನು ಅಲ್ಲಿದ್ದ ಜನ ಸೆರೆ ಹಿಡಿದಿದ್ದಾರೆ. ಅಗ್ನಿಶಾಮಕ ಸೇವೆಯ ಸಿಬ್ಬಂದಿ, ಪೊಲೀಸರು ಮೃತದೇಹದ ಹುಡುಕಾಟ ನಡೆಸಿದ್ದಾರೆ. ಮಹಿಳೆ ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.

ಶಿಕಾರಿಪುರದ ಚಿಕ್ಕಮಾಗಡಿ ರೈತ ಲೋಕೇಶ್ ತಮ್ಮ ತೋಟದಲ್ಲಿ ನಿಂತ ನೀರು ನೋಡಲು ಹೋದ ಸಮಯದಲ್ಲಿ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ.

ಸಾಗರ ತಾಲ್ಲೂಕಿನ ಆನಂದಪುರ ಬಳಿ ಕೊರ್ಲಿಕೊಪ್ಪಕ್ಕೆ ತೆರಳುತ್ತಿದ್ದ ಬೈಕ್ ಸವಾರ ಯೋಗೇಂದ್ರ ಅವರ ಮೇಲೆ ಮರ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೊಸನಗರ ತಾಲ್ಲೂಕಿನ ನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಪೇಟೆಯಲ್ಲಿ ನಾಲ್ಕು ಮನೆಗಳು ಕುಸಿದಿವೆ. ನಿರಾಶ್ರಿತ ಕುಟುಂಬಗಳಿಗೆ ಸರ್ಕಾರಿ ಬಾಲಕರ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.

ತೀರ್ಥಹಳ್ಳಿ–ನಗರ (ಬಿದನೂರು) ಸಂಪರ್ಕ ರಸ್ತೆ ಕಡಿತಗೊಂಡಿದೆ. ಭದ್ರಾವತಿಯಲ್ಲಿ 22 ಮನೆಗಳು, ಶಿವಮೊಗ್ಗ ನಗರದಲ್ಲಿ 50ಕ್ಕೂ ಹೆಚ್ಚು ಮನೆಗಳು ಸೇರಿ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಶಿವಮೊಗ್ಗ ನಗರದಲ್ಲಿ ತುಂಗಾ ನಾಲೆ ನೀರು ತಗ್ಗು ಪ್ರದೇಶಗಳಿಗೆ ಹರಿದ ಪರಿಣಾಮ ಟಿಪ್ಪು ನಗರ, ವೆಂಕಟೇಶ ನಗರ, ಟ್ಯಾಂಕ್ ಮೊಹಲ್ಲಾ, ವಾದಿಯಾ ಹುದಾ ನಗರಗಳಲ್ಲಿ ಮನೆಗಳು ಜಲಾವೃತಗೊಂಡಿವೆ.

ಶಿವಮೊಗ್ಗ ಕೋಟೆ ರಸ್ತೆಯ ಐತಿಹಾಸಿಕ ಶಿವಪ್ಪನಾಯಕ ಅವರಮನೆಯ ಆವರಣದಲ್ಲಿ ಮರ ಉರುಳಿದ ಪರಿಣಾಮ 12 ಕಲ್ಲಿನ ವಿಗ್ರಹಗಳಿಗೆ ಹಾನಿಯಾಗಿವೆ. 

ತುಂಗಾ ಜಲಾಶಯದ 24 ಗೇಟ್‌ಗಳನ್ನೂ ತೆರೆದು 95,100 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಲಿಂಗನಮಕ್ಕಿ, ಭದ್ರಾ ಮತ್ತು ತುಂಗಾ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.

‘ಭೀಮೆ’ಯಲ್ಲೂ ಪ್ರವಾಹ ತಂದ ‘ಮಹಾ’ ನೀರು
ಕಲಬುರ್ಗಿ: ಮಹಾರಾಷ್ಟ್ರದಿಂದ ಭೀಮಾ ನದಿಗೆ 2.25 ಲಕ್ಷ ಕ್ಯುಸೆಕ್‌ ನೀರು ಬಿಡಲಾಗಿದ್ದು, ಜಿಲ್ಲೆಯ ಮಣ್ಣೂರಿನ ಯಲ್ಲಮ್ಮನ ದೇವಸ್ಥಾನ ಜಲಾವೃತಗೊಂಡಿದೆ. ಗಾಣಗಾಪುರ ಮತ್ತು ಘತ್ತರಗಿ ಸೇತುವೆಗಳು ಮುಳುಗಿದ್ದು, ಅಫಜಲಪುರ–ಸಿಂದಗಿ ಮತ್ತು ಅಫಜಲಪುರ–ಜೇವರ್ಗಿ ಮಾರ್ಗದ ಸಂಚಾರ ಕಡಿತಗೊಂಡಿದೆ.

ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕೃಷ್ಣಾ ನದಿ ಪ್ರವಾಹ ಮತ್ತಷ್ಟು ಹೆಚ್ಚುತ್ತಿದೆ. ಯಾದಗಿರಿ ಜಿಲ್ಲೆಯ ನೀಲಕಂಠರಾಯನಗಡ್ಡಿಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಮುಳುಗಡೆಯಾಗುವ ಆತಂಕ ಎದುರಾಗಿದೆ. ಪ್ರತಿ ವರ್ಷ ಪ್ರವಾಹ ಸಂದರ್ಭದಲ್ಲಿ ಈ ಗಡ್ಡಿಯ ಜನ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಈ ವರ್ಷವಷ್ಟೇ ಕಿರು ಸೇತುವೆ ನಿರ್ಮಿಸಲಾಗಿತ್ತು.

ಕೃಷ್ಣಾ ನದಿ ಭೋರ್ಗರೆಯುತ್ತಿರುವುದರಿಂದ ರಾಯಚೂರು ಜಿಲ್ಲೆಯ ನಡುಗಡ್ಡೆಗಳ ಜನರು ತೆಪ್ಪಗಳಲ್ಲಿ ಸಂಚರಿಸುವುದು ದುಸ್ತರಗೊಂಡಿದೆ. ಲಿಂಗಸುಗೂರು ತಾಲ್ಲೂಕಿನ ಕರಕಲಗಡ್ಡಿ, ರಾಯಚೂರು ತಾಲ್ಲೂಕಿನ ಕುರ್ವಕಲಾ ನಡುಗಡ್ಡೆಗಳ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಬರುವುದಕ್ಕೆ ನಿರಾಕರಿಸಿದ್ದಾರೆ. ಅಧಿಕಾರಿಗಳ ಮನವೊಲಿಕೆಗೆ ಸ್ಪಂದಿಸುತ್ತಿಲ್ಲ. ಜಾನುವಾರುಗಳನ್ನು ತೊರೆದು ಬರುವುದಕ್ಕೆ ಆಗುವುದಿಲ್ಲ ಎನ್ನುವುದು ನಡುಗಡ್ಡೆ ಜನರ ವಾದ.

ಓಂಕಮ್ಮನಗಡ್ಡಿಯ ಐದು ಜನರನ್ನು, ಮ್ಯಾದರಗಡ್ಡಿಯ 18 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ.

ಸೇತುವೆ ಮುಳುಗಡೆ: ರಾಯಚೂರು ತಾಲ್ಲೂಕಿನ ಗುರ್ಜಾಪುರ ಬಳಿ ಆರ್‌ಟಿಪಿಎಸ್‌ನಿಂದ ನಿರ್ಮಿಸಲಾಗಿದ್ದ ಬ್ರಿಡ್ಜ್‌ ಕಂ ಬ್ಯಾರೇಜ್‌ ಮುಳುಗಡೆಯಾಗಿದ್ದು, ನದಿತೀರ ಗ್ರಾಮಗಳ ಜನರು ಸುತ್ತುವರಿದು ತಾಲ್ಲೂಕು ಕೇಂದ್ರಗಳಿಗೆ ಬರಬೇಕಿದೆ.

Post Comments (+)