ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: 14 ಗಿಡಮೂಲಿಕೆಗಳ ಔಷಧ, ಸೋಂಕಿತರ ಮೇಲೆ ಯಶಸ್ವಿ ಪ್ರಯೋಗ

Last Updated 1 ಜುಲೈ 2020, 21:22 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕನ್ನು ಹೊಡೆದೋಡಿಸಲು ಜಗತ್ತಿನಾದ್ಯಂತ ಸಂಶೋಧನೆಗಳು ನಡೆಯುತ್ತಿವೆ. ಆಯುರ್ವೇದ ತಜ್ಞರೂ ಪ್ರಯತ್ನ ನಡೆಸಿದ್ದಾರೆ. ನಗರದ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ 14 ಗಿಡ ಮೂಲಿಕೆಗಳಿಂದ ತಯಾರಿಸಿದ ಔಷಧವನ್ನು ಪ್ರಾಯೋಗಿಕವಾಗಿ ಬಳಸಿದ್ದು, ‘ಉತ್ತಮ ಫಲಿತಾಂಶ ನೀಡಿದೆ’ ಎಂದು ಅವರು ಹೇಳಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್‌) ಅಂಗ ಸಂಸ್ಥೆಯಾದ ಕ್ಲಿನಿಕಲ್ ಟ್ರಯಲ್ಸ್‌ ರಿಜಿಸ್ಟ್ರಿ ಆಫ್ ಇಂಡಿಯಾದಲ್ಲಿ (ಸಿಟಿಆರ್‌ಐ) ಕಜೆ ಅವರು ತಮ್ಮ ಸಂಶೋಧನೆಯನ್ನು ನೋಂದಾಯಿಸಿ, ಪೂರಕ ಮಾಹಿತಿಯನ್ನು ಒದಗಿಸಿದ್ದರು. ಈ ಔಷಧವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ರೋಗಿಗಳ ಮೇಲೆ ಪ್ರಯೋಗ ಮಾಡಲು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಮೇ.16ರಂದು ಅನುಮತಿ ನೀಡಿತ್ತು. ಅದರಂತೆ ಅಲ್ಲಿನ 10 ರೋಗಿಗಳ ಮೇಲೆ ಜೂ.7ರಿಂದ ಜೂ.25ರವರೆಗೆ ನಡೆಸಿದ ವೈದ್ಯಕೀಯ ಪ್ರಯೋಗ ಯಶಸ್ವಿಯಾಗಿದೆ. ಇದರಿಂದಾಗಿ ಈಸಂಶೋಧನೆ ಬಗ್ಗೆ ರಾಜ್ಯ ಸರ್ಕಾರ ಕೂಡ ಆಸಕ್ತಿ ತೋರಿದೆ.

ವೈದ್ಯಕೀಯ ಪ್ರಯೋಗಕ್ಕೆ ಒಳಗಾಗಿದ್ದ 23ರಿಂದ 65 ವರ್ಷದೊಳಗಿನ ರೋಗಿಗಳಲ್ಲಿ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸುತ್ತಿದ್ದವು. ಇದರಿಂದಾಗಿ ಅವರು ಅಸ್ವಸ್ಥರಾಗಿದ್ದರು. ಅವರಿಗೆ ಅಲೋಪತಿ ಚಿಕಿತ್ಸೆಯ ಜತೆ ಜತೆಗೆಯೇ ಗಿಡಮೂಲಿಕೆಗಳಿಂದ ಕಜೆ ಅವರು ಸಂಶೋಧಿಸಿದ್ದ ‘ಭೌಮ್ಯ’ ಮತ್ತು ‘ಸಾತ್ಮ್ಯ’ ಮಾತ್ರೆಗಳನ್ನು ಪ್ರತಿನಿತ್ಯ ನೀಡಲಾಗುತ್ತಿತ್ತು. ‘ಇದರಿಂದಾಗಿ ಕೇವಲ ಒಂಬತ್ತು ದಿನಗಳಲ್ಲಿಯೇ ರೋಗಿಗಳು ಸಂಪೂರ್ಣ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇವರಲ್ಲಿ ಕೆಲವರು ಮಧುಮೇಹ, ಅಧಿಕ ರಕ್ತದೊತ್ತಡ, ಕ್ಷಯ ಸೇರಿದಂತೆ ವಿವಿಧ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಕೂಡ ವೇಗವಾಗಿ ಗುಣಮುಖರಾಗಿದ್ದಾರೆ’ ಎಂದು ಕಜೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT