ಸೋಮವಾರ, ಜುಲೈ 4, 2022
25 °C
ಮೂರು ವರ್ಷಕ್ಕೆ ಶುಲ್ಕ ರೂಪದಲ್ಲೇ ಕಟ್ಟಬೇಕು ₹ 2.25 ಕೋಟಿ

ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ದುಬಾರಿ

ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದಲ್ಲಿ ‘ನೀಟ್‌’ ಜಾರಿಗೆ ಬಂದ ಬಳಿಕ ವೈದ್ಯಕೀಯ ಸ್ನಾತಕೋತ್ತರ ಮ್ಯಾನೇಜ್‌ಮೆಂಟ್‌ ಸೀಟುಗಳಿಗೆ ಕಟ್ಟಬೇಕಾದ ಶುಲ್ಕ ವಾರ್ಷಿಕ ₹ 75 ಲಕ್ಷಕ್ಕೆ ಹೆಚ್ಚಿದೆ. ಇದರಿಂದ ಮಧ್ಯಮ ವರ್ಗದ ವಿದ್ಯಾರ್ಥಿಗಳು ವ್ಯಾಸಂಗದಿಂದ ವಂಚಿತರಾಗುವಂತಹ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ನೀಟ್‌ ಪದ್ಧತಿ ಜಾರಿಗೆ ಬರುವ ಮೊದಲು ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಪಿಜಿಸಿಇಟಿ ಮೂಲಕ ಆಯ್ಕೆ ಮಾಡಲಾಗುತ್ತಿತ್ತು. ಆಗ ಇದ್ದ ಶುಲ್ಕದ (₹ 25 ಲಕ್ಷ) ಮೂರು ಪಟ್ಟು ಈಗ ಪಾವತಿಸಬೇಕು.

ಮೆರಿಟ್‌ನಲ್ಲಿ ಸೀಟು ಪಡೆದವರಿಗೆ ಈ ಮೊದಲು ಸಹ ಸ್ನಾತಕೋತ್ತರ ಕೋರ್ಸ್‌ ಕಲಿಕೆಗೆ ಶುಲ್ಕ ಹೆಚ್ಚು ಹೊರೆಯಾಗಿ ಇರಲಿಲ್ಲ. ನೀಟ್‌ ವ್ಯವಸ್ಥೆ ಬಂದ ಮೇಲೂ ಅಂತಹ ಹೆಚ್ಚಳವಾಗಿಲ್ಲ. ಸರ್ಕಾರಿ ಕಾಲೇಜುಗಳಲ್ಲಿ ₹ 5 ಲಕ್ಷ, ಖಾಸಗಿ ಕಾಲೇಜುಗಳಲ್ಲಿ ₹ 10 ರಿಂದ ₹ 30 ಲಕ್ಷದ ಆಸುಪಾಸಿನಲ್ಲೇ ಶುಲ್ಕ ಇದೆ. ಆದರೆ, ನೀಟ್‌ನಲ್ಲಿ ಮೆರಿಟ್‌ ಗಳಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲಿನ ಮ್ಯಾನೇಜ್‌ಮೆಂಟ್‌ ಸೀಟು ಪಡೆಯಬೇಕಿದ್ದರೆ ಈಗ ಬಹಳ ಕಷ್ಟಕರ ಸನ್ನಿವೇಶ ನಿರ್ಮಾಣವಾಗಿದೆ. ಪ್ರತಿ ವರ್ಷ ₹ 75 ಲಕ್ಷದಂತೆ ಮೂರು ವರ್ಷಕ್ಕೆ ₹ 2.25 ಕೋಟಿ ಬೇಕಾಗುತ್ತದೆ.

‘ಬ್ಯಾಂಕ್‌ಗಳು ಇಷ್ಟೊಂದು ಸಾಲ ನೀಡಲು ಮುಂದಾಗುತ್ತಿಲ್ಲ. ನೀಡಿದರೂ ವಿಧಿಸುವ ಬಡ್ಡಿ ದರ ಶೇ 10ಕ್ಕಿಂತ ಅಧಿಕ ಇರುತ್ತದೆ. ಸರ್ಕಾರ ರಿಯಾಯಿತಿ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆ ಮಾಡಿದರೆ ಮಾತ್ರ ನಮ್ಮ ಮಕ್ಕಳನ್ನು ಓದಿಸಲು ಸಾಧ್ಯ’ ಎಂದು ಆಸ್ತಿ ಅಡವಿಟ್ಟು ₹ 75 ಲಕ್ಷ ಶುಲ್ಕ ತುಂಬಿದ ಮೈಸೂರಿನ ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಬುದ್ಧ’ ಯೋಜನೆಯಡಿ ವಿದೇಶಗಳಲ್ಲಿ ವ್ಯಾಸಂಗ ಮಾಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಡಿಮೆ ಆದಾಯದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ವ್ಯಾಸಂಗದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ. ಇದೇ ವ್ಯವಸ್ಥೆ ದೇಶದಲ್ಲಿ ಓದುವ ಬಡ ವಿದ್ಯಾರ್ಥಿಗಳಿಗೂ ಸಿಗಬೇಕು. ಸರ್ಕಾರವು ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ನೀತಿಯೊಂದನ್ನು ರೂಪಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ ಎಂದರೆ ಅದಕ್ಕೆ ಖರ್ಚು ವಿಪರೀತವಿರುತ್ತದೆ. ಮೆರಿಟ್‌ ವಿದ್ಯಾರ್ಥಿಗಳು ಪಡೆಯುವ ಸೌಲಭ್ಯದ ವೆಚ್ಚವನ್ನು ಜನರಲ್‌ ಸೀಟಿನ ವಿದ್ಯಾರ್ಥಿಗಳ ಮೇಲೆ ವಿಧಿಸದೆ ಬೇರೆದಾರಿಯೇ ಇಲ್ಲವಾಗಿದೆ. ತಮಗೆ ಭಾರಿ ನಷ್ಟವಾಗುತ್ತಿದೆ ಎಂದು ಕಾಲೇಜುಗಳು ಹೇಳಿದ್ದರಿಂದಲೇ ಶುಲ್ಕದಲ್ಲಿ ಇಂತಹ ಹೆಚ್ಚಳಕ್ಕೆ ಸಮ್ಮತಿ ಸೂಚಿಸಲಾಗಿದೆ. ಸರ್ಕಾರ ನೀತಿಯೊಂದನ್ನು ಜಾರಿಗೆ ತಂದರೆ
ಮಾತ್ರ ಬಡವರು, ಮಧ್ಯಮ ವರ್ಗದವರು ಉನ್ನತ ವೈದ್ಯಕೀಯ ಶಿಕ್ಷಣದ ಕನಸು ಕಾಣಬಹುದಷ್ಟೇ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಗಮನ ಹರಿಸುತ್ತೇನೆ: ‘ಇದೊಂದು ದೊಡ್ಡ ಸಮಸ್ಯೆ ಎಂಬುದು ನನ್ನ ಅರಿವಿಗೆ ಬಂದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಜತೆಗೆ ಬಡ, ಮಧ್ಯಮ ವರ್ಗದವರಿಗೂ ದುಬಾರಿ ಶುಲ್ಕ ಪಾವತಿ ಸಾಧ್ಯವೇ ಇಲ್ಲ. ಈಗ ಇರುವ ಯೋಜನೆಗಳ ಲಾಭ ಸಾಮಾನ್ಯ ವರ್ಗದವರಿಗೆ ಸಿಗುತ್ತಿಲ್ಲ ಎಂಬುದೂ ವಾಸ್ತವ. ಇದೆಲ್ಲವನ್ನೂ ಗಮನಿಸಿ, ಬಡ, ಮಧ್ಯಮ ವರ್ಗದ ಎಲ್ಲ ಜನರಿಗೆ ಯಾವ ರೀತಿಯ ನೆರವು ನೀಡಬಹುದು ಎಂಬುದನ್ನು ಚರ್ಚಿಸಿ ನಿರ್ಧಾರಕ್ಕೆ ಬರುತ್ತೇನೆ’ ಎಂದು ಸಮಾಜ ಕಲ್ಯಾಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಶೇ 4ರಷ್ಟು ಬಡ್ಡಿದರದಲ್ಲಿ ಸಾಲ ಕೊಡಿಸಿ

‘ನೀಟ್‌’ ವ್ಯವಸ್ಥೆ ಬಂದ ನಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವೈದ್ಯಕೀಯದಲ್ಲಿ ಉನ್ನತ ವ್ಯಾಸಂಗ ಮಾಡುವುದು ಬಹಳ ಕಷ್ಟವಾಗಿದೆ. ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವವರಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ವ್ಯಾಸಂಗಕ್ಕೆ ಅವಕಾಶ ದೊರೆತಿದೆ. ಇದೇ ರೀತಿ ದೇಶದೊಳಗೆ ವ್ಯಾಸಂಗ ಮಾಡಲು ಬಯಸಿದವರಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಕಲ್ಪಿಸಬೇಕು, ಅದು ಸಾಧ್ಯವಿಲ್ಲ ಎಂದಾದರೆ ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ (ಕೆಎಸ್‌ಎಫ್‌ಸಿ) ಶೇ 4ರ ಬಡ್ಡಿ ದರದಲ್ಲಿ, ಶೇ 40ರಷ್ಟು ಸಬ್ಸಿಡಿ ಸಹಿತ ಸಾಲ ಮಂಜೂರು ಮಾಡಲು ಸರ್ಕಾರದಿಂದ ಸೂಕ್ತ ಆದೇಶ ನೀಡಬೇಕು’ ಎಂದು ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ಅವರು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದ್ದಾರೆ.

**
ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಯಾವ ರೀತಿಯಲ್ಲಿ ನೆರವಾಗಲು ಸಾಧ್ಯ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ
- ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

**
ಸ್ನಾತಕೋತ್ತರ ವೈದ್ಯಕೀಯ ಸೀಟಿನ ಕನಸು ಕಂಡ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಇರುವ ದಾರಿ ನೀಟ್‌ನಲ್ಲಿ ಮೆರಿಟ್‌ ಪಡೆಯುವುದು ಮಾತ್ರ
- ಡಾ.ಪಿ.ಜಿ.ಗಿರೀಶ್‌, ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ

**

ಜನರಲ್‌ ಮ್ಯಾನೇಜ್‌ಮೆಂಟ್‌ ಕೋಟಾ

₹ 25 ಲಕ್ಷ - ನೀಟ್‌ಗೆ ಮೊದಲು ಇದ್ದ ವಾರ್ಷಿಕ ಶುಲ್ಕ
₹ 75 ಲಕ್ಷ - ನೀಟ್‌ ಬಂದ ಬಳಿಕದ ವಾರ್ಷಿಕ ಶುಲ್ಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು