ಬುಧವಾರ, ಜುಲೈ 28, 2021
29 °C
ಇನ್ನೂ ಆರಂಭಗೊಳ್ಳದ 1,036 ಮನೆಗಳ ಕಾಮಗಾರಿ: ನೆರೆ ಸಂತ್ರಸ್ತರ ಗೋಳು

ಹಾವೇರಿ | 22 ಸಾವಿರ ಮನೆ ಹಾನಿ; ಮರುನಿರ್ಮಾಣ 87 !

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕಳೆದ ವರ್ಷ ಆಗಸ್ಟ್‌ ಮತ್ತು ಅಕ್ಟೋಬರ್‌ನಲ್ಲಿನ ಅತಿವೃಷ್ಟಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ 22,899 ಮನೆಗಳು ಹಾನಿಯಾಗಿದ್ದವು. ಆದರೆ, ಇದುವರೆಗೆ ಕೇವಲ 87 ಮನೆಗಳ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. 

ಪ್ರವಾಹದಿಂದ ಮನೆಗಳು ಕುಸಿದು ವರ್ಷ ಸಮೀಪಿಸುತ್ತಿದ್ದರೂ ಶೇ 89ರಷ್ಟು ಮನೆಗಳ ಪುನರ್‌ ನಿರ್ಮಾಣ ಕಾಮಗಾರಿ ಇನ್ನೂ ತಳಪಾಯದ ಹಂತದಲ್ಲೇ ಇದೆ. ಶೇ 3ರಷ್ಟು ಮನೆಗಳ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಮತ್ತೆ ಮಳೆಗಾಲ ಬಂದಿರುವುದರಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರು ಸೂರಿಲ್ಲದೆ ತೊಂದರೆಗೆ ಒಳಗಾಗಿದ್ದಾರೆ. 

ಜಿಲ್ಲೆಯಲ್ಲಿ 363 ‘ಎ’ ವರ್ಗದ ಮನೆಗಳು, 5,789 ‘ಬಿ’ ವರ್ಗದ ಮನೆಗಳು ಹಾಗೂ 16,747 ‘ಸಿ’ ವರ್ಗದ ಮನೆಗಳು ಹಾನಿಯಾಗಿದ್ದವು. ಸಮರ್ಪಕವಾಗಿ ನಡೆಯದ ಜಿಪಿಎಸ್‌ ಸಮೀಕ್ಷೆ ಮತ್ತು ಸಕಾಲದಲ್ಲಿ ಹಣ ಬಿಡುಗಡೆಯಾಗದ ಕಾರಣ ಮನೆ ದುರಸ್ತಿ ಮತ್ತು ಪುನರ್‌ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ.

‘ಎ’ ಮತ್ತು ‘ಬಿ’ ವರ್ಗದ ಮನೆಗಳಿಗೆ ₹ 5 ಲಕ್ಷ, ‘ಸಿ’ ವರ್ಗದ ಮನೆಗಳ ದುರಸ್ತಿ ಕಾರ್ಯಕ್ಕೆ ₹50 ಸಾವಿರ ಪರಿಹಾರ ಸರ್ಕಾರದಿಂದ ಘೋಷಣೆಯಾಗಿತ್ತು. ₹1 ಲಕ್ಷ ಆರಂಭಿಕ ಕಂತು ಪಡೆದ ಫಲಾನುಭವಿಗಳು ಉತ್ಸಾಹದಿಂದಲೇ ಕಾಮಗಾರಿ ಆರಂಭಿಸಿದರು. ಆದರೆ, ತಳಪಾಯ ಹಾಕಿ ತಿಂಗಳು ಕಳೆದರೂ ಸಮರ್ಪಕವಾಗಿ ‘ಜಿಪಿಎಸ್’ ಕಾರ್ಯ ನಡೆಯಲಿಲ್ಲ. ಹೀಗಾಗಿ 2 ಮತ್ತು 3ನೇ ಕಂತಿನ ಹಣ ಬಹುತೇಕರಿಗೆ ಬಿಡುಗಡೆಯಾಗಿಲ್ಲ.

ಕಚೇರಿಗಳಿಗೆ ಅಲೆದಾಟ: ಉರುಳಿದ ಗೋಡೆಗಳ ಮೇಲೆ ತಗಡಿನ ಶೀಟು ಮತ್ತು ಕುಸಿದುಬಿದ್ದ ಚಾವಣಿಗೆ ಟಾರ್ಪಲ್‌ ಹಾಕಿಕೊಂಡು ವಾಸಿಸುತ್ತಿದ್ದಾರೆ. ‘ಜಿಪಿಎಸ್‌ ಮಾಡಿಸಿ, ಹಣ ನೀಡಿ’ ಎಂದು ಪಂಚಾಯಿತಿ ಕಚೇರಿಗಳಿಗೆ ಅಲೆದಾಡುತ್ತಾ, ಸಿಬ್ಬಂದಿಯನ್ನು ಅಂಗಲಾಚುತ್ತಿದ್ದಾರೆ.

ಪ್ರಸ್ತುತ ₹110 ಕೋಟಿ ಖಾತೆಯಲ್ಲಿದ್ದು, ಮನೆ ಹಾನಿಯಾದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಅನುದಾನದ ಕೊರತೆಯಿಲ್ಲ. ಕಾಮಗಾರಿಯನ್ನು ಶೀಘ್ರಮುಗಿಸುವಂತೆ ಫಲಾನುಭವಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಹಂತ–ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು. 

‘ಪರಿಹಾರ ಹಣ ಪಡೆದು, ಕಾಮಗಾರಿಯನ್ನೇ ಆರಂಭಿಸದ ಒಂದು ಸಾವಿರ ಫಲಾನುಭವಿಗಳಿಗೆ ಈಗಾಗಲೇ 3 ನೋಟಿಸ್‌ ಜಾರಿ ಮಾಡಿದ್ದೇವೆ’ ಎಂದರು.

*
10 ತಿಂಗಳಿಂದ ಬಾಡಿಗೆ ಮನೆಯಲ್ಲಿದ್ದೇವೆ. ಸರ್ಕಾರದಿಂದ ಬಾಡಿಗೆ ಹಣ ಸಿಕ್ಕಿಲ್ಲ. ಮರಳಿನ ಸಮಸ್ಯೆಯಿಂದ ಮನೆ ಕಟ್ಟಿಕೊಳ್ಳಲು ತೊಂದರೆಯಾಗಿದೆ.
-ಶಾಂತಪ್ಪ ಶೇಖಪ್ಪ ಕಬ್ಬೂರು ನೆರೆ ಸಂತ್ರಸ್ತ, ದೇವಗಿರಿ, ಹಾವೇರಿ ತಾಲ್ಲೂಕು

*
ಧರ್ಮಾ ನದಿ ದಡದಲ್ಲಿದ್ದ ಮನೆ ನೆಲಸಮವಾಗಿದೆ. ಅಲ್ಲಿ ಮನೆ ಕಟ್ಟಲು ಅವಕಾಶ ಕೊಡುತ್ತಿಲ್ಲ. ಪರ್ಯಾಯ ಜಾಗ ತೋರಿಸದ ಕಾರಣ 2ನೇ ಕಂತಿನ ಹಣ ಬಿಡುಗಡೆಯಾಗಿಲ್ಲ.
-ಹಸನ್‌ಸಾಬ್‌ ಹರವಿ, ನೆರೆ ಸಂತ್ರಸ್ತ, ಅಲ್ಲಾಪುರ, ಹಾನಗಲ್‌ ತಾಲ್ಲೂಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು