ಗುರುವಾರ , ಜನವರಿ 30, 2020
22 °C
ಸಿಎಎ, ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯಲ್ಲಿ ಹರ್ಷ ಮಂದರ್‌ ಕರೆ

ವಿಭಜನೆಯ ಷಡ್ಯಂತ್ರವನ್ನು ಅಸಹಕಾರದಿಂದ ಮಣಿಸಿ: ಹರ್ಷ ಮಂದರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಆಳುವ ಸರ್ಕಾರವೇ ಧರ್ಮದ ಹತ್ಯಾರು ಹಿಡಿದು ಜನರನ್ನು ವಿಭಜಿಸಲು ಹೊರಟಿದೆ. ಈಗ ಪೌರತ್ವ ಪರಿಶೀಲನೆಯ ಸಮಯದಲ್ಲಿ ಮುಸ್ಲಿಂ ಒಡನಾಡಿಗಳ ಬೆಂಬಲಕ್ಕೆ ನಿಂತು ನಾವೆಲ್ಲರೂ ಅಸಹಕಾರ ಚಳವಳಿಯ ಮೂಲಕ ಬಂಧನ ಕೇಂದ್ರಕ್ಕೆ ಹೋಗಲು ಸಿದ್ಧರಾಗಬೇಕು’ ಎಂದು ನಿವೃತ್ತ ಐಎಎಸ್‌ ಅಧಿಕಾರಿ, ‘ವಿ ದಿ ಪೀಪಲ್‌ ಆಫ್‌ ಇಂಡಿಯಾ’ದ ಪ್ರತಿನಿಧಿ ಹರ್ಷ ಮಂದರ್‌ ಹೇಳಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ದಾಖಲೆ (ಎನ್‌ಪಿಆರ್‌) ವಿರೋಧಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿ ನೇತೃತ್ವದಲ್ಲಿ ನಗರದ ಹೊರವಲಯದ ಅಡ್ಯಾರ್‌ ಕಣ್ಣೂರಿನ ಶಹಾ ಗಾರ್ಡನ್‌ನಲ್ಲಿ ಬುಧವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ರಾಮ ಮಂದಿರ ಮತ್ತು ಕಾಶ್ಮೀರದ ಹತ್ಯಾರುಗಳನ್ನು ಇಷ್ಟು ಕಾಲ ಬಳಸಿದ್ದರು. ಈಗ ಸಿಎಎ, ಎನ್‌ಆರ್‌ಸಿಯ ಹೊಸ ಅಸ್ತ್ರ ಹಿಡಿದಿದ್ದಾರೆ. ಇದು ಒಂದು ಧರ್ಮ ಅಥವಾ ಜಾತಿಯ ಜನರಿಗೆ ಸೇರಿದ ದೇಶವಲ್ಲ. ಭಾರತ ಇಲ್ಲಿರುವ ಎಲ್ಲ ಜನರಿಗೂ ಸೇರಿದ್ದು. ಹಿಂದೂ ರಾಷ್ಟ್ರದ ಪರಿಕಲ್ಪನೆ ಮುಸ್ಲಿಮರ ವಿರೋಧಿ ಮಾತ್ರವಲ್ಲ. ಅದು ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಜನರ ವಿರೋಧಿಯೂ ಹೌದು. ಇದನ್ನು ಸರಿಯಾಗಿ ಗ್ರಹಿಸಿಕೊಂಡು ಹೋರಾಟಕ್ಕೆ ಕೈಜೋಡಿಸಬೇಕು ಎಂದರು.

ಬಂಧಿತನಾಗಲು ಸಿದ್ಧ: ‘ನಾನು ಮಾನವೀಯತೆಯನ್ನೇ ಧರ್ಮವಾಗಿ ಉಸಿರಾಡುವ ಭಾರತದ ಪ್ರಜೆ. ಇಲ್ಲಿ ಮುಸ್ಲಿಮರನ್ನು ಧರ್ಮದ ಕಾರಣಕ್ಕೆ ಜೈಲಿಗಟ್ಟುವ ನಿರ್ಧಾರವನ್ನು ಬೆಂಬಲಿಸುವುದಿಲ್ಲ. ಅಂತಹ ಸಂದರ್ಭ ಬಂದರೆ ನಾನೂ ಮುಸ್ಲಿಂ ಎಂದು ಬಂಧನ ಕೇಂದ್ರಕ್ಕೆ ಹೋಗುವೆ. ಇಡೀ ದೇಶದ ಜನತೆ ಅಂಹತ ಹೋರಾಟದ ಮೂಲಕ ಜನರನ್ನು ಒಡೆದು ಆಳುವ ಕುತಂತ್ರವನ್ನು ಸೋಲಿಸಬೇಕು’ ಎಂದು ಕರೆ ನೀಡಿದರು.

ಭಯದ ಮಿತಿ ಮುಗಿದಿದೆ: ನಿವೃತ್ತ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್‌ ಮಾತನಾಡಿ, ‘ಕೇಂದ್ರ ಸರ್ಕಾರ ಕೆಲವು ವರ್ಷಗಳಿಂದ ಜನರನ್ನು ಭಯದಲ್ಲೇ ಇರಿಸಿ, ತನ್ನ ಕಾರ್ಯಸೂಚಿಯ ಜಾರಿಗೆ ಯತ್ನಿಸಿತು. ಈಗ ಜನರು ಭಯದ ಮಿತಿಯನ್ನು ದಾಟಿ ಹೊರಗೆ ಬಂದಿದ್ದಾರೆ. ಹೋರಾಟಕ್ಕಾಗಿ ಕಾಯುತ್ತಿದ್ದಾರೆ’ ಎಂದು ಹೇಳಿದರು.

ಕಪ್ಪುಹಣ ತರುವ ಭರವಸೆ ನೀಡಿ ನೋಟು ನಿಷೇಧಿಸಿದರು. ಶ್ರೀಮಂತರೂ ಕಷ್ಟಪಡುತ್ತಿದ್ದಾರೆ ಎಂದು ನಂಬಿಸಿ ಬಡವರನ್ನು ಸಮಾಧಾನಪಡಿಸಿದರು. ಜಿಎಸ್‌ಟಿ ವಿಚಾರದಲ್ಲೂ ಹೀಗೆಯೇ ಆಯಿತು. ಸಿಎಎ, ಎನ್‌ಆರ್‌ಸಿ ವಿಚಾರದಲ್ಲೂ ಜನರನ್ನು ಮೋಸಲು ಮಾಡಲು ಯತ್ನಿಸಿದರು ಎಂದು ವಾಗ್ದಾಳಿ ನಡೆಸಿದರು.

‘ಸಂವಿಧಾನ ಮತ್ತು ಜಾತ್ಯತೀತತೆಯನ್ನು ರಕ್ಷಿಸುವುದು ಮುಸ್ಲಿಮರ ಕೆಲಸ ಮಾತ್ರ ಅಲ್ಲ. ಎಲ್ಲ ಭಾರತೀಯರೂ ಈ ಹೋರಾಟಲ್ಲಿ ಕೈಜೋಡಿಸಬೇಕು’ ಎಂದರು.

ಅನುಮಾನಾಸ್ಪದ ಸರ್ಕಾರ: ಹೋರಾಟಗಾರ ಶಿವಸುಂದರ್‌ ಮಾತನಾಡಿ, ‘ಸಿಎಎ ಮತ್ತು ಎನ್‌ಆರ್‌ಸಿ ನಿಯಮಗಳ ಪ್ರಕಾರ ಇಡೀ ದೇಶದ ಜನರು ಈಗ ಅನುಮಾನಾಸ್ಪದ ನಾಗರಿಕರು. ಇಂತಹ ಅನುಮಾನಾಸ್ಪದ ನಾಗರಿಕರ ಮತಗಳಿಂದ ಾಡಳಿತ ನಡೆಸುವವರನ್ನು ಅನುಮಾನಾಸ್ಪದ ಸರ್ಕಾರ ಎಂದು ಕರೆಯಬೇಕಲ್ಲವೇ’ ಎಂದು ಪ್ರಶ್ನಿಸಿದರು.

ವಕೀಲ ಸುಧೀರ್‌ಕುಮಾರ್‌ ಮುರೊಳ್ಳಿ ಮಾತನಾಡಿ, ‘ಬ್ರಿಟೀಷರು ಅನುಸರಿಸಿದ್ದ ವಿಭಜನೆಯ ತಂತ್ರವನ್ನೇ ಬಿಜೆಪಿಯೂ ಮಾಡುತ್ತಿದೆ. ಇವರು ಮುಸ್ಲಿಮರನ್ನು ಮಾತ್ರ ಕೊಲ್ಲುವುದಿಲ್ಲ. ಅಧಿಕಾರಕ್ಕಾಗಿ ಹಿಂದೂಗಳನ್ನೂ ಕೊಲ್ಲುತ್ತಾರೆ’ ಎಂದರು.

 ಮುಸ್ಲಿಂ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಕೆ.ಎಸ್‌.ಮೊಹಮ್ಮದ್ ಮಸೂದ್‌ ಅಧ್ಯಕ್ಷತೆ ವಹಿಸಿದ್ದರು. ಸುನ್ನಿ ಯುವಜನ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ರಶೀದ್‌ ಝೈನಿ, ಸಮಸ್ತ ಮುಶಾವರ ರಾಜ್ಯ ಘಟಕದ ಕಾರ್ಯದರ್ಶಿ ಯು.ಕೆ.ಅಬ್ದುಲ್‌ ಅಝೀಝ್‌ ದಾರಿಮಿ, ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ರಾಜ್ಯ ಘಟಕದ ಕಾರ್ಯದರ್ಶಿ ಮುಹಮ್ಮದ್ ಶಾಕಿಬ್‌, ಜಮಾಅತೆ ಇಸ್ಲಾಮೀ ಹಿಂದ್‌ ರಾಜ್ಯ ಘಟಕದ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಎಸ್‌ಕೆಎಸ್‌ಎಂ ದಾವಾ ಕಾರ್ಯದರ್ಶಿ ಎಂ.ಜಿ.ಮುಹಮ್ಮದ್, ಯುನಿವೆಫ್‌ ರಾಜ್ಯ ಘಟಕದ ಅಧ್ಯಕ್ಷ ರಫೀವುದ್ದೀನ್‌ ಕುದ್ರೋಳಿ ಮತ್ತು ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್‌ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹಮ್ಮದ್ ಮುಸ್ಲಿಯಾರ್‌, ಉಡುಪಿ ಜಿಲ್ಲಾ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್‌, ಶಾಸಕ ಯು.ಟಿ.ಖಾದರ್‌, ವಿಧಾನ ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ, ರಾಜ್ಯಸಭೆಯ ಮಾಜಿ ಸದಸ್ಯ ಬಿ.ಇಬ್ರಾಹಿಂ, ಮಾಜಿ ಶಾಸಕರಾದ ಬಿ.ಎ.ಮೊಹಿಯುದ್ದೀನ್‌ ಬಾವಾ, ಜೆ.ಆರ್‌.ಲೋಬೊ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು