ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು ಅಖಾಡದಲ್ಲೊಂದು ಸುತ್ತು| ಅಳಿವು–ಉಳಿವಿನ ಪ್ರಶ್ನೆ: ಸರ್ಕಾರಕ್ಕಷ್ಟೇ ಅಲ್ಲ

ಹುಣಸೂರು ಹೃದಯವಂತಿಕೆ, ಬುದ್ಧಿವಂತಿಕೆ ನಡುವೆ ಮತದಾರರ ಹೊಯ್ದಾಟ
Last Updated 1 ಡಿಸೆಂಬರ್ 2019, 10:22 IST
ಅಕ್ಷರ ಗಾತ್ರ

ಹುಣಸೂರು: ದಿನದಿಂದ ದಿನಕ್ಕೆ ಬದಲಾಗುತ್ತಿರುವ ರಾಜ್ಯದ ರಾಜಕೀಯ ಲೆಕ್ಕಾಚಾರವು ಹುಣಸೂರು ಕ್ಷೇತ್ರದ ಮತದಾರರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಿದೆ. ದೇವರಾಜ ಅರಸು ಅವರ ಕರ್ಮಭೂಮಿಯು ಹಿಂದೆಂದೂ ಕಾಣದಂಥ ಉಪ ಚುನಾವಣೆ, ಅರಸು ಅವರ ಶಿಷ್ಯನೆಂದು ಹೇಳಿಕೊಂಡವರಿಂದಲೇ ನಡೆಯುತ್ತಿರುವುದಕ್ಕಾಗಿ ಅವರಿಗೆ ಸಿಟ್ಟಿದೆ. ಬೇಸರವೂ ಇದೆ.

ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಅಡಗೂರು ಎಚ್‌.ವಿಶ್ವನಾಥ್, ಈಗ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌, ಜೆಡಿಎಸ್‌ನಿಂದ ಸ್ಪರ್ಧಿಸಿರುವ ಉದ್ಯಮಿ ದೇವರಹಳ್ಳಿ ಸೋಮಶೇಖರ್‌ ಕಣದಲ್ಲಿರುವ ಪ್ರಮುಖರು. 10 ಅಭ್ಯರ್ಥಿಗಳು ಅಖಾಡದಲ್ಲಿದ್ದರೂ ಮೂವರ ನಡುವೆಯೇ ಸ್ಪರ್ಧೆ. ಆರಂಭದಲ್ಲಿ ತ್ರಿಕೋನ ಸ್ಪರ್ಧೆ ಎನ್ನಲಾಗುತ್ತಿದ್ದ ಇಲ್ಲಿ, ಕಳೆದೆರಡು ದಿನಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ ನೇರ ಹಣಾಹಣಿಯ ಸಾಧ್ಯತೆ ದಟ್ಟವಾಗುತ್ತಿದೆ. ತನ್ನ ಸ್ಥಾನ ಉಳಿಸಿಕೊಳ್ಳುವ ಸವಾಲು ಜೆಡಿಎಸ್‌ಗೆ ಎದುರಾಗಿದೆ.

ಹುಣಸೂರು ಕ್ಷೇತ್ರದ ನಕ್ಷೆ
ಹುಣಸೂರು ಕ್ಷೇತ್ರದ ನಕ್ಷೆ

‘ವಿಶ್ವನಾಥ್, ಅನರ್ಹರಾಗಿ ಹುಣಸೂರಿನ ಮರ್ಯಾದೆ ತೆಗೆದರು. ಸರ್ಕಾರ ಕೆಡವಿ, ಮತ ಹಾಕಿದ ಜನರಿಗೆ ಮೋಸ ಮಾಡಿದರು’ ಎಂಬ ಆಕ್ರೋಶ ಒಂದೆಡೆ; ‘ನಮ್ಮ ಕಷ್ಟ–ಸುಖಕ್ಕೆ, ನೋವು–ನಲಿವಿಗೆ ಸ್ಪಂದಿಸುವ ಎಚ್‌.ಪಿ.ಮಂಜುನಾಥ್‌ ಗೆದ್ದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ’ ಎಂಬ ಹಳಹಳಿಕೆ ಮತ್ತೊಂದೆಡೆ ವ್ಯಕ್ತವಾಗುತ್ತಿದೆ.

ಕ್ಷೇತ್ರದಲ್ಲಿ ಉಪಚುನಾವಣೆ ಮಾತು ಬಂದಾಗ ವಿಶ್ವನಾಥ್ ಬಗ್ಗೆ ಕಿಡಿ ಸಿಡಿದರೆ; ಅಭಿವೃದ್ಧಿ ವಿಷಯ ಎಂದೊಡನೆ ಮಂಜುನಾಥ್‌ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಪಕ್ಷ ಬದಲಾಯಿಸಬೇಕಾದ ಅನಿವಾರ್ಯತೆ ವಿವರಿಸಿ, ಬದಲಾದ ಪಕ್ಷದ ಚಿಹ್ನೆಯೊಂದಿಗೆ ಬಿಜೆಪಿ ಅಭ್ಯರ್ಥಿ ಮತ ಕೇಳುತ್ತಿದ್ದರೆ; ಕಾಂಗ್ರೆಸ್‌ ಅಭ್ಯರ್ಥಿ, ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ದೂರದೃಷ್ಟಿಯ ಪ್ರಚಾರ ನಡೆಸುತ್ತಿದ್ದಾರೆ.

ಶಾಸಕರ ‘ಅನರ್ಹ’ತೆಯ ವಿಚಾರವನ್ನೇ ಮುಂದು ಮಾಡಿ ಕಾಂಗ್ರೆಸ್‌ ಮುಖಂಡರು, ‘ಇಂಥವರು ಬೇಕಾ?’ ಎಂದು ಕೇಳಿದಾಗ, ಮತದಾರರು ‘ಬೇಡ’ ಎನ್ನುತ್ತಿದ್ದಾರೆ. ಮತ್ತೆ ಬಿಜೆಪಿ ಮುಖಂಡರು ಬಂದು, ‘ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗೆ ನೀವು ಓಟ್‌ ಹಾಕಿದರೆ ಅವರೇನು ಸರ್ಕಾರ ರಚಿಸುತ್ತಾರಾ?’ ಎಂದಾಗ, ‘ಹೌದಲ್ಲಾ!’ ಎಂದೂ ಹೇಳುತ್ತಿದ್ದಾರೆ. ಈ ಹಂತದಲ್ಲಿ ಯಾರನ್ನು ಗೆಲ್ಲಿಸಬೇಕೆಂಬ ಹೊಯ್ದಾಟ ಶುರುವಾಗಿದೆ.

ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ, ಇಲ್ಲಿ ಪ್ರಬಲವಾಗಿರುವ ಒಕ್ಕಲಿಗ, ಕುರುಬ,‌ ಪರಿಶಿಷ್ಟ ಪಂಗಡದ ಸಮುದಾಯದವರನ್ನು ಒಲಿಸಿಕೊಳ್ಳುವ ಕಸರತ್ತಿಗೆ ಮುಂದಾಗಿದೆ. ಕಾಂಗ್ರೆಸ್‌ ಮುಖಂಡ ಸಿ.ಟಿ.ರಾಜಣ್ಣ ಸೇರಿದಂತೆ ಹಲವು ಪ್ರಮುಖರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಿರುವುದು, ಆ ಕಸರತ್ತಿನ ಭಾಗ ಎಂದೇ ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಕೈ ಬಲಪಡಿಸುವುದೋ, ವಿಶ್ವನಾಥ್ ಬೆಂಬಲಕ್ಕೆ ನಿಲ್ಲುವುದೋ ಎಂಬ ಗೊಂದಲದಲ್ಲಿ ಕುರುಬ ಸಮುದಾಯದವರಿದ್ದರೆ, ಕ್ಷೇತ್ರದ ಉಸ್ತುವಾರಿ ಹೊತ್ತಿರುವ ಸಚಿವ ಬಿ.ಶ್ರೀರಾಮುಲು ವಾಕ್ಝರಿ, ಇಲ್ಲಿನ ನಾಯಕ ಸಮುದಾಯವನ್ನು ಸೆಳೆಯುವಲ್ಲಿ ಯಶಸ್ವಿ ಆಗಿದೆ ಎನ್ನುತ್ತಾರೆ ಬಿಳಿಕೆರೆಯ ಆಟೊ ಚಾಲಕ ರಾಮ ನಾಯಕ. ‘ಅನರ್ಹ’ರನ್ನು ಸೋಲಿಸುವ ಅಜೆಂಡಾದ ಭಾಗವಾಗಿ, ಜೆಡಿಎಸ್‌ ಮತಗಳು ಕಾಂಗ್ರೆಸ್‌ ಕೈಹಿಡಿಯಬಹುದು ಎನ್ನುವ ಲೆಕ್ಕಾಚಾರವೂ ಇದೆ. ಹೀಗಾಗಿ, ತ್ರಿಕೋನ ಸ್ಪರ್ಧೆಯ ಮಾತು ಹಿಂದಕ್ಕೆ ಸರಿದು, ನೇರ ಹಣಾಹಣಿಯ ಅಖಾಡ ಸಜ್ಜಾಗಿದೆ.

ತಟಸ್ಥರಾಗಿರುವ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ, ಈ ಹಿಂದೆ ಬಿಜೆಪಿ ಜೊತೆಗೆ ಕಾಣಿಸಿಕೊಂಡಿದ್ದರೂ; ಭವಿಷ್ಯದ ದೃಷ್ಟಿಯಿಂದ ಹುಣಸೂರನ್ನು ಆ ಪಕ್ಷದ ತುತ್ತಾಗಿಸುವುದು ಅನುಮಾನ ಎಂದೂ ಹೇಳಲಾಗುತ್ತಿದೆ.

ವಿಶ್ವನಾಥ್ ಗೆಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಬಿಜೆಪಿ, ದೇವರಾಜ ಅರಸು ಹೆಸರನ್ನು ಟ್ರಂಪ್‌ ಕಾರ್ಡ್‌ ಆಗಿ ಚಾಲ್ತಿಗೆ ತಂದಿದೆ. ಎಲ್ಲ ಬೇಡಿಕೆ ಪೂರೈಸುವುದಾಗಿ ಬಹಿರಂಗವಾಗಿಯೇ ಹೇಳಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಅರಸು ಕರ್ಮಭೂಮಿಗೆ ಇಷ್ಟಾದರೂ ಮಾಡಬೇಡವೇ?’ ಎಂದು ಕೇಳುವ ಮೂಲಕ ಮತದಾರರ ಭಾವಕೋಶ ತಲುಪಲು
ಪ್ರಯತ್ನಿಸಿದ್ದಾರೆ. ಅರಸು ಹೆಸರಿನಲ್ಲಿ ಹುಣಸೂರು ಪ್ರತ್ಯೇಕ ಜಿಲ್ಲೆಯ ವಿಚಾರವೂ ಪ್ರಸ್ತಾವವಾಗುತ್ತಿದೆ.

2018ರ ವಿಧಾನಸಭಾ ಚುನಾವಣೆಯ ಬಲಾಬಲ

ಪಕ್ಷ; ಅಭ್ಯರ್ಥಿ; ಪಡೆದ ಮತ

ಕಾಂಗ್ರೆಸ್‌; ಎಚ್‌.ಪಿ.ಮಂಜುನಾಥ;83,092

ಜೆಡಿಎಸ್‌;ಎಚ್‌.ವಿಶ್ವನಾಥ; 91,667

ಬಿಜೆಪಿ;ರಮೇಶಕುಮಾರ್‌; 6,406

****

ಮತಟ್ಟೆಗಳು–274

ಮತದಾರರ ಸಂಖ್ಯೆ ಒಟ್ಟು; 2,27,974

ಪುರುಷರು;1,14,580

ಮಹಿಳೆಯರು; 1,13,388

ಲೈಂಗಿಕ ಅಲ್ಪಸಂಖ್ಯಾತರು;6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT