ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮುಡಾ' ವ್ಯಾಪ್ತಿಯಲ್ಲಿ ಅಕ್ರಮ ಡಿನೋಟಿಫಿಕೇಷನ್‌: ಸಿದ್ದರಾಮಯ್ಯಗೆ ಸಮನ್ಸ್‌

Last Updated 23 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವ್ಯಾಪ್ತಿಯ 30 ಗುಂಟೆ ಜಮೀನಿನ ಅಕ್ರಮ ಡಿನೋಟಿಫಿಕೇಷನ್‌ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜನಪ್ರತಿನಿಧಿಗಳ ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿದೆ.

ಈ ಸಂಬಂಧ ಮೈಸೂರಿನ ಎಂ.ಗಂಗರಾಜು ಸಲ್ಲಿಸಿರುವ ಖಾಸಗಿ ದೂರನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ವಿಚಾರಣೆಗೆ ಅಂಗೀಕರಿಸಿದ್ದಾರೆ.

ಸೆ. 23ರಂದು ಸಿದ್ದರಾಮಯ್ಯ ಕೋರ್ಟ್‌ಗೆ ಖುದ್ದು ಹಾಜರಾಗುವಂತೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಕಳೆದ ವರ್ಷ ಸಲ್ಲಿಸಲಾಗಿದ್ದ ‘ಬಿ’ ರಿಪೋರ್ಟ್‌ ಅನ್ನು ನ್ಯಾಯಾಧೀಶರು ವಜಾಗೊಳಿಸಿದ್ದಾರೆ. ಪ್ರಕರಣದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ.ರಾಮದಾಸ್‌, ಬಿಜೆಪಿ ಮುಖಂಡ ಗೋ.ಮಧುಸೂದನ, ಹಿರಿಯ ಐಎಎಸ್‌ ಅಧಿಕಾರಿಗಳಾದ ಅಜಯ್‌ ಸೇಠ್‌, ಅಮಿತಾ ಪ್ರಸಾದ್ ಮತ್ತು ಕೆಎಎಸ್ ಅಧಿಕಾರಿ ಎಸ್‌.ಮೂರ್ತಿ ಸೇರಿದಂತೆ ಒಟ್ಟು 11 ಜನರ ವಿರುದ್ಧ ಸಮನ್ಸ್‌ ಜಾರಿಗೆ ಆದೇಶಿಸಲಾಗಿದೆ.

‘ಆರೋಪಿಗಳು ಭಾರತೀಯ ದಂಡ ಸಂಹಿತೆ (ಐಪಿಸಿ) ವಿವಿಧ ಕಲಂಗಳಡಿ; ಅಪರಾಧಿಕ ಒಳಸಂಚು, ಸುಳ್ಳು ಸಾಕ್ಷ್ಯ ನೀಡಿಕೆ, ಕಾನೂನಿಗೆ ವಿರುದ್ಧವಾಗಿ ಖರೀದಿ–ಮಾರಾಟ, ವಂಚನೆ, ಫೋರ್ಜರಿ ಸೇರಿ ಹಲವು ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ’ ಎಂಬ ಈ ದೂರನ್ನು ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ.

ಮೈಸೂರಿನ ವಿಜಯನಗರ 2ನೇ ಹಂತದ ಸರ್ವೇ ನಂಬರ್ 70/4 ‘ಎ’ನಲ್ಲಿ 30 ಗುಂಟೆ ಕೃಷಿ ಜಮೀನನ್ನು ‘ಮುಡಾ‘ 1997ರಲ್ಲಿ ಅಕ್ರಮವಾಗಿ ಡಿನೋಟಿಫೈ ಮಾಡಿದೆ. ಇದರಲ್ಲಿ 10 ಗುಂಟೆ ಜಮೀನನ್ನು ಆ ವೇಳೆ ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಖರೀದಿಸಿ, ಮನೆ ಕಟ್ಟಿ ಮಾರಿದ ಆರೋಪ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT