ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್‌–ಇನ್‌: ಉದ್ಯಮಗಳಲ್ಲಿ ಕನ್ನಡಿಗರಿಗೇ ಉದ್ಯೋಗ–ಜಗದೀಶ ಶೆಟ್ಟರ್‌

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಪ್ರತಿಪಾದನೆ: ಬ್ಯಾಂಕಿಂಗ್‌ ಕ್ಷೇತ್ರದಲ್ಲೂ ಸಿಗಲಿದೆ ನ್ಯಾಯ
Last Updated 26 ಸೆಪ್ಟೆಂಬರ್ 2019, 1:41 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕೋದ್ಯಮಗಳಲ್ಲಿ ‘ಎ’ ಮತ್ತು ‘ಬಿ’ ದರ್ಜೆಯ ಹುದ್ದೆಗಳೂ ಸೇರಿ ಎಲ್ಲ ಹಂತದ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಉದ್ಯಮ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಸದ್ಯವೇ ಬಿಡುಗಡೆ ಮಾಡಲಿರುವ ಹೊಸ ಕೈಗಾರಿಕಾ ನೀತಿಯಲ್ಲಿ ಈ ಸಂಬಂಧ ಷರತ್ತು ವಿಧಿಸಲಿದೆ.

ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಬ್ಯಾಂಕುಗಳು ಸಾಲ ನೀಡುತ್ತಿಲ್ಲ. ಇದರಿಂದಾಗಿ ಸಣ್ಣ ಉದ್ಯಮಗಳನ್ನು ಆರಂಭಿಸಲು ಸಾಧ್ಯವಾಗದೇ ಸಾಕಷ್ಟು ಜನ ತೊಂದರೆಗೆ ಸಿಲುಕಿದ್ದಾರೆ. ಇವರಿಗೆ ತಕ್ಷಣವೇ ಸರ್ಕಾರದಿಂದ ಲಭ್ಯವಿರುವ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ನೀಡಲೂ ಸರ್ಕಾರ ಚಿಂತನೆ ನಡೆಸಿದೆ.

‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ನಡೆದ ‘ಫೋನ್‌–ಇನ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು, ಜನರ ಪ್ರಶ್ನೆಗಳಿಗೆ ಉತ್ತರಿಸುವಾಗ ಈ ವಿಷಯ ತಿಳಿಸಿದರು.

‘ವಿವಿಧ ಉದ್ಯಮಗಳಲ್ಲಿ ಕಸ ಗುಡಿಸುವ, ನೆಲ ಒರೆಸುವ, ಕಾವಲು ಕಾಯುವ ‘ಸಿ’ ಮತ್ತು ‘ಡಿ’ ವರ್ಗದ ಹುದ್ದೆಗಳನ್ನು ಮಾತ್ರ ಸ್ಥಳೀಯರಿಗೆ ನೀಡಲಾಗುತ್ತಿದೆ. ಆದರೆ, ‘ಎ’ ಮತ್ತು ‘ಬಿ’ ವರ್ಗದ ಹುದ್ದೆಗಳಿಗೆ ಆದ್ಯತೆ ಮೇಲೆ ನೇಮಕ ಮಾಡುತ್ತಿಲ್ಲ. ಸ್ಥಳೀಯರಲ್ಲಿ ಆ ಸಾಮರ್ಥ್ಯ ಇದ್ದರೂ ಹೊರಗಿನವರಿಗೆ ಮಣೆ ಹಾಕಲಾಗುತ್ತಿದೆ. ಇದು ಸರಿಯಲ್ಲ. ಒಂದು ವೇಳೆ ತಾಂತ್ರಿಕ ಮತ್ತು ಕೌಶಲದಿಂದ ಕೂಡಿದ ಹುದ್ದೆಗಳಿಗೆ ನಮ್ಮಲ್ಲಿ ಮಾನವ ಸಂಪನ್ಮೂಲ ಸಿಗದೇ ಇದ್ದರೆ, ಆಗ ಮಾತ್ರ ಹೊರಗಿನವರಿಗೆ ಕೊಡಬಹುದು’ ಎಂದರು.

‘ಯಾವುದೇ ಉದ್ಯಮದಲ್ಲಿ ಉನ್ನತ ಹಂತದ ಅಧಿಕಾರಿಗಳ ಹುದ್ದೆಗಳ ಆಯ್ಕೆಯಲ್ಲೂ ಆದ್ಯತೆ ಕನ್ನಡಿಗರಿಗೇ ನೀಡಬೇಕು. ನಾನು ಸಚಿವನಾದ ಬಳಿಕ ಕೆಲವು ಕೈಗಾರಿಕಾ ಘಟಕಗಳಿಗೆ ಭೇಟಿ ನೀಡಿದಾಗ, ಸಾಕಷ್ಟು ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿರುವ ಬಗ್ಗೆ ಪಟ್ಟಿ ನೀಡಿದ್ದರು’ ಎಂದು ಶೆಟ್ಟರ್‌ ವಿವರಿಸಿದರು.

ಸ್ಥಳೀಯರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಯಾವೆಲ್ಲ ವಿಧಾನಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಹೊಸ ನೀತಿಯಲ್ಲಿ ಅವುಗಳನ್ನು ಸೇರಿಸುವುದರ ಜತೆಗೆ ಕನ್ನಡಿಗರ ಹಿತಕಾಪಾಡಲಾಗುವುದು ಎಂದು ಅವರು ತಿಳಿಸಿದರು.

ನಿರುದ್ಯೋಗ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

ಕೇಂದ್ರದ ಜತೆ ಮಾತುಕತೆಗೆ ಸಿದ್ಧ

‘ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಲ್ಲಿ ಕನ್ನಡಿಗರು ಉದ್ಯೋಗದ ಅವಕಾಶಗಳಿಂದವಂಚಿತರಾಗುವುದನ್ನು ತಪ್ಪಿಸಲು ಕೇಂದ್ರದ ಜತೆ ಮಾತುಕತೆ ನಡೆಸಲು ಸಿದ್ಧ’ ಎಂದು ಜಗದೀಶ ಶೆಟ್ಟರ್‌ ಹೇಳಿದರು.

ರಾಜ್ಯದಲ್ಲಿ ಬ್ಯಾಂಕಿಂಗ್‌ ಪರೀಕ್ಷೆಗೆ ಕೂರುವ ವಿದ್ಯಾರ್ಥಿಗಳು ಕನ್ನಡದಲ್ಲೇ ಉತ್ತರ ಬರೆಯುವುದಕ್ಕೆ ಅವಕಾಶ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಂಸತ್ತಿನಲ್ಲೇ ಭರವಸೆ ನೀಡಿದ್ದರು. ಈ ಬಾರಿ ಆಗಿಲ್ಲದಿದ್ದರೂ ಮುಂದೆ ಆಗುತ್ತದೆ. ತಾವು ಕೊಟ್ಟ ಭರವಸೆಯ ಪ್ರಕಾರವೇ ನಡೆದುಕೊಳ್ಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಉದ್ಯಮ

‘ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡಲು ಹೊಸ ಕೈಗಾರಿಕಾ ನೀತಿಯಲ್ಲಿ ಒತ್ತು ನೀಡಲಾಗುವುದು. ವಿಶೇಷವಾಗಿ ಉದ್ಯಮಗಳ ಸ್ಥಾಪನೆಗೆ ಪೂರಕವಾಗಿ ರಿಯಾಯ್ತಿಗಳು, ಪ್ರೋತ್ಸಾಹ ಧನ, ಸುತ್ತಮುತ್ತಲಿನ ದೊಡ್ಡ ನಗರಗಳಿಗೆ ರಸ್ತೆ ಸಂಪರ್ಕ, ವಿಮಾನ ನಿಲ್ದಾಣಗಳ ಸ್ಥಾಪನೆ ಮಾಡಲಾಗುವುದು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ತಿಳಿಸಿದರು.

ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯಮಗಳು ಸ್ಥಾಪನೆಯಾದರೆ, ನಿರುದ್ಯೋಗ ಸಮಸ್ಯೆಯೂ ಬಗೆಹರಿಯುತ್ತದೆ. ಅದಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ– ಧಾರವಾಡದಲ್ಲಿ ಇರುವಂತೆ ಎಲ್ಲ ಬಗೆಯ ಸಂಪರ್ಕ ವ್ಯವಸ್ಥೆ, ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT