ಸಮ್ಮಿಶ್ರ ಸರ್ಕಾರದ ನೇತೃತ್ವ ದುರದೃಷ್ಟ: ಸಿ.ಎಂ

7

ಸಮ್ಮಿಶ್ರ ಸರ್ಕಾರದ ನೇತೃತ್ವ ದುರದೃಷ್ಟ: ಸಿ.ಎಂ

Published:
Updated:

ಬೆಂಗಳೂರು: ‘ಎರಡೂ ಸಲವೂ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದು ನನ್ನ ದುರದೃಷ್ಟ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಕೆಇಬಿ ಎಂಜಿನಿಯರ್‌ಗಳ ಸಂಘದ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ತಾಂತ್ರಿಕ ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನರ ನಿರೀಕ್ಷೆಗೆ ತಕ್ಕಂತೆ ಉತ್ತಮ ಕೆಲಸ ಮಾಡಬೇಕು ಎಂಬ ಆಸೆ ಇದೆ. ಆದರೆ, ನನಗೆ ನನ್ನದೇ ಆದ ಇತಿಮಿತಿಗಳು ಇವೆ. 2007ರಲ್ಲೂ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದೆ. ಆಗಲೂ 19 ತಿಂಗಳಿಗೆ, 18 ತಿಂಗಳಿಗೆ ಹಾಗೂ 17 ತಿಂಗಳಿಗೆ ಸರ್ಕಾರ ಪತನವಾಗುತ್ತದೆ ಎಂದು ಹೇಳಿದ್ದರು. ಈ ಸಲವೂ ಸರ್ಕಾರ ರಚನೆಯಾದ ದಿನದಿಂದಲೇ ಪತನವಾಗುತ್ತದೆ ಎಂದು ಬಿಂಬಿಸುತ್ತಲೇ ಬಂದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ಒಂದು ವಾರದಿಂದ ಮಾಧ್ಯಮಗಳಲ್ಲಿ ಸರ್ಕಾರ ಪತನದ ಸುದ್ದಿಯೇ ಬರುತ್ತಿದೆ. ಮಾಧ್ಯಮಗಳಲ್ಲಿ ಪ್ರಸಾರವಾದ ರಾಜಕೀಯ ಧಾರವಾಹಿ ನಿಮಗೆ ಗಾಬರಿ ಮೂಡಿಸಿರಬಹುದು. 17ಕ್ಕೆ ರಾಜ್ಯಪಾಲರ ಆಡಳಿತ ಬರುತ್ತದೆ ಎಂದು ಕೆಲವು ಮಾಧ್ಯಮದವರು ಭವಿಷ್ಯ ಹೇಳಿದರು. 18–20 ಜನ ಅತೃಪ್ತರು ಇದ್ದಾರೆ ಎಂದೂ ಬಿಂಬಿಸಿದರು. ಈ ಬಗ್ಗೆ ಮಾತನಾಡಿದರೆ ತಾಳ್ಮೆ ಕಳೆದುಕೊಳ್ಳುತ್ತೀರಿ ಎಂದು ಎನ್ನುತ್ತಾರೆ. ಇಂತಹ ಸಮಸ್ಯೆಗಳ ನಡುವೆಯೂ ಆಡಳಿತ ನಡೆಸಬೇಕಿದೆ’ ಎಂದರು.

‘ನಷ್ಟದಲ್ಲಿರುವ ವಿದ್ಯುತ್‌ ಕಂಪನಿಗಳು ಲಾಭದತ್ತ ಕೊಂಡೊಯ್ಯಲು ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಅವಶ್ಯಕತೆ ಇದೆ. ಇಂಧನ ಇಲಾಖೆಗೆ ಬೇಕಾದ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧ’ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ‘ಆಪರೇಷನ್’ ಸಲ್ಲದು: ಖರ್ಗೆ

ಜನಪ್ರತಿನಿಧಿಗಳು ಪ್ರಜಾಪ್ರಭುತ್ವದ ತತ್ವಗಳನ್ನು ಉಳಿಸಬೇಕು. ಬದಲಾಗಿ ‘ಆಪರೇಷನ್‌’ ಮಾಡುವುದು ಸರಿಯಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೋವಾ, ಅರುಣಾಚಲ ಪ್ರದೇಶದಲ್ಲಿಯೂ ಬೇರೆ ಪಕ್ಷಗಳನ್ನು ಒಡೆಯಲು ಬಿಜೆಪಿ ಮುಂದಾಗಿತ್ತು. ಇಲ್ಲಿಯೂ ಅದನ್ನು ಮುಂದುವರಿಸಿದ್ದಾರೆ. ಹೀಗಾದಾಗ ಸರ್ಕಾರ ಸಂಕಷ್ಟದಲ್ಲಿ ಸಿಲುಕುತ್ತದೆ. ಇಂಥ ಸನ್ನಿವೇಶಗಳಿಗೆ ಒಳಗಾಗುವ ಮುನ್ನ ಜನಪ್ರತಿನಿಧಿಗಳು ಆಲೋಚಿಸಬೇಕು. ಒಗ್ಗಟ್ಟಿನಲ್ಲಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ’ ಎಂದರು.

‘ಆಪರೇಷನ್‌’ ವಿದ್ಯಮಾನದ ಒಂದು ದಿನ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ಕರೆದಿದ್ದರು. 
ಅಲ್ಲಿ ಕರ್ನಾಟಕದ ವಿದ್ಯಮಾನಗಳ ಬಗ್ಗೆ ಪ್ರಶ್ನಿಸಿದರು. 

‘ನಿಮ್ಮವರು (ಬಿಜೆಪಿ) ಮೈತ್ರಿ ಸರ್ಕಾರವನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಯಶಸ್ವಿಯಾಗದು ಎಂದು ನಾನು ಪ್ರತಿಕ್ರಿಯಿಸಿದೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !