ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ವಿಚಾರದಲ್ಲಿ ಬೆಳಗಾವಿ ಮೊದಲಿನಂತಲ್ಲ: ಹೆಚ್ಚುತ್ತಿದೆ ನಾಡು ನುಡಿಯ ಅಭಿಮಾನ

ಹಿಂದಿನ ದಶಕಗಳಿಗೆ ಹೋಲಿಸಿದರೆ ಬಹಳಷ್ಟು ಸುಧಾರಣೆ
Last Updated 31 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮಹಾರಾಷ್ಟ್ರ ಮತ್ತು ಗೋವಾದೊಂದಿಗೆ ಗಡಿ ಹಂಚಿಕೊಂಡಿರುವ, ಭಾಷಾ ವೈವಿಧ್ಯದ ನೆಲವಾದ ಜಿಲ್ಲೆಯಲ್ಲಿ ‘ಕನ್ನಡದ ಕಂಪು’ ಕ್ರಮೇಣ ಪಸರಿಸುತ್ತಿದೆ. ಕರ್ನಾಟಕ ರಾಜ್ಯೋತ್ಸವ ಆಚರಣೆಯು ವರ್ಷದಿಂದ ವರ್ಷಕ್ಕೆ ಮೆರುಗು ಹೆಚ್ಚಿಸಿಕೊಳ್ಳುತ್ತಿರುವುದು ಹಾಗೂ ಲಕ್ಷಾಂತರ ಕನ್ನಡ ಮನಸ್ಸುಗಳು ಒಗ್ಗೂಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಒಂದೆಡೆ ಮರಾಠಿ, ಇನ್ನೊಂದೆಡೆ ಹಿಂದಿ ಪ್ರಾಬಲ್ಯದ ನಡುವೆಯೂ ಕನ್ನಡ ಅಸ್ತಿತ್ವ ಉಳಿಸಿಕೊಳ್ಳಲು ಪ್ರಬಲವಾದ ಪೈಪೋಟಿ ಕೊಡುತ್ತಿದೆ. ಕೆಲವು ಹಳ್ಳಿಗಳಲ್ಲಿ ಮರಾಠಿಗರು ಕೂಡ ಕನ್ನಡ ಕಲಿತು ಕನ್ನಡಿಗರೊಂದಿಗೆ ಬೆರೆತು ಹೋಗಿದ್ದಾರೆ. ಅಂತೆಯೇ, ಕನ್ನಡಿಗರು ಕೂಡ ಮರಾಠಿ ಭಾಷಿಕರೊಂದಿಗೆ ಉತ್ತಮ ಸೌಹಾರ್ದವನ್ನು ಹೊಂದಿದ್ದಾರೆ. ಗಡಿ ವಿವಾದವನ್ನು ಕೆದಕಿ ಭಾಷಾ ಸಾಮರಸ್ಯ ಹಾಳು ಮಾಡಲು ಪ್ರಯತ್ನಿಸುವ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಸಂಘಟನೆಯ ಚಟುವಟಿಕೆಗಳಿಂದ ಮರಾಠಿ ಭಾಷಿಕರು ದೂರಾಗುತ್ತಿರುವುದು ಇಲ್ಲಿ ಕನ್ನಡ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸಿದೆ ಎನ್ನುತ್ತಾರೆ ಇಲ್ಲಿನ ಹಿರಿಯರು.

ಕಡಿವಾಣ ಹಾಕಬೇಕು: ಹಿಂದಿ ಭಾಷೆಯ ಹೇರಿಕೆ ಅಥವಾ ‘ಸ್ವೀಕೃತಿ’ ತಪ್ಪಿದಲ್ಲಿ, ಇಲ್ಲಿ ಕನ್ನಡ ಮತ್ತಷ್ಟು ವಿಜೃಂಭಿಸಲಿದೆ. ಕನ್ನಡಿಗರು ಅನಾಥ ಭಾವದಿಂದ ಇನ್ನಷ್ಟು ದೂರಾಗಬಹುದಾಗಿದೆ. ಅಂತೆಯೇ, ‘ನಾಡಿನಲ್ಲೇ ಇದ್ದುಕೊಂಡು ನಾಡಿನ ವಿರುದ್ಧವೇ ಚಟುವಟಿಕೆಗಳನ್ನು ನಡೆಸುವವರಿಗೆ ನಿಯಂತ್ರಣ ಹೇರಬೇಕು. ಆಗ, ಕನ್ನಡ ಮತ್ತಷ್ಟು ಗಟ್ಟಿಗೊಳ್ಳುವುದರಲ್ಲಿ ಅನುಮಾನವೇ ಇಲ್ಲ’ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸಾರ್ವಜನಿಕ ಸ್ಥಳಗಳು, ಬ್ಯಾಂಕ್, ಅಂಗಡಿಗಳು, ಚಲನಚಿತ್ರ ಮಂದಿರಗಳು, ಬಹುತೇಕ ಶಾಲಾ- ಕಾಲೇಜುಗಳು, ವಾಣಿಜ್ಯ ಕೇಂದ್ರಗಳು, ಮಾರುಕಟ್ಟೆಗಳಲ್ಲಿ ‘ಎಲ್ಲರಿಗೂ ಅರ್ಥವಾಗುತ್ತದೆ ಎಂದೇ ಭಾವಿಸಲಾಗಿರುವ’ ಹಿಂದಿ ಭಾಷೆಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕೆಲವೆಡೆ ಮರಾಠಿಗೆ 2ನೇ ಸ್ಥಾನ ನೀಡಲಾಗುತ್ತಿದೆ. ಕನ್ನಡವನ್ನು ಮೂರನೇ ಸ್ಥಾನಕ್ಕೆ ತಳ್ಳಿ, ಕಡೆಯಾಗಿ ನೋಡಲಾಗುತ್ತಿದೆ. ಇದು ತಪ್ಪಬೇಕಾಗಿದೆ ಎನ್ನುತ್ತಾರೆ ಕನ್ನಡ ಹೋರಾಟಗಾರರು.

ನಿರಂತರ ಹೋರಾಟ ಹಾಗೂ ಜಾಗೃತಿಯಿಂದಾಗಿ ಕನ್ನಡಮಯ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ, ನಗರದ ಹೆಸರನ್ನು ‘ಬೆಳಗಾವಿ’ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಬದಲಾಯಿಸಿದ್ದರೂ ಕೆಲವು ಕಡೆಗಳಲ್ಲಿ ‘ಬೆಳಗಾಂ’ ಎಂದು ಬಳಸುವುದು ತಪ್ಪಿಲ್ಲ. ಕೆಲವು ಬ್ಯಾಂಕ್ ಶಾಖೆಗಳಲ್ಲಿ ತ್ರಿಭಾಷಾ ಸೂತ್ರ ಪಾಲಿಸುತ್ತಿಲ್ಲ. ಫಲಕಗಳಲ್ಲಿ ಕನ್ನಡ ಬರೆಸಬೇಕು ಎಂದು ರಾಜ್ಯೋತ್ಸವ ಸಂದರ್ಭದಲ್ಲಿ ಪ್ರಕಟಣೆ ನೀಡುವ ಪಾಲಿಕೆ ಅಧಿಕಾರಿಗಳು ನಂತರ ಸುಮ್ಮನಾಗುವುದು ಸಾಮಾನ್ಯವಾಗಿದೆ.

ಪಾಲಿಕೆ ಕ್ರಮ ಕೈಗೊಳ್ಳಬೇಕು: ‘ಹಿಂದೆ ಇಲ್ಲಿನ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಬರೆಸುವವರೇ ಇರಲಿಲ್ಲ. ಈಗ ಮೂಲೆಯಲ್ಲಾದರೂ ಬರೆಸುತ್ತಿದ್ದಾರೆ. ಕನ್ನಡಕ್ಕೆ ಪ್ರಾಧಾನ್ಯತೆ ನೀಡಿ ಫಲಕ ಬರೆಸದ ಅಂಗಡಿಗಳ ಪರವಾನಗಿ ನವೀಕರಿಸದಂತೆ 1998ರಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯನಾಗಿ ನಿರ್ಣಯ ಮಾಡಿಸಿದ್ದೆ. ಇದನ್ನು ಪಾಲಿಕೆ ಅನುಸರಿಸಿದರೆ ಕನ್ನಡ ಇನ್ನೂ ವಿಜೃಂಭಿಸುತ್ತದೆ’ ಎನ್ನುತ್ತಾರೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಶೋಕ ಚಂದರಗಿ.

‘ಜಿಲ್ಲೆಯಲ್ಲಿ ಒಟ್ಟಾರೆ ಗಮನಿಸಿದರೆ ಕನ್ನಡದ ಬೆಳವಣಿಗೆ ವಿಷಯದಲ್ಲಿ ಆತಂಕಪಡುವ ಸ್ಥಿತಿ ಇಲ್ಲ. ಕನ್ನಡ ಶಾಲೆಗಳನ್ನು ಭೌತಿಕವಾಗಿ ಅಭಿವೃದ್ಧಿಪಡಿಸಬೇಕು’ ಎಂದರು.

‘ನಗರದಲ್ಲಿ ಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ಸಿಗುವಂತೆ ಮಾಡಲು ಮತ್ತು ಕಾನೂನು ಬಳಕೆಯೊಂದಿಗೆ ವ್ಯಾಪಾರಿಗಳ ಮನವೊಲಿಸುವುದಕ್ಕೂ ಕ್ರಮ ವಹಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಕೆ.ಎಚ್‌. ಜಗದೀಶ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT