ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಿಷ್ಣುತೆ ಚರ್ಚೆಯಲ್ಲಿ ವೈಚಾರಿಕತೆಯ ತಿಕ್ಕಾಟ

ಮಾಳವಿಕಾ ಮಾತಿಗೆ ಸಭಿಕರ ಆಕ್ಷೇಪ * ಪೊಲೀಸರಿಂದ ಮಧ್ಯಪ್ರವೇಶ
Last Updated 5 ಜನವರಿ 2019, 20:26 IST
ಅಕ್ಷರ ಗಾತ್ರ

ಡಾ. ಶಂ.ಬಾ. ಜೋಶಿ ವೇದಿಕೆ (ಧಾರವಾಡ): 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ‘ವೈಚಾರಿಕತೆ ಮತ್ತು ಅಸಹಿಷ್ಣುತೆ’ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ಮಾಳವಿಕಾ ಅವಿನಾಶ್ ಮತ್ತು ಪ್ರೇಕ್ಷಕರ ನಡುವಿನ ವೈಚಾರಿಕತೆ ತಿಕ್ಕಾಟ ನಾಟಕೀಯ ಸನ್ನಿವೇಶವನ್ನು ಸೃಷ್ಟಿಸಿತು.

ಅಧ್ಯಕ್ಷತೆ ವಹಿಸಬೇಕಾದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್‌ ಮತ್ತು ‘ಏಕರೂಪ ನಾಗರಿಕ ಸಂಹಿತೆಯ ಅವಶ್ಯಕತೆ’ ವಿಷಯ ಕುರಿತು ವಿಷಯ ಮಂಡಿಸಬೇಕಿದ್ದ ಬಾನು ಮುಷ್ತಾಕ್ ಅವರ ಅವರ ಗೈರು ಹಾಜರಿಯಲ್ಲಿ ‘ಪ್ರಭುತ್ವ ಮತ್ತು ಅಸಹಿಷ್ಣುತೆ’ ವಿಷಯ ಕುರಿತು ಮಾಳವಿಕಾ ಅವರು ಮಂಡಿಸಿದ ಪ್ರಬಂಧಕ್ಕೆ ಸಭಿಕರಿಂದ ವ್ಯಕ್ತವಾದ ವಿರೋಧ ಮತ್ತು ಪರ ಅಭಿಪ್ರಾಯಗಳು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಸಿದವು.

ತಾವು ಸನಾತನ ಹಿಂದೂ ಎಂದು ಹೇಳುತ್ತಲೇ ಮಾತು ಆರಂಭಿಸಿದ ಮಾಳವಿಕಾ, ‘ಇಷ್ಟವಿಲ್ಲದ ಸರ್ಕಾರ ಕೇಂದ್ರದಲ್ಲಿದೆ ಎಂಬ ಕಾರಣಕ್ಕೆ ದೇಶದಲ್ಲಿ ಅಸಹಿಷ್ಣುತೆ ಕಾಡುತ್ತಿದೆ ಎಂದು ಆರೋಪ ಮಾಡುತ್ತಿರುವುದು ದುರದೃಷ್ಟಕರ. ಅಸಹಿಷ್ಣುತೆ ಮತ್ತು ‘ಲಿಂಚಿಂಗ್’ ಎಂಬ ಪದ ಹುಡುಕಿದ ಬುದ್ಧಿವಂತರಿಗೆ ಈ ದೇಶದಲ್ಲಿ ಹಿಂದೆ ನಡೆದ ಸಿಖ್ ನರಮೇಧ, 2006ರಿಂದ 2009ರವರೆಗೆ ದೇಶದ ವಿವಿಧೆಡೆಯ ಅಸಹಿಷ್ಣುತೆಗೆ 530 ಜನ ಕೊಲೆಗೀಡಾದಾಗ ಇವರು ಎಲ್ಲಿದ್ದರು?’ ಎಂದು ಕೇಳಿದರು.

‘ಸಾಮಾನ್ಯವಾಗಿ ಬಳಕೆಯಲ್ಲಿರುವ ‘ಧರ್ಮದೇಟು’ ಹೆಸರಿನಲ್ಲಿ ಪರೇಶ್‌ ಮೇಸ್ತ, ಶರತ್, ರುದ್ರೇಶ್ ಅವರ ಹತ್ಯೆ ನಡೆದದ್ದು ಅಸಹಿಷ್ಣುತೆಯ ಭಾಗವಲ್ಲವೇ‘ ಎಂದು ಪ್ರಶ್ನಿಸಿದರು.

ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಭಿಕರ ಒಂದು ಗುಂಪು, ‘ವಿಷಯಾಂತರ ಮಾಡಬೇಡಿ, ರಾಜಕೀಯ ಭಾಷಣವಾದರೆ ಬೇರೆ ವೇದಿಕೆ ಇದೆ. ಒಂದು ಪಕ್ಷದ ಪರವಾಗಿ ಮಾತನಾಡಬೇಡಿ’ ಎಂದು ಆಗ್ರಹಿಸಿತು.

ಇದಕ್ಕೆ ಸಭಿಕರ ಸಾಲಿನಲ್ಲಿದ್ದ ಮತ್ತೊಂದು ಗುಂಪು ಆಕ್ಷೇಪ ವ್ಯಕ್ತಪಡಿಸಿ. ‘ವಿಷಯ ಮಂಡಿಸಲು ಅವಕಾಶ ನೀಡಿ. ನಿಮಗೆ ಕೇಳಲು ಇಷ್ಟವಿಲ್ಲವೆಂದರೆ ಹೊರ ನಡೆಯಿರಿ. ಮಾಳವಿಕಾಗೆ ಮಾತನಾಡಲು ಅವಕಾಶ ನೀಡಿ, ನಮಗೆ ಕೇಳಲು ಬಿಡಿ’ ಎಂದು ಪಟ್ಟುಹಿಡಿದರು.

ಪರಸ್ಪರ ವಾಗ್ವಾದ ನಡೆಸಿದ ಸಭಿಕರ ಎರಡು ಗುಂಪುಗಳನ್ನು ಸಮಾಧಾನಪಡಿಸಲು ಪೊಲೀಸರ ಮಧ್ಯಪ್ರವೇಶಿಸಬೇಕಾಯಿತು. ನಂತರ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಇಂಥವರ ಅಸಹಿಷ್ಣುತೆಯನ್ನು ಪ್ರತಿಭಟಿಸಿ ಮಾತು ನಿಲ್ಲಿಸುತ್ತೇನೆ ಎಂದು ಮಾಳವಿಕಾ ತಮ್ಮ ಸ್ಥಾನಕ್ಕೆ ಬಂದು ಕೂತರು.

ಮಾಳವಿಕಾ ಮಾತನಾಡಬೇಕು ಎಂದು ಪಟ್ಟುಹಿಡಿದಿದ್ದರಿಂದ, ’ನಾನೇಕೆ ಸಹಿಷ್ಣುತೆ ಕಳೆದುಕೊಳ್ಳಲಿ’ ಎಂದು ಮತ್ತೆ ಮಾತು ಆರಂಭಿಸಿದರು.

‘1986ರಲ್ಲಿ ಕೇಂದ್ರದಲ್ಲಿ 400 ಸಂಸದರನ್ನು ಹೊಂದಿದ್ದ ಸರ್ಕಾರ ಮುಸ್ಲಿಂ ಮಹಿಳೆಯರಿಗೆ ಮಾರಕವಾಗಬಲ್ಲ ಕಾನೂನು ಜಾರಿಗೆ ತಂದಿತು. ಆಗ ಅಸಹಿಷ್ಣುತೆ ವಿಷಯ ಪ್ರಸ್ತಾಪವಾಗಲಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆ ಅದಕ್ಕೆ ಸಕಾರಣ ಇರಬೇಕು. ಜತೆಗೆ ರಾಷ್ಟ್ರದ ಹಿತಚಿಂತನೆ ಇರಬೇಕು. ಕಳೆದ 60 ವರ್ಷಗಳಲ್ಲಿ 102 ಬಾರಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಒಂದೊಮ್ಮೆ ಅಭಿವ್ಯಕ್ತಿಗೆ ಬೆಲೆ ಇಲ್ಲವೆಂದಾದರೆ ಚಿಂತಿಸುವುದು ಸೂಕ್ತ’ ಎಂಬ ಅಭಿಪ್ರಾಯವನ್ನು ಮಾಳವಿಕಾ ವ್ಯಕ್ತಪಡಿಸಿದರು.

ವೈಚಾರಿಕ ಸಾಹಿತ್ಯ ಮತ್ತು ಕಾನೂನು ವಿಷಯ ಕುರಿತು ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಡಿ.ವಿ.ಗುರುಪ್ರಸಾದ್‌, ‘ಮೈಸೂರಿನ ಪ್ರಾಧ್ಯಾಪಕರೊಬ್ಬರು ಬರೆದ ಕೃತಿ ಮತ್ತು ನೀಡಿದ ಹೇಳಿಕೆ ಕುರಿತು ಸಿಆರ್‌ಪಿಸಿಯಲ್ಲಿ ಸ್ಪಷ್ಟವಾದ ಉಲ್ಲೇಖವಿದೆ. ಸಮಾಜದ ಶಾಂತಿಭಂಗ ಮತ್ತು ದಂಗೆ ಎಬ್ಬಿಸುವಂತೆ ಹೇಳಿಕೆ ನೀಡಿದ್ದರೆ ಅಂಥವರ ವಿರುದ್ಧ ದಂಡ ವಿಧಿಸಬಹುದು. ಸ್ವಾತಂತ್ರ್ಯ ಪೂರ್ವದಲ್ಲೇ ಇದ್ದ ಸಿಆರ್‌ಪಿಸಿ ಕಾಯ್ದೆ ಕಾನೂನು ಬದ್ಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ’ ಎಂದು ಹೇಳಿದರು.

ಗೋಷ್ಠಿಯ ಸಾಂದರ್ಭಿಕ ಅಧ್ಯಕ್ಷರೂ ಆಗಿದ್ದ ಇವರು, ‘ಹೊಸ ವಿಷಯ ಮಂಡಿಸುವವರಿಗೆ ವಿರೋಧ ಸಹಜ. ನಾಳೆ ಸಮಾಜವೇ ಅವರ ಮಾತನ್ನು ಒಪ್ಪಿಕೊಳ್ಳಬಹುದು’ ಎಂದುಮಾಳವಿಕಾ ಮಂಡಿಸಿದ ವಿಷಯಕ್ಕೆ ಸಹಮತ ವ್ಯಕ್ತಪಡಿಸಿದರು.

ವಿಚಾರವಾದಿಗಳ ಹತ್ಯೆ ಅಸಹಿಷ್ಣುತೆ ಅಲ್ಲವೇ?

ಕೆಲವು ವ್ಯಕ್ತಿಗಳ ಹತ್ಯೆ ಕುರಿತು ಮಾತನಾಡಿದ ಮಾಳವಿಕಾ, ವಿಚಾರವಾದಿಗಳಾದ ಡಾ. ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ ಹತ್ಯೆ ಅಸಹಿಷ್ಣುತೆಯ ಭಾಗವಲ್ಲವೇ? ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ದೊಡ್ಡ ಬಸವರಾಜು ಅವರು ಕೇಳಿದರು.

ನೆಲದ ಕಾನೂನಿಗೆ ವಿರುದ್ಧವಾಗಿ ನಡೆದು, ದಂಗೆ ಎಬ್ಬಿಸುವುದು ಕಾನೂನು ಬಾಹಿರವಾದರೆ, ಶಬರಿಮಲೆ ದೇಗುಲಕ್ಕೆ ಮಹಿಳೆ ಪ್ರವೇಶ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಪ್ರಚೋದಿಸುವವರಿಗೆ ಶಿಕ್ಷೆ ಇಲ್ಲವೇ? ಎಂಬ ಪ್ರಶ್ನೆಗೆ ಮಾಳವಿಕಾ ಮತ್ತು ಗುರುಪ್ರಸಾದ್ ಇಬ್ಬರೂ ಉತ್ತರಿಸಲಿಲ್ಲ.

*ನಾನು ಸಾಹಿತಿ, ಲೇಖಕಿ ಮತ್ತು ಇಂಟಲೆಕ್ಚುವಲ್‌ ಅಲ್ಲ. ರೈಟ್‌ ಕೂಡಾ ಅಲ್ಲ. ಲೆಫ್ಟ್ ಅಂತೂ ಅಲ್ಲವೇ ಅಲ್ಲ.

–ಮಾಳವಿಕಾ ಅವಿನಾಶ್, ನಟಿ ಮತ್ತು ಬಿಜೆಪಿ ವಕ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT