ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ ಆದೇಶದಿಂದ ಹಕ್ಕು ಮೊಟಕು

ಕಾಂಗ್ರೆಸ್‌ನಿಂದ ಆಯ್ಕೆಯಾದ 12 ಶಾಸಕರು ನಮ್ಮ ಸೂಚನೆಯಂತೆ ನಡೆದುಕೊಳ್ಳಬೇಕಿತ್ತು. ಸಿದ್ದರಾಮಯ್ಯ ಹೇಳಿಕೆ
Last Updated 18 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದಿಲ್ಲ. ಆದರೂ, 15 ಶಾಸಕರು ಸದನಕ್ಕೆ ಬರಬೇಕಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಇದರಿಂದ ನನ್ನ ಹಕ್ಕು ಮೊಟಕು ಮಾಡಿದಂತಾಗಿದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆಯ ಪ್ರಸ್ತಾವ ಮಂಡಿಸಿದರು. ಈ ವೇಳೆ, ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ‍‍ಪ್ರಸ್ತಾಪಿಸಿದರು. ಆಗ ಸಿದ್ದರಾಮಯ್ಯ ಅವರು ಕ್ರಿಯಾಲೋಪ ಎತ್ತಿ ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಪ್ತಿಯ ಬಗ್ಗೆ ‍‍ಪ್ರಸ್ತಾಪಿಸಿದರು.

‘ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಪಕ್ಷದಿಂದ ವಿಪ್‌ ನೀಡಲಾಗಿದೆ. ಆದರೆ, 15 ಶಾಸಕರು ಸದನಕ್ಕೆ ಹಾಜರಾಗಬೇಕು ಎಂದು ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಹಾಗಿದ್ದರೆ, ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಗಿದೆಯೇ’ ಎಂದೂ ಅವರು ಪ್ರಶ್ನಿಸಿದರು.

‘ಮುಖ್ಯಮಂತ್ರಿ ವಿಶ್ವಾಸಮತದ ಪ್ರಸ್ತಾವ ಮಂಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅದಕ್ಕೆ ಸಂಬಂಧವಿಲ್ಲದ ವಿಷಯದ ಬಗ್ಗೆ ಕ್ರಿಯಾಲೋಪ ಎತ್ತುವುದು ಸರಿಯಲ್ಲ’ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರು.

‘15 ಶಾಸಕರ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷರು ಹಾಗೂ ಕೇಂದ್ರ ಸರ್ಕಾರವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಆದರೆ, 12 ಶಾಸಕರು ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿದ್ದಾರೆ. ನಮ್ಮ ಪಕ್ಷದ ಸೂಚನೆಯಂತೆ ಅವರು ನಡೆದುಕೊಳ್ಳಬೇಕಿತ್ತು. ನಮ್ಮನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ. ಆದರೂ, ಸೂಚನೆ ನೀಡಲಾಗಿದೆ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಈ ವಿಷಯವನ್ನು ಸದನದಲ್ಲೇಕೆ ಪ್ರಸ್ತಾಪಿಸುತ್ತೀರಿ. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದರು.

‘ಇದು ನಮ್ಮ ಹಾಗೂ ಜೆಡಿಎಸ್‌ ಪಕ್ಷಕ್ಕೆ ಮಾತ್ರ ಸೀಮಿತವಾದ ವಿಷಯ ಅಲ್ಲ. ನಾಳೆ ನಿಮ್ಮ ಪಕ್ಷಕ್ಕೂ ಅನ್ವಯವಾಗುತ್ತದೆ’ ಎಂದು ಸಿದ್ದರಾಮಯ್ಯ ಪ್ರತಿಯೇಟು ಕೊಟ್ಟರು.ಇದಕ್ಕೆ ಪೂರಕವಾಗಿ ಸಚಿವ ಕೃಷ್ಣ ಬೈರೇಗೌಡ, ಸದಸ್ಯ ಎಚ್‌.ಕೆ.ಪಾಟೀಲ ಮಾತನಾಡಿದರು.

ಏನು ಮಾಡಬೇಕು ತಿಳಿಯುತ್ತಿಲ್ಲ: ಪಕ್ಷಾಂತರ ನಿಷೇಧ ಕಾಯ್ದೆ ಕುರಿತು ಚರ್ಚೆ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್‌, ‘ಈ ಸಂದರ್ಭದಲ್ಲಿ ನಾನೇನು ಮಾಡಬೇಕು’ ಎಂದು ತಿಳಿಯುತ್ತಿಲ್ಲ’ ಎಂದರು.

‘ಕಲಾಪಕ್ಕೆ ಹಾಜರಾಗುವಂತೆ ತಮ್ಮ ಪಕ್ಷದ ಸದಸ್ಯರಿಗೆ ಶಾಸಕಾಂಗ ಪಕ್ಷದ ನಾಯಕರು ವಿಪ್‌ ನೀಡುತ್ತಾರೆ. ಅದನ್ನು ಉಲ್ಲಂಘನೆ ಮಾಡಿದರೆ ನನಗೆ ದೂರು ನೀಡುತ್ತಾರೆ. ಆಗ ಈ ವಿಷಯ ನನ್ನ ವ್ಯಾಪ್ತಿಗೆ ಬರುತ್ತದೆ. ಆದರೆ, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನನ್ನನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ರಾಜ್ಯದಲ್ಲಿ ಇಂತಹದೊಂದು ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

ಪ್ರಜಾಪ್ರಭುತ್ವಕ್ಕೆ ಪ್ರಹಾರ: ಕುಮಾರಸ್ವಾಮಿ
ಬೆಂಗಳೂರು: ‘ಅಧಿಕಾರ ಶಾಶ್ವತ ಅಲ್ಲ. ನಾನು ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುತ್ತದೆಯೋ ಇಲ್ಲವೋ ಎಂಬುದು ಮುಖ್ಯ ಅಲ್ಲ. ಪ್ರಜಾಪ್ರಭುತ್ವದ ಬುಡಕ್ಕೆ ಪ್ರಹಾರ ಮಾಡಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ವಿಧಾನಸಭೆಯಲ್ಲಿ ಗುರುವಾರ ವಿಶ್ವಾಸಮತ ಯಾಚನೆಯ ಪ್ರಸ್ತಾವ ಮಂಡಿಸಿದ ಅವರು, ‘ಮೈತ್ರಿ ಸರ್ಕಾರ 14 ತಿಂಗಳುಗಳಿಂದ ಸುಲಲಿತವಾಗಿ ಆಡಳಿತ ನಡೆಸದಂತೆ ಮಾಡಿದವರು ಯಾರು ಎಂಬ ಬಗ್ಗೆ ಬೆಳಕು ಚೆಲ್ಲಬೇಕಿದೆ. ಇದಕ್ಕಾಗಿ ಸದನದಲ್ಲಿ ವಿಸ್ತೃತ ಚರ್ಚೆ ನಡೆಯಬೇಕು’ ಎಂದು ಪ್ರತಿಪಾದಿಸಿದರು.

‘ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದೇನೆ ಎಂದು 15 ಶಾಸಕರು ರಾಜೀನಾಮೆ ಪತ್ರದಲ್ಲಿ ಹೇಳಿದ್ದರು. ಆದರೆ, ‘ಜಿಂದಾಲ್ ಭೂಮಿ ಮಾರಾಟದಲ್ಲಿ ಭ್ರಷ್ಟಾಚಾರ ನಡೆದಿದೆ. ಐಎಂಎ ಹಗರಣದಲ್ಲೂ ಹಲವರು ಭಾಗಿಯಾಗಿದ್ದಾರೆ. ಆಡಳಿತ ನಡೆಸುವವರು ಕೋಟಿಗಟ್ಟಲೇ ಲೂಟಿ ಹೊಡೆಯುತ್ತಿದ್ದಾರೆ. ಇಂತಹ ಸರ್ಕಾರ ಬೇಡ ಎಂಬ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದಾಗಿ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅಂತಹ ಆಪಾದನೆಗಳಿಗೆ, ದೇಶದ ಜನರಿಗೆ ಹಾಗೂ ನಾಡಿನ ಜನರಿಗೆ ಉತ್ತರ ಕೊಡಬೇಕಿದೆ’ ಎಂದರು.

‘ಅನೇಕ ಸವಾಲುಗಳನ್ನು ಎದುರಿಸಿ ಸರ್ಕಾರ ನಡೆಸಿದ್ದೇನೆ. ಅವೆಲ್ಲ ವಿಷಯಗಳ ಬಗ್ಗೆಯೂ ಚರ್ಚೆ ಮಾಡಿ ಜನರಲ್ಲಿ ಹೇಗೆ ವಿಶ್ವಾಸ ಉಳಿಸಿಕೊಂಡಿದ್ದೇವೆ ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಬೇಕಿದೆ. ಜನರಿಗೆ ಸದನದ ಮೂಲಕವೇ ಸ್ಪಷ್ಟನೆ ನೀಡಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT