ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಬಲ: ಕೈ–ದಳಕ್ಕೆ ಪಾಠ

ಯಡಿಯೂರಪ್ಪಗೆ ಮನ್ನಣೆ: ಅನರ್ಹರಿಗೂ ಮಣೆ
Last Updated 9 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಜೆಡಿಎಸ್‌–ಕಾಂಗ್ರೆಸ್ ನೇತೃತ್ವದ ಅಸ್ಥಿರ ಮೈತ್ರಿ ಸರ್ಕಾರದ ಅವಧಿಯ ಹಳವಂಡ, ಏಳುಬೀಳುಗಳನ್ನು ಕಂಡಿದ್ದ 12 ಕ್ಷೇತ್ರಗಳ ಮತದಾರರು ‘ಸುಭದ್ರ’ ಸರ್ಕಾರದ ಪರ ನಿಂತಿರುವುದನ್ನು ಉಪಚುನಾವಣೆಯ ಫಲಿತ ಸಾರಿ ಹೇಳಿದ್ದು, ಕೈ–ದಳ ನಾಯಕರಿಗೆ ಪಾಠವನ್ನೂ ರವಾನಿಸಿದೆ.

ಬಿಜೆಪಿ 104 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲು ಅಶಕ್ಯವಾದಾಗ ವಾಮಮಾರ್ಗ ಹಿಡಿದಿದ್ದು ಈಗ ಇತಿಹಾಸ. ಅಷ್ಟೊತ್ತಿಗೆ ಮೈತ್ರಿ ಸರ್ಕಾರದ ಅವಾಂತರ –ಅಪಸವ್ಯಗಳನ್ನು ಕಂಡಿದ್ದ ಜನರು ಯಾರಾದರೊಬ್ಬರಿಗೆ ಬಹುಮತ ಕೊಡಲಿಲ್ಲವಲ್ಲ ಎಂಬ ಹಲುಬಿಕೊಂಡಿದ್ದು ಉಂಟು. ‘ಆಪರೇಷನ್ ಕಮಲ’ ನಡೆಸಿದ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿಗೆ ಏರಿದಾಗ, ಬಹುತೇಕರಿಗೆ ಅದು ‘ಅಪರಾಧ’ ಎನಿಸಲಿಲ್ಲ. ಉಪಚುನಾವಣೆಯ ಫಲಿತಾಂಶದ ಮೂಲಕ ಮತ ದಾರರು ಬಿಜೆಪಿಯ ವಾಮಮಾರ್ಗದ ನಡೆಗೆ ‘ಅರ್ಹತೆ’ಯ ಮುದ್ರೆಯೊತ್ತಿದ್ದಾರೆ. ಕಣದಲ್ಲಿದ್ದ 13 ಅನರ್ಹ ಶಾಸಕರ ಪೈಕಿ 11 ಜನರನ್ನು ಗೆಲ್ಲಿಸಿರುವ ಆ ಕ್ಷೇತ್ರಗಳ ಮತದಾರರು, ತಮ್ಮ ಪ್ರತಿನಿಧಿ ಮಾಡಿದ್ದು ಸರಿ ಎಂದು ದೃಢೀಕರಿಸಿದ್ದಾರೆ.

ಅಸ್ಥಿರ ಸರ್ಕಾರ, ದಿನ ಬೆಳೆಗಾದರೆ ಕಚ್ಚಾಟ, ಯಾವ ಕೆಲಸವೂ ಆಗದ ಪರಿಸ್ಥಿತಿಯನ್ನು ಕಂಡಿದ್ದ ಜನ ಇನ್ನು ಮೂರೂವರೆ ವರ್ಷ ಬಿಜೆಪಿ ಸರ್ಕಾರಕ್ಕೆ ಬೇಕಾದ ಬಹುಮತ ಕೊಟ್ಟಿದ್ದಾರೆ. ಇದು ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಜನ ಕೊಟ್ಟಿರುವ ಮನ್ನಣೆಯೂ ಹೌದು.

ಮಹಾಮಳೆಯಿಂದ ಸಂತ್ರಸ್ತರಾದ ಜನರ ಮೊರೆಯನ್ನು ಸರ್ಕಾರ ಕೇಳಲಿಲ್ಲ ಎಂದು ವಿರೋಧ ಪಕ್ಷದ ನಾಯಕರು ಏರು ಧ್ವನಿಯಲ್ಲಿ ಕುಟುಕಿದ್ದರು. ಮಹಾರಾಷ್ಟ್ರದ ಫಲಿತಾಂಶ ರೀತಿ ಬಂದಿದ್ದರೆ ನೆರೆ ಹಾವಳಿಗೆ ತುತ್ತಾಗಿದ್ದ ಪ್ರದೇಶಗಳ ಮತದಾರರು ಬಿಜೆಪಿಯನ್ನು ತಿರಸ್ಕರಿಸಬೇಕಾಗಿತ್ತು. ಆದರೆ, ಅಥಣಿ, ಕಾಗವಾಡ, ಗೋಕಾಕ, ಯಲ್ಲಾಪುರಗಳಲ್ಲಿ ದೊಡ್ಡ ಪ್ರಮಾಣದ (ಶೇ 50ಕ್ಕಿಂತ ಹೆಚ್ಚಿನ ಮತಗಳು ಬಿಜೆಪಿ ಅಭ್ಯರ್ಥಿಗಳ ಪಾಲಾಗಿವೆ) ಅಂತರದಲ್ಲಿಯೇ ಗೆಲುವನ್ನು ನೀಡಿದ್ದಾರೆ.

ಇಲ್ಲಿ ಇನ್ನೊಂದು ಅಂಶವೂ ಇದೆ; ಯಡಿಯೂರಪ್ಪ ಅವರ ಲಿಂಗಾಯತ–ವೀರಶೈವ ಟ್ರಂಪ್‌ ಕಾರ್ಡ್ ಕೂಡ ಆ ಪಕ್ಷದ ಅಭ್ಯರ್ಥಿಗಳ ವಿಜಯದ ಸಂಕವಾಗಿ ಬಳಕೆಯಾಗಿದೆ. ಹಾವೇರಿ, ಬೆಳಗಾವಿ ಜಿಲ್ಲೆಗಳ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿರುವ ಈ ಸಮುದಾಯದ ಮತದಾರರು, ಯಡಿಯೂರಪ್ಪ ಕೈ ಹಿಡಿದು ನಡೆಸಿರುವುದು ಈ ಪರಿಯ ಫಲಿತಾಂಶ ಬರಲು ಮತ್ತೊಂದು ಕಾರಣ ಎಂಬುದನ್ನು ಉಲ್ಲೇಖಿಸಲೇಬೇಕು.

ಇತ್ತೀಚಿನ ವರ್ಷಗಳಲ್ಲಿ ದುಡ್ಡೇ ಚುನಾವಣೆಯ ಗೆಲುವನ್ನು ನಿರ್ಧರಿಸುವುದು ದಿಟವಾದರೂ ಅದೇ ನಿರ್ಣಾಯಕವಲ್ಲ ಎಂಬುದನ್ನೂ ಮತದಾರರು ಈ ಚುನಾವಣೆಯಲ್ಲಿ ತೋರಿಸಿದ್ದಾರೆ. ಚುನಾವಣೆಯಲ್ಲಿ ₹500ರಿಂದ ₹5000 ಮೊತ್ತಕ್ಕೆ ಮತ ಬಿಕರಿಯಾಗಿದೆ. ಇದರಲ್ಲಿ ಪಕ್ಷ ಭೇದವಿಲ್ಲ. ಎಲ್ಲ ಪಕ್ಷದವರೂ ದುಡ್ಡನ್ನು ಹಂಚಿ, ಗೆಲುವನ್ನು ತಮ್ಮದಾಗಿಸಿಕೊಳ್ಳಲು ಹವಣಿಸಿದ್ದು ರಹಸ್ಯವೇನಲ್ಲ. ಹಣವೊಂದೇ ನಿರ್ಣಾಯಕವಾಗಿದ್ದರೆ ಹೊಸಕೋಟೆಯಲ್ಲಿ ಎಂ.ಟಿ.ಬಿ. ನಾಗರಾಜ್‌ ಹಾಗೂ ಹುಣಸೂರಿನಲ್ಲಿ ಎಚ್.ವಿಶ್ವನಾಥ್‌ ಕೂಡ ಗೆಲುವಿನ ದಡ ಹತ್ತಬೇಕಿತ್ತು. ಹಾಗಂತ ಅಲ್ಲಿ ಎದುರಾಳಿಗಳು ಹಣ ಹಂಚಿಲ್ಲ ಎಂಬುದು ಇಲ್ಲಿನ ವ್ಯಾಖ್ಯಾನವಲ್ಲ.

ಕೈ–ದಳಕ್ಕೆ ಪಾಠ: ಬಿಜೆಪಿಗೆ ಈ ಚುನಾವಣೆ ಅನಿವಾರ್ಯವಾಗಿದ್ದರೆ ಕಾಂಗ್ರೆಸ್‌–ಜೆಡಿಎಸ್‌ಗೆ ಪ್ರತಿಷ್ಠೆಯಾಗಿತ್ತು. ಫಲಿತಾಂಶ ಗಮನಿಸಿದರೆ ಕಾಂಗ್ರೆಸ್‌ನವರು ಚುನಾವಣೆಯನ್ನು ಸವಾಲಾಗಿ ಪರಿಗಣಿಸಿದ್ದರೆ ಎಂಬ ಅನುಮಾನ ಮೂಡುತ್ತದೆ.

ರಾಜೀನಾಮೆ ಕೊಟ್ಟ 13 ಶಾಸಕರು ಕಾಂಗ್ರೆಸ್‌ನವರಾಗಿದ್ದರು. ಇವರ ಪೈಕಿ ಅನೇಕರು ಸಿದ್ದರಾಮಯ್ಯ ಆಪ್ತರು ಹೌದು. ಮೈತ್ರಿ ಸರ್ಕಾರ ಮುನ್ನಡೆಯುವುದು ಇಷ್ಟವಿಲ್ಲದ ಸಿದ್ದರಾಮಯ್ಯ ಕೆಲವರನ್ನು ಬಿಜೆಪಿಗೆ ಕಳುಹಿಸಿದರು ಎಂದು ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದುಂಟು. ಕೈಕೊಟ್ಟು ನಡೆದು, ‘ದ್ರೋಹ’ ಬಗೆದವರನ್ನು ಸೋಲಿಸುವ ಉಮೇದನ್ನು ಸಿದ್ದರಾಮಯ್ಯನವರೂ ಸೇರಿಕೊಂಡಂತೆ ಕಾಂಗ್ರೆಸ್ ನಾಯಕರು ಪ್ರದರ್ಶಿಸಲಿಲ್ಲ. ಚುನಾವಣೆ ಘೋಷಣೆಯಾಗುವ ಹೊತ್ತಿನೊಳಗೆ ಅಖಾಡಕ್ಕೆ ಇಳಿದ ಸಿದ್ದರಾಮಯ್ಯ, ಒಂಟಿ ಸಲಗದಂತೆ ಎಲ್ಲ ಕ್ಷೇತ್ರಗಳನ್ನೂ ಸುತ್ತಾಡಿ ಟೀಕಾಪ್ರಹಾರ ನಡೆಸಿ ತಮ್ಮ ಭಾಷಣ ಚಾತುರ್ಯ ತೋರಿಸಿದರು. ಆದರೆ, ತಮ್ಮ ‘ಹಿತೈಷಿ’ಗಳನ್ನು ಮಣ್ಣು ಮುಕ್ಕಿಸುವ ಕಾರ್ಯತಂತ್ರ ಹೆಣೆಯಲಿಲ್ಲವೇ ಎಂಬ ಸಂಶಯ ಉಳಿದುಹೋಗುತ್ತದೆ.

ಸಿದ್ದರಾಮಯ್ಯ ತಮ್ಮ ಶಕ್ತಿ ಪಣಕ್ಕಿಟ್ಟು ದುಡಿದಂತೆ ತೋರಿಸಿಕೊಂಡರಾದರೂ ಉಳಿದ ಕಾಂಗ್ರೆಸ್‌ ನಾಯಕರು ತಮಗೆ ಉಪಚುನಾವಣೆಯ ಉಸಾಬರಿಯೇ ಬೇಡ ಎಂಬಂತೆ ಇದ್ದುಬಿಟ್ಟರು. ಬಿಜೆಪಿ ತೋರಿಸಿದ ಒಗ್ಗಟ್ಟಿನ ಎದುರು ಬಿಡಿಬಿಡಿಯಾಗಿ ಚದುರಿಹೋದ ಕಾಂಗ್ರೆಸ್ ನಾಯಕರು ತಮ್ಮ ದೌರ್ಬಲ್ಯ ತೋರಿದರು. ಹೀಗೆ ನಡೆದರೆ ಮುಂದಿನ ಚುನಾವಣೆ ಏನಾಗಲಿದೆ ಎಂಬುದು ಕಾಂಗ್ರೆಸ್‌ ನಾಯಕರಿಗೆ ಈ ಫಲಿತ ಪಾಠವಾಗಿದೆ.

ತಮ್ಮ ಪಾಳಯಪಟ್ಟಿನಲ್ಲಿ ಯಾರ ಆಟ–ಅಂಕೆ ನಡೆಯುವುದಿಲ್ಲ ಎಂಬ ಜೆಡಿಎಸ್‌ ದರ್ಪವೂ ಮುಗ್ಗರಿಸಿದೆ. ಜೆಡಿಎಸ್‌ನ ‘ಒಕ್ಕಲಿಗ ಕೋಟೆ’ಗೆ ನುಗ್ಗಿದ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಕೆ.ಆರ್. ಪೇಟೆಯಲ್ಲಿ ಕಮಲ ಪತಾಕೆ ಹಾರಿಸಿ, ಖಾತೆ ತೆರೆದಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಬೇರುಗಳು ಸಡಿಲವಾಗುತ್ತಿರುವ, ಮರ ಅಲ್ಲಾಡುತ್ತಿರುವ ಅನುಭವವನ್ನು ಜೆಡಿಎಸ್‌ ನಾಯಕರಿಗೆ ಈ ಚುನಾವಣೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT