ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ ಅಸ್ತು

ಇಷ್ಟ ಬಂದವರಿಗೆ ಕೃಷಿ ಉತ್ಪನ್ನ ಮಾರಲು ರೈತರಿಗೆ ಸ್ವಾತಂತ್ರ್ಯ
Last Updated 14 ಮೇ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ವ್ಯಕ್ತಿ ಅಥವಾ ಕಂಪನಿಗಳು ಕೃಷಿ ಮಾರುಕಟ್ಟೆಗಳನ್ನು ಆರಂಭಿಸಲು ಮತ್ತು ರೈತರು ತಮಗೆ ಇಷ್ಟ ಬಂದವರಿಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮುಕ್ತ ಅವಕಾಶ ನೀಡುವ ಸಲುವಾಗಿ ‘ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಗೆ ತಿದ್ದುಪಡಿ ತರುವುದಕ್ಕಾಗಿ ಸುಗ್ರೀವಾಜ್ಞೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

‘ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ಎರಡು ತಿದ್ದುಪಡಿಗಳನ್ನು ತರಲು ನಿರ್ಧರಿಸಲಾಗಿದೆ. ಇದರಿಂದಾಗಿ ಮಧ್ಯವರ್ತಿಗಳ ಕಪಿಮುಷ್ಠಿಯಿಂದ ರೈತರಿಗೆ ಸ್ವಾತಂತ್ರ್ಯ ಸಿಗುತ್ತದೆ. ರೈತರ ಶೋಷಣೆಗೆ ಕಡಿವಾಣ ಬೀಳಲಿದೆ’ ಎಂದು ಗುರುವಾರ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರೈತರು ತಾವು ಬೆಳೆದ ಉತ್ಪನ್ನಗಳನ್ನು ಎಪಿಎಂಸಿಗಳಲ್ಲಾದರೂ ಮಾರಬಹುದು ಅಥವಾ ಖಾಸಗಿ ಮಾರುಕಟ್ಟೆಗಳಲ್ಲಾದರೂ ಮಾರಬಹುದು. ಆಯ್ಕೆರೈತರಿಗೆ ಬಿಟ್ಟಿದ್ದು. ಖಾಸಗಿ ಮಾರುಕಟ್ಟೆಗಳ ಮೇಲೆ ಸ್ಥಳೀಯ ಮಾರುಕಟ್ಟೆ ಸಮಿತಿಗಳಿಗೆ ನಿಯಂತ್ರಣ ಅಧಿಕಾರ ಇರುವುದಿಲ್ಲ. ರಾಜ್ಯ ಮಟ್ಟದ ಎಪಿಎಂಸಿ ಸಮಿತಿ
ಸಂಪೂರ್ಣ ನಿಯಂತ್ರಣದ ಅಧಿಕಾರವನ್ನು ಹೊಂದಿರುತ್ತದೆ’ ಎಂದರು.

ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿಗಳ ಸುಧಾರಣೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾದರಿ ಕಾಯ್ದೆಯನ್ನು ಕಳುಹಿಸಿತ್ತು. ಇದರಲ್ಲಿ ರೈತರನ್ನು
ನಿರ್ಬಂಧಿಸುವ ಅಥವಾ ಅವರ ಹಕ್ಕುಗಳನ್ನು ಮೊಟಕುಗೊಳಿಸುವ ಯಾವುದೇ ಅಂಶಗಳಿರಲಿಲ್ಲ. ರೈತರ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಅವಕಾಶ ನೀಡು
ವುದು ಮತ್ತು ರೈತರ ಮೇಲಿನ ದಲ್ಲಾಳಿಗಳ ಹಿಡಿತ ತಪ್ಪಿಸುವುದಕ್ಕೆಂದೇ ತಿದ್ದುಪಡಿ ಮಾಡಿದ್ದೇವೆ ಎಂದರು.

ರೈತರಿಗೆ ಅಗುವ ಪ್ರಯೋಜನಗಳೇನು?

– ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಅಥವಾ ಖಾಸಗಿಯವರಿಗೆ ಮಾರಾಟ ಮಾಡುವ ಸ್ವಾತಂತ್ರ್ಯ. ಹಿಂದೆ ಈ ಸ್ವಾತಂತ್ರ್ಯವಿರಲಿಲ್ಲ. ಎಪಿಎಂಸಿ ಮೂಲಕವೇ ವಹಿವಾಟ ನಡೆಸಬೇಕಿತ್ತು

– ಖಾಸಗಿಯವರು ರೈತರ ಮನೆ ಬಾಗಿಲಿಗೆ ಬಂದು ಉತ್ಪನ್ನಗಳನ್ನು ಖರೀದಿಸಬಹುದು. ಬೆಳೆಗಾರ ಧಾರಣೆ ಸೂಕ್ತ ಇದೆ ಎಂದರೆ ಮಾರಬಹುದು, ಇಲ್ಲವೇ ತಿರಸ್ಕರಿಸಬಹುದು

– ಎಪಿಎಂಸಿಗಳ ದಲ್ಲಾಳಿಗಳ ಮರ್ಜಿಗೆ ಒಳಗಾಗದೇ ರೈತ ತನ್ನ ಇಷ್ಟಕ್ಕೆ ತಕ್ಕಂತೆ ಯಾರಿಗೆ ಬೇಕಾದರೂ ಉತ್ಪನ್ನಗಳನ್ನು ಮಾರಬಹುದು

– ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಇದೊಂದು ಮಹತ್ವದ ಹೆಜ್ಜೆಯಾಗಲಿದೆ

– ರೈತರಿಗೆ ಆದಾಯ ಹೆಚ್ಚುವುದರಿಂದ ಸರ್ಕಾರಕ್ಕೆ ಸೆಸ್‌ ಕಡಿಮೆ ಆಗುತ್ತದೆ. ಈ ನಷ್ಟ ಭರಿಸಲು ಸರ್ಕಾರ ಸಿದ್ಧ

ಖಾಸಗಿಯವರ ಪಾತ್ರ

– ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ತೆರೆಯಬಹುದು. ಅದಕ್ಕೆ ಎಪಿಎಂಸಿ ರಾಜ್ಯ ಮಟ್ಟದ ಸಮಿತಿಯಿಂದ ಪರವಾನಗಿ ಪಡೆಯಬೇಕು. ಬ್ಯಾಂಕ್‌ ಗ್ಯಾರೆಂಟಿ ಇಲ್ಲದೆ ವ್ಯವಹಾರ ನಡೆಸುವಂತಿಲ್ಲ

– ರೈತರಿಗೆ ಕಂಪನಿಗಳು ಮೋಸ ಮಾಡಿದರೆ ಸರ್ಕಾರ ಮಧ್ಯ ಪ್ರವೇಶ ಮಾಡುವ ಹಕ್ಕು ಹೊಂದಿದೆ. ಎಲ್ಲ ರೀತಿಯ ರಕ್ಷಣೆ ನೀಡಲಾಗುತ್ತದೆ. ಕ್ರಮ ತೆಗೆದುಕೊಳ್ಳುವ ಅಧಿಕಾರವೂ ಇದೆ

– ಖಾಸಗಿ ವ್ಯಕ್ತಿ, ಕಂಪನಿಗಳು ಮಾರುಕಟ್ಟೆಯನ್ನು ಆರಂಭಿಸಲು ಅವಕಾಶ ಇದೆ. ಖಾಸಗಿ ಮಾರುಕಟ್ಟೆ ಸ್ಥಳೀಯ ಎಪಿಎಂಸಿ ವ್ಯಾಪ್ತಿಯಿಂದ ಹೊರಗಿರಬೇಕು

***

ದಲ್ಲಾಳಿಗಳು ತೂಕದಲ್ಲಿ, ದರದಲ್ಲಿ ವಂಚಿಸುತ್ತಾ ಬಂದಿದ್ದರು. ಈಗ ಎಲ್ಲರಿಗೂ ರೈತರ ನೆನಪಾಗಿದೆ
– ಭಾಸ್ಕರರಾವ್ ಮುಡಬೂಳ, ರೈತ ಮುಖಂಡ

***

ಸಿದ್ದರಾಮಯ್ಯ ಕಾರ್ಪೊರೇಟ್‌ ಕಂಪನಿಗಳಿಗೆ ಕೃಷಿ ಉತ್ಪನ್ನ ಖರೀದಿಸಲು ಅನುಮತಿ ನೀಡಿದ್ದರು
– ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT