ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ, ಸ್ನಾತಕೋತ್ತರ, ಡಿಪ್ಲೊಮಾ: ಅಂತಿಮ ಸೆಮಿಸ್ಟರ್‌ಗಷ್ಟೇ ಪರೀಕ್ಷೆ

ಮಧ್ಯಂತರ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು
Last Updated 10 ಜುಲೈ 2020, 21:16 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು:ಎಂಜಿನಿಯರಿಂಗ್ ಸೇರಿದಂತೆ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳನ್ನು ಈ ವರ್ಷ ಕೋವಿಡ್ ಕಾರಣದಿಂದ ರದ್ದುಪಡಿಸಲಾಗಿದೆ. ಅಂತಿಮ ಸೆಮಿಸ್ಟರ್‌ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಸೆಪ್ಟೆಂಬರ್ ಅಂತ್ಯದೊಳಗೆ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.

‘ಮಧ್ಯಂತರ ಸೆಮಿಸ್ಟರ್‌ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆಯೇ ಮುಂದಿನ ಹಂತಕ್ಕೆ ಉತ್ತೀರ್ಣಗೊಳ್ಳಲಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜುಭಾಯಿ ವಾಲಾ ಒಪ್ಪಿಗೆ ನೀಡಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇದು ಎಲ್ಲ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಅವುಗಳಿಗೆ ಸಂಯೋಜಿತಗೊಂಡಿರುವ ಕಾಲೇಜುಗಳಿಗೆ ಅನ್ವಯವಾಗುತ್ತದೆ. ಡೀಮ್ಡ್‌ ವಿಶ್ವವಿದ್ಯಾಲಯಗಳು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವ್ಯಾಪ್ತಿಗೆ ಬರುವುದರಿಂದ ಈ ನಿಯಮಗಳು ಅವುಗಳಿಗೆ ಅನ್ವಯವಾಗುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಈ ನಿರ್ಧಾರ 2019–20ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತ. ಪರೀಕ್ಷೆಗೆ ಮೊದಲು ಕೆಲವು ದಿನ ತರಗತಿಗಳನ್ನು ನಡೆಸುವ ಚಿಂತನೆಯೂ ಇತ್ತು. ಕೋವಿಡ್‌ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣಕ್ಕೆ ಅವೆಲ್ಲವನ್ನೂ ಕೈಬಿಟ್ಟು, ಮೊದಲ–ಎರಡನೇ ವರ್ಷಗಳ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ನಿರ್ಧರಿಸಲಾಯಿತು. ಅಂತಿಮ ಸೆಮಿಸ್ಟರ್‌ ಅಥವಾ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಅಥವಾ ಆಫ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲು ಆಯಾ ವಿಶ್ವವಿದ್ಯಾಲಯಗಳಿಗೇ ಸೂಚಿಸಲಾಗಿದೆ’ ಎಂದರು.

ತೇರ್ಗಡೆ ಹೇಗೆ?: ‘ಮೊದಲ ಮತ್ತು ಎರಡನೇ ವರ್ಷ/ ಸೆಮಿಸ್ಟರ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನ ಮತ್ತು ಹಿಂದಿನ ಸೆಮಿಸ್ಟರ್‌/ವರ್ಷದ ಅಂಕಗಳ (50:50) ಸಮಗ್ರ ಮೌಲ್ಯಮಾಪನದ ಆಧಾರದಲ್ಲಿ ತೇರ್ಗಡೆಗೊಳಿಸಲಾಗುತ್ತದೆ. ಹಿಂದಿನ ವರ್ಷದ ಅಂಕ ಇಲ್ದವರಿಗೆ ಅಂತರಿಕ ಮೌಲ್ಯಮಾಪನದ ಮೂಲಕವೇ ಉತ್ತೀರ್ಣಗೊಳಿಸಲಾಗುವುದು‌’ ಎಂದರು.

***

ವಿದ್ಯಾರ್ಥಿಗಳ ಭವಿಷ್ಯ, ಆರೋಗ್ಯ ನೋಡಿಕೊಂಡು, ಶಿಕ್ಷಣ ತಜ್ಞರು, ವಿವಿಗಳ ಕುಲಪತಿಗಳ ಜತೆ ಸಮಾಲೋಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ

- ಡಾ.ಸಿ.ಎನ್.ಅಶ್ವತ್ಥನಾರಾಯಣ, ಉಪಮುಖ್ಯಮಂತ್ರಿ

***

ಪರೀಕ್ಷೆಯಿಂದಲೇ ಭವಿಷ್ಯ

‘ಉನ್ನತ ಶಿಕ್ಷಣ ಪದ್ಧತಿಯಲ್ಲಿ ಶೈಕ್ಷಣಿಕ ಮೌಲ್ಯಮಾಪನ ಅಗತ್ಯ. ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷಮತೆಯನ್ನು ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಉದ್ಯೋಗದಾತ ಕಂಪನಿಗಳು ಕೂಡ ಶೈಕ್ಷಣಿಕ ಗುಣಮಟ್ಟ ಹಾಗೂ ಅವರು ಗಳಿಸಿರುವ ಶ್ರೇಣಿಯನ್ನು ಗುರುತಿಸುತ್ತವೆ. ಹೀಗಾಗಿ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಅಶ್ವತ್ಥನಾರಾಯಣ ಹೇಳಿದರು.‌

ಇದೇ 30ರಿಂದ ಸಿಇಟಿ

‘ಎಂಜಿನಿಯರಿಂಗ್‌ ಸಹಿತ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಈಗಾಗಲೇ ನಿಗದಿಯಾಗಿರುವಂತೆ ಇದೇ 30, 31 ಮತ್ತು ಆಗಸ್ಟ್ 1ರಂದು ನಡೆಯಲಿದೆ. ಆಗಸ್ಟ್ 8 ಮತ್ತು 9ರಂದು ಪಿಜಿ ಸಿಇಟಿ ಹಾಗೂ ಆಗಸ್ಟ್‌ 9ರಂದೇ ಡಿಪ್ಲೊಮಾ ಸಿಇಟಿ ನಡೆಯಲಿದೆ. ಕೆ–ಸೆಟ್‌ ಪರೀಕ್ಷೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ’ ಎಂದು ಸಚಿವರು ತಿಳಿಸಿದರು.

ಸೆ.1ರಿಂದ ಆನ್‌ಲೈನ್‌ ತರಗತಿ

2020-21ರ ಶೈಕ್ಷಣಿಕ ಸಾಲಿನ ಮೊದಲ ಸೆಮಿಸ್ಟರ್’ಗೆ ಸೆಪ್ಟೆಂಬರ್ 1ರಿಂದಲೇ ಆನ್‌ಲೈನ್ ತರಗತಿಗಳು ಹಾಗೂ ಅಕ್ಟೋಬರ್ 1ರಿಂದ ಆಫ್‌ಲೈನ್ ತರಗತಿಗಳು ಆರಂಭವಾಗುತ್ತವೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿಶ್ವವಿದ್ಯಾಲಯಗಳು, ಕಾಲೇಜುಗಳಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT