ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ಶಾಸಕರು ರಾಜೀನಾಮೆ: ಈ ಕ್ಷಿಪ್ರ ಕ್ರಾಂತಿ ಹಿಂದೆ ಯಾರ ಕೈವಾಡ?

Last Updated 7 ಜುಲೈ 2019, 1:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಶನಿವಾರ ನಡೆದ ಕ್ಷಿಪ್ರ ಕ್ರಾಂತಿ ಹಿಂದೆ ಯಾರ ಕೈವಾಡ ಇದೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆದಿವೆ.

ಬಿಜೆಪಿ ಜತೆಗೆ ಸಖ್ಯ ಇಟ್ಟುಕೊಂಡ ಕಾಂಗ್ರೆಸ್‌–ಜೆಡಿಎಸ್‌ನ ಅತೃಪ್ತ ಶಾಸಕರು ಮಾತ್ರ ರಾಜೀನಾಮೆ ಕೊಟ್ಟಿಲ್ಲ. ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಜತೆ ನಿಕಟ ಬಾಂಧವ್ಯ ಹೊಂದಿದ್ದ, ಅವರ ಹಿಂದೆ ಮುಂದೆ ಓಡಾಡಿಕೊಂಡಿದ್ದ ಶಾಸಕರು ರಾಜೀನಾಮೆ ಕೊಟ್ಟಿರುವುದು ಅನೇಕ ಸಂಶಯಗಳನ್ನು ಹುಟ್ಟುಹಾಕಿದೆ.

ಅದರಲ್ಲೂ ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಸೇರಿಕೊಂಡಿರುವುದು ಬಿಜೆಪಿಯವರಲ್ಲೂ ಅನುಮಾನ ಹುಟ್ಟು ಹಾಕಿದೆ. ಮೈತ್ರಿ ಸರ್ಕಾರದ ರಚನೆ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಇಷ್ಟಪಡದ ಸಿದ್ದರಾಮಯ್ಯನವರೇ ಇವರ ಹಿಂದೆ ಇದ್ದಾರೆಯೇ ಎಂಬ ಚರ್ಚೆಯೂ ಬಲವಾಗುತ್ತಿದೆ.

ಮೈತ್ರಿ ಸರ್ಕಾರ ಮುಂದುವರಿಯುವುದು ವೈಯಕ್ತಿಕವಾಗಿ ಹಾಗೂ ಕಾಂಗ್ರೆಸ್‌ಗೆ ಏನೂ ಲಾಭವಿಲ್ಲ ಎಂಬುದು ಸಿದ್ದರಾಮಯ್ಯನವರ ವಾದ. ಲೋಕಸಭೆ ಚುನಾವಣೆಗೆ ಮುನ್ನವೇ ತಮ್ಮ ಆಪ್ತರ ಬಳಿ ಇಂತಹದೊಂದು ಸುಳಿವು ನೀಡಿದ್ದ ಸಿದ್ದರಾಮಯ್ಯ, ಜೂನ್ 10ಕ್ಕೆ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತುಕೊಳ್ಳುವ ಬಗ್ಗೆ ಪ್ರಸ್ತಾಪಿಸಿದ್ದುಂಟು. ಅದು ಒಂದು ತಿಂಗಳು ಮುಂದಕ್ಕೆ ಹೋಗಿ, ಜುಲೈ 10ರ ಬಳಿಕ ಸಾಕಾರವಾಗಲಿದೆಯೇ ಎಂಬ ಚರ್ಚೆ ಅವರ ಆಪ್ತವಲಯದಲ್ಲಿ ನಡೆದಿದೆ.

ಸರ್ಕಾರ ಪತನಕ್ಕೆ ವಿಶ್ವನಾಥ ನೇತೃತ್ವ?

ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಬಿಜೆಪಿ ಜತೆಗೆ ಸಖ್ಯ ಬೆಳೆಸಿಕೊಂಡಿದ್ದ ಹುಣಸೂರು ಕ್ಷೇತ್ರದ ಜೆಡಿಎಸ್‌ ಶಾಸಕ ಎಚ್. ವಿಶ್ವನಾಥ್ ಅವರೇ ಈ ‘ಕ್ರಾಂತಿ’ಯ ನೇತೃತ್ವ ವಹಿಸಿಕೊಂಡಿದ್ದಾರೆಯೇ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ.

ಸಮನ್ವಯ ಸಮಿತಿಯಲ್ಲಿ ಸ್ಥಾನ ಸಿಗದೇ ಇರಲು ಹಾಗೂ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ತಪ್ಪಲು ಸಿದ್ದರಾಮಯ್ಯನವರೇ ಕಾರಣ ಎಂಬುದು ವಿಶ್ವನಾಥ್ ಆಕ್ರೋಶಕ್ಕೆ ಕಾರಣ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಮನಸ್ಸು ಮಾಡಿ ರಾಹುಲ್ ಗಾಂಧಿ ಅವರಿಗೆ ಒಂದು ಮಾತು ಹೇಳಿದ್ದರೆ ಸಮನ್ವಯ ಸಮಿತಿಯಲ್ಲಿ ಸ್ಥಾನ ಕೊಡಿಸಬಹುದಿತ್ತು. ಗೌಡರು ಅದನ್ನು ಮಾಡಲಿಲ್ಲ ಎಂಬ ಅಸಮಾಧಾನವೂ ವಿಶ್ವನಾಥ್ ಅವರಲ್ಲಿತ್ತು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಜಯಭೇರಿ ಬಾರಿಸಿದ ಬಳಿಕ ಪಕ್ಷ ತೊರೆಯುವ ನಿರ್ಧಾರಕ್ಕೆ ವಿಶ್ವನಾಥ್ ಬಂದಿದ್ದರು. ಮೊದಲ ಹಂತದಲ್ಲಿ ಜೆಡಿಎಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಚಾಮರಾಜನಗರದ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್‌ ಅವರನ್ನು ಪದೇ ಪದೇ ಭೇಟಿಯಾಗಿ, ಬಿಜೆಪಿ ಜತೆಗೆ ಬಾಂಧವ್ಯ ಹೊಂದಿರುವ ಬಗ್ಗೆ ಸುಳಿವನ್ನೂ ನೀಡಿದರು. ಇದರ ಜತೆಗೆ ಬಿಜೆಪಿ ವರಿಷ್ಠರ ಜತೆಗೆ ಮಾತುಕತೆಯನ್ನೂ ನಡೆಸಿದ್ದರು. ಹಿಂದೆಲ್ಲ ಆಪರೇಷನ್ ಕಮಲ ವಿಫಲವಾಗಿದ್ದ ಬಿಜೆಪಿ, 10–15 ಶಾಸಕರನ್ನು ಒಟ್ಟಿಗೆ ಕರೆತರುವ ಯತ್ನ ನಡೆಸುವ ಜವಾಬ್ದಾರಿಯನ್ನು ವಿಶ್ವನಾಥ್‌ಗೆ ವಹಿಸಿತ್ತು. ಅದೇ ಕಾರಣಕ್ಕೆ ಇತ್ತೀಚೆಗೆ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.ಇದೇ ಕಾರಣಕ್ಕೆ, ರಾಜೀನಾಮೆ ಕೊಡುವ ಶಾಸಕರ ನೇತೃತ್ವವನ್ನು ಅವರೇ ವಹಿಸಿಕೊಂಡರು ಎಂದು ಮೂಲಗಳು ಹೇಳಿವೆ.

ಮೂರನೇ ಬಾರಿ ರಾಜ್ಯದಲ್ಲಿ ‘ಕ್ಷಿಪ್ರ ದಂಗೆ’

ಧರ್ಮಸಿಂಗ್‌ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಗುಂಪು ಇದೇ ರೀತಿ ದಂಗೆ ಎದ್ದು ಅಂದಿನ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿತ್ತು. ಬಳಿಕ ಜೆಡಿಎಸ್‌–ಬಿಜೆಪಿ ಸರ್ಕಾರ ಕುಮಾರಸ್ವಾಮಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಅವರು ಬಿಜೆಪಿಯ 11 ಹಾಗೂ 5 ಪಕ್ಷೇತರ ಶಾಸಕರನ್ನು( ಈ ಪೈಕಿ ಕೆಲವರು ಸಚಿವರೂ ಆಗಿದ್ದರು) ರಾಜಭವನಕ್ಕೆ ಕರೆದೊಯ್ದಿದ್ದರು. ಮುಖ್ಯಮಂತ್ರಿ ವಿರುದ್ಧ ಅವಿಶ್ವಾಸವನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿ, ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ದಿದ್ದರು. ಆಗ ಇಂತಹದೇ ಬಿಕ್ಕಟ್ಟಿನ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗಿತ್ತು. ಬೇರೆ ಬೇರೆ ಅಸ್ತ್ರ ಬಳಸಿದ್ದ ಯಡಿಯೂರಪ್ಪ, ಹೆಣಗಾಡಿ ಸರ್ಕಾರ ಉಳಿಸಿಕೊಂಡಿದ್ದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT