ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಮತದಾರನ ತೀರ್ಪೇ ‘ಸುಪ್ರೀಂ’: ಕಾವೇರಲಿದೆ ಉಪಚುನಾವಣೆ ಅಖಾಡ

17 ಅನರ್ಹ ಶಾಸಕರು ಇಂದು ಬಿಜೆಪಿಗೆ ಸೇರ್ಪಡೆ * ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡರಿಗೆ ಜೆಡಿಎಸ್‌ ಬೆಂಬಲ
Last Updated 14 ನವೆಂಬರ್ 2019, 2:09 IST
ಅಕ್ಷರ ಗಾತ್ರ

ಬೆಂಗಳೂರು: ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಸದ್ಯ ಉಪಚುನಾವಣೆ ನಿಗದಿಯಾಗಿರುವ 15 ಕ್ಷೇತ್ರಗಳ ಮತದಾರರಿಗೆ ‘ಮಹಾ ತೀರ್ಪು’ ನೀಡುವ ಅವಕಾಶ ಬಂದೊದಗಿದೆ.

ನಾಮಪತ್ರ ಸಲ್ಲಿಕೆಗೆ ಇದೇ 18ರಂದು ಕೊನೆಯ ದಿನವಾಗಿದ್ದು, ಡಿಸೆಂಬರ್‌ 5ರಂದು ಮತದಾನ ನಡೆಯಲಿದೆ. ತಮ್ಮನ್ನು ಅನರ್ಹಗೊಳಿಸಿದ ಹಿಂದಿನ ಸಭಾಧ್ಯಕ್ಷರ ಕ್ರಮ ಪ್ರಶ್ನಿಸಿ 17 ಜನರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ತೀರ್ಪು ಕಾಯ್ದಿರಿಸಿತ್ತು. ಚುನಾವಣೆ ಹಾಗೂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯು ಈ ತೀರ್ಪಿನ ಮೇಲೆ ಅವಲಂಬಿತವಾಗಿದ್ದರಿಂದಾಗಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿರಲಿಲ್ಲ. ತೀರ್ಪು ಹೊರಬಿದ್ದ ಬೆನ್ನಲ್ಲೇ, ಚುನಾವಣೆ ಕಾವು ಏರತೊಡಗಿದೆ.

ಉಪ‍ಚುನಾವಣೆಯಲ್ಲಿ ಕನಿಷ್ಠ 8 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಉಳಿಸಿಕೊಳ್ಳುವ ಸವಾಲು ಆಡಳಿತಾರೂಢ ಬಿಜೆಪಿ ಮುಂದೆ ಇದ್ದರೆ, ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಕಮಲ ತೆಕ್ಕೆಗೆ ಸೇರಿ ಅನರ್ಹಗೊಂಡಿರುವವರನ್ನು ಅಥವಾ ಅವರ ಬದಲಾಗಿ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಸೋಲಿಸುವುದು ಕಾಂಗ್ರೆಸ್–ಜೆಡಿಎಸ್‌ ನಾಯಕರಿಗೆ ಪ್ರತಿಷ್ಠೆಯಾಗಿದೆ.

ರಾಜಕೀಯ ಚುರುಕು: ತೀರ್ಪು ಬುಧವಾರ ಹೊರಬೀಳುತ್ತಿದ್ದಂತೆ ಮೂರೂ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಹೊಸಕೋಟೆಯ ಶರತ್ ಬಚ್ಚೇಗೌಡ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರೆ, ಕಾಗವಾಡದ ಭರಮಗೌಡ (ರಾಜು)ಕಾಗೆ ಕಾಂಗ್ರೆಸ್ ಸೇರುವುದಾಗಿ ಪ್ರಕಟಿಸಿದ್ದಾರೆ.

ನವದೆಹಲಿಯಲ್ಲಿ ಮೊಕ್ಕಾಂ ಮಾಡಿದ್ದ ಅನರ್ಹ ಶಾಸಕರು ತೀರ್ಪು ಹೊರಬೀಳುತ್ತಿದ್ದಂತೆ ಕಾರ್ಯಪ್ರವೃತ್ತರಾದರು. ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ಸಾರಥ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಿಜೆಪಿ ಸೇರಲು ಮುಹೂರ್ತ ನಿಗದಿ ಪಡಿಸಿಕೊಂಡ ಅವರು ಬೆಂಗಳೂರಿಗೆ ದೌಡಾಯಿಸಿದರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಇದಕ್ಕೆ ಮುನ್ನ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಮಿತಿ ಸಭೆಯಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಸುದೀರ್ಘ ಚರ್ಚೆ ನಡೆಯಿತು. ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿ ಅನರ್ಹರಿಗೆ ಟಿಕೆಟ್ ಕೊಡಬೇಕೇ ಬೇಡವೇ? ಕೊಟ್ಟರೆ ಗೆಲ್ಲಲಿದ್ದಾರೆಯೇ ಎಂಬ ಬಗ್ಗೆ ನಾಯಕರು ಸಮಾಲೋಚನೆ ನಡೆಸಿದರು.

ಹುಣಸೂರು, ಅಥಣಿ, ರಾಣೆಬೆನ್ನೂರು ಹಾಗೂ ಶಿವಾಜಿನಗರ ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ವಿಷಯದ ಬಗ್ಗೆ ಈ ಸಭೆಯಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ.

ಹುಣಸೂರಿನಲ್ಲಿ ಎಚ್.ವಿಶ್ವನಾಥ್ ಸ್ಪರ್ಧಿಸಲು ಮುಂದಾಗದೇ ಇದ್ದರೆ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಪುತ್ರ ಹರೀಶ್ ಗೌಡರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯಿತು. ಅಥಣಿಯಲ್ಲಿ ಮಹೇಶ ಕುಮಠಳ್ಳಿಗೆ ಟಿಕೆಟ್ ನೀಡಬೇಕೇ ಅಥವಾ 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಕಂಡಿದ್ದಈಗ ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ ಅವರನ್ನು ಕಣಕ್ಕೆ ಇಳಿಸಬೇಕೇ ಎಂಬ ಬಗ್ಗೆ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ.

ರಾಣೆಬೆನ್ನೂರಿನಲ್ಲಿ ಅನರ್ಹಗೊಂಡಿರುವ ಆರ್. ಶಂಕರ್ ಅವರು ಸ್ಪರ್ಧೆಗೆ ಒಲವು ತೋರದೇ ಇದ್ದರೆ ಈ ಕ್ಷೇತ್ರದಿಂದ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆದಿದೆ. ತಮ್ಮ ಪುತ್ರ ಕೆ.ಇ. ಕಾಂತೇಶ ಅವರನ್ನು ವಿಧಾನಸಭೆಗೆ ಕರೆತರುವ ಇರಾದೆ ಇರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಈ ಕ್ಷೇತ್ರಕ್ಕಾಗಿ ಲಾಬಿ ನಡೆಸಿದ್ದಾರೆ.ಶಿವಾಜಿನಗರ ಕ್ಷೇತ್ರದಲ್ಲಿ ಅನರ್ಹಗೊಂಡಿರುವ ಆರ್. ರೋಷನ್ ಬೇಗ್‌ ಅವರನ್ನೇ ಕಣಕ್ಕೆ ಇಳಿಸಲು ಪಕ್ಷದಲ್ಲೇ ವಿರೋಧ ಇದೆ.

ಅನರ್ಹರ ಬಿಜೆಪಿ ಸೇರ್ಪಡೆ: ಅನರ್ಹ ಶಾಸಕರು ಗುರುವಾರ ಬೆಳಿಗ್ಗೆ 10.30ಕ್ಕೆ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಯಡಿಯೂರಪ್ಪ ಅವರೇ ಪ್ರಕಟಿಸಿದ್ದಾರೆ. ಟಿಕೆಟ್ ಖಾತ್ರಿಯಾಗದೇ ಇದ್ದರೆ ರೋಷನ್ ಬೇಗ್‌ ಅವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಕಾಂಗ್ರೆಸ್ ಸಿದ್ಧತೆ: ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿ ಆಖೈರು ಮಾಡಿರುವ ಕಾಂಗ್ರೆಸ್ ಉಳಿದ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತು ಗುರುವಾರ ಸಭೆ ಸೇರಿ ಚರ್ಚೆ ನಡೆಸಲಿದೆ.

ಯಡಿಯೂರಪ್ಪ ಸೀಟು ಭದ್ರ: ದೇವೇಗೌಡ
ಬೆಂಗಳೂರು:
‘ಸುಪ್ರೀಂ ಕೋರ್ಟ್‌ ತೀರ್ಪು ಬಂದ ಬಳಿಕ ಯಡಿಯೂರಪ್ಪ ಸರ್ಕಾರ ಇನ್ನಷ್ಟು ಭದ್ರವಾಗಿದೆ,
ಮೂರೂವರೆ ವರ್ಷ ಅವರು ಮುಖ್ಯಮಂತ್ರಿಯಾಗಿ ಮುಂದು ವರಿಯುವುದು ನಿಶ್ಚಿತ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

‘ಕಾಂಗ್ರೆಸ್ ಹೇಳುವಂತೆ ನಮ್ಮ ಪಕ್ಷದ ಮೂವರು ಗೆದ್ದ ಸ್ಥಾನ ಸಹಿತ ಎಲ್ಲಾ 15 ಸೀಟುಗಳನ್ನು ಅವರೇ ಗೆದ್ದುಕೊಂಡರೂ ಅವರ ಸಂಖ್ಯೆ ಆಗುವುದು 81 ಮಾತ್ರ. ಆದರೆ ಜೆಡಿಎಸ್‌ ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಅವರು ಬುಧವಾರ ಇಲ್ಲಿ ಹೇಳಿದರು. ಈ ಮೂಲಕ ಅಗತ್ಯ
ಬಿದ್ದರೆ ಬಿಜೆಪಿ ಸರ್ಕಾರಕ್ಕೆ ಪಕ್ಷ ಬೆಂಬಲವಾಗಿ ನಿಲ್ಲುತ್ತದೆಯೇ ಹೊರತು ಕಾಂಗ್ರೆಸ್‌ಗೆ ಜತೆಗಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದರು.

‘ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ನಾನು ವಿಶ್ಲೇಷಿಸಲು ಹೋಗುವುದಿಲ್ಲ. ಅನರ್ಹ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತದೋ, ಇಲ್ಲವೋ ಗೊತ್ತಿಲ್ಲ, ಸಿಗದಿದ್ದರೆ, ಬಿಜೆಪಿಯಲ್ಲಿರುವ ಅತೃಪ್ತರನ್ನೇ ಸಮಾಧಾನಪಡಿಸಲು ಸಾಕಷ್ಟು ಅವಕಾಶ ಸಿಕ್ಕಿದೆ’ ಎಂದು ಅವರು ಹೇಳಿದರು.

‘ಜಾತ್ಯತೀತ ತತ್ವದ ಬಗ್ಗೆ ಸಿದ್ದರಾಮಯ್ಯ ಅವರು ನನಗೆ ಪಾಠ ಕಲಿಸುವುದು ಬೇಡ. ಹಾಸನದಲ್ಲಿ ರಾಹುಲ್ ಗಾಂಧಿ ಅವರಿಗೆ ಜಾತ್ಯತೀತ ಮೌಲ್ಯವನ್ನು ಸಿದ್ದರಾಮಯ್ಯ ಅವರೇ ಹಸ್ತಾಂತರ ಮಾಡಿದ್ದರು. ಈಗ ನಾನು ಮತ್ತೆ, ಅವರಿಂದ ವಾಪಸ್ ಪಡೆಯಬೇಕಾಗಿದೆ’ ಎಂದು ದೇವೇಗೌಡ ವ್ಯಂಗ್ಯವಾಡಿದರು.

ತೀರ್ಪಿನ ಮುಖ್ಯಾಂಶಗಳು
* 17 ಜನ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್‌ ನೀಡಿದ್ದ ಆದೇಶ ಸೂಕ್ತವಾಗಿದೆ

* ಅನರ್ಹಗೊಂಡವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವ ಅಡ್ಡಿಯೂ ಇಲ್ಲ

* ಅನರ್ಹರು ಅಥವಾ ರಾಜೀನಾಮೆ ಸಲ್ಲಿಸಿವರ ಸ್ಪರ್ಧೆಗೆ ಸಂಬಂಧಿಸಿದ ಕಾಲಮಿತಿ ಸೂಚಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ

* ವಿಧಾನಸಭೆಯ ಅವಧಿ ಪೂರ್ಣಗೊಳ್ಳುವವರೆಗೆ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಸ್ಪೀಕರ್‌ ಆದೇಶ ಸರಿಯಿಲ್ಲ

* ಸಂವಿಧಾನದ 10ನೇ ಪರಿಚ್ಛೇದದಡಿ ವಸ್ತುಸ್ಥಿತಿ ಆಧರಿಸಿಯೇ ಅನರ್ಹತೆಯ ಆದೇಶ ಹೊರಡಿಸಲಾಗಿದೆ. ಹಾಗಾಗಿ ಅನರ್ಹಗೊಂಡವರು ವಿಧಾನಸಭೆಗೆ ಮರು ಆಯ್ಕೆ ಆಗುವವರೆಗೆ ಸರ್ಕಾರದಲ್ಲಿ ಸಚಿವ ಸ್ಥಾನ ಅಥವಾ ಗೌರವಧನ ಆಧರಿಸಿದ ಯಾವುದೇ ರಾಜಕೀಯ ಸ್ಥಾನವನ್ನು ಅಲಂಕರಿಸುವಂತಿಲ್ಲ

* ಕುದುರೆವ್ಯಾಪಾರದ ಮಾದರಿಯಲ್ಲಿ ಶಾಸಕರನ್ನು ಖರೀದಿಸುವಂತಹ ಮತ್ತು ಪಕ್ಷಾಂತರದಂತಹ ಪ್ರಜಾಪ್ರಭುತ್ವ ವಿರೋಧಿ ಪ್ರಕ್ರಿಯೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನನ್ನು ಬಲಪಡಿಸಬೇಕಿದೆ

* ಪಕ್ಷಾಂತರ ಪ್ರಕ್ರಿಯೆ ಗೋಚರಿಸಿದ ದಿನದಿಂದಲೇ ಅನರ್ಹತೆಯ ಪ್ರಶ್ನೆಯೂ ಉದ್ಭವವಾಗುತ್ತದೆ. ಸ್ಪೀಕರ್‌ಗೆ ರಾಜೀನಾಮೆ ನೀಡುವ ಮೂಲಕ ಪಕ್ಷಾಂತರದ ಕಳಂಕದಿಂದ ಮುಕ್ತವಾಗಲಾಗದು

* ರಾಜೀನಾಮೆಗೆ ಮೊದಲೇ ಅನರ್ಹತೆಗೆ ಸಂಬಂಧಿಸಿದ ಪ್ರಶ್ನೆಗಳು ಉದ್ಭವಿಸಿದ್ದರೆ, ತದನಂತರ ರಾಜೀನಾಮೆ ನೀಡಿ ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಆಗದು

* ಸ್ವಯಂ ಪ್ರೇರಣೆಯಿಂದ ನೀಡಲಾದ ರಾಜೀನಾಮೆಯ ಹಿಂದಿನ ಕಾರಣಗಳೇನು ಎಂಬುದನ್ನು ಪರಿಶೀಲಿಸುವುದುನ್ಯಾಯಪೀಠಕ್ಕೂ
ಅಸಾಧ್ಯ

*
ಸಿದ್ದರಾಮಯ್ಯ ಮತ್ತು ರಮೇಶ್‌ ಕುಮಾರ್‌ ಸೇರಿ ಷಡ್ಯಂತ್ರ ನಡೆಸಿದ್ದರು. ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಅವರಿಗೆ ಹಿನ್ನಡೆಯಾಗಿದೆ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

*
ಒತ್ತಡ, ಆಮಿಷಗಳಿಗೆ ಒಳಗಾಗಿ ಶಾಸಕರು ರಾಜೀನಾಮೆ ನೀಡಿರುವ ಸತ್ಯ ಈಗ ಹೊರಬಂದಿದೆ. ಆಪರೇಷನ್ ಕಮಲಕ್ಕೆ ಇದಕ್ಕಿಂತ ದಾಖಲೆ ಬೇಕೆ?
ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

*
ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೇ 370ನೇ ವಿಧಿ ರದ್ದುಗೊಳಿಸಿದ್ದೀರಿ. ಪಕ್ಷಾಂತರ ನಿಷೇಧ ಕಾಯ್ದೆಯನ್ನೂ ರದ್ದುಗೊಳಿಸಿ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT