ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರದ ಇತಿಹಾಸ, ವೈಶಿಷ್ಟ್ಯ ನಿಮಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ

Last Updated 6 ಜನವರಿ 2020, 7:46 IST
ಅಕ್ಷರ ಗಾತ್ರ

ರಾಮನಗರದ ಹೆಸರು ಬದಲಿಸಿ ‘ನವ ಬೆಂಗಳೂರು’ ಎಂದು ಮರು ನಾಮಕರಣ ಮಾಡುವ ಕುರಿತು ವಿವಾದ ಸೃಷ್ಟಿಯಾಗಿದೆ. ರಾಜಕೀಯ ಹಗ್ಗಜಗ್ಗಾಟಕ್ಕೂ ಕಾರಣವಾಗಿದೆ. ಈ ಮಧ್ಯೆ ಜಿಲ್ಲೆಯ ಇತಿಹಾಸ, ಇಲ್ಲಿನ ವಿಶೇಷಗಳ ಕುರಿತು ಮಾಹಿತಿ ಕೋಶ ರಚನೆಗೆ ಮುಂದಾಗಿರುವ ಸರ್ಕಾರಸರ್ಕಾರ ಕೆಲ ಉಪನ್ಯಾಸಕರು, ಬರಹಗಾರರಿಗೆ ದುಂಬಾಲು ಬಿದ್ದಿದೆ. ಜಿಲ್ಲೆಯ ಇತಿಹಾಸ, ಅದರ ವಿಶೇಷತೆಗಳ ಕುರಿತು ಪ್ರಜಾವಾಣಿ ಈ ಹಿಂದೆಯೇ ‘ಶ್ರೀಮಂತ ಇತಿಹಾಸದ ಸಮೃದ್ಧ ಜಿಲ್ಲೆ’ ಎಂಬಲೇಖನವನ್ನು ‘ಕರ್ನಾಟಕ ದರ್ಶನ’ ಪುರವಣಿಯಲ್ಲಿ2011ರ ಜನವರಿ 27ರಂದು ಪ್ರಕಟಿಸಿತ್ತು. ವಿವಾದದ ಹಿನ್ನೆಲೆಯಲ್ಲಿ ಲೇಖನವನ್ನು ಮತ್ತೊಮ್ಮೆ ಹಂಚಿಕೊಳ್ಳಲಾಗುತ್ತಿದೆ.

ರಾಮನಗರ ಜಿಲ್ಲಾ ಕೇಂದ್ರವಾಗಿ 12 ವರ್ಷ ಕಳೆದರೂ ಸರ್ಕಾರದ ಬಳಿ ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಕೋಶವಿಲ್ಲ. ಇಲ್ಲಿನ ಕೃಷಿ, ಕೈಗಾರಿಕೆ, ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸಮಗ್ರ ಜಿಲ್ಲಾ ಕೋಶವೊಂದರ ಪ್ರಕಟಣೆಗೆ ಪ್ರಯತ್ನ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ರಾಮನಗರದ ಹೆಸರು ಹೇಳುತ್ತಿದ್ದಂತೆ ರೇಷ್ಮೆ, ಬೆಂಗಳೂರು ನಿರ್ಮಾತೃ ಕೆಂಪೇಗೌಡರು, ಚನ್ನಪಟ್ಟಣದ ಗೊಂಬೆಗಳು, ‘ಕ್ಲೋಸ್ ಪೇಟೆ’ಯ ಗ್ರಾನೈಟ್, ನಾಗೇಗೌಡರ ಜಾನಪದ ಲೋಕ ಇತ್ಯಾದಿಗಳೆಲ್ಲ ನೆನಪಾಗುತ್ತವೆ.

ರಾಮನಗರ ಬೆಂಗಳೂರಿನಿಂದ ಕೇವಲ 50 ಕಿ.ಮೀ ದೂರದಲ್ಲಿದೆ. 2007ರ ಆಗಸ್ಟ್ 23ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪ್ರತ್ಯೇಕಗೊಂಡು ರಾಜ್ಯದ 28ನೇ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂತು. ರಾಮನಗರ ಜಿಲ್ಲೆಯ ಉತ್ತರಕ್ಕೆ ಬೆಂಗಳೂರು ಗ್ರಾಮಾಂತರ, ದಕ್ಷಿಣಕ್ಕೆ ಚಾಮರಾಜನಗರ, ಮಂಡ್ಯ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಗಳು, ಪೂರ್ವಕ್ಕೆ ಬೆಂಗಳೂರು ನಗರ ಜಿಲ್ಲೆ, ಪಶ್ಚಿಮಕ್ಕೆ ತುಮಕೂರು ಮತ್ತು ಮಂಡ್ಯ ಜಿಲ್ಲೆಗಳು ಹೊಂದಿಕೊಂಡಿವೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ನಾಲ್ಕು (ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ) ತಾಲ್ಲೂಕುಗಳಿವೆ. ವಿಶಿಷ್ಟ ಪರಿಸರದ ಜತೆಗೆ ಬೆಟ್ಟ-ಗುಡ್ಡಗಳು, ಅರಣ್ಯ ಪ್ರದೇಶ ಜಿಲ್ಲೆಗೆ ವಿಶೇಷ ಸೊಬಗು ನೀಡಿವೆ. ರಾಮನಗರದ ಬೆಟ್ಟ ಚಾರಣಿಗರಿಗೆ ಅಚ್ಚುಮೆಚ್ಚಿನ ತಾಣ.
ರಾಮನಗರ ಜಿಲ್ಲೆ 3.56 ಲಕ್ಷ ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಇದರಲ್ಲಿ 1.97 ಲಕ್ಷ ಹೆಕ್ಟೇರ್ ಸಾಗುವಳಿ ಭೂಮಿ. ಜಿಲ್ಲೆಯಲ್ಲಿ ಐದು (ಮಂಚನಬೆಲೆ: ಮಾಗಡಿ ತಾ. ಬೈರಮಂಗಲ: ರಾಮನಗರ. ಹಾರೋಬೆಲೆ: ಕನಕಪುರ. ಕಣ್ವ ಮತ್ತು ಇಗ್ಗಲೂರು: ಚನ್ನಪಟ್ಟಣ.) ಜಲಾಶಯಗಳಿವೆ. ಅಲ್ಲದೆ 105 ಕೆರೆಗಳಿವೆ.

ಕಣ್ವ, ಶಿಂಷಾ, ವೃಷಭಾವತಿ, ಕಾವೇರಿ, ಅರ್ಕಾವತಿ, ಕುಮುದ್ವತಿ ನದಿಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುತ್ತವೆ. ಇಷ್ಟೊಂದು ನದಿ, ಕೆರೆ, ಜಲಾಶಯಗಳಿದ್ದರೂ ಜಿಲ್ಲೆಯ ಬಹುಪಾಲು ಭೂಮಿ ಮಳೆಯನ್ನೇ ಅವಲಂಬಿಸಿದೆ.

2001ರ ಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 10,30,546. ಸಾಕ್ಷರತೆಯ ಪ್ರಮಾಣ ಶೇ 61.3. ರೇಷ್ಮೆ ಜಿಲ್ಲೆಯ ಪ್ರಮುಖ ಬೆಳೆ. 1310 ಗ್ರಾಮಗಳ 9,985 ಹೆಕ್ಟೇರ್ ಪ್ರದೇಶದಲ್ಲಿ 20 ಸಾವಿರ ರೈತರು ರೇಷ್ಮೆ ಬೇಸಾಯದಲ್ಲಿ ತೊಡಗಿದ್ದಾರೆ. ಮಾವು ಪ್ರಮುಖ ತೋಟಗಾರಿಕೆ ಬೆಳೆ. ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಾರೆ. ಜಿಲ್ಲೆಯ ಪ್ರಮುಖ ಆಹಾರ ಬೆಳೆ ರಾಗಿ ಮತ್ತು ಭತ್ತ. ಬೆಂಗಳೂರಿಗೆ ಪೂರೈಕೆಯಾಗುವ ತರಕಾರಿಯ ಹೆಚ್ಚಿನ ಭಾಗ ರಾಮನಗರ ಜಿಲ್ಲೆಯದು.

ರಾಮನಗರ ಹಾಗೂ ಕನಕಪುರ ತಾಲ್ಲೂಕುಗಳು ‘ಗ್ರಾನೈಟ್’ಶಿಲೆಗಳಿಗೆ ಹೆಸರುವಾಸಿ. ದಪ್ಪ ಕಣದ ಸ್ಫಟಿಕ ರಚನೆಯ ಗ್ರಾನೈಟ್ ಇಲ್ಲಿನ ವಿಶೇಷ. ರಾಮನಗರ ಸುತ್ತಮುತ್ತ ಸಿಗುವ ಗ್ರಾನೈಟ್ ‘ಕ್ಲೋಸ್‌ಪೇಟೆ’ ಗ್ರಾನೈಟ್ ಎಂದೇ ಹೆಸರುವಾಸಿ.

ಇತಿಹಾಸ: ಕ್ರಿ.ಶ 4ನೇ ಶತಮಾನದಲ್ಲಿ ಗಂಗ ವಂಶಸ್ಥ ರಾಜರು ರಾಮನಗರ ಭಾಗದಲ್ಲಿ ಆಳ್ವಿಕೆ ನಡೆಸಿದರು. ಚನ್ನಪಟ್ಟಣ ಬಳಿಯ ಮಾಕುಂದ (ಮಂಕುಂದ) ಅವರ ರಾಜಧಾನಿಯಾಗಿತ್ತು. ರಾಷ್ಟ್ರಕೂಟರು, ಹೊಯ್ಸಳರು, ಚೋಳರು, ಕೆಂಪೇಗೌಡರ ವಂಶಸ್ಥರು, ಟಿಪ್ಪುಸುಲ್ತಾನ್, ಮೈಸೂರು ಅರಸರು ಹಾಗೂ ಬ್ರಿಟಿಷರ ಆಡಳಿತಕ್ಕೆ ಈ ಭಾಗ ಒಳಪಟ್ಟಿತ್ತು. ಜಿಲ್ಲೆಯ ಕೆಲವೆಡೆ ಇತಿಹಾಸಪೂರ್ವ ಕಾಲದ ಪಳಿಯುಳಿಕೆಗಳು ಲಭ್ಯವಾಗಿವೆ.

ಉತ್ತರ ಕರ್ನಾಟಕದಲ್ಲಿ ಬಹುಮನಿ ರಾಜ್ಯ ಪತನವಾದ ನಂತರ ಅಲ್ಲಿನ ಮುಸ್ಲಿಮರು ರಾಮನಗರದತ್ತ ವಲಸೆ ಬಂದರು. ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಈ ಭಾಗದ ಮುಸ್ಲಿಮರು ಪ್ರವರ್ಧಮಾನಕ್ಕೆ ಬಂದರು. ಜಿಲ್ಲೆಯಲ್ಲಿ ಹಿಂದೂಗಳಷ್ಟೇ ಸಂಖ್ಯೆಯಲ್ಲಿ ಮುಸ್ಲಿಮರಿದ್ದರೂ ಎರಡೂ ಸಮುದಾಯಗಳ ನಡುವೆ ಸೌಹಾರ್ದ ಬಹಳ ಹಿಂದಿನಿಂದಲೂ ಬೆಳೆದುಬಂದಿದೆ.

ಕ್ಲೋಸ್ ಪೇಟೆ: ಪುರಾಣ ಕಾಲದಲ್ಲಿ ರಾಮನಗರಕ್ಕೆ ರಾಮಗಿರಿ, ಶಿವರಾಮಗಿರಿ ಎಂಬ ಹೆಸರಿತ್ತು. 1799-1800ರಲ್ಲಿ ‘ಕ್ಲೋಸ್‌ಪೇಟೆ’ ಎಂಬ ಹೆಸರಿನಲ್ಲಿ ನವನಗರವಾಗಿ ರಾಮನಗರ ನಿರ್ಮಾಣವಾಯಿತು. ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಸಂಸ್ಥಾನದ ಮೊದಲ ಆಂಗ್ಲ ರೆಸಿಡೆಂಟ್ ಕರ್ನಲ್ ಕ್ಲೋಸ್ ಅವರ ಮೇಲಿದ್ದ ವಿಶ್ವಾಸಕ್ಕಾಗಿ 1799-80ರಲ್ಲಿ ಕ್ಲೋಸ್‌ಪೇಟೆಯನ್ನು ಸ್ಥಾಪಿಸಿದರು ಎಂದು ಇತಿಹಾಸದಲ್ಲಿ ದಾಖಲಾಗಿದೆ.

ಕರ್ನಲ್ ಕ್ಲೋಸ್ ಮೂರನೇ ಆಂಗ್ಲೊ- ಮೈಸೂರು ಯುದ್ಧದ ಸಮಯದಲ್ಲಿ ಗೌವರ್ನರ್ ಜನರಲ್ ಲಾರ್ಡ್ ಕಾರನ್‌ವಾಲೀಸ್ ಅವರ ಕೈಕೆಳಗೆ ಡೆಪ್ಯುಟಿ ಅಡ್ಜುಟೆಂಟ್ ಜನರಲ್ ಆಗಿದ್ದರು. ನಾಲ್ಕನೇ ಆಂಗ್ಲೊ- ಮೈಸೂರು ಯುದ್ಧದ ವೇಳೆಗೆ ಅವರು ಅಡ್ಜುಟೆಂಟ್ ಜನರಲ್ ಆದರು.

ಟಿಪ್ಪು ಮರಣದ ನಂತರ ಮೈಸೂರು ರಾಜ ಮನೆತನ ಹಾಗೂ ರಾಜ್ಯಾಡಳಿತ ಪುನರ್ ವ್ಯವಸ್ಥೆ ಸಮಿತಿಯ ಸದಸ್ಯರೂ ಆಗಿದ್ದರು. 1799ರಲ್ಲಿ ಸಂಸ್ಥಾನದ ಪ್ರಥಮ ಬ್ರಿಟಿಷ್ ರೆಸಿಡೆಂಟ್ ಆಗಿ ಅಂದಿನ ದಿವಾನರಾದ ಪೂರ್ಣಯ್ಯ ಅವರೊಡನೆ ರಾಮನಗರ ಭಾಗದಲ್ಲಿ ಸಂಚಾರ ಕೈಗೊಂಡರು. ಆಗ ತುಂಬಿ ಹರಿಯುತ್ತಿದ್ದ ಅರ್ಕಾವತಿ ನದಿ ದಾಟಲು ಅಲ್ಲಿನ ಹೊಳೆಸಾಲಿನ ಹಳ್ಳಿ ಜನರು ಅವರಿಗೆ ನೆರವು ನೀಡಿದರು ಅದರ ನೆನಪಿಗೆ ಇಲ್ಲಿ ಊರು ನಿರ್ಮಿಸಲು ಕರ್ನಲ್ ಕ್ಲೋಸ್ ಆದೇಶ ನೀಡಿದರು ಎನ್ನಲಾಗಿದೆ.

1884ರವರೆಗೆ ಮೈಸೂರು ಸಂಸ್ಥಾನದ ಉಪ ವಿಭಾಗ ಕೇಂದ್ರವಾಗಿದ್ದ ‘ಕ್ಲೋಸ್‌ಪೇಟೆ’ 1928ರಲ್ಲಿ ತಾಲ್ಲೂಕು ಕೇಂದ್ರವಾಯಿತು. ಸ್ವಾತಂತ್ರ್ಯಾನಂತರ 1949ರಲ್ಲಿ ಕ್ಲೋಸ್‌ಪೇಟೆಗೆ ರಾಮನಗರ ಎಂದು ನಾಮಕರಣ ಮಾಡಲಾಯಿತು.

ಏಳು ಬೆಟ್ಟಗಳ ಸೀಮೆ: ರಾಮನಗರದ ಸುತ್ತ ಏಳು ಪ್ರಮುಖ (ಶಿವರಾಮಗಿರಿ, ರೇವಣಸಿದ್ದೇಶ್ವರ ಬೆಟ್ಟ, ಯತಿರಾಜಗಿರಿ, ಕೃಷ್ಣಗಿರಿ, ಸೋಮಗಿರಿ, ಸಿಡಿಲಕಲ್ಲು ಮತ್ತು ಜಲಸಿದ್ದೇಶ್ವರ) ಬೆಟ್ಟಗಳಿವೆ. ಈ ಪ್ರದೇಶವನ್ನು ಸಪ್ತಗಿರಿಗಳ ನಾಡು ಎಂದು ಕರೆಯುತ್ತಾರೆ.

ಇವುಗಳಲ್ಲದೆ ಹಂದಿಗುಂದಿ ಬೆಟ್ಟ, ಮಲ್ಲೇಶ್ವರ ಬೆಟ್ಟ, ಅಚ್ಚಲು ಬೆಟ್ಟ, ಸೋಮದೇವರ ಬೆಟ್ಟ, ಕೂಟಗಲ್ ಮತ್ತಿತರ ಬೆಟ್ಟಗಳಿವೆ.
ಚನ್ನಪಟ್ಟಣದಲ್ಲಿ ಗವಿರಂಗಸ್ವಾಮಿ ಬೆಟ್ಟ, ಸವನಪ್ಪನ ಗುಡ್ಡ, ಕನಕಪುರದಲ್ಲಿ ಕಬ್ಬಾಳದುರ್ಗ, ನಿಡಗಲ್ಲು, ಮೇಕೆದಾಟು, ಬಿಳಿಕಲ್ ಬೆಟ್ಟ, ಮುದುವಾಡಿ ಬೆಟ್ಟಗಳು, ಮಾಗಡಿಯಲ್ಲಿ ಪ್ರಸಿದ್ಧ ಸಾವನದುರ್ಗ, ಬನತಿಮ್ಮ ಬೆಟ್ಟ, ನರಸಿಂಹದೇವರ ಬೆಟ್ಟ, ಕಲ್ಯಾ ಗುಡ್ಡಗಳು ಜಿಲ್ಲೆಯನ್ನು ಸುತ್ತುವರಿದಿವೆ. ರಾಮದೇವರ ಬೆಟ್ಟ, ಸಾವನದುರ್ಗ ಬೆಟ್ಟ, ಮೇಕೆದಾಟು ಬೆಟ್ಟಗಳು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲದೆ ಚಾರಣಪ್ರಿಯರ ಮೆಚ್ಚಿನ ತಾಣಗಳು.

ರಾಮನಗರದಿಂದ 2 ಕಿ.ಮೀ ದೂರದಲ್ಲಿ ಇರುವ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ಮಾಗಡಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚನ್ನಪಟ್ಟಣದಲ್ಲಿ ಪೊಲೀಸ್ ತರಬೇತಿ ಶಾಲೆ ಕಾರ್ಯ ನಿರ್ವಹಿಸುತ್ತಿದೆ.

ಶ್ರೀಗಳ ಹುಟ್ಟೂರು

ಆದಿ ಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹುಟ್ಟೂರು ಬಾಣಂದೂರು, ಸಿದ್ಧಗಂಗಾ ಮಠದ ಶಿವಕುಮಾರಸ್ವಾಮೀಜಿಗಳ ಹುಟ್ಟೂರು ವಿರಾಪುರ ಇದೇ ರಾಮನಗರ ಜಿಲ್ಲೆಯಲ್ಲೇ ಇದೆ.

ರಾಜಕೀಯ ಇತಿಹಾಸ: ಜಿಲ್ಲೆಗೆ ಐದು ಬಾರಿ ಮುಖ್ಯಮಂತ್ರಿ ಪದವಿ

1952ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆಂಗಲ್‌ ಹನುಮಂತಯ್ಯ ಅಂದಿನ ಮೈಸೂರು ಸರ್ಕಾರದ ಮುಖ್ಯಮಂತ್ರಿಯಾಗಿದ್ದರು. ಜಿಲ್ಲೆಯಿಂದ ಮುಖ್ಯಮಂತ್ರಿಯಾದ ಮೊದಲಿಗರು ಕೆಂಗಲ್‌ ಹನುಮಂತಯ್ಯ. ಇದಾದ ನಂತರ 1983ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ ಅವರು ಶಾಸಕರಾಗಿರಲಿಲ್ಲ. ಹೀಗಾಗಿಕನಕಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.1994ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್‌.ಡಿ ದೇವೇಗೌಡರು ಸಿಎಂ ಸ್ಥಾನ ಅಲಂಕರಿಸಿದ್ದರು.2004ರಲ್ಲಿ ರಾಮನಗರದಿಂದ ಪ್ರಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಎಚ್‌.ಡಿ ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿದರು.ಅವರು ರಾಮನಗರ ಕ್ಷೇತ್ರ ತೊರೆದು, ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡರು. ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಮೂರು (ರಾಮನಗರ, ಕನಕಪುರ, ಚನ್ನಪಟ್ಟಣ) ತಾಲೂಕುಗಳಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ.ರಾಮನಗರ ಕ್ಷೇತ್ರಕ್ಕೆ ಮೂರು ಬಾರಿ ಸಿಎಂ ಹುದ್ದೆ ಸಿಕ್ಕಿದೆ.

ಆದರೆ, ಜಿಲ್ಲೆಯಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾದ ಯಾವೊಬ್ಬ ನಾಯಕರೂ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿಲ್ಲ ಎಂಬುದು ವಿಚಿತ್ರ.

ರಾಮನಗರದಲ್ಲಿ ಸೋತಿದ್ದ ಅಂಬರೀಷ್‌

1994ರಲ್ಲಿರಾಮನಗರದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ ದೇವೇಗೌಡರು 1996ರಲ್ಲಿ ಪ್ರಧಾನಿ ಹುದ್ದೆಗೇರಿದರು. ಆಗ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಚುನಾವಣೆಗೆ ಅಂಬರೀಷ್‌ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್‌ನ ಸಿ.ಎಂ ಲಿಂಗಪ್ಪ ಅವರ ಎದುರು ಸೋಲುಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT