ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ 11ಕ್ಕೆ ಏರಿಕೆ

Last Updated 17 ಮಾರ್ಚ್ 2020, 21:46 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ–2 ಭೀತಿ ರಾಜ್ಯದಾದ್ಯಂತ ವ್ಯಾಪಿಸಿದ್ದು, ಕೋವಿಡ್‌–19 ಪೀಡಿತರ ಸಂಖ್ಯೆ 11ಕ್ಕೆ ಏರಿದೆ. ಜಾತ್ರೆ, ಮದುವೆ, ಮಾಲ್‌ಗಳ ಮೇಲಿನ ನಿರ್ಬಂಧ ಮುಂದುವರಿದಿದೆ.

ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಮಂಗಳವಾರ ಒಂದೇ ದಿನ 32 ಮಂದಿಯನ್ನು ಒಳರೋಗಿಗಳಾಗಿ ಪ್ರತ್ಯೇಕಿಸಿ ಇಡಲಾಗಿದ್ದು, ಒಟ್ಟು ಸಂಖ್ಯೆ 58ಕ್ಕೆ ಏರಿಕೆಯಾಗಿದೆ. 9ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

ಸೋಮವಾರದವರೆಗೆ 8 ಮಂದಿಗೆ ಕೋವಿಡ್‌–19 ದೃಢಪಟ್ಟಿತ್ತು. ಕಲಬುರ್ಗಿಯಲ್ಲಿ ಮೃತಪಟ್ಟ ವೃದ್ಧರ ಸಂಪರ್ಕದಲ್ಲಿದ್ದ 63 ವರ್ಷದ ವ್ಯಕ್ತಿಗೆ ಕೋವಿಡ್‌–19 ಜ್ವರ ಇರುವುದು ದೃಢಪಟ್ಟಿದೆ. ಇದೇ 14ರಂದು ಲಂಡನ್‌ನಿಂದ ಬೆಂಗಳೂರಿಗೆ ಬಂದ 20 ವರ್ಷದ ಯುವತಿಗೆ ಹಾಗೂ ಇದೇ 9ರಂದು ದುಬೈಯಿಂದ ಗೋವಾ ಮೂಲಕ ಬಂದ 67 ವರ್ಷದ ವೃದ್ಧೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

‘67 ವರ್ಷದ ಈ ಮಹಿಳೆ ಮಾರ್ಚ್‌ 3ರಿಂದ 8ರವರೆಗೆ ದುಬೈನಲ್ಲಿ ಇದ್ದರು. ಅವರಿಗೆ ಮೂತ್ರಪಿಂಡ ಸಮಸ್ಯೆಯೂ ಇದೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್‌ ಮಾಡಿದ್ದಾರೆ.

‘ಸೋಂಕು ಹರಡುವಿಕೆ ತಡೆಗೆ ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಬೆಂಬಲಿಸಲು ಟ್ವಿಟರ್‌ನಲ್ಲಿ ‘#ಹೆಲ್ತ್‌ ವಾರಿಯರ್ಸ್‌’ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಜನತೆ ಈ ಅಭಿಯಾನದಲ್ಲಿ ಪಾಲ್ಗೊಂಡು ವೈದ್ಯರ ಆತ್ಮಸ್ಥೈರ್ಯ ಹೆಚ್ಚಿಸಬೇಕು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

‘ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮಹಿಳೆ (ರೋಗಿ–2) ಗುಣಮುಖರಾಗುತ್ತಿದ್ದಾರೆ. ಅವರನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು’ ಎಂದರು.

ಅಂಕಿ ಅಂಶ

ಈವರೆಗೆ ರಾಜ್ಯದಲ್ಲಿ ಒಟ್ಟು 1,17,306ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ.82,276 ಮಂದಿಯನ್ನುಬೆಂಗಳೂರು ವಿಮಾನನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ.29,477 ಮಂದಿಯನ್ನುಮಂಗಳೂರು ವಿಮಾನನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ.5,553 ಮಂದಿಯನ್ನುಮಂಗಳೂರು, ಕಾರವಾರ ಬಂದರುಗಳಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ.

ಸೋಂಕು ಪತ್ತೆ: ವೆಚ್ಚ ವಸೂಲಿ ಸಲ್ಲ

ಕೊರೊನಾ ಸೋಂಕು ಪತ್ತೆ ಮಾಡುವ ಪರೀಕ್ಷೆಗೆ ಯಾವುದೇ ರೋಗಿಯಿಂದ ವೆಚ್ಚವನ್ನು ವಸೂಲು ಮಾಡುವಂತಿಲ್ಲ ಎಂದು ಸರ್ಕಾರ ಸೂಚಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯಗಳು ಹೊಸ ನಿಯಮಾವಳಿಗಳನ್ನು ರೂಪಿಸಿದೆ. ಪ್ರಯೋಗಾಲಯಗಳಲ್ಲಿ ಪ್ರಾಥಮಿಕ ಹಂತದ ಪರೀಕ್ಷೆಗೆ ತಗಲುವ ₹ 1,500 ಹಾಗೂ ಎರಡನೇ ಹಂತದ ಪರೀಕ್ಷೆಗೆ ತಗಲುವ ₹ 3 ಸಾವಿರ ವೆಚ್ಚವನ್ನು ಖಾಸಗಿ ಆಸ್ಪತ್ರೆಗಳ ಪ್ರಯೋಗಾಲವೂ ಸೇರಿದಂತೆ ಯಾವುದೇ ಪ್ರಯೋಗಾಲಯವೂ ರೋಗಿಗಳಿಂದ ಪಡೆಯುವಂತಿಲ್ಲ ಎಂದು ಸೂಚಿಸಲಾಗಿದೆ.

ಈ ಮಧ್ಯೆ, ಸರ್ಕಾರಿ ನೌಕರರು, ಅಧಿಕಾರಿಗಳ ವಿದೇಶ ಪ್ರಯಾಣಕ್ಕೆ ನಿರ್ಬಂಧ ಹೇರಿ ಸರ್ಕಾರ ಆದೇಶ ಹೊರಡಿಸಿದೆ.

ಸೋಂಕಿತರ ಮೇಲೆ ಜಿಪಿಎಸ್‌ ನಿಗಾ

ಕೊರೊನಾ ಸೋಂಕಿಗೆ ಒಳಗಾಗಿ ಪ್ರತ್ಯೇಕವಾಗಿ ಇರಿಸಲ್ಪಟ್ಟವರ ಮೇಲೆ ಜಿಪಿಎಸ್‌ ಮೂಲಕ ನಿಗಾ ಇಡಲು ಸರ್ಕಾರ ನಿರ್ಧರಿಸಿದೆ.

ಆರೋಗ್ಯ ಮತ್ತು ಗೃಹ ಇಲಾಖೆ ಜಂಟಿಯಾಗಿ ಈ ಕಾರ್ಯ ನಿರ್ವಹಿಸಲಿವೆ. ಪ್ರತ್ಯೇಕವಾಗಿ ಇರಿಸಿದವರ ಮೊಬೈಲ್‌ ಸಂಖ್ಯೆ ಸಂಗ್ರಹಿಸಿ ಅವುಗಳನ್ನು ಜಿಪಿಎಸ್‌ಗೆ ಅಳವಡಿಸಲಾಗುವುದು. ಅವರ ಮನೆ ಬಿಟ್ಟು ಹೊರಗೆ ಹೊರಟರೆ ತಕ್ಷಣವೇ ಆರೋಗ್ಯ– ಗೃಹ ಇಲಾಖೆಗೆ ಗೊತ್ತಾಗುತ್ತದೆ. ಎಸ್‌ಎಂಎಸ್‌ ಮೂಲಕ ಮನೆಯೊಳಗೆ ಇರಲು ಪದೇ ಪದೇ ಸಂದೇಶ ಕಳಿಸಲಾಗುತ್ತದೆ. ಅದಕ್ಕೂ ಬಗ್ಗದೇ ಇದ್ದರೆ, ಸಮೀಪದ ಪೊಲೀಸರನ್ನು ಬಳಸಿಕೊಂಡು ಮನೆಗೆ ಕಳುಹಿಸುವ ಕೆಲಸ ಮಾಡಲಾಗುತ್ತದೆ.

ರೆಸ್ಟೋರೆಂಟ್‌ಗಳಲ್ಲಿ ಎ.ಸಿ ಹಾಕಬೇಡಿ. ಕುರ್ಚಿಗಳ ನಡುವೆ 3 ಮೀಟರ್ ಅಂತರ ಇರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದುವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT