ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೆ ತಲುಪಲು ವಲಸೆ ಕಾರ್ಮಿಕರ ಪರದಾಟ l ಬಸ್‌ ನಿಲ್ದಾಣದಲ್ಲೇ ಉಳಿದ ಬಡವರು

ಶ್ರಮಿಕರಿಗೆ ‘ಸಾರಿಗೆ’ ಹೊರೆ
Last Updated 2 ಮೇ 2020, 20:58 IST
ಅಕ್ಷರ ಗಾತ್ರ

ಬೆಂಗಳೂರು: ‘ಲಾಕ್‌ಡೌನ್ ಆದಾಗಿನಿಂದ ಕೂಲಿಯಿಲ್ಲ, ಕೈಯಲ್ಲಿ ಬಿಡಿಗಾಸು ಇಲ್ಲ.ಮಕ್ಕಳಿಗೆ ಒಂದು ತುಂಡು ಬ್ರೆಡ್ ಕೊಡಿಸಲೂ ದುಡ್ಡಿಲ್ಲ. ಒಬ್ಬರಿಗೆ ಒಂದೂವರೆ ಸಾವಿರ ಕೇಳಿದ್ರೆ ನಮ್ಮೂರಿಗೆ ಹೋಗೊದಾದ್ರು ಹೆಂಗ್ರಿ...’

ಒಂದೂವರೆ ತಿಂಗಳಿನಿಂದ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ಕಟ್ಟಡ ಕಾರ್ಮಿಕರನ್ನು ಊರಿಗೆ ಮರಳಿಸಲು ಕೆಎಸ್‌ಆರ್‌ಟಿಸಿ ನಿಗದಿ ಮಾಡಿದ್ದ ದರದಿಂದ ಕಂಗಾಲಾದ ಕಾರ್ಮಿಕರು ಕಣ್ಣೀರಿಟ್ಟಿದ್ದು ಹೀಗೆ.

ಲಾಕ್‌ಡೌನ್ ಆದಾಗಿನಿಂದ ಊರಿನ ಕಡೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದ ವಲಸೆ ಕಾರ್ಮಿಕರು, ಸರ್ಕಾರ ಬಸ್ ವ್ಯವಸ್ಥೆ ಮಾಡಿರುವ ಸುದ್ದಿ ತಿಳಿದು ಮೆಜೆಸ್ಟಿಕ್ ಬಸ್‌ ನಿಲ್ದಾಣಕ್ಕೆ ಶನಿವಾರ ಓಡೋಡಿ ಬಂದಿದ್ದರು.

ಮಕ್ಕಳು– ಮರಿ, ಗಂಟು– ಮೂಟೆ ಹೊತ್ತುಕೊಂಡು 10ರಿಂದ 20 ಕಿಲೋ ಮೀಟರ್‌ ನಡೆದೇ ಬಂದಿದ್ದ ಕಾರ್ಮಿಕರು, ನಿಂತಿದ್ದ ಕೆಂಪು ಬಸ್‌ಗಳನ್ನು ಕಂಡು ಊರು ಸೇರುವ ಸಂಭ್ರಮದಲ್ಲಿದ್ದರು. ಇಷ್ಟು ದಿನ ದುಡಿಮೆ ಇಲ್ಲದ ಕಾರ್ಮಿಕರನ್ನು ಬಸ್‌ನಲ್ಲಿ ಉಚಿತವಾಗಿ ಸರ್ಕಾರ ಕಳುಹಿಸಿಕೊಡುತ್ತಿದೆ ಎಂದು ಅವರು ಭಾವಿಸಿಕೊಂಡು ಬಸ್‌ ಹತ್ತಲು ಮುಂದಾದರು.

‘ಟಿಕೆಟ್‌ ದುಡ್ಡು ಕೊಟ್ಟರೆ ಸಾಲದು; ಇಡೀ ಬಸ್‌ ಅನ್ನೇ ಗುತ್ತಿಗೆ ಆಧಾರದಲ್ಲಿ ಪಡೆದು ಪ್ರಯಾಣ ಮಾಡಬೇಕು’ ಎಂಬ ಮಾಹಿತಿಯನ್ನು ಅಧಿಕಾರಿಗಳು ಹೇಳಿದಾಗ ದಿಕ್ಕೆ ತೋಚದೇ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ಕಾರ್ಮಿಕರದ್ದಾಗಿತ್ತು.

‘ಬೆಂಗಳೂರಿನಿಂದ ಯಾದಗಿರಿಗೆ ₹42,600 ಪಾವತಿಸಿದರೆ ಬಸ್ ಕಳುಹಿಸುತ್ತೇವೆ. ಬೇಕಿದ್ದರೆ ಒಬ್ಬರೇ ಪ್ರಯಾಣಮಾಡಿ ನಮ್ಮ ತಕರಾರಿಲ್ಲ. ಆದರೆ, 30ಕ್ಕಿಂತ ಹೆಚ್ಚು ಜನ ಪ್ರಯಾಣ ಮಾಡುವಂತಿಲ್ಲ. ಅಂತರ ಕಾಯ್ದುಕೊಂಡು ಪ್ರಯಾಣಿಸಬೇಕು’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನೀಡಿದ ಮಾಹಿತಿ ಕೇಳಿ ಕಾರ್ಮಿಕರಿಗೆ ಊರು ಸೇರುವ ಆಸೆ ಕಮರಿ ಹೋಯಿತು.

‘ಚಿಕ್ಕಲ್ಲಸಂದ್ರದಿಂದ ಮೆಜೆಸ್ಟಿಕ್ ತನಕ ನಡೆದುಕೊಂಡೇ ಬಂದಿದ್ದೇವೆ. ಬೆಳಿಗ್ಗೆಯಿಂದ ಏನನ್ನೂ ತಿಂದಿಲ್ಲ. ದೊಡ್ಡವರು ಹೇಗೋ ಸಹಿಸಿಕೊಳ್ಳುತ್ತೇವೆ, ಈ ಸುಡು ಬಿಸಿಲಿನಲ್ಲಿ ಮಕ್ಕಳು ಹಸಿವಿನಿಂದ ನರಳುತ್ತಿವೆ. ಅದ್ಯಾವ ಕರ್ಮ ಮಾಡಿದ್ದೆವೋ ಗೊತ್ತಿಲ್ಲ, ಹೊಟ್ಟೆ ತುಂಬಿಸಿಕೊಳ್ಳಲು ಬೆಂಗಳೂರಿಗೆ ಬಂದು ತಪ್ಪು ಮಾಡಿದೆವು’ ಎಂದು ಯಾದಗಿರಿ ಜಿಲ್ಲೆಯ ಸರಿತಾ ಕಣ್ಣೀರಿಟ್ಟರು.

‘ಒಬ್ಬರಿಗೆ ಹದಿನಾಲ್ಕು ನೂರು ಕೊಡಬೇಕಂತೆ, ಹದಿನಾಲ್ಕು ಪೈಸೆನೂ ನಮ್ ಹತ್ರ ಇಲ್ಲ. ಸರ್ಕಾರದವರು ಕಳಿಸಿಕೊಟ್ಟರೆ ಊರಲ್ಲಿ ಹೋಗಿ ಒಂದ್ ಹೊತ್ತಾದ್ರು ತಿಂದು ಬದಕ್ತೀವಿ. ಇಲ್ಲಂದ್ರೆ ಇಲ್ಲೇ ಜೀವ ಬಿಡ್ತೀವಿ’ ಎಂದು ಗಳಗಳನೆ ಅತ್ತರು.

‘ಮಕ್ಕಳ ಸಹಿತ ಊರಿಗೆ ಹೊರಟಿದ್ದೇವೆ, ಊರು ಸೇರಿದರೆ ಮತ್ತೊಮ್ಮೆ ಬೆಂಗಳೂರಿನ ಮುಖ ನೋಡುವುದಿಲ್ಲ. ಈ ವನವಾಸ ಜೀವನವನ್ನೇ ಜಿಗುಪ್ಸೆಗೆ ದೂಡಿದೆ’ ಎಂದು ಕೊಪ್ಪಳದ ಮಲ್ಲಿಕಾರ್ಜುನ ಹೇಳಿದರು.

ಮೆಜೆಸ್ಟಿಕ್‌ನಲ್ಲೇ ಉಳಿದರು: ಸಂಜೆ ವೇಳೆಗೆ ಬಸ್ ಸಂಚಾರವನ್ನು ಕೆಎಸ್‌ಆರ್‌ಟಿಸಿ ನಿಲ್ಲಿಸಿದ್ದರಿಂದ ಸಾವಿರಾರು ಕಾರ್ಮಿಕರು ನಿಲ್ದಾಣದಲ್ಲೇ ಉಳಿದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು.

ಮೆಜೆಸ್ಟಿಕ್‌ನಲ್ಲೇ ಉಳಿದ ಕಾರ್ಮಿಕರು
ಸಂಜೆ ವೇಳೆಗೆ ಬಸ್ ಸಂಚಾರವನ್ನು ಕೆಎಸ್‌ಆರ್‌ಟಿಸಿ ನಿಲ್ಲಿಸಿದ್ದರಿಂದ ಸಾವಿರಾರು ಕಾರ್ಮಿಕರು ನಿಲ್ದಾಣದಲ್ಲೇ ಉಳಿದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು.

‘ಭಾನುವಾರ ಬೆಳಿಗ್ಗೆ 10 ಗಂಟೆ ನಂತರ ಬಸ್ ಸಂಚಾರ ಆರಂಭವಾಗಲಿದೆ, ಬೆಳಿಗ್ಗೆ ಬನ್ನಿ’ ಎಂದು ನಿಲ್ದಾಣದ ಅಧಿಕಾರಿಗಳು ಮೈಕ್‌ನಲ್ಲಿ ಘೋಷಣೆ ಮಾಡಿದರು. ಆದರೂ, ಜನ ಅಲ್ಲಿಂದ ಕದಲಲಿಲ್ಲ.

ಕಾರ್ಮಿಕರಷ್ಟೇ ಅಲ್ಲದೇ, ಖಾಸಗಿ ಕಂಪನಿಗಳಲ್ಲಿ ಸಣ್ಣ–‍ಪುಟ್ಟ ಕೆಲಸ ಮಾಡುತ್ತಿರುವವರು ಮನೆ, ಪಿ.ಜಿ ಮತ್ತು ಹಾಸ್ಟೆಲ್‌ಗಳನ್ನು ಖಾಲಿ ಮಾಡಿಕೊಂಡು ಬಂದಿದ್ದಾರೆ. ಈಗ ಎಲ್ಲಿಗೆ ಹೋಗಬೇಕು ಎಂಬುದು ಗೊತ್ತಾಗದೇ ಪರದಾಡುತ್ತಿರುವ ದೃಶ್ಯ ಕಂಡುಬಂತು.

ಸ್ಥಳಕ್ಕೇ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಕಾರ್ಮಿಕರನ್ನು ಉಚಿತವಾಗಿ ಊರಿಗೆ ತಲುಪಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಸರ್ಕಾರದ ಇದೆಯೋ, ಇಲ್ಲವೋ ಎಂಬುದು ಗೊತ್ತಾಗುತ್ತಿಲ್ಲ. ಇಲ್ಲಿರುವ ಎಲ್ಲಾ ಕಾರ್ಮಿಕರಿಗೂ ಬಸ್ ವ್ಯವಸ್ಥೆ ಮಾಡಿ, ಹಣ ಎಷ್ಟು ಎಂದು ಹೇಳಿ ಭಿಕ್ಷೆ ಎತ್ತಿಯಾದರೂ ನಾನೇ ಪಾವತಿ ಮಾಡುತ್ತೇನೆ’ ಎಂದರು.

ಸಾಮಾನ್ಯ ದರ ಪಡೆಯಲು ಸೂಚನೆ
‌ಪ್ರಯಾಣಿಕರಿಂದ ಒಂದು ಕಡೆಯ ದರ ಮಾತ್ರ ಪಡೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಮಧ್ಯಾಹ್ನವೇ ಆದೇಶಿಸಿದರು.

ಮಧ್ಯಾಹ್ನ 12ರ ವೇಳೆಗೆ ಮುಖ್ಯಮಂತ್ರಿ ಆದೇಶ ನೀಡಿದರೂ 3 ಗಂಟೆ ತನಕವೂ ಒಪ್ಪಂದದ ಆಧಾರದಲ್ಲೇ ಬಸ್‌ಗಳನ್ನು ಕಳುಹಿಸಲಾಯಿತು. ‘ಯಾದಗಿರಿಗೆ ಹೋಗಲು ಗರಿಷ್ಠ ₹8 ಸಾವಿರ ಮೊತ್ತದ ಡೀಸೆಲ್ ಬೇಕಾಬಹುದು. ಆದರೆ, ₹42,600 ಸಂಗ್ರಹಿಸುವ ಮೂಲಕ ಕಾರ್ಮಿಕರಿಂದ ಕೆಎಸ್‌ಆರ್‌ಟಿಸಿ ಲೂಟಿ ಮಾಡುತ್ತಿದೆ’ ಎಂದು ಸುರಪುರದ ರಾಮಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.‌

**

ಲಾಕ್‌ಡೌನ್‌ನಿಂದ ಬೆಂಗಳೂರಿನಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ಉಚಿತ ಪ್ರಯಾಣ ಸೇವೆಯನ್ನು ಒದಗಿಸುವುದು ಅಸಾಧ್ಯ.
-ಲಕ್ಷ್ಮಣ ಸವದಿ, ಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT