‘ಫಲಿತಾಂಶ ಕಂಡು ರಾಜಕೀಯ ನಿವೃತ್ತಿಯ ಯೋಚನೆಯಲ್ಲಿದ್ದಾಗ ಕಾಲಭೈರವನ ಪವಾಡ ನಡೆಯಿತು’

ಶನಿವಾರ, ಜೂಲೈ 20, 2019
28 °C

‘ಫಲಿತಾಂಶ ಕಂಡು ರಾಜಕೀಯ ನಿವೃತ್ತಿಯ ಯೋಚನೆಯಲ್ಲಿದ್ದಾಗ ಕಾಲಭೈರವನ ಪವಾಡ ನಡೆಯಿತು’

Published:
Updated:

ನ್ಯೂಜೆರ್ಸಿ(ಅಮೆರಿಕ): ಆರೋಗ್ಯವನ್ನೂ ಲೆಕ್ಕಿಸದೇ ವಿಧಾನಸಭೆ ಚುನಾವಣೆಯಲ್ಲಿ ದುಡಿದಿದ್ದ ನನಗೆ ಫಲಿತಾಂಶ ಕಂಡು ರಾಜಕೀಯ ನಿವೃತ್ತಿ ಪಡೆಯಬೇಕು ಎನಿಸಿತ್ತು. ಆಗ ಕಾಲಭೈರವೇಶ್ವರನ ಪವಾಡ ನಡೆಯಿತು. ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತು ಎಂದು ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ಅಮೆರಿಕಾದ ನ್ಯೂಜೆರ್ಸಿಯಲ್ಲಿ ಆದಿಚುಂಚನಗಿರಿ ಮಠದ ವತಿಯಿಂದ ನಿರ್ಮಾಣವಾಗುತ್ತಿರುವ ಕಾಲ ಭೈರವೇಶ್ವರ ದೇಗುಲದ ಅಡಿಗಲ್ಲು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿಯಾದ ಸನ್ನಿವೇಶದ ಕುರಿತು ಅಲ್ಲಿ ಮಾತನಾಡಿದ್ದಾರೆ. 

‘ಫಲಿತಾಂಶದ ದಿನ ಬೆಳಗ್ಗೆ ಕಾಲಭೈರವೇಶ್ವರನ ದರ್ಶನ ಪಡೆಯಬೇಕು ಎಂದು ನಿರ್ಮಲಾನಂದನಾಥ ಶ್ರೀಗಳು ಸೂಚಿಸಿದ್ದರು. ಅವರ ಸೂಚನೆ ಮೇರೆಗೆ ಅಂದು ಅಂದು ಬೆಳಗ್ಗೆಯೇ ನಾನು ಆದಿಚುಂಚನಗಿರಿಗೆ ತೆರಳಿ ದರ್ಶನ ಪಡೆದು ಬೆಂಗಳೂರಿಗೆ ಆಗಮಿಸಿದ್ದೆ. ಫಲಿತಾಂಶ ನೋಡಿದಾಗ ನನಗೆ ಬೇಸರವಾಗಿತ್ತು. ಚುನಾವಣೆಯಲ್ಲಿ ನಾನು ಅವಿರತ ಪರಿಶ್ರಮ ಹಾಕಿದ್ದೆ. ಆರೋಗ್ಯವನ್ನೂ ಲೆಕ್ಕಿಸದೇ ಕೆಲಸ ಮಾಡಿದ್ದೆ. ಇಷ್ಟಾದರೂ ಜನ ನನಗೆ ಮನ್ನಣೆ ನೀಡಲಿಲ್ಲವಲ್ಲ ಎಂದೆನಿಸಿ, ರಾಜಕೀಯ ನಿವೃತ್ತಿ ಪಡೆಯಲು ಯೋಚನೆ ಮಾಡುತ್ತಿದ್ದೆ. ಆಗ ಕಾಂಗ್ರೆಸ್‌ ಕಡೆಯಿಂದ ಕರೆ ಬಂತು. ನೀವೇ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್‌ ಹೇಳಿತು. ಇದೇ ನೋಡಿ ಕಾಲಭೈರವೇಶ್ವರನ ಶಕ್ತಿ,’ ಎಂದು ಕುಮಾರಸ್ವಾಮಿ ಹೇಳಿದರು. 

‘ಆದಿಚುಂಚನಗಿರಿಯಲ್ಲಿರುವ ಕಾಲಭೈರವನ ದೇವಾಲಯ ನಿರ್ಮಾಣಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ನನ್ನ ಕೈಯಲ್ಲೇ ಅಡಿಗಲ್ಲು ಹಾಕಿಸಿದ್ದರು. ನ್ಯೂಜೆರ್ಸಿಯಲ್ಲಿ ನಿರ್ಮಿಸುತ್ತಿರುವ ದೇಗುಲಕ್ಕೂ ನಾನೇ ಅಡಿಗಲ್ಲು ಹಾಕುತ್ತಿದ್ದೇನೆ. ಇದು ತಮ್ಮ ಪಾಲಿನ ಪುಣ್ಯ,’ ಎಂದು ಎಚ್‌ಡಿಕೆ ಸ್ಮರಿಸಿದರು. 

ಬಿಜೆಪಿಯದ್ದು ನಿರಂತರ ಹಗಲುಗನಸು 

‘ಅಮೇರಿಕದ ನ್ಯೂಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಸ್ಥಾನದ ಭೂಮಿ ಪೂಜೆ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದಿದೆ. ರಾಜ್ಯದ ಎಲ್ಲ ವಿದ್ಯಮಾನಗಳನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ 'ನಿರಂತರ ಹಗಲುಗನಸು' ಎಂದು ಸಿಎಂ ಕುಮಾರಸ್ವಾಮಿ ಅವರು ಟ್ವೀಟ್‌ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 7

  Happy
 • 6

  Amused
 • 0

  Sad
 • 1

  Frustrated
 • 7

  Angry

Comments:

0 comments

Write the first review for this !