ಮಂಗಳವಾರ, ಸೆಪ್ಟೆಂಬರ್ 22, 2020
25 °C
ಹುಲೇಮಳಲಿಶಿವಪುರ: ಸರ್ಕಾರದ ನೆರವಿಲ್ಲದೆ ₹53 ಲಕ್ಷದ ಯೋಜನೆ ಜಾರಿ

ಕೆರೆಗೆ ನೀರು ತಂದ ಯುವಪಡೆ

ಸಾಂತೇನಹಳ್ಳಿ ಸಂದೇಶ್‌ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನ ಶಿವಪುರ ಗ್ರಾಮದ ಯುವಕರು ಹಿರಿಯರ ಮಾರ್ಗ ದರ್ಶನದಲ್ಲಿ ಸರ್ಕಾರದ ನೆರವಿಲ್ಲದೆ ₹53 ಲಕ್ಷ ವೆಚ್ಚದ ನೀರಾವರಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಹಿರೇಹಳ್ಳ, ಕರ್ಲಹಳ್ಳದಿಂದ ಗ್ರಾಮದ ಹುಲೇಮಳಲಿ-ಶಿವಪುರ ಕೆರೆಗೆ ಏತನೀರಾವರಿ ಮೂಲಕ ನೀರು ಹರಿಸಿದ್ದಾರೆ. ಗ್ರಾಮದಿಂದ ಹಿರೇಹಳ್ಳಿ ಸುಮಾರು 2.5 ಕಿ.ಮೀ.ದೂರವಿದ್ದು, ಅಲ್ಲಿಂದ 1 ಅಡಿ ಅಗಲ, 20 ಅಡಿ ಉದ್ದದ 350 ಪೈಪ್‌ಗಳನ್ನು ಹಾಕಲಾಗಿದೆ. 20 ಎಚ್‌ಪಿ ಸಾಮರ್ಥ್ಯದ 4 ಶಕ್ತಿಶಾಲಿ ಮೋಟಾರ್‌ಗಳ ಮೂಲಕ ನೀರನ್ನು ಲಿಫ್ಟ್ ಮಾಡಲಾಗುತ್ತಿದೆ.

ರೈತರಿಂದ ಹಣ ಸಂಗ್ರಹ: ‘ಗ್ರಾಮದ ಯುವಕರು ರೈತರಿಂದ ಹಣ ಸಂಗ್ರಹಿಸಿ ಯೋಜನೆ ಜಾರಿಗೆ ನಿರ್ಧರಿಸಲಾಯಿತು. ಕೆರೆಯ 700 ಎಕರೆ ಅಚ್ಚಕಟ್ಟು ಪ್ರದೇಶದ ಗ್ರಾಮಗಳಾದ ಶಿವಪುರ, ಹುಲೇಮಳಲಿ, ಕುನುಗಲಿ ರೈತರಿಂದ ಎಕರೆಗೆ ₹ 5 ಸಾವಿರ ಸಂಗ್ರಹಿಸಿದೆವು. ಕೆರೆಗೆ ನೀರು ಬಂದರೆ ಅಡಿಕೆ ತೋಟಗಳಿಗೆ ಅನುಕೂಲ ಆಗುತ್ತದೆ ಎಂದು ರೈತರೂ ಸಂತಸದಿಂದ ಹಣ ನೀಡಿದರು.

ಮುಖಂಡ, ಮಾಜಿ ಶಾಸಕ ಪಿ. ರಮೇಶ್, ಪರಮೇಶ್ವರಪ್ಪ, ಮಹೇಶ್ವರಪ್ಪ ಅವರ ಮಾರ್ಗದರ್ಶನ ದಲ್ಲಿ ‘ತರಳಬಾಳು ಜಗದ್ಗುರು ಶಿವಕುಮಾರ ಸ್ವಾಮಿ ಏತನೀರಾವರಿ ಸಮಿತಿ’ ರಚಿಸಿಕೊಂಡು ಯೋಜನೆ ಜಾರಿಗಾಗಿ ಶ್ರಮಿಸಲಾಯಿತು’ ಎಂದು ಸಮಿತಿಯ ಅಧ್ಯಕ್ಷ ಎಚ್.ಎನ್. ಬಸವರಾಜ್ ವಿವರಿಸಿದರು . ಉಪಾಧ್ಯಕ್ಷ ಚಂದ್ರಶೇಖರ್, ಎಂ.ಜೆ. ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್. ಶಿವಕುಮಾರ್, ಸಿ. ವಿಜಯ ಕುಮಾರ್ ಹಾಗೂ ಸಿ.ಎನ್. ಸುರೇಶ್ ಕೂಡ ಇದನ್ನು ಅನುಮೋದಿಸಿದರು.

ಹುಲೇಮಳಲಿ-ಶಿವಪುರ ಕೆರೆಗೆ ನೀರಿನ ಮೂಲ ಇಲ್ಲ. ಕುನುಗಲಿ ಕೆರೆ ತುಂಬಿದ ನಂತರ ನಮ್ಮೂರ ಕೆರೆಗೆ ನೀರು ಹರಿಯಬೇಕು. ಆ ಕೆರೆ ತುಂಬುವ ಹೊತ್ತಿಗೆ ಮಳೆಗಾಲವೇ ಮುಗಿಯುತ್ತದೆ. ಹಿರೇಹಳ್ಳದಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ಮೇಲೆತ್ತಿ ಕೆರೆಗೆ ಹರಿಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು.

-2.5 ಕಿ.ಮೀ. ದೂರದಿಂದ ಏತನೀರಾವರಿ ಮೂಲಕ ಕೆರೆಗೆ ನೀರು

-ಒಂದು ಅಡಿ ಅಗಲದ 350 ಪಿವಿಸಿ ಪೈಪ್ ಬಳಕೆ

-ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಪ್ರೇರಣೆ

ನಾಲ್ಕು ತಿಂಗಳಲ್ಲಿ ಯೋಜನೆ ಪೂರ್ಣ

ಇದೇ ವರ್ಷ ಏ.28ರಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಕಾಮಗಾರಿಗೆ ಚಾಲನೆ ನೀಡಿದ್ದರು. ಹಿಂಗಾರು ಮಳೆಯ ಸಂದರ್ಭದಲ್ಲಿ ಹಿರೇಹಳ್ಳದಿಂದ ನೀರು ಹರಿಯುವುದರಿಂದ ಕೆರೆಗೆ ನೀರು ಹರಿಸಲು ಅನುಕೂಲ ಆಗುತ್ತದೆ. ಹೀಗಾಗಿ ಮಳೆಗಾಲ ಮುಗಿಯುವ ಒಳಗಾಗಿ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಅವರ ನಿರ್ದೇಶನದಂತೆ ಯುವಕರು ಕೇವಲ ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಸಿದ್ದು, ಕೆರೆಗೆ ನೀರು ಹರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಸಾಣೇಹಳ್ಳಿ ಶ್ರೀ ಅವರು ಗ್ರಾಮಸ್ಥರೊಂದಿಗೆ ಸಂಭ್ರಮ ಹಂಚಿಕೊಂಡರು.

***

ಸರ್ಕಾರದ ನೆರವಿಲ್ಲದೆ ನೀರಾವರಿ ಯೋಜನೆ ಜಾರಿ ಗೊಳಿಸಬಹುದು ಎಂದು ನಮ್ಮೂರಿನ ಯುವಕರು ತೋರಿಸಿ ದ್ದಾರೆ. ಇದು ಎಲ್ಲರಿಗೂ ಮಾದರಿಯಾಗಲಿ.

- ಎಚ್.ಎನ್. ಬಸವರಾಜ್, ನೀರಾವರಿ ಸಮಿತಿಯ ಅಧ್ಯಕ್ಷ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು