ಬುಧವಾರ, ಏಪ್ರಿಲ್ 21, 2021
23 °C
ಮಹಾರಾಷ್ಟ್ರದ 21 ಜನ ಅಲೆಮಾರಿಗಳ ಬದುಕು ಅತಂತ್ರ

ಹಂಪಿ ಉತ್ಸವ: ಒಂಟೆ ತರಿಸಿದವರೇ ವಶಕ್ಕೆ ಪಡೆದರು!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಹಣ ಕೊಟ್ಟು ‘ಹಂಪಿ ಉತ್ಸವ’ಕ್ಕೆ ಒಂಟೆಗಳನ್ನು ತರಿಸಿದ್ದ ಜಿಲ್ಲಾಡಳಿತವೇ ಈಗ ಅವುಗಳನ್ನು ವಶಕ್ಕೆ ಪಡೆದಿದ್ದು, ಅವುಗಳನ್ನು ನೆಚ್ಚಿಕೊಂಡು ಬದುಕು ನಡೆಸುತ್ತಿದ್ದ ಅಲೆಮಾರಿ ಕುಟುಂಬಗಳ ಬದುಕು ಅತಂತ್ರವಾಗಿದೆ.

ಜಿಲ್ಲಾಡಳಿತವು ಮಾರ್ಚ್‌ನಲ್ಲಿ ಆಯೋಜಿಸಿದ್ದ ‘ಹಂಪಿ ಉತ್ಸವ‘ದಲ್ಲಿ ಪ್ರದರ್ಶನಕ್ಕಾಗಿ ಮಹಾರಾಷ್ಟ್ರದ ಪುಣೆ, ಅಹಮ್ಮದ್‌ ನಗರ ಮತ್ತು ಸೊಲ್ಲಾಪುರ ಜಿಲ್ಲೆಯ ಅಲೆಮಾರಿಗಳನ್ನು ಸಂಪರ್ಕಿಸಿ, ಒಂಟೆ ತೆಗೆದುಕೊಂಡು ಬರುವಂತೆ ತಿಳಿಸಿತ್ತು. ಮೂರು ದಿನಕ್ಕಾಗಿ ಒಂದುವರೆ ಲಕ್ಷ ಕೊಡುವುದಾಗಿ ತಿಳಿಸಿ, ₹40,000 ಮುಂಗಡವಾಗಿ ಪಾವತಿಸಿತ್ತು. ಆದರೆ, ಅಲೆಮಾರಿ ಕುಟುಂಬಗಳು ಮಾ.1ರ ಬದಲಾಗಿ 2ನೇ ತಾರೀಖಿಗೆ ಹಂಪಿಗೆ ಬಂದಿದ್ದರು. ವಿಳಂಬವಾಗಿ ಬಂದದ್ದರಿಂದ ಆಯೋಜಕರು ಇನ್ನುಳಿದ ಹಣ ಪಾವತಿಸಲಿಲ್ಲ. ಬಂದ ಹಣದಲ್ಲಿ ₹35,000 ಸಾವಿರ ಒಂಟೆ ತಂದ ಲಾರಿಯವರಿಗೆ ಅಲೆಮಾರಿಗಳು ಪಾವತಿಸಿದ್ದಾರೆ.

ಹಣವಿಲ್ಲದೆ ಊರಿಗೆ ಹಿಂತಿರುಗಲಾಗದ ಅಸಹಾಯಕತೆಯಿಂದ ಅವರು ಊರೂರು ಅಲೆಯುತ್ತ, ಜನರನ್ನು ಒಂಟೆ ಮೇಲೆ ಸುತ್ತಾಡಿಸಿ ಅದರಿಂದ ಬಂದ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಜು. 17ರಂದು ಗಂಗಾವತಿಯಿಂದ ನಗರಕ್ಕೆ ಬಂದಿದ್ದಾರೆ. ಈ ವೇಳೆ ಕೆಲವರು ಒಂಟೆಗಳ ಛಾಯಾಚಿತ್ರ ಮೊಬೈಲ್‌ನಲ್ಲಿ ಸೆರೆಹಿಡಿದು ಅವುಗಳನ್ನು ಸಂಸದೆ, ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಮನೇಕಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ. ಅವರ ನಿರ್ದೇಶನದ ಮೇರೆಗೆ ಸ್ಥಳೀಯ ಪೊಲೀಸರು, ಎಲ್ಲ ಒಂಬತ್ತು ಒಂಟೆಗಳನ್ನು ವಶಕ್ಕೆ ಪಡೆದು, ತಾಲ್ಲೂಕಿನ ಕಮಲಾಪುರ ಸಮೀಪದ ಬಿಳಿಕಲ್‌ ಸಂರಕ್ಷಿತ ಅರಣ್ಯದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಇರಿಸಿದ್ದಾರೆ.

ಅಲೆಮಾರಿ ಕುಟುಂಬದವರು ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರೂ ಒಂಟೆಗಳನ್ನು ಬಿಟ್ಟಿಲ್ಲ. ದಿಕ್ಕು ತೋಚದೇ ಅವರು ತಾಲ್ಲೂಕಿನ ಕೊಂಡನಾಯಕನಹಳ್ಳಿ ಸಮೀಪದ ಮುಖ್ಯರಸ್ತೆ ಬಳಿ ಟೆಂಟ್‌ನಲ್ಲಿ ಉಳಿದುಕೊಂಡಿದ್ದಾರೆ.

‘ನಾವು ಜೀವನೋಪಾಯಕ್ಕಾಗಿ ಒಂಟೆಗಳ ಮೇಲೆ ಜನರನ್ನು ಸುತ್ತಾಡಿಸುತ್ತೇವೆ. ನಾವು ಅವುಗಳನ್ನು ಮಾರಾಟ ಮಾಡಲು ಬಂದಿಲ್ಲ. ಆದರೆ, ತಪ್ಪಾಗಿ ಭಾವಿಸಿ ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಮಾರ್ಚ್‌ನಲ್ಲಿ ಜಿಲ್ಲಾಡಳಿತವೇ ನಮ್ಮನ್ನು ಕರೆಸಿತ್ತು. ಎಲ್ಲ ದಾಖಲೆಗಳನ್ನು ಕೊಟ್ಟರೂ ಪೊಲೀಸರು ಬಿಡುಗಡೆ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗೂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಅಲೆಮಾರಿ ಕುಟುಂಬದ ಶೈಲಾ ಖರಾತ್‌ ತಿಳಿಸಿದರು.

‘ಐದು ದಿನಗಳಿಂದ ಒಂಟೆಗಳನ್ನು ಪೊಲೀಸರು ವಶದಲ್ಲಿ ಇಟ್ಟುಕೊಂಡಿರುವ ಕಾರಣ ನಮ್ಮ ಜೀವನ ನಡೆಯುತ್ತಿಲ್ಲ. ರಸ್ತೆಬದಿ ಟೆಂಟ್‌ನಲ್ಲಿ ಕಾಲ ಕಳೆಯುತ್ತಿದ್ದು, ಮಕ್ಕಳಿಗೆ ಹೊಟ್ಟೆ ತುಂಬ ಊಟ ಕೊಡಿಸಲು ಆಗುತ್ತಿಲ್ಲ’ ಎಂದು ಅಸಹಾಯಕತೆ ತೋಡಿಕೊಂಡರು.

‘ಹಂಪಿ ಉತ್ಸವಕ್ಕೆ ಕರೆಸಿದ ಒಂಟೆಗಳನ್ನು ವಶಕ್ಕೆ ಪಡೆದು ಜಿಲ್ಲಾ ಆಡಳಿತ ಅಲೆಮಾರಿಗಳಿಗೆ ಅಪಮಾನ ಮಾಡಿದೆ. ಜಿಲ್ಲಾಡಳಿತದ ತಪ್ಪಿನಿಂದ ಅವರು ಒಂಟೆಗಳೊಂದಿಗೆ ಊರೂರು ಅಲೆಯುತ್ತಿದ್ದು, ಸಂಕಷ್ಟದಲ್ಲಿದ್ದಾರೆ. ಈಗ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಾಗಿದೆ. ಅವರು ಒಂಟೆ ಮಾರಾಟ ಮಾಡುವವರಲ್ಲ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು’ ಎಂದು ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಗೌರವ ಅಧ್ಯಕ್ಷ ಕೆ.ಎಂ. ಮೇತ್ರಿ ಆಗ್ರಹಿಸಿದರು.

ಈ ಸಂಬಂಧ ಅವರು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ವಿಷಯ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಿಲ್ಲ.

ವಶಕ್ಕೆ ಪಡೆಯಲು ಕಾರಣವೇನು?
ಬಕ್ರೀದ್‌ ಹಬ್ಬಕ್ಕೆ ಒಂಟೆಗಳ ಮಾಂಸಕ್ಕೆ ಬೇಡಿಕೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಮಾರಾಟ ಮಾಡುವ ಉದ್ದೇಶದಿಂದಲೇ ಅಲೆಮಾರಿಗಳು ಇಲ್ಲಿಗೆ ಬಂದಿದ್ದಾರೆ ಎಂದು ಕೆಲವರು ಸಂಸದೆ ಮನೇಕಾ ಗಾಂಧಿ ಅವರಿಗೆ ದೂರು ಕೊಟ್ಟಿದ್ದರು. ಗಾಂಧಿ ಅವರು ಅದನ್ನು ಪರಿಶೀಲಿಸುವಂತೆ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದರು. ನಗರದಲ್ಲಿ ಬೀಡು ಬಿಟ್ಟಿದ್ದ ಅಲೆಮಾರಿಗಳ ಜತೆಗಿದ್ದ ಒಂಟೆಗಳನ್ನು ನೋಡಿ, ಬಳಿಕ ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೋಂಕು ಹರಡುವ ಆತಂಕ
ಊರೂರು ಸುತ್ತಾಡಿರುವ ಒಂಟೆಗಳನ್ನು ವಶಕ್ಕೆ ಪಡೆದು ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಇರಿಸಿರುವುದರಿಂದ ಅಲ್ಲಿರುವ ಪ್ರಾಣಿಗಳಿಗೆ ಅದರ ಸೋಂಕು ಹರಡುವ ಸಾಧ್ಯತೆ ಇದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

‘ಊರೂರು ಸುತ್ತಾಡುವ ಪ್ರಾಣಿಗಳನ್ನು ಕಾಡು ಪ್ರಾಣಿಗಳ ನಡುವೆ ಇರಿಸುವುದು ತಪ್ಪು. ಕಾಡು ಪ್ರಾಣಿಗಳು ಸ್ವಚ್ಛಂದ ಪರಿಸರದಲ್ಲಿ ಬೆಳೆದಿರುತ್ತವೆ. ಅವುಗಳಿಗೆ ಹೊರಗಿನ ಪ್ರಾಣಿಗಳ ಸೋಂಕು ಬೇಗ ಹರಡುವ ಸಾಧ್ಯತೆ ಇರುತ್ತದೆ. ಅರಣ್ಯ ಅಧಿಕಾರಿಗಳು ಕೂಡಲೇ ಒಂಟೆಗಳನ್ನು ಬೇರೆಡೆ ಇರಿಸಬೇಕು’ ಎಂದು ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು ಒತ್ತಾಯಿಸಿದ್ದಾರೆ.

‘ಒಂಟೆಗಳನ್ನು ಠಾಣೆಯಲ್ಲಿ ಇರಿಸಲು ಆಗುವುದಿಲ್ಲ. ಕೆಲವು ದಿನಗಳ ವರೆಗೆ ಉದ್ಯಾನದಲ್ಲಿ ಇರಿಸಿಕೊಳ್ಳುವಂತೆ ತಿಳಿಸಿದ್ದರು. ಅದರಂತೆ ಬಿಟ್ಟು ಹೋಗಿದ್ದಾರೆ’ ಎಂದು ಉದ್ಯಾನದ ಸಹಾಯಕ ವಲಯ ಅರಣ್ಯಾಧಿಕಾರಿ ಪರಮೇಶ್ವರಯ್ಯ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು