ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಸೋರಿಕೆ: ಅಕ್ರಮ ಸಂಪರ್ಕಕ್ಕೆ ಬೀಳಲಿ ಕತ್ತರಿ

ರಾಜ್ಯದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ ಶೇ 10ರಷ್ಟು ಸೋರಿಕೆ
Last Updated 2 ಜೂನ್ 2020, 3:04 IST
ಅಕ್ಷರ ಗಾತ್ರ

ವಿದ್ಯುತ್‌ ವಲಯದ ಪ್ರಮುಖ ಸಮಸ್ಯೆಗಳಲ್ಲಿ ಸೋರಿಕೆಯೂ ಒಂದು. ವಿದ್ಯುತ್‌ ತಿದ್ದುಪಡಿ ಕಾಯ್ದೆ ಕುರಿತು ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಈ ಅಂಶದ ಮೇಲೂ ಬೆಳಕು ಚೆಲ್ಲಬೇಕಾಗಿರುವುದು ಸಕಾಲಿಕ. ಉತ್ಪಾದನೆ, ಪೂರೈಕೆಮತ್ತು ವಿತರಣೆ ವೇಳೆ ವಿದ್ಯುತ್‌ ಸೋರಿಕೆ ಅಥವಾ ನಷ್ಟ ಉಂಟಾಗುತ್ತಿರುವ ಕಾರಣ ಪರೋಕ್ಷವಾಗಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ.

ಗೃಹೋಪಯೋಗಿ ಅಥವಾ ಕೈಗಾರಿಕೆಗಳಿಗೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರಲಾಗುತ್ತದೆ. ‘ಲೈನ್‌ ಟ್ಯಾಪಿಂಗ್’ ಅಂದರೆ, ವಿದ್ಯುತ್‌ ಕಂಬದಿಂದ ನೇರವಾಗಿ ಸಂಪರ್ಕವನ್ನು ತೆಗೆದುಕೊಂಡಿರುತ್ತಾರೆ. ರಾಜ್ಯದ ಒಟ್ಟು ವಿದ್ಯುತ್‌ನಲ್ಲಿ ಶೇ 10ರಷ್ಟು ಈ ರೀತಿ ಸೋರಿಕೆಯಾಗುತ್ತಿದೆ. ಅಕ್ರಮ ಸಂಪರ್ಕಗಳಿಂದ ಬಳಸುವ ವಿದ್ಯುತ್‌ಗೆ ಯಾರಾದರೂ ಬೆಲೆ ತೆರಲೇಬೇಕು. ವಿದ್ಯುತ್‌ ಸಂಪರ್ಕಗಳಿಂದ ಉಂಟಾಗುವ ನಷ್ಟದಿಂದ ಬಳಕೆದಾರರ ಮೇಲೆ ಹೊರೆ ಬೀಳುತ್ತದೆ. ಹೀಗಾಗಿ, ಇಂತಹ ಅಕ್ರಮ ಸಂಪರ್ಕವನ್ನು ಮುಲಾಜಿಲ್ಲದೆ ಕಡಿತಗೊಳಿಸಬೇಕು. ಯಾವುದೇ ಕಾರಣಗಳನ್ನು ಕೇಳಿಸಿಕೊಳ್ಳದೆ, ಕ್ರಮ ಕೈಗೊಳ್ಳುವ ಕೆಲಸವಾಗಬೇಕು.

ವಿದ್ಯುತ್‌ ಪರಿವರ್ತನೆ ವೇಳೆಯ ನಷ್ಟ:ವಿದ್ಯುತ್‌ ವಿತರಣೆ ವೇಳೆ ಸಾಮರ್ಥ್ಯ ಪರಿವರ್ತಿಸುವ ಸಂದರ್ಭದಲ್ಲಿ (ಟ್ರಾನ್ಸ್‌ಮಿಷನ್) ವಿದ್ಯುತ್‌ ನಷ್ಟ ಸಂಭವಿಸುತ್ತದೆ. 765 ಕೆವಿಯಲ್ಲಿ ಬರುವ ವಿದ್ಯುತ್‌ ಅನ್ನು, 450 ಕೆವಿ, ನಂತರ 220 ಕೆವಿ ಮಾರ್ಗದಡಿ ಪೂರೈಸಬೇಕಾಗುತ್ತದೆ. ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳು (ವಿದ್ಯುತ್‌ ಪರಿವರ್ತಕಗಳು) ಇರದಿದ್ದರೆ ಆ ವೇಳೆ ಹೆಚ್ಚು ನಷ್ಟ ಸಂಭವಿಸುತ್ತದೆ. ಅಲ್ಲದೆ, ಒಂದೇ ಟ್ರಾನ್ಸ್‌ಫಾರ್ಮರ್‌ನಿಂದ ಹೆಚ್ಚು ಸಂಪರ್ಕಗಳನ್ನು ತೆಗೆದುಕೊಂಡರೆ ವಿದ್ಯುತ್‌ ಗುಣಮಟ್ಟವೂ ಕಡಿಮೆಯಾಗುವುದಲ್ಲದೆ, ನಷ್ಟವೂ ಜಾಸ್ತಿಯಾಗುತ್ತದೆ. ಕೈಗಾರಿಕಾ ಗ್ರಾಹಕರೇ ಇಂತಹ ಟ್ರಾನ್ಸ್‌ಫಾರ್ಮರ್‌ಗಳನ್ನು ಹಾಕಿಕೊಳ್ಳುವ ಮೂಲಕ ಗುಣಮಟ್ಟದ ವಿದ್ಯುತ್‌ ಪಡೆದುಕೊಳ್ಳುವುದು ಉತ್ತಮ.

ನ್ಯಾಯಯುತ ದರ: ಕಡಿಮೆ ದರಕ್ಕೆ ಕೈಗಾರಿಕೆಗಳಿಗೆ ವಿದ್ಯುತ್‌ ಪೂರೈಸಬೇಕು ಎಂಬ ಬೇಡಿಕೆ ಕೇಳಿ ಬರುತ್ತದೆ. ಯಾವುದೇ ನಿರ್ದಿಷ್ಟ ವಲಯಕ್ಕೆ ಕಡಿಮೆ ದರದಲ್ಲಿ ವಿದ್ಯುತ್‌ ಪೂರೈಸಿದರೂ ಮತ್ತೊಂದು ವಲಯ ಇದಕ್ಕಾಗಿ ಒತ್ತಾಯಿಸಬಹುದು. ಎಲ್ಲರಿಗೂ ಸರ್ಕಾರ ಸಹಾಯಧನ ಅಥವಾ ಸಬ್ಸಿಡಿ ನೀಡಲು ಸಾಧ್ಯವಿಲ್ಲ. ಕಡಿಮೆ ದರ ಎನ್ನುವ ಬದಲು ನ್ಯಾಯಯುತ ದರದಲ್ಲಿ ವಿದ್ಯುತ್‌ ಪೂರೈಸಿ ಎಂಬ ಬೇಡಿಕೆ ಇಡಬಹುದು. ವಿದ್ಯುತ್‌ ದರದ ಕುರಿತ ಚರ್ಚೆ ಮೊದಲಿನಿಂದಲೂ ಇದೆ.

ರಾಜ್ಯಗಳ ನಡುವೆ ವಿದ್ಯುತ್‌ ದರ ವ್ಯತ್ಯಾಸವಿರುವ ಬಗ್ಗೆ ಕೈಗಾರಿಕೆಗಳು ಪ್ರಸ್ತಾಪಿಸುತ್ತವೆ. ತಮಿಳುನಾಡು, ಆಂಧ್ರಪ್ರದೇಶ
ದಂತಹ ರಾಜ್ಯಗಳಲ್ಲಿ ಹಳೆಯ ಉಷ್ಣವಿದ್ಯುತ್‌ ಸ್ಥಾವರಗಳಿವೆ. ಅಲ್ಲಿ ಉತ್ಪಾದಿಸುವ ವಿದ್ಯುತ್‌ ದರ ಕಡಿಮೆ ಇರುತ್ತದೆ. ಹೀಗಾಗಿ, ಕೈಗಾರಿಕೆಗಳಿಗೂ ಯೋಗ್ಯ ದರದಲ್ಲಿ ಅಲ್ಲಿ ವಿದ್ಯುತ್‌ ನೀಡಲಾಗುತ್ತಿದೆ.

ಉಷ್ಣ ವಿದ್ಯುತ್‌ ಸ್ಥಾವರವೂ ಅಗತ್ಯ: ಕಲ್ಲಿದ್ದಲಿನಿಂದ ನಡೆಯುವ ಉಷ್ಣ ವಿದ್ಯುತ್‌ ಸ್ಥಾವರಗಳಿಂದ ಪರಿಸರಕ್ಕೆ ಹಾನಿ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಈಗಿನ ಉಷ್ಣ ವಿದ್ಯುತ್ ಸ್ಥಾವರಗಳು ಪರಿಸರ ಸ್ನೇಹಿಯಾಗಿವೆ. ಹೊಸ ಕಲ್ಲಿದ್ದಲು ಸ್ಥಾವರಗಳಿಂದ ಹೆಚ್ಚು ಹೊಗೆ ಬರುತ್ತಿಲ್ಲ. ಸೌರ ಅಥವಾ ಪವನ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಿದರೂ ರಾತ್ರಿ ಸಂದರ್ಭದಲ್ಲಿ ಈ ವಲಯವನ್ನು ಅವಲಂಬಿಸಲು ಸಾಧ್ಯವಿಲ್ಲ. ಮಳೆಗಾಲದಲ್ಲಿ ಮೋಡದ ವಾತಾವರಣವೇ ಹೆಚ್ಚು ಇರುವುದರಿಂದ ಸೌರವಿದ್ಯುತ್‌ ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆಯಾಗದೇ ಇರಬಹುದು. ಅಗತ್ಯವಿರುವಷ್ಟು ವಿದ್ಯುತ್‌ ದೊರೆಯದೆ ಹೋದರೆ, ಕೃಷಿ ಚಟುವಟಿಕೆಗೆ ತೊಂದರೆಯಾಗಬಹುದು. ಇಂತಹ ಸಂದರ್ಭದಲ್ಲಿ ಉಷ್ಣ ವಿದ್ಯುತ್‌ ಸ್ಥಾವರಗಳು ಬೇಕಾಗುತ್ತವೆ. ಅಲ್ಲದೆ, ‘ಬೇಸ್‌ ಲೋಡ್‌’ಗೆ ಕಲ್ಲಿದ್ದಲು ಅವಶ್ಯ. ವರ್ಷಕ್ಕೆ 40 ಕೋಟಿ ಟನ್‌ನಿಂದ, 50 ಕೋಟಿ ಟನ್‌ವರೆಗೆ ಕಲ್ಲಿದ್ದಲು ಅದಿರು ಹೊರತೆಗೆಯಲಾಗುತ್ತದೆ. ಇದರ ಬಳಕೆ ಆಗಲೇ ಬೇಕಾಗಿದೆ. ಸದ್ಯಕ್ಕೆ ಉಷ್ಣವಿದ್ಯುತ್‌ ಸ್ಥಾವರಗಳನ್ನು ತ್ಯಜಿಸುವುದು ಕಷ್ಟದ ಕೆಲಸ.

ಉಷ್ಣ ವಿದ್ಯುತ್‌ ಸ್ಥಾವರದ ಬದಲು ಜಲವಿದ್ಯುತ್‌ ಉತ್ಪಾದನೆಗೆ ಆದ್ಯತೆ ನೀಡಬಹುದು ಎಂಬ ಸಲಹೆ ಕೇಳಿ ಬರಬಹುದು. ಆದರೆ, ಎಷ್ಟೋ ರಾಜ್ಯಗಳಲ್ಲಿ ಜಲವಿದ್ಯುತ್‌ ಉತ್ಪಾದನೆಯ ಕಲ್ಪನೆಯೇ ಇಲ್ಲ. ಇಂತಹ ರಾಜ್ಯಗಳು ಕಲ್ಲಿದ್ದಲಿನಿಂದ ವಿದ್ಯುತ್‌ ಉತ್ಪಾದನೆಗೆ ಮೊರೆ ಹೋಗಲೇಬೇಕಾಗುತ್ತದೆ. ಪವನ ಮತ್ತು ಸೌರವಿದ್ಯುತ್‌ನೊಂದಿಗೆ ಉಷ್ಣವಿದ್ಯುತ್‌ ಉತ್ಪಾದನೆಗೂ ಆದ್ಯತೆ ನೀಡಬೇಕಾಗಿರುವುದು ಅವಶ್ಯವಾಗಿದೆ.

ಸ್ಥಳೀಯವಾಗಿ ಉತ್ಪಾದನೆ ಅಗತ್ಯ:ಸ್ಥಳೀಯವಾಗಿ ವಿದ್ಯುತ್‌ ಉತ್ಪಾದಿಸಿ, ಸ್ಥಳೀಯವಾಗಿಯೇ ಬಳಸುವಂತಹ ಯೋಜನೆಯೊಂದನ್ನು ರಾಜ್ಯ ಸರ್ಕಾರ ರೂಪಿಸಿದೆ. ಪ್ರತಿ ತಾಲ್ಲೂಕಿನಲ್ಲಿ 20 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಿ, ಅಲ್ಲಿಯೇ ಬಳಸುವ ಉದ್ದೇಶ ಹೊಂದಿರುವ ಇದು ಉತ್ತಮ ಯೋಜನೆ. ಎಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತದೆಯೋ, ಅಲ್ಲಿಯೇ ಬಳಸುವುದರಿಂದ ವಿತರಣಾ ನಷ್ಟ ಕಡಿಮೆ ಇರುತ್ತದೆ. ಒಂದು ತಾಲ್ಲೂಕಿಗೆ 20 ಮೆಗಾವಾಟ್‌ ವಿದ್ಯುತ್‌ ಸಾಕಾಗುತ್ತದೆ. ಇದರೊಂದಿಗೆ, ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಮತ್ತು ಸೌರ ವಿದ್ಯುತ್‌ ಘಟಕ ಸ್ಥಾಪಿಸುವ ಕೆಲಸವಾದರೆ ಒಳ್ಳೆಯದು.

ಸ್ಥಳೀಯವಾಗಿ ವಿದ್ಯುತ್‌ ಉತ್ಪಾದನೆಗೆ ಉತ್ತೇಜನ ನೀಡುವಂತಹ ಹಲವು ಅಂಶಗಳು ಈ ತಿದ್ದುಪಡಿ ಕಾಯ್ದೆಯಲ್ಲಿವೆ. ಇದರ ಜೊತೆಗೆ, ಹೈ ವೋಲ್ಟೇಜ್‌ನಲ್ಲಿ ವಿದ್ಯುತ್‌ ಸರಬರಾಜು ಮಾಡುವ ಕೆಲಸವಾದರೆ, ವಿತರಣೆ ವೇಳೆಯಲ್ಲಿನ ನಷ್ಟವನ್ನು ತಪ್ಪಿಸಬಹುದಲ್ಲದೆ, ವಿದ್ಯುತ್‌ ವಲಯವನ್ನುಸುಧಾರಿಸಲೂಬಹುದು.

ಲೇಖಕ: ಕೆಇಆರ್‌ಸಿ ಮಾಜಿ ಅಧ್ಯಕ್ಷ

ನಿರೂಪಣೆ: ಗುರು ಪಿ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT