ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲರಾಶಿಯಲ್ಲಿ ಲೀನವಾದ ಬದುಕು

Last Updated 22 ಡಿಸೆಂಬರ್ 2018, 20:45 IST
ಅಕ್ಷರ ಗಾತ್ರ

ಶಿವಮೊಗ್ಗ: ಅದು 1962ನೇ ಇಸವಿ. ಹಲವು ತಲೆಮಾರಿನ ಹಿರೀಕರು ಬಾಳಿ ಬದುಕಿದ್ದ ಮನೆ, ಬದುಕು ನೀಡಿದ್ದ ಹೊಲ–ಗದ್ದೆಗಳನ್ನು ತೊರೆದು ಸಾಮಾನು, ಸರಂಜಾಮನ್ನು ಲಾರಿಗೆ ಹೇರಿಕೊಂಡು ಏಳು ಮಕ್ಕಳ ಸಮೇತ ಹೊರಟು ನಿಂತ ತಮ್ಮಣ್ಣಯ್ಯ ಅವರ ಕುಟುಂಬಕ್ಕೆ ಮುಂದಿನ ಬದುಕಿನ ನಿಲ್ದಾಣ ಯಾವುದೆಂದೇ ತಿಳಿದಿರಲಿಲ್ಲ.

ಕೊನೆಗೆ ಸರ್ಕಾರವೇ ಕಳುಹಿಸಿದ್ದ ಲಾರಿ ಬಂದು ನಿಂತಿದ್ದು ಶೆಟ್ಟಿಹಳ್ಳಿ ಅಭಯಾರಣ್ಯದ ಅಂಚಿನಲ್ಲಿದ್ದ ಪುರಾ ದಾಳು ಎಂಬ ನಿರ್ಜನ ಪ್ರದೇಶ ದಲ್ಲಿ. ಆಗಿನ ಕಾಲದಲ್ಲಿ ಕಾಡುಪ್ರಾಣಿಗಳ ಆವಾಸಸ್ಥಾನವೇ ಆಗಿದ್ದ ಶೆಟ್ಟಿಹಳ್ಳಿ ಅರಣ್ಯ ಪ್ರದೇಶದ ಒಳಗೆ ಮತ್ತೆ ಹೊಸ ಬದುಕು ಆರಂಭಿಸಿದರು.

ಇಪ್ಪತ್ತೈದು ಎಕರೆ ಫಲವತ್ತಾದ ಭೂಮಿಯಲ್ಲಿ ಅಡಿಕೆ, ತೆಂಗು, ಬಾಳೆ ಬೆಳೆದು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದ ಸಾಗರ ತಾಲ್ಲೂಕು ಆವಿನಹಳ್ಳಿ ಹೋಬಳಿ ಇಲಕೋಡಿನ ತಮ್ಮಣ್ಣಯ್ಯ ಅವರ ಕುಟುಂಬ ಮುಳುಗಡೆಯ ನಂತರ ಬಡತನದ ಬೇಗೆಯಲ್ಲೇ ಬದುಕು ಸವೆಸುತ್ತಾ ತಲೆಮಾರು ಕಳೆದಿದೆ.

ಅಂದು ದಾನ ಧರ್ಮ ಮಾಡುತ್ತಾ ಶ್ರೀಮಂತಿಕೆ ಮೆರೆದಿದ್ದ ಆ ಕುಟುಂಬದ ಸದಸ್ಯರಿಗೆ ಇಂದು ಆರ್ಥಿಕ ಸಂಕಷ್ಟ. ಲಿಂಗನಮಕ್ಕಿ ಜಲಾಶಯದ ಹಿನ್ನೀರಿ ನಲ್ಲಿ ನೆಲೆ ಕಳೆದುಕೊಂಡು 56 ವರ್ಷ ಕಳೆದರೂ ಪುರದಾಳುವಿನಲ್ಲಿ ಕಟ್ಟಿಕೊಂಡ ಮನೆಯ ಹಕ್ಕುಪತ್ರವೂ ಅವರಿಗೆ ಸಿಕ್ಕಿಲ್ಲ. ಸಾಗುವಳಿ ಮಾಡಿದ ನಾಲ್ಕು ಎಕರೆ ಭೂಮಿ ಅವರದ್ದಾಗಿಲ್ಲ. ಬಡತನದ ಬೇಗೆಯಿಂದ ಬಸವಳಿದ ತಮ್ಮಣ್ಣಯ್ಯ ಅವರ ನಾಲ್ವರು ಪುತ್ರರಲ್ಲಿ ಇಬ್ಬರು ಮದುವೆಯೇ ಆಗಿಲ್ಲ.

ಮಕ್ಕಳಾದ ಪದ್ಮರಾಜ್, ಶ್ರೀಧರ್ ಅನಧಿಕೃತ ಸಾಗುವಳಿ ಭೂಮಿಯಲ್ಲೇ ಜಂಜಡದ ಬದುಕು ನಡೆಸುತ್ತಿದ್ದಾರೆ. ಮತ್ತೊಬ್ಬರು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬರಿಗೆ ಬ್ಯಾಂಕ್‌ನಲ್ಲಿ ಚಾಲಕನ ಕೆಲಸ ಸಿಕ್ಕಿದೆ.

‘ಊರು ತೊರೆದು ಬಂದಾಗ ನಾವಿನ್ನೂ ಚಿಕ್ಕವರು. ಓದು ಅಲ್ಲಿಗೆ ಮೊಟಕುಗೊಂಡಿತು. ಅರಣ್ಯದಲ್ಲೇ ಬಾಲ್ಯ ಕಳೆದೆವು. ತಂದೆ 1974ರಲ್ಲಿ ನಿಧನರಾದರು. ಇಂದಿಗೂ ಸಾಗುವಳಿ ಹಕ್ಕು ಸಿಕ್ಕಿಲ್ಲ. ಮನೆಯೂ ನಮ್ಮದಾಗಿಲ್ಲ ಎಂದು ನೋವು ತೋಡಿಕೊಂಡರು ತಮ್ಮಣ್ಣಯ್ಯ ಅವರ ಪುತ್ರರಾದ ಪದ್ಮರಾಜ್, ಶ್ರೀಧರ್.

ಪದ್ಮರಾಜ್ ಅವರ ಕುಟುಂಬದ ಕಥೆಯೇ ಬಹುತೇಕ ಎಲ್ಲ ಮುಳು ಗಡೆ ಸಂತ್ರಸ್ತರದೂ ಆಗಿದೆ. ಜಲ ರಾಶಿಯ ಒಳಗೆ ಲೀನವಾಗಿದ್ದ ಹಲವು ಸಮುದಾಯಗಳ ಬದುಕು ಮತ್ತು ಭವಿಷ್ಯವನ್ನು ಇಂದಿಗೂ ಸರಿಪಡಿಸಲು ಸಾಧ್ಯವಾಗಿಲ್ಲ.

ಲಿಂಗನಮಕ್ಕಿ ಯೋಜನೆಗಾಗಿಯೇ ಕರೂರು, ಬಾರಂಗಿ ಹೋಬಳಿಗಳ ವ್ಯಾಪ್ತಿಯ 152 ಹಳ್ಳಿಗಳ 12 ಸಾವಿರ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಹಲವು ಜನರು ಪಶ್ಚಿಮಘಟ್ಟದ ಶ್ರೇಣಿಯ ಒಳಗೆ ಚದುರಿ ಹೋಗಿದ್ದಾರೆ. ತಲೆಮಾರು ಬದಲಾದಂತೆ ಕುಟುಂಬಗಳ ಸಂಖ್ಯೆ ನಾಲ್ಕರಷ್ಟಾಗಿದೆ. ಅಂದು ಭೂ ದಾಖಲೆ ನೀಡದ ಕಾರಣ ಕುಟುಂಬದ ಸದಸ್ಯರ ಮಧ್ಯೆಯೇ ಭೂ ಹಕ್ಕಿಗಾಗಿ ಕಲಹಗಳು ನಡೆದಿವೆ. ಈಗ ನಿಜವಾದ ಫಲಾನುಭವಿಗಳನ್ನು ಗುರುತಿಸುವುದು ಸರ್ಕಾರಕ್ಕೂ ಸವಾಲಾಗಿದೆ.

ಭದ್ರಾ ಜಲಾಶಯದ ಹಿನ್ನೀರಿನಲ್ಲಿ 16 ಹಳ್ಳಿಗಳು ಮುಳುಗಡೆಯಾಗಿದ್ದವು. ಎನ್‌.ಆರ್. ಪುರ ತಾಲ್ಲೂಕು ಹೆಬ್ಬೆಯ 87 ಕುಟುಂಬಗಳ ಜನ ಮುಳುಗಿದ ದ್ವೀಪದಲ್ಲೇ ನೆಲೆಸಿದ್ದರು. ಆ ಪ್ರದೇಶವನ್ನು ಸರ್ಕಾರ ಅಭಯಾರಣ್ಯ ಎಂದು ಘೋಷಿಸಿ ಅವರನ್ನು ತರೀಕರೆ ಸಮೀಪ ಸ್ಥಳಾಂತರಿಸಲಾಗಿದೆ.

ತಮ್ಮಣ್ಣಯ್ಯ ಅವರ ಪುತ್ರ ಶ್ರೀಧರ್.
ತಮ್ಮಣ್ಣಯ್ಯ ಅವರ ಪುತ್ರ ಶ್ರೀಧರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT