ಭಾನುವಾರ, ಏಪ್ರಿಲ್ 5, 2020
19 °C
ಜುಲೈ 15ರಿಂದ ವಿಚಾರಣೆ

ಮಹದಾಯಿ | ಅಧಿಸೂಚನೆ ಹೊರಡಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಕಣಿವೆ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ ಮಹದಾಯಿ ಜಲ ವಿವಾದ ನ್ಯಾಯಮಂಡಳಿ ನೀಡಿರುವ ಐತೀರ್ಪು ಕುರಿತು ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಐ ತೀರ್ಪು ಪ್ರಶ್ನಿಸಿ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನೂ ಕೈಗೆತ್ತಿಕೊಳ್ಳಲು ಕೋರ್ಟ್ ಗುರುವಾರ ಸಮ್ಮತಿ ವ್ಯಕ್ತಪಡಿಸಿದೆ.

ಜುಲೈ 15ರಿಂದ ಸತತವಾಗಿ ವಿಚಾರಣೆ ನಡೆಸಲು ನಿರ್ಧರಿಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, ‘ಸುದೀರ್ಘ ವಿಚಾರಣೆ ನಡೆಸಿದ ನಂತರವೇ ನ್ಯಾಯಮಂಡಳಿ ನೀಡಿರುವ ಐತೀರ್ಪನ್ನು ಆಧರಿಸಿ ಅಧಿಸೂಚನೆ ಹೊರಡಿಸಲು ವಿರೋಧವೇಕೆ’ ಎಂದು ಮೂರು ರಾಜ್ಯಗಳ ಪರ ಹಾಜರಿದ್ದ ವಕೀಲರನ್ನು ಪ್ರಶ್ನಿಸಿತು.

‘ಈ ಸಂಬಂಧ ತಮ್ಮ ತಕರಾರು ಇಲ್ಲ’ ಎಂದು ವಕೀಲರು ತಿಳಿಸಿದ್ದರಿಂದ, ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಸೂಚಿಸಿದ ಪೀಠವು, ವಿಚಾರಣೆಯ ನಂತರ ನೀಡಲಾಗುವ ತೀರ್ಪು, ನೀರು ಹಂಚಿಕೆ ಕುರಿತು ಬದಲಾವಣೆ ತರುವಂತೆ ಸೂಚಿಸಿದರೆ ಅಧಿಸೂಚನೆಯಲ್ಲಿ ಮಾರ್ಪಾಡು ಮಾಡಬೇಕು ಎಂದು ಹೇಳಿತು.

ನೀರು ಹಂಚಿಕೆಯ ಪ್ರಮಾಣ ಹೆಚ್ಚಿಸಬೇಕು ಹಾಗೂ ಐತೀರ್ಪನ್ನು ಆಧರಿಸಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ತನ್ನ ಅರ್ಜಿಯಲ್ಲಿ ಕೋರಿದೆ. ಆದರೆ, ಕರ್ನಾಟಕಕ್ಕೆ ನೀರು ಹಂಚಿಕೆ ಮಾಡುವುದರಿಂದ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ದೂರಿ ಗೋವಾ ಅರ್ಜಿ ಸಲ್ಲಿಸಿದೆ.

ಮಹದಾಯಿ: ಮುಂದೇನು?
* ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು
* ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರದ ಮಾದರಿಯಲ್ಲಿ ಮಹದಾಯಿ ನದಿ ನೀರು ನಿಯಂತ್ರಣ ಪ್ರಾಧಿಕಾರ ರಚನೆಯಾಗಬೇಕು
* ಕೇಂದ್ರ ಜಲಶಕ್ತಿ ಸಚಿವಾಲಯದ ಅಡಿ ಕಾರ್ಯ ನಿರ್ವಹಿಸಲಿರುವ ಪ್ರಾಧಿಕಾರ
* ಪ್ರಾಧಿಕಾರದ ಸದಸ್ಯರಾಗಿ ಕೇಂದ್ರ ಮತ್ತು ಕಣಿವೆ ರಾಜ್ಯಗಳ ಅಧಿಕಾರಿಗಳ ನೇಮಕ
* ಪರಿಸರ ಇಲಾಖೆ ಅನುಮತಿ ಪಡೆದು, ಕಳಸಾ–ಬಂಡೂರಿ ತಿರುವು ಯೋಜನೆ ಕಾಮಗಾರಿ ಆರಂಭಿಸಬೇಕು

ರಾಜ್ಯಗಳಿಗೆ ಸಿಕ್ಕ ಪಾಲೆಷ್ಟು?
ಮಹದಾಯಿಯ ಒಟ್ಟು 36.55 ಟಿಎಂಸಿ ಅಡಿ ನೀರಿಗೆ ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿತ್ತು. ಅದರಲ್ಲಿ ತಿರುವು ಯೋಜನೆ ಮೂಲಕ ಬಳಕೆ ಉದ್ದೇಶದಿಂದ ಮಲಪ್ರಭಾ ನದಿಗೆ 7.56 ಟಿಎಂಸಿ ಅಡಿ ಹಾಗೂ ಕಣಿವೆ ವ್ಯಾಪ್ತಿಯಲ್ಲಿ 1.50 ಟಿಎಂಸಿ ಅಡಿ ಸೇರಿದಂತೆ ಒಟ್ಟು 9.06 ಟಿಎಂಸಿ ಅಡಿ ನೀರಿಗೆ ಬೇಡಿಕೆ. ಆದರೆ, ದೊರೆತಿದ್ದು 13.42 ಟಿಎಂಸಿ ಅಡಿ. ಗೋವಾಗೆ 24 ಟಿಎಂಸಿ ಅಡಿ. ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಅಡಿ.

ನ್ಯಾಯಮಂಡಳಿ ಹೇಳಿದ್ದಿಷ್ಟು
ಮಹದಾಯಿ ನದಿ ನೀರು ನಿರ್ವಹಣೆ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲೇ ಆಯಾ ರಾಜ್ಯಗಳು ಯೋಜನೆಗಳನ್ನು ಜಾರಿಗೊಳಿಸಬೇಕು. ಅಂತರರಾಜ್ಯ ಜಲ ವಿವಾದ ಕಾಯ್ದೆ–1956ರ ಸೆಕ್ಷನ್‌– 6ರ ಅಡಿ ಅಧಿಸೂಚನೆ ಹೊರಡಿಸಿದ ನಂತರವೇ ಐತೀರ್ಪು ಜಾರಿಯಾಗಲಿದೆ. ಅಧಿಸೂಚನೆ ಹೊರಡಿಸುವುದು ವಿಳಂಬವಾದಲ್ಲಿ ಮೂರೂ ರಾಜ್ಯಗಳಿಗೆ ಅನನುಕೂಲ ಆಗಲಿದೆ ಎಂದು ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ನೇತೃತ್ವದ ನ್ಯಾಯಮಂಡಳಿ ತನ್ನ ಐತೀರ್ಪಿನಲ್ಲಿ ಹೇಳಿತ್ತು.

*
ಸುಪ್ರೀ‌ಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸಬೇಕು. ಕಳಸಾ– ಬಂಡೂರಿ ನಾಲೆ ನಿರ್ಮಾಣ ಕಾಮಗಾರಿ ತಕ್ಷಣ ಪ್ರಾರಂಭಿಸಬೇಕು.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

*
ಗೆಜೆಟ್ ಪ್ರಕಟಣೆಗೆ ಮನವಿ ಮಾಡಲಾಗಿದೆ. ಶೀಘ್ರ ಕಾಮಗಾರಿ ಕೈಗೆತ್ತಿಕೊಂಡು, ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
-ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

*
ಅಧಿಸೂಚನೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್‌ನ ನಡೆಯು ಬಹುದಿನಗಳಿಂದ ಕುಡಿಯುವ ನೀರಿಗಾಗಿ ರಾಜ್ಯ ನಡೆಸಿದ್ದ ಹೋರಾಟಕ್ಕೆ ಸಂದ ಫಲವಾಗಿದೆ.
-ಮೋಹನ್‌ ಕಾತರಕಿ, ಕರ್ನಾಟಕ ಪರ ವಕೀಲರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು