ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕರ್ಫ್ಯೂ ಸಡಿಲಿಕೆಗೆ ಸಿ.ಎಂ ಆದೇಶ

ಪರಿಸ್ಥಿತಿ ಅವಲೋಕಿಸಿದ ಬಿ.ಎಸ್‌. ಯಡಿಯೂರಪ್ಪ l ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ
Last Updated 22 ಡಿಸೆಂಬರ್ 2019, 1:43 IST
ಅಕ್ಷರ ಗಾತ್ರ

ಮಂಗಳೂರು: ಪೊಲೀಸ್‌ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟ ಬಳಿಕ ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಗುರುವಾರದಿಂದ ಜಾರಿಯಲ್ಲಿರುವ ಕರ್ಫ್ಯೂವನ್ನು ಹಂತ ಹಂತವಾಗಿ ಸಡಿಲಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆದೇಶಿಸಿದ್ದಾರೆ. ಸೋಮವಾರ ಬೆಳಿಗ್ಗೆಯಿಂದ ಸಂಪೂರ್ಣವಾಗಿ ಕರ್ಫ್ಯೂಹಿಂತೆಗೆಯಲಾಗುತ್ತದೆ.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾದ ಘಟನೆ ಕುರಿತು ಶನಿವಾರ ನಗರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಬಳಿಕ ಮುಖ್ಯಮಂತ್ರಿ ಈ ತೀರ್ಮಾನ ಪ್ರಕಟಿಸಿದರು.

ಮುಖ್ಯಮಂತ್ರಿಯವರ ಸೂಚನೆಯಂತೆ ಶನಿವಾರ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು. ಭಾನುವಾರ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಕರ್ಫ್ಯೂ ಸಡಿಲಿಸಲಾಗುತ್ತದೆ. ಸೋಮವಾರ ಬೆಳಿಗ್ಗೆಯಿಂದ ಕರ್ಫ್ಯೂ ಹಿಂತೆಗೆದುಕೊಳ್ಳಲಿದ್ದು, ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ.

ಗುಂಡೇಟಿಗೆ ಬಲಿಯಾದವರ ಕುಟುಂಬದ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಅಲ್ಪಸಂಖ್ಯಾತ ಸಮುದಾಯದವರ ಸಂಘಟನೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಸಭೆ ನಡೆಸಿದ ಯಡಿಯೂರಪ್ಪ, ಗೋಲಿಬಾರ್‌ ಕುರಿತು ಮಾಹಿತಿ ಪಡೆದರು. ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್‌ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ, ಜಿಲ್ಲೆಯ ಎಲ್ಲ ಶಾಸಕರು, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾದ ಕಮಲ್‌ ಪಂತ್‌, ಡಾ.ಬಿ.ದಯಾನಂದ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಸಭೆಯಲ್ಲಿದ್ದರು.

ಶಾಸಕ ಯು.ಟಿ. ಖಾದರ್‌ ಮತ್ತು ದಕ್ಷಿಣ ಕನ್ನಡ ಮುಸ್ಲಿಂ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಕೆ.ಎಸ್‌. ಮೊಹಮ್ಮದ್ ಮಸೂದ್‌ ಅವರು ಮೃತರ ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿಯವರಿಗೆ ಭೇಟಿ ಮಾಡಿಸಿ, ಪರಿಸ್ಥಿತಿ ವಿವರಿಸಿದರು.

‘ಸರ್ಕಾರಿ ಪ್ರಾಯೋಜಿತ ಗಲಭೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್‌
ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದ್ದಾರೆ. ಜವಾಬ್ದಾರಿಯುತವಾಗಿ ಮಾತನಾಡಬೇಕು’ ಎಂದರು.

ಕೊಡಗಿನಲ್ಲಿ ಬಂದೋಬಸ್ತ್‌ ಹೆಚ್ಚಳ

ಮಡಿಕೇರಿ: ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ, ಸೂಕ್ಷ್ಮ ಪ್ರದೇಶವಾದ ಕೊಡಗಿನಲ್ಲಿ ಬಂದೋಬಸ್ತ್‌ ಹೆಚ್ಚಿಸಲಾಗಿದೆ. ಜಿಲ್ಲೆಯ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಬೀಡುಬಿಟ್ಟಿ
ದ್ದಾರೆ. ಗೋಲಿಬಾರ್‌ ಘಟನೆ ಖಂಡಿಸಿ ಸಿದ್ದಾಪುರ, ನೆಲ್ಯಹುದಿಕೇರಿ, ಸುಂಟಿಕೊಪ್ಪ, ವಿರಾಜಪೇಟೆಯಲ್ಲಿ ಮುಸ್ಲಿಂ ವರ್ತಕರು ಶುಕ್ರವಾರ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್‌ ಮಾಡಿದ್ದರು.

ಕಮಿಷನರ್‌ ಹೊರಗಿಟ್ಟು ಸಭೆ

ಯಡಿಯೂರಪ್ಪ ಅವರು ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಅಧಿಕಾರಿಗಳ ಜೊತೆ ಅನೌಪಚಾರಿಕ ಸಭೆ ನಡೆಸಿ ಗುರುವಾರದ ಘಟನೆ ಕುರಿತು ಮಾಹಿತಿಪಡೆದರು. ಹಿರಿಯ ಪೊಲೀಸ್‌ ಅಧಿಕಾರಿಗಳು, ಜಿಲ್ಲಾಧಿಕಾರಿ ಸೇರಿದಂತೆ ಹಲವರು ಸಭೆಯಲ್ಲಿದ್ದರು. ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರನ್ನು ಸಭೆಯ ಆರಂಭದಲ್ಲೇ ಹೊರಕ್ಕೆ ಕಳುಹಿಸಲಾಯಿತು. ಅವರನ್ನು ಹೊರಗಿಟ್ಟೇ ಮುಖ್ಯಮಂತ್ರಿ ಮೊದಲ ಸಭೆ ನಡೆಸಿದರು.

ಯುವಕನಿಗೆ ಚೂರಿ ಇರಿತ: ಉಳ್ಳಾಲ ಸಮೀಪದ ತೊಕ್ಕೊಟ್ಟುವಿನಲ್ಲಿ ಶನಿವಾರ ರಾತ್ರಿ ಕರ್ಫ್ಯೂ ನಡುವೆಯೇ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಯುವಕನೊಬ್ಬನಿಗೆ ಚೂರಿ ಇರಿದು ಪರಾರಿಯಾಗಿದ್ದಾರೆ. ತೊಕ್ಕೊಟ್ಟು ನಿವಾಸಿ ನಿಖಿಲ್‌ ಕೋಟ್ಯಾನ್‌ (33) ಗಾಯಗೊಂಡಿರುವ ಯುವಕ.

ಕರ್ಫ್ಯೂ ಹಿಂತೆಗೆಯುವಂತೆ ಹಲವು ಮುಖಂಡರು ಮನವಿ ಮಾಡಿದ್ದರು. ಈ ಕಾರಣದಿಂದ ಪರಿಸ್ಥಿತಿ ಅವಲೋಕಿಸಿ ಹಂತ ಹಂತವಾಗಿ ಕರ್ಫ್ಯೂ ಸಡಿಲಿಕೆಗೆ ಸೂಚಿಸಿದ್ದೇನೆ.

- ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಎನ್‌ಆರ್‌ಸಿ, ಸಿಎಎ ಬಗ್ಗೆ ಸರ್ಕಾರ ಮುಂಜಾಗ್ರತೆ ವಹಿಸಬೇಕು ಎಂದಿದ್ದೇನೆ.

- ಯು.ಟಿ. ಖಾದರ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT