ಸೋಮವಾರ, ಮೇ 17, 2021
23 °C

ಆಭರಣ ಧರಿಸದವರು ನಿಜವಾದ ಸ್ವಾಮೀಜಿ: ಡಾ.ಬರಗೂರು ರಾಮಚಂದ್ರಪ್ಪ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ (ಬೀದರ್‌ ಜಿಲ್ಲೆ): ‘ಆಭರಣ ಧರಿಸದವರೇ ನಿಜವಾದ ಸ್ವಾಮೀಜಿಗಳು ಎಂಬುದು ನನ್ನ ನಿಲುವು. ಆಭರಣ ಧರಿಸುವವರನ್ನು ಏನೆನ್ನಬೇಕು ಎಂಬುದನ್ನು ನೀವೇ ಊಹಿಸಿ' ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಶುಕ್ರವಾರ ಇಲ್ಲಿ ಆಯೋಜಿಸಿದ್ದ ‘ಮತ್ತೆ ಕಲ್ಯಾಣ’ ಅಭಿಯಾನದ ಸಮಾರೋಪದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ, ‘ಕೆಲ ಸ್ವಾಮೀಜಿಗಳು ಚಿನ್ನಾಭರಣ, ಕಿರೀಟ ಧರಿಸುತ್ತಾರೆ. ಸರ್ವಸಂಗ ಪರಿತ್ಯಾಗಿಗಳಾಗಿದ್ದೇವೆ ಎಂದು ಹೇಳಿಕೊಳ್ಳುವ ಅವರಿಗೆ ಇದೆಲ್ಲ ಬೇಕೆ’ ಎಂಬ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.

‘ಜಾತಿ ಕಾರಣಕ್ಕಾಗಿ ಅವಮಾನಿತರಾದವರು ಹಾಗೂ ಎಲ್ಲ ರೀತಿಯಿಂದ ಹಿಂದುಳಿದವರ ಅಭಿವೃದ್ಧಿಗಾಗಿ ಸೌಲಭ್ಯ ನೀಡಲು ಸರ್ಕಾರ ದಾಖಲೆಗಳಲ್ಲಿ ಜಾತಿ ನಮೂದಿಸುತ್ತದೆ. ಇದು ತಪ್ಪಲ್ಲ. ಆದರೆ, ರಾಜಕೀಯಕ್ಕಾಗಿ ಜಾತಿಭೇದ ಮಾಡುವುದು ಶುದ್ಧ ತಪ್ಪು’ ಎಂದು ‘ಸರ್ಕಾರ ಜಾತಿ ಕೇಳುತ್ತದಲ್ಲ’ ಎಂಬ ವಿದ್ಯಾರ್ಥಿನಿಯ ಪ್ರಶ್ನೆಗೆ ಅವರು ಉತ್ತರಿಸಿದರು.

‘ವೀರಶೈವ ಮತ್ತು ಲಿಂಗಾಯತರಲ್ಲಿ ಭೇದವೇಕೆ’ ಎಂಬ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ವೀರಶೈವರು ಬಹುದೇವೋಪಾಸಕರು. ಲಿಂಗಾಯತರು ಏಕದೇವೋಪಾಸಕರು. ವೀರಶೈವರೇ ಬೇರೆ, ಲಿಂಗಾಯತರೇ ಬೇರೆ' ಎಂದರು.

‘ಮತ್ತೆ ಕಲ್ಯಾಣದ ಹೆಸರಲ್ಲಿ ನಾಡು ಸುಧಾರಿಸಲು ಹೊರಟಿದ್ದೀರಿ. ನಿಮ್ಮ ಮಠಗಳಲ್ಲಿ ಹಾಗೂ ನಿಮ್ಮೂರುಗಳಲ್ಲಿ ಜಾತೀಯತೆ ಹೋಗಿದೆಯೇ? ಅಲ್ಲಿ ಬಸವತತ್ವ ಸಂಪೂರ್ಣವಾಗಿ ಆಚರಣೆಗೆ ಬಂದಿದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ ‘ನಮ್ಮಲ್ಲಿಯೂ ಸಾಕಷ್ಟು ಸುಧಾರಣೆ ಆಗಬೇಕಾಗಿದೆ. ಅದಕ್ಕಾಗಿ ಸರ್ವಪ್ರಯತ್ನ ನಡೆದಿದೆ’ ಎಂದು ಸಮಜಾಯಿಷಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು