ಗುರುವಾರ , ಜೂಲೈ 9, 2020
26 °C
ರಾಜ್ಯದಲ್ಲಿ ವೈದ್ಯಕೀಯ

ಶುಲ್ಕ ಗರಿಷ್ಠ, ಶಿಷ್ಯವೇತನ ಕನಿಷ್ಠ: ಎಂ.ಡಿ. ಸೀಟು ಪಡೆದವರ ಗೋಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಎಂ.ಡಿ.,ಎಂ.ಎಸ್‌.ಸೀಟುಗಳಿಗೆ ಶುಲ್ಕವನ್ನು ರಾಜ್ಯ ಸರ್ಕಾರ ಕಳೆದ ಐದು ವರ್ಷಗಳಲ್ಲಿ  ಶೇ 600ರಷ್ಟು ಹೆಚ್ಚಿಸಿದ್ದರೂ, ನಿವಾಸಿ ವೈದ್ಯರ ಶಿಷ್ಯವೇತನವನ್ನು ಮಾತ್ರ ನಯಾ ಪೈಸೆ ಹೆಚ್ಚಿಸಿಲ್ಲ!

ರಾಜ್ಯದಲ್ಲಿ ನಿವಾಸಿ ವೈದ್ಯರ ಶಿಷ್ಯವೇತನ ತಿಂಗಳಿಗೆ ಗರಿಷ್ಠ ₹40 ಸಾವಿರದಷ್ಟಿದೆ. ಆದರೆ ಇವರು ಎಂ.ಡಿ.ಸೀಟಿಗೆ ಪಾವತಿಸುವ ವಾರ್ಷಿಕ ಶುಲ್ಕ ₹ 7.14 ಲಕ್ಷ. ಅಂದರೆ ತಿಂಗಳಿಗೆ ಇವರು ಹಾಸ್ಟೆಲ್‌ ಶುಲ್ಕ ಸೇರಿ ಸರಾಸರಿ ₹ 80 ಸಾವಿರದಷ್ಟು ಖರ್ಚು ಮಾಡಬೇಕಾಗಿರುತ್ತದೆ. ಸರ್ಕಾರಿ ಕಾಲೇಜುಗಳಲ್ಲಿ ಸೀಟು ಸಿಕ್ಕಿದರೆ ಮಾತ್ರ ಶಿಷ್ಯವೇತನದಲ್ಲಿ ಒಂದಿಷ್ಟು ದುಡ್ಡು ಕೈಗೆ ಬರುತ್ತದೆ.

‘ಖಾಸಗಿ ಕಾಲೇಜುಗಳು ₹ 25 ಸಾವಿರ ಶಿಷ್ಯವೇತನ ನೀಡುವುದಾಗಿ ಬರೆಸಿಕೊಳ್ಳುತ್ತವೆ, ವೈದ್ಯರಿಗೆ ನೀಡುವುದು ₹ 5 ಸಾವಿರದಿಂದ ₹ 7 ಸಾವಿರ ಮಾತ್ರ. ಕೆಲವೇ ಕೆಲವು ಕಾಲೇಜುಗಳು ಮಾತ್ರ ಹೇಳಿದಂತೆ ಶಿಷ್ಯವೇತನ ಕೊಡುತ್ತವೆ. ಕೆಲವು ಕಾಲೇಜುಗಳು ಶಿಷ್ಯವೇತನವನ್ನು ಕೊಟ್ಟರೂ, ಪದವಿ ಪ್ರಮಾಣಪತ್ರ ಕೊಡುವ ವೇಳೆಗೆ ಕೊಟ್ಟ ಅದನ್ನೂ ವಾಪಸ್ ಪಡೆಯುತ್ತವೆ. ಇಂತಹ ಸ್ಥಿತಿಯಲ್ಲಿ ಬ್ಯಾಂಕ್‌ ಸಾಲ ಮಾಡಿ ಎಂ.ಡಿ ಸೀಟು ಪಡೆದವರಿಗೆ ಬಹಳ ಸಂಕಷ್ಟ ಎದುರಾಗುತ್ತದೆ’ ಎಂದು ಹಲವು ವೈದ್ಯಕೀಯ ವಿದ್ಯಾರ್ಥಿಗಳು ‘ಪ್ರಜಾವಾಣಿ’ ಬಳಿ ತಮ್ಮ ಅನುಭವ ಹಂಚಿಕೊಂಡರು.

ಕರ್ನಾಟಕದಲ್ಲಿ ಗರಿಷ್ಠ ಶುಲ್ಕ: ದೇಶದಲ್ಲಿ ಕರ್ನಾಟಕದ ಎಂ.ಡಿ, ಎಂ.ಎಸ್‌ ಸೀಟು ಶುಲ್ಕ ಅತ್ಯಧಿಕ ಮತ್ತು ನೀಡುವ ಶಿಷ್ಯವೇತನ ಅತ್ಯಲ್ಪ ಎಂಬುದು ದಾಖಲೆಗಳಿಂದ ಗೊತ್ತಾಗಿದೆ. ಮಹಾರಾಷ್ಟ್ರ, ಗೋವಾ, ಕೇರಳ, ಛತ್ತೀಸ್‌ಗಡಗಳಲ್ಲಿ ಇಲ್ಲಿಯಷ್ಟು ಶುಲ್ಕ ಇಲ್ಲ. ರಾಜ್ಯಕ್ಕಿಂತ ಅಧಿಕ ಶಿಷ್ಯವೇತನ ನೀಡಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಶುಲ್ಕದಷ್ಟೇ ಶಿಷ್ಯವೇತನವನ್ನೂ ನೀಡಲಾಗುತ್ತಿದೆ.

ದೆಹಲಿಯಲ್ಲಿ ಎಂ.ಡಿ ಸೀಟು ಶುಲ್ಕ ಸುಮಾರು ₹ 25 ಸಾವಿರದಷ್ಟು ಮಾತ್ರ ಇದ್ದು, ಶಿಷ್ಯವೇತನ ₹ 90 ಸಾವಿರದಷ್ಟಿದೆ. ಗುಜರಾತ್‌, ಒಡಿಶಾ, ತೆಲಂಗಾಣ, ಹರಿಯಾಣ, ತಮಿಳುನಾಡು, ಜಾರ್ಖಂಡ್‌, ರಾಜಸ್ಥಾನ, ಆಂಧ್ರಪ್ರದೇಶ, ಪಂಜಾಬ್‌, ಅಸ್ಸಾಂ ಮೊದಲಾದ ರಾಜ್ಯಗಳಲ್ಲಿ ಶುಲ್ಕಕ್ಕಿಂತ ಅದೆಷ್ಟೋ ಹೆಚ್ಚಿನ ಪ್ರಮಾಣದಲ್ಲಿ ಶಿಷ್ಯವೇತನ ನೀಡಲಾಗುತ್ತಿದೆ.

‘ಶುಲ್ಕ ಜಾಸ್ತಿ ಮಾಡುವ ಸರ್ಕಾರ ಶಿಷ್ಯವೇತನದ ಮೊತ್ತವನ್ನೂ ಹೆಚ್ಚಿಸಬೇಕು, ಹಾಗಿದ್ದರೆ ಬಡ, ಮಧ್ಯಮ ವರ್ಗದವರು ಒಂದಿಷ್ಟು ಉಸಿರಾಡಬಹುದು’ ಎಂದು ಹಲವು ನಿವಾಸಿ ವೈದ್ಯರು ಒತ್ತಾಯಿಸಿದರು.

ಕೋವಿಡ್‌–19 ಹೊಸ ಸೇನಾನಿಗಳು
ಎಂಬಿಬಿಎಸ್‌ ಎಂ.ಡಿ. ಅಥವಾ ಎಂ.ಎಸ್‌.ಸೀಟು ಪಡೆದ ವೈದ್ಯರು ಸದ್ಯ ಕೋವಿಡ್‌–19 ವಿರುದ್ಧ ಸೆಣಸಲು ದೊರೆತ ಹೊಸ ಸೇನಾನಿಗಳು. ಅವರೆಲ್ಲ ಅರ್ಹ ವೈದ್ಯರೇ ಆಗಿದ್ದರೂ, ಕನಿಷ್ಠ ಶಿಷ್ಯವೇತನದಲ್ಲಿ ಅವರು ದುಡಿಯಬೇಕಾಗುತ್ತದೆ. ‘ವೈದ್ಯಕೀಯ ಕ್ಷೇತ್ರವನ್ನು ವಾಣಿಜ್ಯೀಕರಣಗೊಳಿಸುವುದರ ಹಿಂದೆ ಸರ್ಕಾರದ ಇಂತಹ ಧೋರಣೆಗಳೂ ಕಾರಣವಾಗುತ್ತಿವೆ’ ಎಂದು ತರುಣ ವೈದ್ಯರು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು