ಬುಧವಾರ, ಆಗಸ್ಟ್ 4, 2021
21 °C

ಫುಡ್ ಪಾರ್ಕ್‌ಗಳ ನಿರ್ಮಾಣದ ಉದ್ದೇಶ ಈಡೇರಲೇಬೇಕು: ಬಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ  4 ಫುಡ್ ಪಾರ್ಕ್ಗಳಿದ್ದು, ಅವುಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಬೇಕು. ಅಭಿವೃದ್ಧಿಯೇ ನಮ್ಮ ಮೊದಲ ಗುರಿ. ಫುಡ್ ಪಾರ್ಕ್ ಗಳ ಅಭಿವೃದ್ಧಿ ಹಾಗೂ ಉದ್ದೇಶಗಳ ಈಡೇರಿಕೆಗೆ ಸರ್ಕಾರ ಫುಡ್ ಪಾರ್ಕ್ ಗಳ ಹಿಂದೆ ಶಕ್ತಿಯಾಗಿ ಬೆಂಬಲಿಸಲಿದೆ ಎಂದು ಫುಡ್ ಕರ್ನಾಟಕ ಲಿಮಿಟೆಡ್  ಅಧ್ಯಕ್ಷರೂ ಆಗಿರುವ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಹೇಳಿದರು.

ರಾಜ್ಯದಲ್ಲಿ ಫುಡ್ ಕರ್ನಾಟಕ ಲಿಮಿಟೆಡ್ ಸಂಸ್ಥೆಯನ್ನು ಬಲವರ್ಧನೆಗೆ ರೂಪಿತಗೊಂಡಿರುವ  ‘ಫುಡ್ ಪಾರ್ಕ್’ಗಳ ಪುನಶ್ಚೇತನ ಸಂಬಂಧ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ‘ಫುಡ್ ಕರ್ನಾಟಕ ಲಿಮಿಟೆಡ್’ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ರಾಜ್ಯದ ನಾಲ್ಕು ಫುಡ್ ಪಾರ್ಕ್ ಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಸಚಿವರು ಮಾತನಾಡಿದರು.

ಕೇಂದ್ರದ ಆತ್ಮನಿರ್ಭರ್ ಯೋಜನೆಯಲ್ಲಿ ‘ಫುಡ್ ಪಾರ್ಕ್ ಗೆ’ ₹ 4 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ಅನುದಾನದ ಉದ್ದೇಶ ಸಫಲವಾಗಬೇಕು. 

ಲಾಕ್‌ಡೌನ್ ಆದ ಸಂದರ್ಭದಲ್ಲಿ ರೈತರ ಆರ್ಥಿಕ ಪರಿಸ್ಥಿತಿ ನಿಭಾಯಿಸಲು ‘ಆಹಾರ ಉತ್ಪಾದನಾ ಘಟಕ’ಗಳು ಸಹಾಯಕವಾಗಲಿದೆ ಎಂಬುದನ್ನು ಗಮನಿಸಿ ರಾಜ್ಯದಲ್ಲಿನ ‘ಫುಡ್ ಪಾರ್ಕ್’ಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು ಎಂದರು.

ಈ ನಾಲ್ಕು ಫುಡ್ ಪಾರ್ಕ್ ಗಳ ಅಭಿವೃದ್ಧಿಯನ್ನು ಕಂಡು ರಾಜ್ಯದಲ್ಲಿ ಇನ್ನಷ್ಟು ಫುಡ್ ಪಾರ್ಕ್ ಗಳ ಸ್ಥಾಪನೆಗೆ ಜನರು ಮುಂದಾಗಬೇಕು. ಸರ್ಕಾರ ಸದಾ ಫುಡ್ ಪಾರ್ಕ್ ಗಳ ಹಿಂದೆ ಬೆನ್ನೆಲುಬಾಗಿ ನಿಲ್ಲಲಿದೆ. ಫುಡ್ ಪಾರ್ಕ್ ಗಳನ್ನು ಆರಂಭಿಸಿದ ಉದ್ದೇಶ ಈಡೇರಲೇಬೇಕು. ಹಣ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಫುಡ್ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸದೇ ಇರುವುದು ಸರಿಯಲ್ಲ. ಕಾರಣಗಳು ಸರಿಯಾಗಿರಬೇಕು. ಸಮರ್ಪಕವಾಗಿ ಕಾರ್ಯನಿರ್ವಹಿಸದ ಗುರಿಸಾಧಿಸದ ಫುಡ್ ಪಾರ್ಕ್ ಗಳ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಫುಡ್ ಪಾರ್ಕ್ ಗಳ ನಿರ್ಮಾಣಕ್ಕೆ ಸುದ್ದೇಶಕ್ಕಾಗಿ ಕಡಿಮೆ ವೆಚ್ಚದಲ್ಲಿ ಭೂಮಿ ಮಂಜೂರು ಮಾಡಿದೆ. ಸರ್ಕಾರದಿಂದ ಮಂಜುರಾದ ಭೂಮಿ ಫುಡ್ ಪಾರ್ಕ್ಗಳ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ರಾಜ್ಯದಲ್ಲಿರುವ 1.30 ಕೋಟಿ ಜನಸಂಖ್ಯೆಯಲ್ಲಿ ನಾಲ್ಕು ಮಂದಿ ಮಾತ್ರ ಫುಡ್ ಪಾರ್ಕ್ ನಿರ್ಮಿಸಿದ್ದನ್ನು ನೋಡಿದರೆ ಫುಡ್ ಪಾರ್ಕ್ ನಿರ್ಮಿಸಿದ ವ್ಯಕ್ತಿಗಳು ವಿಶೇಷ ಎಂಬುದು ಹೆಮ್ಮೆಯ ವಿಷಯವೂ ಹೌದು. ಫುಡ್ ಪಾರ್ಕ್ ಗಳ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯಗಳನ್ನು ಸರ್ಕಾರ ನೀಡಲಿದೆ. ರಸ್ತೆಯಿಲ್ಲ ಎನ್ನುವುದೆಲ್ಲ ಕಾರಣಗಳಲ್ಲ. ರೈತರಿಗೆ ಅನುಕೂಲ ಕಲ್ಪಿಸಲು ಮತ್ತು ರೈತರ ಉತ್ಪನ್ನಗಳ ಸದುಪಯೋಗ ಹಾಗೂ ಕೃಷಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ನವೋದ್ಯಮಕ್ಕೆ ಚೈತನ್ಯ ನೀಡುವ ನಿಟ್ಟಿನಲ್ಲಿ ‘ಅಗ್ರಿಸ್ಟಾರ್ಟಪ್’ಗೆ  ಇನ್ನೂ ಕೆಲವೇ ದಿನಗಳಲ್ಲಿ ಚಾಲನೆಯನ್ನು ನೀಡಲಾಗುತ್ತಿದೆ. ಅಗ್ರಿ ಸ್ಟಾರ್ಟಪ್ ಮೂಲಕ ಫುಡ್ ಪಾರ್ಕ್ ಗಳಿಗೂ ಅನುಕೂಲ ಕಲ್ಪಿಸಬಹುದೆಂದು ಬಿ.ಸಿ.ಪಾಟೀಲರು ಮಾಹಿತಿ ನೀಡಿದರು.

ಏನಿದು ಫುಡ್ ಪಾರ್ಕ್: 10 ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಸಚಿವಾಲಯ  ರಾಜ್ಯದಲ್ಲಿ ಕೋಲಾರ, ಹಿರಿಯೂರು, ಬಾಗಲಕೋಟೆ, ಜೇವರ್ಗಿ ಗಳಲ್ಲಿ ಫುಡ್ ಪಾರ್ಕ್ ಗಳ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಈ ಪಾರ್ಕ್ ಗಳ ಸ್ಥಾಪನಾ ಕಾರ್ಯದ ಉಸ್ತುವಾರಿ ಸಂಸ್ಥೆಯಾಗಿ ಆಹಾರ ಕರ್ನಾಟಕ ನಿಯಮಿತ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.

ರಾಜ್ಯದಲ್ಲಿ 2003 ರಲ್ಲಿ ಮಾಲೂರಿನಲ್ಲಿ ‘ಇನ್ನೋವಾ ಅಗ್ರಿ ಬಯೋಪಾರ್ಕ್’, ಬಾಗಲಕೋಟೆಯಲ್ಲಿ ‘ಗ್ರೀನ್ ಫುಡ್ ಪಾರ್ಕ್’, ಹಿರಿಯೂರಿನಲ್ಲಿ ‘ಅಕ್ಷಯ ಆಹಾರ ಪಾರ್ಕ್ ನಿಯಮಿತ’ ಜೇವರ್ಗಿಯಲ್ಲಿ ‘ಜೇವರ್ಗಿ ಫುಡ್ ಪಾರ್ಕ್ ನಿಯಮಿತ’ ಕಾರ್ಯನಿರ್ವಹಿಸುತ್ತಿವೆ.

ಸಭೆಯಲ್ಲಿ ಮೇಲ್ಮನೆ ಸದಸ್ಯ ನಾರಾಯಣಸ್ವಾಮಿ,ಹಿರಿಯೂರು ಶಾಸಕಿ ಪೂರ್ಣಿಮಾ ಉಪಸ್ಥಿತರಿದ್ದು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕೃಷಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಕತ್ರಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ,  ಆಹಾರ ಸಂಸ್ಕರಣಾ ಹಾಗೂ ಕೊಯ್ಲೋತ್ತರ ತಂತ್ರಜ್ಞಾನ ವಿಶೇಷ ಕಾರ್ಯದರ್ಶಿ ಮನೋಜ್ ರಾಜನ್ ಸೇರಿದಂತೆ ಅಧಿಕಾರಿಗಳು ಹಾಗೂ ನಾಲ್ಕೂ ಫುಡ್ ಪಾರ್ಕ್ ಗಳ ಮುಖ್ಯಸ್ಥರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು