ಮಂಗಳವಾರ, ಜನವರಿ 21, 2020
23 °C

ಬುರುಡೆ ಸಿದ್ದರಾಮಯ್ಯರ ಜ್ಯೋತಿಷ್ಯಾಲಯ ಮುಚ್ಚಿದೆ: ಸಚಿವ ಆರ್. ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: 'ಸಿದ್ದರಾಮಯ್ಯರ ಜ್ಯೋತಿಷ್ಯಾಲಯ ಮುಚ್ಚಿಹೋಗಿದ್ದು, ಅವರೊಬ್ಬ ಬುರುಡೆ ಸಿದ್ದರಾಮಯ್ಯ ಆಗಿದ್ದಾರೆ' ಎಂದು ಕಂದಾಯ ಮತ್ತು ಪೌರಾಡಳಿತ ಸಚಿವ ಆರ್. ಅಶೋಕ್ ಲೇವಡಿ ಮಾಡಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, 'ಉಪ ಚುನಾವಣೆ ಪ್ರಚಾರದ ವೇಳೆ ಅವರು ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಲಿದೆ ಎಂದು ಭವಿಷ್ಯ ನುಡಿದಿದ್ದರು‌. ಈಗ ಅವರ ಭವಿಷ್ಯವೇ ಡೋಲಾಯಮಾನವಾಗಿದೆ' ಎಂದು ವ್ಯಂಗ್ಯವಾಡಿದರು.

'ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳಿಗೂ ಕೊಟ್ಟ ಮಾತಿನಂತೆಯೇ ಸಚಿವ ಸ್ಥಾನ ನೀಡಲಾಗುವುದು. ಅವರಿಂದಲೇ ಸರ್ಕಾರ ಭದ್ರವಾಗಿದೆ ಎನ್ನುವುದು ನಮ್ಮ ಶಾಸಕರಿಗೂ ಅರಿವಿದೆ‌. ಸೋತವರಿಗೂ ಸೂಕ್ತ ಸ್ಥಾನಮಾನ ನೀಡಲಾಗುವುದು. ಅವರಿಗೆ ಜವಾಬ್ದಾರಿ ಸ್ಥಾನ ನೀಡುವುದರಿಂದ ಪಕ್ಷದಲ್ಲಿ ಯಾವುದೇ ಗೊಂದಲ, ವೈಮನಸ್ಸು ಉಂಟಾಗದು' ಎಂದು ತಿಳಿಸಿದರು.

'ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿಯೇ ಮುಂದುವರಿಯಬೇಕು. ಅವರು ಯಾವುದೇ ಪಕ್ಷಕ್ಕೆ ಹೋದರೂ ಪಕ್ಷವನ್ನು ಇಬ್ಭಾಗ ಮಾಡುವುದರಲ್ಲಿಯೇ ಇರುತ್ತಾರೆ. ಈಗಾಗಲೇ ಕಾಂಗ್ರೆಸ್'ನ್ನು ಮೂರು ಭಾಗವಾಗಿ ಮಾಡಿ, ನಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ' ಎಂದರು.

ಇದನ್ನೂ ಓದಿ: ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ: ಆರ್.ಅಶೋಕ್

'ಪಕ್ಷ ತೊರೆದು ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಶರತ್ ಬಚ್ಚೇಗೌಡ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಈ ಕುರಿತು ಮುಖ್ಯಮಂತ್ರಿಯವರೇ ಹೇಳಿದ್ದಾರೆ. ಮಾತೃ ಪಕ್ಷ ಬಿಟ್ಟು ಹೋಗಿದ್ದು ತಾಯಿಗೆ ಅನ್ಯಾಯ ಮಾಡಿದಂತೆ' ಎಂದು ದೂರಿದರು.

'ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ ಅವರ ಸೋಲಿಗೆ ಸಂಸದ ಬಿ.ಎನ್. ಬಚ್ಚೇಗೌಡ ಅವರೇ ಕಾರಣವಾಗಿದ್ದಾರೆ. ಬಿಜೆಪಿ ಮುಖಂಡರಾಗಿದ್ದ ಅವರು ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸದೆ ತಟಸ್ಥವಾಗಿದ್ದರು. ಅವರ ನಡತೆಯನ್ನು ವರಿಷ್ಠರು ಗಮನಿಸಿದ್ದು, ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ' ಎಂದು ಹೇಳಿದರು.

ಪಿಂಚಣಿಗೆ ನೂತನ ಯೋಜನೆ

'ಪಿಂಚಣಿಗಾಗಿ ಸರ್ಕಾರಿ ಕಚೇರಿಗಳಿಗೆ ವೃದ್ಧರು ಅಲೆಯುವುದನ್ನು ತಪ್ಪಿಸಲು ಕ್ರಾಂತಿಕಾರಿ ಯೋಜನೆ ರೂಪಿಸುತ್ತಿದ್ದೇವೆ. ವಾರದೊಳಗೆ ಯೋಜನೆಗೆ ಹೆಸರು ಇಟ್ಟು, ಅನುಷ್ಠಾನಗೊಳಿಸಲಾಗುವುದು. ಆಧಾರ ಕಾರ್ಡ್ ಮೂಲಕ ಸರ್ಕಾರವೇ ಅವರ ವಯಸ್ಸು ತಿಳಿದು, ಅರ್ಹರಿಗೆ ಪಿಂಚಣಿ ತಲುಪಿಸಲಿದೆ. ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ, ದಾಖಲೆಗಳ ಸಂಗ್ರಹ ಹೇಗೆ ಮಾಡಬೇಕೆಂದು ನಿರ್ಧರಿಸಲಾಗುವುದು' ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು