ಬುಧವಾರ, ಜೂನ್ 3, 2020
27 °C
ಕೋವಿಡ್‌–19 ಪೀಡತರು ವಾಸವಿದ್ದ ಪ್ರದೇಶಕ್ಕೆ ಆರೋಗ್ಯ ಮಾಹಿತಿ ಸಂಗ್ರಹಿಸಲು ತೆರಳಿದ್ದಾಗ ಘಟನೆ

ರಾಯಬಾಗ: ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ, ಐವರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಬಾಗ (ಬೆಳಗಾವಿ): ಕೋವಿಡ್‌–19 ಪೀಡಿತರು ವಾಸವಿದ್ದ ಪ್ರದೇಶದಲ್ಲಿರುವ ಜನರ ಆರೋಗ್ಯ ಮಾಹಿತಿ ಸಂಗ್ರಹಿಸಲು ಕುಡಚಿ ಪಟ್ಟಣಕ್ಕೆ ಮಂಗಳವಾರ ತೆರಳಿದ್ದ ಇಬ್ಬರು ಆಶಾ ಕಾರ್ಯಕರ್ತೆಯರು ಹಾಗೂ ಒಬ್ಬ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಬ್ದುಲ್‌ಖಾದರ್‌ ಶಿರಾಜುದ್ದೀನ್‌ ರೋಹಿಲೆ (41), ಅತ್ತಾವುಲ್‌ ಅಲಿಯಾಸ್ ಅತ್ತಾಮದ್‌ಸಮದ್‌ ಶಾಬುದ್ದೀನ್‌ ಕಮಾಲಖಾನ್‌ (26), ಆಸೀಫ್‌ ಅನ್ವರ ಪಾಶ್ಚಾಪೂರೆ (32), ಶಿರಾಜುದ್ದೀನ್‌ ಇಮಾಮಸಾಬ ಬಿಸ್ತಿ (50) ಹಾಗೂ ಮುಜಮ್ಮಿಲ್‌ ಶಿರಾಜುದ್ದೀನ್‌ ಬಿಸ್ತಿ (25) ಬಂಧಿತರು.

ನವದೆಹಲಿಯ ತಬ್ಲೀಗ್‌ ಜಮಾತ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿದ್ದ ಮೂವರು ಮಹಿಳೆಯರು ಸೇರಿದಂತೆ ನಾಲ್ವರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿತ್ತು. ಅವರು ವಾಸವಿದ್ದ ಪ್ರದೇಶಗಳ  ಜನರ ಆರೋಗ್ಯ ಮಾಹಿತಿ ಸಂಗ್ರಹಿಸಲು ಆಶಾ ಕಾರ್ಯಕರ್ತೆಯರಾದ ಹಾಲವ್ವಾ ಖಿಚಡೆ, ಛಾಯಾ ಪಾರ್ಥನಳ್ಳಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಅಂಜನಾ ಎನ್‌. ದೇಶಪಾಂಡೆ ತೆರಳಿದ್ದರು.

‘ಸುಮಾರು 15ಜನರ ಜೊತೆಗೂಡಿ ಆರೋಪಿಗಳು ತಮ್ಮನ್ನು ಅಡ್ಡಗಟ್ಟಿ, ವಿರೋಧ ವ್ಯಕ್ತಪಡಿಸಿದ್ದರು. ನಮ್ಮ ಬಳಿಯಿದ್ದ ಮೊಬೈಲ್‌ ಅನ್ನು ಕುಸಿದುಕೊಂಡು, ಕೈಯಲ್ಲಿದ್ದ ಕಾಗದಪತ್ರಗಳು ಹಾಗೂ ಇತರ ದಾಖಲೆ ಪತ್ರಗಳನ್ನು ಹರಿದುಹಾಕಿದರು. ಕೈ ಹಿಡಿದು ಎಳೆದಾಡಿದರು. ತಲೆಗೂದಲು ಜಗ್ಗಿ ಅವಮಾನಿಸಿದರು’ ಎಂದು ಅಂಜನಾ ದೇಶಪಾಂಡೆ ಪೊಲೀಸರಿಗೆ ದೂರು ನೀಡಿದರು. ದೂರು ದಾಖಲಿಸಿಕೊಂಡ ಕುಡಚಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.

ಮತ್ತೊಂದು ಪ್ರಕರಣ: ಇದೇ ಪಟ್ಟಣದ ಮತ್ತೊಂದು ಪ್ರಕರಣದಲ್ಲಿ ಆಶಾ ಕಾರ್ಯಕರ್ತೆಯರಿಬ್ಬರು ಹಾಗೂ ಒಬ್ಬ ಅಂಗನವಾಡಿ ಸಹಾಯಕಿಯರು ಸಂಗ್ರಹಿಸಿದ ದಾಖಲೆಗಳನ್ನು ಹರಿದುಹಾಕಿರುವುದು ವರದಿಯಾಗಿದೆ.

ಆಶಾ ಕಾರ್ಯಕರ್ತೆಯರಾದ ಸುನೀತಾ ಸಂಜೀವ ನಾಯಿಕ, ಯಲ್ಲವ್ವಾ ಭೀಮು ಧನಗರ ಹಾಗೂ ಅಂಗನವಾಡಿ ಸಹಾಯಕಿ ಜಯಶ್ರೀ ಪರಶುರಾಮ ಕಾಳೆ ಅವರು ಜನರ ಆರೋಗ್ಯದ ಮಾಹಿತಿ ಸಂಗ್ರಹಿಸಿ ಬರುತ್ತಿದ್ದಾಗ ಕೆಲವು ವ್ಯಕ್ತಿಗಳು ಅಡ್ಡಗಟ್ಟಿ, ದಾಖಲೆಗಳನ್ನು ಹರಿದುಹಾಕಿದ್ದಾರೆ ಎಂದು ಕುಡಚಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು