₹25.76 ಲಕ್ಷ ‘ಲಂಚದ ಹಣ’: ಪುಟ್ಟರಂಗ ಶೆಟ್ಟಿ ಸಚಿವ ಸ್ಥಾನಕ್ಕೆ ಕುತ್ತು?

7
ವಿಚಾರಣೆ ನಡೆಸಲಿರುವ ಎಸಿಬಿ

₹25.76 ಲಕ್ಷ ‘ಲಂಚದ ಹಣ’: ಪುಟ್ಟರಂಗ ಶೆಟ್ಟಿ ಸಚಿವ ಸ್ಥಾನಕ್ಕೆ ಕುತ್ತು?

Published:
Updated:

ಬೆಂಗಳೂರು: ‘ಲಂಚದ ಹಣ ಪ್ರಕರಣ’ ದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಅವರನ್ನು ವಿಚಾರಣೆಗೆ ಒಳಪಡಿಸಲು ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ) ತೀರ್ಮಾನಿಸಿದೆ. ಇದರಿಂದಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 

ಕಳೆದ ವಾರ ವಿಧಾನಸೌಧ ದ್ವಾರದಲ್ಲಿ ಪುಟ್ಟರಂಗಶೆಟ್ಟಿ ಅವರ ಕಚೇರಿಯ ಟೈಪಿಸ್ಟ್‌ ಎಸ್‌.ಜೆ. ಮೋಹನ್‌ ಕುಮಾರ್‌ ಅವರಿಂದ ₹ 25.76 ಲಕ್ಷ ಹಣವನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದರು.

ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ವಿಧಾನಸೌಧ ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ ಮೋಹನ್‌ ಕುಮಾರ್, ’ಇದು ಸಚಿವರಿಗೆ ತಲುಪಿಸಲು ಕೊಂಡೊಯ್ಯುತ್ತಿದ್ದ ಲಂಚದ ಹಣ’ ಎಂದಿದ್ದಾರೆ. ಆರೋಪಿ ಹೇಳಿಕೆ ಆಧಾರದಲ್ಲಿ ಸಚಿವರ ವಿಚಾರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹಿರಿಯ ಕ್ರಿಮಿನಲ್‌ ವಕೀಲರೊಬ್ಬರ ಪ್ರಕಾರ, ‘ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸಚಿವರಿಗೆ ನೋಟಿಸ್‌ ನೀಡಬಹುದು. ವಿಚಾರಣೆ ವೇಳೆ ತನಿಖಾಧಿಕಾರಿಯ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡದಿದ್ದರೆ, ಪ್ರಕರಣದಲ್ಲಿ ಅವರ ಪಾತ್ರ ಇದೆ ಎಂದು ಕಂಡುಬಂದರೆ ಅವರನ್ನು ಬಂಧಿಸಲು ಅವಕಾಶವಿದೆ. ಆದರೆ, ಬಂಧಿಸುವ ಮುನ್ನ ಮುಖ್ಯಮಂತ್ರಿ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿ ನೀಡಲು ಮುಖ್ಯಮಂತ್ರಿಗೆ ಮೂರು ತಿಂಗಳ ಕಾಲಾವಕಾಶವಿದೆ’.

‘ಸಚಿವರ ಬಂಧನಕ್ಕೆ ಮುಖ್ಯಮಂತ್ರಿ ಅನುಮತಿ ನೀಡದಿದ್ದರೂ ಬೇರೆ ವಿಧಾನದಲ್ಲಿ ತನಿಖೆ ಪೂರ್ಣಗೊಳಿಸಲು ಅವಕಾಶವಿದೆ. ಮುಖ್ಯಮಂತ್ರಿ ಒಪ್ಪಿಗೆ ದೊರೆಯಲಿ ಅಥವಾ ಬಿಡಲಿ ಸಚಿವರು ರಾಜೀನಾಮೆ  ಕೊಡಲೇಬೇಕು. ಆದರೆ, ಭಾರತ ದಂಡ ಸಂಹಿತೆ ಅಡಿ ಪ್ರಕರಣ ದಾಖಲಾದರೆ ಯಾರ ಅನುಮತಿಯೂ ಅಗತ್ಯವಿಲ್ಲ.  ಹೀಗಾಗಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಥವಾ ಭಾರತ ದಂಡ ಸಂಹಿತೆ’ ಇವೆರಡಲ್ಲಿ ಯಾವ ಕಾಯ್ದೆಯಡಿ ಪ್ರಕರಣ ದಾಖಲಾಗಲಿದೆ ಎಂಬುದು ಮುಖ್ಯ’ ಎಂದು ಅವರು ವಿವರಿಸಿದರು.

ಎರಡು ದಿನ ವಶಕ್ಕೆ: ಪ್ರಮುಖ ಆರೋಪಿ ಮೋಹನ್‌ ಕುಮಾರ್‌ ಅವರನ್ನು ಇಲ್ಲಿನ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಆರೋಪಿಯನ್ನು ಎರಡು ದಿನ ಎಸಿಬಿ ವಶಕ್ಕೆ ನೀಡಲಾಯಿತು. ಎರಡು ದಿನವೂ ಸತತವಾಗಿ ಮೋಹನ್‌ ಕುಮಾರ್‌ ವಿಚಾರಣೆ ನಡೆಯಲಿದೆ. ಸಚಿವರಿಗೆ ತಲುಪಿಸಲು ಮೋಹನ್‌ ಅವರಿಗೆ ಹಣ ನೀಡಿದ್ದರು ಎನ್ನಲಾದ ಗುತ್ತಿಗೆದಾರರಾದ ನಂದ, ಶ್ರೀನಿಧಿ, ಅನಂತು, ಕೃಷ್ಣಮೂರ್ತಿ ಅವರ ವಿಚಾರಣೆಗೂ ತಂಡಗಳನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !