ಮಂಗಳವಾರ, ಫೆಬ್ರವರಿ 18, 2020
16 °C

ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಿಸಿರುವ ಮಂಗನ ಕಾಯಿಲೆ: ಮೂಲ ಪತ್ತೆಗೆ ಹರಸಾಹಸ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಜಿಲ್ಲೆಯ 14 ಜನರಿಗೆ ಈ ಬಾರಿ ಮಂಗನಕಾಯಿಲೆ (ಕೆಎಫ್‌ಡಿ– ಕ್ಯಾಸನೂರು ಫಾರೆಸ್ಟ್ ಡಿಸೀಸ್) ಸೋಂಕು ತಗುಲಿದೆ.ಆದರೆ, ಆ ಪ್ರದೇಶಗಳಲ್ಲಿ ಸತ್ತು ಬಿದ್ದ ಮಂಗಗಳು, ಸಂಗ್ರಹಿಸಿದ ಉಣುಗುಗಳಲ್ಲಿ ರೋಗಾಣು ಕಂಡುಬಂದಿಲ್ಲ. ಇದು ಕಾಯಿಲೆ  ಮೂಲ ಪತ್ತೆ ಪರೀಕ್ಷೆಯನ್ನು ಜಟಿಲಗೊಳಿಸಿದೆ. 

ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ, ಭದ್ರಾವತಿ ತಾಲ್ಲೂಕು ವ್ಯಾಪ್ತಿಯಲ್ಲಿ ಮಂಗನಕಾಯಿಲೆ ಲಕ್ಷಣಗಳು ಕಂಡುಬಂದ 719 ಜನರ ರಕ್ತದ ಮಾದರಿಯನ್ನು ಪರೀಕ್ಷಿಸಲಾಗಿತ್ತು. ಅವರಲ್ಲಿ 14 ಜನರಲ್ಲಿ ಕಾಯಿಲೆ ದೃಢಪಟ್ಟಿದೆ.

ತೀರ್ಥಹಳ್ಳಿ ತಾಲ್ಲೂಕಿನ 12 ಹಾಗೂ ಸಾಗರದ ಇಬ್ಬರು ಕಾಯಿಲೆಗೆ ತುತ್ತಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. 13 ಜನರು ಗುಣಮುಖರಾಗಿದ್ದಾರೆ. ಸಾಗರ ತಾಲ್ಲೂಕಿನಲ್ಲಿ 376 ಹಾಗೂ ತೀರ್ಥಹಳ್ಳಿ ತಾಲ್ಲೂಕಿನಲ್ಲಿ 284 ಜನರ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ರೋಗ ಲಕ್ಷಣಗಳು ಕಾಣಿಸಿಕೊಂಡ ಮಂಡಗದ್ದೆ, ಕನ್ನಂಗಿ, ಬಸರವಾನಿ, ಕವಗಾರು, ತುಮರಿ, ಕಾರ್ಗಲ್‌ ಭಾಗಗಳಲ್ಲಿ ಸತ್ತಿದ್ದ ಮಂಗಗಳ ದೇಹದ ಭಾಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಕೆಲವು ಸ್ಯಾಂಪಲ್‌ಗಳನ್ನು ಪಶುವೈದ್ಯಕೀಯ ಕಾಲೇಜಿಗೂ ನೀಡಲಾಗಿತ್ತು. ಎರಡೂ ಪರೀಕ್ಷೆಗಳಲ್ಲೂ ಮಂಗಗಳು ಬೇರೆ ಬೇರೆ ಕಾರಣಗಳಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಸಂಗ್ರಹಿಸಿದ ಉಣುಗುಗಳಲ್ಲೂ ರೋಗ ಹರಡುವ ವೈರಸ್‌ ಪತ್ತೆಯಾಗಿಲ್ಲ. 

ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸುವ ಮಂಗಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ. ವೈರಸ್‌ ತಗುಲಿದರೆ ಬೇಗ ಸಾಯುತ್ತವೆ. ಸತ್ತು ಬಿದ್ದ ತಕ್ಷಣ ಮಂಗನ ದೇಹದ ಮೇಲಿದ್ದ ವೈರಸ್‌ ಹೊತ್ತ ಉಣ್ಣೆಗಳು (ಉಣುಗು) ಕಾಡಿನಲ್ಲಿ ಓಡಾಡುವ ಜನರಿಗೆ ಕಚ್ಚಿದರೆ ರೋಗ ಹರಡುತ್ತದೆ. ಸಾಯುವುದಕ್ಕೂ ಮೊದಲು ಮಂಗಗಳು ವಿಪರೀತ ನರಳಾಡುತ್ತವೆ. ಬಾಯಿ, ಜನನಾಂಗಗಳಿಂದ ರಕ್ತಸ್ರಾವವಾಗುತ್ತದೆ. ಮೊಲ, ಹೆಗ್ಗಣ, ಜಾನುವಾರು ಮೂಲಕವೂ ಉಣ್ಣೆಗಳು ಸಾಗಿ ಕಾಯಿಲೆ ಹರಡುತ್ತವೆ.ಕಾಯಿಲೆಗೆ ಕಾರಣವಾಗುವ ಈ ವೈರಸ್‌ ‘ಝೈಕಾ’ ಮತ್ತು ‘ಡೆಂಗಿ’ ಪ್ರಭೇದಕ್ಕೆ ಸೇರಿದೆ. ಈ ಆಧಾರದ ಮೇಲೆ ಕೆಎಫ್‌ಡಿ ನಿರೋಧಕ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಮೂರು ಹಂತಗಳಲ್ಲಿ ಈ ಲಸಿಕೆ ಹಾಕಲಾಗುತ್ತದೆ.

ನಿರ್ದಿಷ್ಟ ಔಷಧವೇ ಇಲ್ಲ!
ಸೊರಬ ತಾಲ್ಲೂಕು ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ 1956ರಲ್ಲಿ ಕಾಣಿಸಿಕೊಂಡು ಇಲ್ಲಿಯವರೆಗೂ 800 ಜನರನ್ನು ಬಲಿ ಪಡೆದ ಮಂಗನ ಕಾಯಿಲೆಗೆ ನಿರ್ದಿಷ್ಟ ಔಷಧ ಇಲ್ಲ. 

ರಷ್ಯಾದಲ್ಲೂ ರಷ್ಯನ್‌ ಸ್ಟ್ರಿಂಗ್‌–ಸಮ್ಮರ್ ಎನ್ಸೆಫಿಲಿಟೀಸ್‌ ಉಣ್ಣೆಯಿಂದ ಹರಡುವ ಕಾಯಿಲೆಗೂ, ಸೊರಬ ತಾಲ್ಲೂಕಿನ ಕ್ಯಾಸನೂರಿನಲ್ಲಿ ಕಂಡುಬಂದ ಕೆಎಫ್‌ಡಿಗೂ ಸಾಮ್ಯವಿತ್ತು. ಈ ಕುರಿತು ಮಹಾರಾಷ್ಟ್ರ ಮೂಲದ ಡಾ.ದಂಡಾವತಿ ಎಂಬುವವರು ಸಂಶೋಧನೆ ನಡೆಸಿದ್ದರು. ಆದರೆ, ಸೋಂಕಿತರಿಗೆ ಆರ್‌ಎಸ್‌ಇ ಸಂಬಂಧಿಸಿದ ಲಸಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ನಂತರ ಹೆಬ್ಬಾಳದ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ರೋಗ ನಿರೋಧಕ ಲಸಿಕೆಯನ್ನೇ ಇಲ್ಲಿಯವರೆಗೂ ಬಳಕೆ ಮಾಡಲಾಗುತ್ತಿದೆ. 

ಬ್ರಿಟನ್‌ನ ಯುಕೆ ಮೆಡಿಕಲ್‌ ರಿಸರ್ಚ್ ಕೌನ್ಸಿಲ್‌ನ ವೈದ್ಯರು ಮತ್ತು ತಜ್ಞರು ಜಿಲ್ಲೆಗೆ ಭೇಟಿ ನೀಡಿ, ಕಾಯಿಲೆ ಕುರಿತು ಸಂಶೋಧನೆ ನಡೆಸಿದ್ದಾರೆ. ಆದರೆ, ಫಲಿತಾಂಶ ಶೂನ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು