ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವೆಡೆ ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು

ಕಲ್ಯಾಣ ಕರ್ನಾಟಕದ ಕೆಲ ಗ್ರಾಮಗಳ ಸಂಪರ್ಕ ಕಡಿತ
Last Updated 28 ಜೂನ್ 2020, 22:25 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ರಾಜ್ಯದ ಮೈಸೂರು ಭಾಗ, ಮಲೆನಾಡು ಹಾಗೂ ಕಲ್ಯಾಣ ಕರ್ನಾಟಕದ ಹಲವೆಡೆ ಭಾನುವಾರ ಧಾರಾಕಾರ ಮಳೆಯಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿತಗ್ಗು ಪ್ರದೇಶದ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, 8 ಮನೆಗಳು ಭಾಗಶಃ ಕುಸಿದಿವೆ. ಈ ಭಾಗದಲ್ಲಿ 30 ಸೆಂ.ಮೀ. ಮಳೆಯಾಗಿದೆ. ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರು ನುಗ್ಗಿದೆ. ನಾಗರಕೆರೆ ಹಾಗೂ ಮಾವಿನಕೆರೆಗಳು ಭರ್ತಿಯಾಗಿವೆ.

ಯಾದಗಿರಿ ತಾಲ್ಲೂಕಿನ ಸೈದಾಪುರದಲ್ಲಿ ಸಂಗ್ವಾರ-ಗೊಂದಡಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಸೇತುವೆ ಸಂಪೂರ್ಣವಾಗಿ ಮಳೆಗೆ ಕೊಚ್ಚಿಹೋಗಿದೆ.

ರಾಯಚೂರು ತಾಲ್ಲೂಕಿನ ಇಡಪನೂರು ಗ್ರಾಮಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಹಳ್ಳದ ಸೇತುವೆ ಅರ್ಧ ಭಾಗ ಕೊಚ್ಚಿ ಹೋಗಿದೆ. ಶಕ್ತಿನಗರದಿಂದ ಕಾಡ್ಲೂರು ಮಾರ್ಗದಲ್ಲಿರುವ ರೈಲ್ವೆ ಕೆಳಸೇತುವೆಯಲ್ಲಿ ನೀರು ಸಂಗ್ರಹವಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ 2.2 ಸೆಂ.ಮೀ. ಮಳೆಯಾಗಿದೆ. ಚಿಕ್ಕಮಗಳೂರು, ಶೃಂಗೇರಿ, ಎನ್‌.ಆರ್‌.ಪುರ, ಬಾಳೆಹೊನ್ನೂರು, ಕೊಪ್ಪ ಮತ್ತು ಕಳಸ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಕರಾವಳಿ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನದಿಂದ ಮೋಡ ಮುಸುಕಿದ ವಾತಾವರಣ ಇದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ.

ಕಲಬುರ್ಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ವಿವಿಧೆಡೆ ಶನಿವಾರ ಮಧ್ಯರಾತ್ರಿ ಧಾರಾಕಾರ ಮಳೆ ಸುರಿದ ಕಾರಣ ಕೆಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಳ್ಳದ ಸೇತುವೆಗಳು ಕೊಚ್ಚಿ ಹೋಗಿವೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಹಾಲಹಿಪ್ಪರ್ಗಾ ಗ್ರಾಮದ ಹೊರವಲಯದಲ್ಲಿ ಹಳ್ಳದ ಸೇತುವೆಯ ತಡೆ ಗೋಡೆ ಕೊಚ್ಚಿ ಹೋಗಿದೆ. ಹಳ್ಳ ಉಕ್ಕಿ ಹರಿದು ಹೊಲದ ಮಣ್ಣು ಸಹ ಕೊಚ್ಚಿ ಹೋಗಿದೆ. ಬಿತ್ತನೆ ಮಾಡಿದ ಬೀಜ ನೀರು ಪಾಲಾಗಿದೆ.

ಕಲಬುರ್ಗಿ ನಗರ ಸೇರಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಜೇವರ್ಗಿ, ಅಫಜಲಪುರ, ಶಹಬಾದ್‌, ಯಡ್ರಾಮಿ ಕಮಲಾಪುರ ಮತ್ತು ಆಳಂದ ತಾಲ್ಲೂಕಿನ ಗ್ರಾಮಗಳಲ್ಲಿ ಮಳೆಯಾಗಿದೆ. ನಗರದ ಹಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದೆ. ಚಿಂಚೋಳಿ ತಾಲ್ಲೂಕಿನ ಕುಂಚಾವರಂನ ಹೊಲವೊಂದರಲ್ಲಿ ಭಾರಿ ಮಳೆ ಹಾಗೂ ಗಾಳಿಗೆ ಟೊಮೆಟೊ ಹಾಗೂ ಬೆಂಡೆ ಬೆಳೆಗಳಿಗೆ ಹಾನಿಯಾಗಿದೆ.

ಸಂಜೆ ಒಂದು ತಾಸು ಸುರಿದ ಧಾರಾಕಾರ ಮಳೆಗೆ ಮೈಸೂರು ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು. ಆನಂದನಗರದ ಕೆಲ ಮನೆಗಳಿಗೆ ನೀರು ನುಗ್ಗಿತು.

ಕೊಡಗು ಜಿಲ್ಲೆಯಲ್ಲೂ ಮುಂಗಾರು ಚುರುಕಾಗಿದೆ. ಮಡಿಕೇರಿ, ತಲಕಾವೇರಿ, ಭಾಗಮಂಡಲ, ನಾಪೋಕ್ಲು, ವಿರಾಜಪೇಟೆ ವ್ಯಾಪ್ತಿಯಲ್ಲಿ ಮಧ್ಯಾಹ್ನದ ನಂತರ ನಿರಂತರವಾಗಿ ಮಳೆಯಾಯಿತು.

ಹಾಸನ ಜಿಲ್ಲೆಯ ವಿವಿಧೆಡೆ ಅಲ್ಪ ಪ್ರಮಾಣದ ಮಳೆಯಾಗಿದೆ. ಚನ್ನರಾಯಪಟ್ಟಣ, ನುಗ್ಗೇಹಳ್ಳಿ, ಸಕಲೇಶಪುರ, ಶ್ರವಣಬೆಳಗೊಳದಲ್ಲಿ ಸಾಧಾರಣ ಮಳೆ ಸುರಿದಿದೆ. ಹಾಸನ ನಗರದಲ್ಲಿ ಒಂದು ತಾಸು ತುಂತುರು ಮಳೆಯಾಗಿದೆ.

ಚಾಮರಾಜನಗರ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಧ್ಯಾಹ್ನ ತುಂತುರು ಮಳೆಯಾಯಿತು. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಭಾನುವಾರ ಸಾಧಾರಣ ಮಳೆ ಆಗಿದೆ.

ಎಲ್ಲೆಲ್ಲಿ ಎಷ್ಟು ಮಳೆ?
ಯಾದಗಿರಿ ಜಿಲ್ಲೆ ಭೀಮರಾಯನ ಗುಡಿಯಲ್ಲಿ ಭಾನುವಾರ 12 ಸೆಂ.ಮೀ. ಗರಿಷ್ಠ ಮಳೆಯಾಗಿದೆ. ದೇವದುರ್ಗದಲ್ಲಿ 10 ಸೆಂ.ಮೀ., ಕಲಬುರ್ಗಿ 11, ಕುಂದಾಪುರ 8, ಪಣಂಬೂರು, ಉಡುಪಿ, ಕೊಲ್ಲೂರು 4, ಕೋಟ, ಗೋಕರ್ಣ, ನಿಪ್ಪಾಣಿ, ಚಿಂಚೋಳಿ, ಹೊಸನಗರ, ಮೊಳಕಾಲ್ಮೂರು 3, ಭಟ್ಕಳ, ಮುದ್ದೇಬಿಹಾಳ, ಸಿಂಧನೂರು, ಕೊಟ್ಟಿಗೆಹಾರ, ಭರಮಸಾಗರ 2 ಸೆಂ.ಮೀ. ಮಳೆಯಾಗಿದೆ. ಧರ್ಮಸ್ಥಳ, ಉಪ್ಪಿನಂಗಡಿ, ಸುಳ್ಯ, ಸೋಮವಾರಪೇಟೆ ಹಾಗೂ ಚಾಮರಾಜನಗರದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಜುಲೈ 3ರವರೆಗೆ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಜುಲೈ 3ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.

ಬೀದರ್, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಜುಲೈ.1ರಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT