ಶುಕ್ರವಾರ, ಏಪ್ರಿಲ್ 23, 2021
31 °C

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವಿರುದ್ಧ ಹೇಳಿಕೆ: ಮುನಿಯಪ್ಪ ಬಣದ 7 ಮಂದಿ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಆರೋಪ ಮಾಡಿ ವರಿಷ್ಠರಿಗೆ ದೂರು ನೀಡುವುದಾಗಿ ಹೇಳಿದ್ದ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪರ ಬಣದ ಏಳು ಮಂದಿ ಮುಖಂಡರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಕೋಲಾರ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕುಮಾರ್‌, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅತಾವುಲ್ಲಾ ಖಾನ್‌, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಇಕ್ಬಾಲ್‌ ಅಹಮ್ಮದ್‌, ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್‌, ಎಸ್‌ಟಿ ಘಟಕದ ಅಧ್ಯಕ್ಷ ನಾಗರಾಜ್‌ ಮತ್ತು ಪಕ್ಷದ ಸದಸ್ಯ ಎಲ್.ಕಲೀಲ್‌ ಅವರನ್ನು ಅಮಾನತು ಮಾಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಅಮಾನತುಗೊಂಡಿರುವ 7 ಮಂದಿಯೂ ಕೆ.ಎಚ್‌.ಮುನಿಯಪ್ಪರ ಬಣದಲ್ಲಿ ಗುರುತಿಸಿಕೊಂಡಿದ್ದು, ಲೋಕಸಭಾ ಚುನಾವಣೆ ಸೋಲಿನ ಸಂಬಂಧ ಜಿಲ್ಲಾ ಕೇಂದ್ರದಲ್ಲಿ ಗುರುವಾರ (ಅ.17) ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿರುದ್ಧ ಹೇಳಿಕೆ ನೀಡಿದ್ದರು.

ಅಲ್ಲದೇ, ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್‌.ಮುನಿಯಪ್ಪರ ಸೋಲಿಗೆ ಕಾಂಗ್ರೆಸ್‌ ಶಾಸಕರಾದ ಕೆ.ಆರ್‌.ರಮೇಶ್‌ಕುಮಾರ್‌, ವಿ.ಮುನಿಯಪ್ಪ, ಎಸ್‌.ಎನ್‌.ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮ್ಮದ್‌, ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಕಾರಣರೆಂದು ಆರೋಪಿಸಿದ್ದರು. ಜತೆಗೆ ರಮೇಶ್‌ಕುಮಾರ್‌ ಬಣದ ವಿರುದ್ಧ ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿಗೆ ದೂರು ನೀಡಿ ಪಕ್ಷದಿಂದ ಉಚ್ಛಾಟಿಸುವಂತೆ ಆಗ್ರಹಿಸಿದ್ದರು.

ಇದೀಗ ಈ ನಾಯಕರಿಗೆ ತಮ್ಮ ಹೇಳಿಕೆಯೇ ತಿರುಗು ಬಾಣವಾಗಿದೆ. ಈ 7 ಮುಖಂಡರೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರೆಲ್ಲರನ್ನೂ ಅಮಾನತು ಮಾಡಲಾಗಿದೆ ಎಂದು ಘೋರ್ಪಡೆ ಆದೇಶದಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು