ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಪಾಠ: ಅಲ್ಲಿ ಬರೀ ಬಿಸಿಯೂಟ! ನಿತ್ಯ ನಡೆಯುವುದು ಅನಿವಾರ್ಯ

Last Updated 16 ಫೆಬ್ರುವರಿ 2020, 21:16 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್‌ ತಾಲ್ಲೂಕು ನರೇಗಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 80 ಮಕ್ಕಳು ಬಿಸಿಯೂಟಕ್ಕಾಗಿ ತಟ್ಟೆ–ಲೋಟ ಹಿಡಿದು ಬಿಸಿಲಿನಲ್ಲಿ ನಿತ್ಯ ಒಂದು ಕಿಲೊಮೀಟರ್‌ ನಡೆಯಬೇಕು!

6 ಮತ್ತು 7ನೇ ತರಗತಿಯ ಮಕ್ಕಳು ನಿತ್ಯ ಬೆಳಿಗ್ಗೆ ಮೂಲಶಾಲೆಗೆ (ಸರ್ಕಾರಿ ಶಾಲೆ) ಬಂದು ಪ್ರಾರ್ಥನೆ ಸಲ್ಲಿಸಿ, ನಂತರ ಪಾಠಕ್ಕಾಗಿ ಗ್ರಾಮದಿಂದ ಅರ್ಧ ಕಿಲೊಮೀಟರ್‌ ದೂರದಲ್ಲಿರುವ ಉರ್ದು ಪ್ರೌಢಶಾಲೆಗೆ ನಡೆದುಕೊಂಡು ಹೋಗಬೇಕು. ಮತ್ತೆ ಮಧ್ಯಾಹ್ನ ಬಿಸಿಯೂಟಕ್ಕಾಗಿ ಮೂಲಶಾಲೆಗೆ ಬರಬೇಕು. ಊಟ ಮುಗಿಸಿ ಮತ್ತೆ ಉರ್ದು ಶಾಲೆಗೆ ಹೋಗಬೇಕು.

ಈ ಸರ್ಕಾರಿ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ 279 ಮಕ್ಕಳು ವ್ಯಾಸಂಗ ಮಾಡುತ್ತಿವೆ. ಒಟ್ಟು 12 ಕೊಠಡಿಗಳಲ್ಲಿ ಸಂಪೂರ್ಣ ಶಿಥಿಲಗೊಂಡಿದ್ದ 7 ಕೊಠಡಿಗಳನ್ನು ಸರ್ಕಾರದ ಆದೇಶದಂತೆ 2017ರಲ್ಲಿ ನೆಲಸಮಗೊಳಿಸಲಾಗಿದೆ.

ನಾಲ್ಕು ಕೊಠಡಿ ಮತ್ತು ಸಮೂಹ ಸಂಪನ್ಮೂಲ ಕೇಂದ್ರದ ಒಂದು ಕೊಠಡಿಯಲ್ಲಿ 1 ರಿಂದ 5ನೇ ತರಗತಿಯ ಮಕ್ಕಳು ಕಲಿಯುತ್ತಿದ್ದಾರೆ. 6 ಮತ್ತು 7ನೇ ತರಗತಿಯ ಮಕ್ಕಳಿಗೆ ಕೊಠಡಿಯೇ ಇಲ್ಲದಂತಾಗಿದೆ.

‘ಗ್ರಾಮದ ಸೋಮಲಿಂಗೇಶ್ವರ ದೇವಾಲಯ, ವಿರಕ್ತಮಠದ ಆವರಣದಲ್ಲಿ ಮಕ್ಕಳಿಗೆ ಎರಡು ವರ್ಷ ಪಾಠ ಮಾಡಲಾಯಿತು. ನಂತರ, ಗ್ರಾಮದ ಹೊರವಲಯದಲ್ಲಿರುವ ಉರ್ದು ಪ್ರೌಢಶಾಲೆಯ 2 ಕೊಠಡಿಗಳಲ್ಲಿ (ಒಂದೂವರೆ ವರ್ಷದಿಂದ) ಮಕ್ಕಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ’ ಎನ್ನುತ್ತಾರೆ ಎಸ್‌ಡಿಎಂಸಿ ಸದಸ್ಯರು.

‘279 ಮಕ್ಕಳಿಗೆ ಇರುವುದು ಎರಡೇ ಶೌಚಾಲಯ. ನೀರಿನ ಸಂಪರ್ಕವಿಲ್ಲದೆ ಗಬ್ಬುನಾರುತ್ತಿವೆ. ಕುಡಿಯಲು ನೀರಿಲ್ಲದೆ ಮಕ್ಕಳು ಮನೆಯಿಂದಲೇ ಬಾಟಲಿಗಳಲ್ಲಿ ನೀರು ತರುತ್ತಾರೆ. ಕಾಂಪೌಂಡ್‌ ಇಲ್ಲದಿರುವುದರಿಂದ ದನ–ಕರುಗಳ ಹಾವಳಿ ಜಾಸ್ತಿಯಾಗಿದೆ. ಕೆಲವರು ಮೈದಾನಕ್ಕೆ ತಂದು ತ್ಯಾಜ್ಯ ಸುರಿಯುತ್ತಾರೆ. ಕಿಡಿಗೇಡಿಗಳು ರಾತ್ರಿ ವೇಳೆ ಶಾಲಾ ಆವರಣದಲ್ಲಿ ಮದ್ಯದ ಬಾಟಲಿ ಎಸೆದು ಹೋಗುತ್ತಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡು ಮೂಲಸೌಕರ್ಯ ಕಲ್ಪಿಸಬೇಕು’ ಎನ್ನುತ್ತಾರೆ ಎಸ್‌ಡಿಎಂಸಿ ಉಪಾಧ್ಯಕ್ಷ ಕುಬೇರಪ್ಪ ಉಜ್ಜಿನಶೆಟ್ಟು.

‘ಈ ಶಾಲೆಗೆ ಮೂರು ಹೊಸ ಕೊಠಡಿಗಳಿಗೆ ಮಂಜೂರಾತಿ ಸಿಕ್ಕಿದೆ. ಅದರಲ್ಲಿ ಎರಡು ಕೊಠಡಿಗಳು ಉರ್ದು ಶಾಲೆ ಹೆಸರಲ್ಲಿ ಬಂದಿವೆ. ಹೀಗಾಗಿ ತಿದ್ದುಪಡಿ ಮಾಡಲು ಡಿಡಿಪಿಐ ಮುಖಾಂತರ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಇದುವರೆಗೂ ಆದೇಶವಿಲ್ಲದೆ, ಹೊಸಕಟ್ಟಡಗಳ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸಮಸ್ಯೆ ಆಲಿಸಲು ಇಲಾಖೆ ಅಧಿಕಾರಿಗಳೇ ಬರುತ್ತಿಲ್ಲ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಸತೀಶ ಕುರುಬರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT