ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಆಲಮಟ್ಟಿ ಜಲಾಶಯದ ಹಿನ್ನೀರಲ್ಲಿ ದೇಶ– ವಿದೇಶದ ಪಕ್ಷಿಗಳ ಕಲರವ

ಸಂರಕ್ಷಿತ ಪ್ರದೇಶ; ಪ್ರಸ್ತಾವಕ್ಕೆ ಸಿದ್ಧತೆ
Last Updated 31 ಮೇ 2020, 2:55 IST
ಅಕ್ಷರ ಗಾತ್ರ

ಬಾಗಲಕೋಟೆ:ದೇಶ–ವಿದೇಶಗಳಿಂದ ಬಂದು ಪ್ರತಿ ವರ್ಷ ಚಳಿಗಾಲದಲ್ಲಿ ಇಲ್ಲಿನ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಸಮಾವೇಶಗೊಳ್ಳುವ ಪಕ್ಷಿಗಳ ಸಮೂಹಕ್ಕೆ ಇನ್ನು ಮುಂದೆ ಅರಣ್ಯ ಇಲಾಖೆಯಿಂದ ರಕ್ಷಣೆಯ ಬಲ ದೊರಕಲಿದೆ.

ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿಯ ಹಿನ್ನೀರಿನಲ್ಲಿರುವ ಪಕ್ಷಿಗಳ ಪ್ರಮುಖ ಆವಾಸ ಸ್ಥಾನಗಳನ್ನು ‘ಸಂರಕ್ಷಿತ ಪ್ರದೇಶ’ ಎಂದು ಘೋಷಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಅದಕ್ಕೆ ನೀಲನಕ್ಷೆ ಸಿದ್ಧಪಡಿಸಲು ಬೆಂಗಳೂರಿನ ಜಿ.ಕೆ.ವಿ.ಕೆಯ ನಿವೃತ್ತ ವಿಜ್ಞಾನಿ, ಪಕ್ಷಿತಜ್ಞ ಡಾ.ಎಸ್.ಸುಬ್ರಹ್ಮಣ್ಯ ಅವರ ನೆರವು ಪಡೆದಿದೆ.

ಹಿನ್ನೀರು ಪ್ರದೇಶದ ಬೀಳಗಿ ತಾಲ್ಲೂಕಿನ ಹೆರಕಲ್, ಬಾಗಲಕೊಟೆ ತಾಲ್ಲೂಕು ಮಲ್ಲಾಪುರ ಹಾಗೂ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಬೇನಾಳ ಭಾಗದಲ್ಲಿ ಪ್ರತಿ ವರ್ಷ ಮಧ್ಯ ಏಷ್ಯಾ ಹಾಗೂ ಪೂರ್ವ ಏಷ್ಯಾ ಹಾರಾಟದ ಹಾದಿಯಿಂದ (ಫ್ಲೈವೇ) ಪಕ್ಷಿಗಳು ಬರುತ್ತಿವೆ.

ಬೀಳಗಿ ತಾಲ್ಲೂಕಿನ ಹಳೇರೊಳ್ಳಿ ಗ್ರಾಮದ ಬಳಿ ಕೃಷ್ಣಾ ನದಿ ಎರಡು ಕವಲಾಗಿ ಹರಿಯುತ್ತದೆ. ಅಲ್ಲಿ ಸುಮಾರು ಎರಡು ಸಾವಿರ ಹೆಕ್ಟೇರ್ ಪ್ರದೇಶ ದ್ವೀಪವಾಗಿ (ಸೆಂಟ್ರಲ್ ಐಲ್ಯಾಂಡ್) ಮಾರ್ಪಟ್ಟಿದೆ. ಇಲ್ಲಿದ್ದ ಏಳು ಹಳ್ಳಿಗಳ ಜನವಸತಿಯನ್ನು ಸ್ಥಳಾಂತರಿಸಿದ ನಂತರ ಆ ಪ್ರದೇಶವು ಪಕ್ಷಿಗಳಿಗೆ ಆವಾಸ ಸ್ಥಾನವಾಗಿದೆ.

‘ಜಲಾಶಯ ವ್ಯಾಪ್ತಿಯನ್ನು ಸಂರಕ್ಷಣಾ ಪ್ರದೇಶ ಎಂದು ಘೋಷಿಸಲಾಗದು. ದ್ವೀಪವನ್ನು ಕೇಂದ್ರವಾಗಿ ಇರಿಸಿಕೊಂಡು ಸುತ್ತಲಿನ ಸ್ಥಳಗಳ ರಕ್ಷಿಸಲಿದ್ದೇವೆ. ವಾರದಲ್ಲಿಯೇ ಇದರ ವ್ಯಾಪ್ತಿ ಅಂತಿಮಗೊಳ್ಳಲಿದೆ’ ಎಂದು ಬೀಳಗಿ ವಲಯ ಅರಣ್ಯಾಧಿಕಾರಿ ಹನುಮಂತ ದೋಣಿ ಹೇಳುತ್ತಾರೆ.

ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಏಪ್ರಿಲ್ ಎರಡನೇ ವಾರದವರೆಗೆ ವಲಸೆ ಪಕ್ಷಿಗಳು ಹಿನ್ನೀರಿಗೆ ಬರುತ್ತವೆ. ಈ ವೇಳೆ ಚಳಿ–ಬಿಸಿಲಿನ ಜುಗಲ್‌ಬಂದಿ ಸಂತಾನ ವೃದ್ಧಿಗೆ ಪ್ರಶಸ್ತವಾಗಿರುತ್ತದೆ.

ಶೇ 30ರಷ್ಟು ವಿದೇಶಿ ಅತಿಥಿಗಳು
‘ಕಳೆದ ಮಾರ್ಚ್‌ನಲ್ಲಿ ಹಿನ್ನೀರ ಅಂಚಿನ 100 ಕಿ.ಮೀ ವ್ಯಾಪ್ತಿಯಲ್ಲಿ ನಡೆದ ಸಮೀಕ್ಷೆಯಲ್ಲಿ 50 ಸಾವಿರಕ್ಕೂ ಹೆಚ್ಚು ಪ‍ಕ್ಷಿಗಳು ಕಾಣಸಿಕ್ಕಿವೆ. 71 ಪ್ರಭೇದ ಗುರುತಿಸಲಾಗಿದೆ. ಅವುಗಳಲ್ಲಿ ಶೇ 30ರಷ್ಟು ವಿದೇಶಿ ಅತಿಥಿಗಳು‘ ಎಂದು ಡಾ.ಎಸ್.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಓರಿಯಂಟಲ್ ಪ್ರಾಟಿಂಕೋಲ್ ಎಂಬ ಪುಟ್ಟ ಹಕ್ಕಿ ಆಸ್ಟ್ರೇಲಿಯಾದಿಂದ 11 ಸಾವಿರ ಕಿ.ಮೀ ದೂರ ಸಾಗಿ ಬರುತ್ತದೆ. ಅದು ಇಲ್ಲಿನ ಕಾಯಂ ಅತಿಥಿ ಎಂಬುದು ಸಮೀಕ್ಷೆ ವೇಳೆ ಗೊತ್ತಾಗಿದೆ ಎನ್ನುತ್ತಾರೆ.

*
ಸಂರಕ್ಷಿತ ಪ್ರದೇಶದ ಮನ್ನಣೆ ಸಿಕ್ಕರೆ ಪಕ್ಷಿಗಳ ಬೇಟೆ ತಡೆಯಬಹುದು. ಅಧ್ಯಯನ ಅವಕಾಶದ ಜೊತೆಗೆ ಪರಿಸರ ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ.
–ದೇವರಾಜ, ಡಿಸಿಎಫ್, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT