ರಾಮ ಮಂದಿರ ನಿರ್ಮಿಸಲು ಸುಪ್ರೀಂನ ತೀರ್ಪು ಕಾಯಲು ಸಾಧ್ಯವಿಲ್ಲ: ಪೇಜಾವರ ಶ್ರೀ

7

ರಾಮ ಮಂದಿರ ನಿರ್ಮಿಸಲು ಸುಪ್ರೀಂನ ತೀರ್ಪು ಕಾಯಲು ಸಾಧ್ಯವಿಲ್ಲ: ಪೇಜಾವರ ಶ್ರೀ

Published:
Updated:
Deccan Herald

ಸೀತೂರು (ಎನ್.ಆರ್.ಪುರ): ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಸುಪ್ರೀಂ ಕೋರ್ಟ್‌ನ ತೀರ್ಪು ಕಾಯಲು ಸಾಧ್ಯವಿಲ್ಲ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಎಲ್ಲಾ ಹಿಂದೂಗಳ ಆಗ್ರಹವಾಗಿದೆ. ಅಲ್ಲಿಯೇ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಪ್ರಧಾನಮಂತ್ರಿಯನ್ನು ಒತ್ತಾಯಿಸುತ್ತೇವೆ’ ಎಂದರು.

‘ರಾಮ ಮಂದಿರ ನಿರ್ಮಾಣ ನಮ್ಮ ಆದ್ಯತೆಯಲ್ಲ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ತಿಳಿಸಿದೆ. ರಾಮ ಮಂದಿರ ನಿರ್ಮಿಸಬೇಕು ಎಂಬುದು ದೇಶದ ಕೋಟ್ಯಂತರ ಜನರ ಆಗ್ರಹವಾಗಿದೆ. ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗೊತ್ತುವಳಿ ಮಂಡಿಸಿ ಸುಗ್ರೀವಾಜ್ಞೆ ಹೊರಡಿಸಬೇಕು. ಅದಾಗದಿದ್ದರೆ ಕೇಂದ್ರ ಸರ್ಕಾರ ನ್ಯಾಯಾಲಯದ ಹೊರಗೆ ಎರಡೂ ಧರ್ಮದ ಮುಖಂಡರನ್ನು ಕರೆಯಿಸಿ ಸಂಧಾನ ಸಭೆ ನಡೆಸಬೇಕು’ ಎಂದು ಶ್ರೀಗಳು ಸಲಹೆ ನೀಡಿದರು.

ಸಂಪ್ರದಾಯಕ್ಕೆ ಗೌರವ ನೀಡಬೇಕು: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಹಿಳೆಯರಿಗೂ ಪ್ರವೇಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಉದ್ಭವಿಸಿದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಸ್ವಾಮೀಜಿ, ‘ಹಲವು ದೇವಸ್ಥಾನಗಳಲ್ಲಿ ವಿವಿಧ ಸಂಪ್ರದಾಯಗಳಿರುತ್ತವೆ. ಕೃಷ್ಣ, ರಾಮ, ಗಣಪತಿ ದೇವಾಲಯಗಳಲ್ಲಿ ಸ್ತ್ರೀಯರಿಗೆ ಮುಕ್ತ ಪ್ರವೇಶವಿದೆ. ಆದರೆ, ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಸಂಪ್ರದಾಯವಿದೆ. ಯಾವುದೇ ಸರ್ಕಾರವಾಗಲಿ ಸಂಪ್ರದಾಯಕ್ಕೆ ಗೌರವ ನೀಡಬೇಕು’ ಎಂದರು.

ಮುಸ್ಲಿಮರು ಕೈಜೋಡಿಸಲಿ: ಮಂತ್ರಾಲಯ ಶ್ರೀ ಹೇಳಿಕೆ
‘ಕೋಟ್ಯಂತರ ಹಿಂದೂಗಳ ಸಂಕಲ್ಪವಾದ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಲೇಬೇಕು’ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಪ್ರತಿಪಾದಿಸಿದರು.

ಆನೆಗೊಂದಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುವುದು ಕೋಟ್ಯಂತರ ಹಿಂದುಗಳ ಭಾವನೆ. ಈ ವಿಚಾರಕ್ಕೆ ಶತಮಾನಗಳಿಂದ ಕನಸು ಕಾಣುತ್ತಿದ್ದಾರೆ. ಶಾಂತಿ, ಸಾಮರಸ್ಯಕ್ಕೆ ಹೆಸರಾದ ನಾಡಿನಲ್ಲಿ ಮಂದಿರ ನಿರ್ಮಾಣಕ್ಕೆ ಮುಸ್ಲಿಮರೂ ಹಿಂದೂಗಳ ಜೊತೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘ಮಂದಿರ ನಿರ್ಮಾಣಕ್ಕೆ ಈಗ ಕಾಲ ಪಕ್ವವಾಗಿದೆ. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಪ್ರೀತಿ, ವಿಶ್ವಾಸ ಪೂರ್ವಕವಾಗಿ ಹಿಂದೂಗಳ ಭಾವನೆಯನ್ನು ಗೌರವಿಸುವ ಮೂಲಕ ಆಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣಕ್ಕೆ ಸಹಕಾರ ನೀಡಬೇಕು’ ಎಂದು ಕೋರಿದರು.

ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಮಠಕ್ಕೆ ಆಂಧ್ರಪ್ರದೇಶದ ಜಾರಿ ಮತ್ತು ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿದೆ ಎಂಬ ವದಂತಿ ಮಾಧ್ಯಮಗಳಲ್ಲಿ ವರದಿ ರೂಪದಲ್ಲಿ ಪ್ರಸಾರವಾಗುತ್ತಿದೆ. ಈ ವರದಿಯಲ್ಲಿ ಹುರಳಿಲ್ಲ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

ಮಠದಲ್ಲಿ ಯಾವುದೇ ಹಣಕಾಸಿನ ಅಥವಾ ಲೆಕ್ಕಪತ್ರದ ಅವ್ಯವಹಾರ ನಡೆಯುತ್ತಿಲ್ಲ. ಎಲ್ಲವೂ ಕಾನೂನು ಬದ್ಧವಾಗಿಯೇ ನಡೆಯುತ್ತಿದೆ ಎಂದು ಆಂಧ್ರದ ಧಾರ್ಮಿಕ ಮತ್ತು ದತ್ತಿ ಇಲಾಖೆ ಪತ್ರ ಕಳಿಸಿದೆ. ವರ್ಷಕ್ಕೆ ಮೂರು ನಾಲ್ಕು ಬಾರಿ ಇದು ಸಹಜ ಪ್ರಕ್ರಿಯೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !