ಶನಿವಾರ, ಅಕ್ಟೋಬರ್ 31, 2020
24 °C

ಒಳನೋಟ| ನೀರು ನಿರ್ವಹಣೆ ಕಡೆಗಣಿಸಿದ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಿನ ಸದ್ಬಳಕೆ ಮತ್ತು ನೀರಿನ ಮೂಲಗಳ ಸಂರಕ್ಷಣೆಯನ್ನು ಕರ್ನಾಟಕ ಸರ್ಕಾರ ಕಡೆಗಣಿಸಿದೆ. ರಾಜ್ಯದಲ್ಲಿ ಬರದ ಪರಿಸ್ಥಿತಿ ತಲೆದೋರಲು ಇವೂ ಪ್ರಮುಖ ಕಾರಣಗಳು. ಈ ಎರಡೂ ಕ್ಷೇತ್ರಗಳಲ್ಲಿ ಸುಧಾರಿಸಲು ಕರ್ನಾಟಕವು ಕೈಗೊಂಡಿರುವ ಕ್ರಮಗಳು ಏನಕ್ಕೂ ಸಾಲದು ಎಂದು ನೀತಿ ಆಯೋಗವು ತನ್ನ, ‘ನೀರಿನ ನಿರ್ವಹಣೆ ಸೂಚ್ಯಂಕ ವರದಿ–2019’ರಲ್ಲಿ ಹೇಳಿದೆ. ಈ ಸೂಚಿಯಲ್ಲಿ ನಿಗದಿ ಮಾಡಲಾಗಿದ್ದ ಗರಿಷ್ಠ 100 ಅಂಕಗಳಲ್ಲಿ ಕರ್ನಾಟಕವು ಕೇವಲ 56.5 ಅಂಕಗಳನ್ನು ಪಡೆದಿದೆ. ವಿವಿಧ ಸೂಚಿಗಳಲ್ಲಿ ರಾಜ್ಯವು ಪಡೆದ ಅಂಕ ತೀರಾ ಕಡಿಮೆ

1. ನೀರಿನ ಮೂಲಗಳ ಜೀರ್ಣೋದ್ಧಾರ ಮತ್ತು ಬಳಕೆ

ಕೃಷಿ ನೀರಾವರಿಗಾಗಿ ಅಂತರ್ಜಲದ ಮೊರೆ ಹೋಗದೆ, ಭೂಮಿಯ ಮೇಲ್ಮೈನಲ್ಲಿನ ನೀರಿನ ಮೂಲಗಳಾದ ನದಿ–ಕೆರೆ, ಹೊಂಡಗಳಲ್ಲಿನ ನೀರನ್ನು ಬಳಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕಿತ್ತು. ಆದರೆ, ಅಂತರ್ಜಲದ ಬಳಕೆ ವಿಪರೀತ ಪ್ರಮಾಣದಲ್ಲಿದೆ. ನೀರಿನ ಮೇಲ್ಮೈ ಮೂಲಗಳ ಜೀರ್ಣೋದ್ಧಾರ ಮತ್ತು ಬಳಕೆಯನ್ನು ಕಡೆಗಣಿಸಲಾಗಿದೆ. ಇಂತಹ ಜಲಮೂಲಗಳ ಮರುಪೂರಣ ಕಾರ್ಯವನ್ನು ಕಡೆಗಣಿಸಲಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಕುಡಿಯುವ ನೀರಿಗೂ ತತ್ವಾರ ಬರಲಿದೆ

5 ಗರಿಷ್ಠ ಅಂಕಗಳು

2.6 ಕರ್ನಾಟಕದ ಅಂಕಗಳು

***

2. ಅಂತರ್ಜಲ ಮರುಪೂರಣ

ರಾಜ್ಯದಲ್ಲಿ ಅಂತರ್ಜಲ ಬಳಕೆ ವಿಪರೀತವಾಗಿದ್ದು, ಇದರ ಮೇಲೆ ಯಾವುದೇ ನಿಯಂತ್ರಣವಿಲ್ಲ. ಗುಜರಾತ್, ಪಂಜಾಬ್‌ಗಳು ಕೃಷಿ ಮತ್ತು ವಾಣಿಜ್ಯ ಉದ್ದೇಶಕ್ಕೆ ಅಂತರ್ಜಲ ಬಳಸುವುದರ ಮೇಲೆ ನಿಯಮಾವಳಿಗಳನ್ನು ರಚಿಸಿವೆ. ಆದರೆ, ಕರ್ನಾಟಕದಲ್ಲಿ ಇಂತಹ ಯಾವುದೇ ಕಾನೂನು ಇಲ್ಲ. ಅಂತರ್ಜಲ ಮರುಪೂರಣವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ

15 ಗರಿಷ್ಠ ಅಂಕಗಳು

6.2 ಕರ್ನಾಟಕ ಪಡೆದ ಅಂಕಗಳು

***

3. ನೀರಾವರಿ ಯೋಜನೆಗಳು

ಕುಡಿಯುವ ನೀರು ಮತ್ತು ಕೃಷಿಗೆ ನೀರನ್ನು ಒದಗಿಸಲು ಕರ್ನಾಟಕವು ಹಲವು ಬೃಹತ್ ಮತ್ತು ಮಧ್ಯಮ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಆದರೆ, ನೀರಿನ ಹಂಚಿಕೆಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹಲವು ಯೋಜನೆಗಳ ಕಾಮಗಾರಿಗಳು ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ. ಕೊನೆಯ ಬಳಕೆದಾರನಿಗೆ ನೀರು ಪೂರೈಕೆ ವಿಧಾನ ವ್ಯವಸ್ಥಿತವಾಗಿಲ್ಲ. ಇದರ ಮೇಲೆ ಪರಿಣಾಮಕಾರಿ ನಿಗಾವಣೆ ಇಲ್ಲ. ಲಭ್ಯವಿರುವ ನೀರನ್ನು ಕೃಷಿಗೆ ಬಳಸಿಕೊಳ್ಳುವ ಅವಕಾಶವಿದ್ದರೂ, ಗರಿಷ್ಠ ಪ್ರಮಾಣದ ಬಳಕೆ ಆಗುತ್ತಿಲ್ಲ.

15 ಗರಿಷ್ಠ ಅಂಕಗಳು

9.2 ಕರ್ನಾಟಕ ಪಡೆದ ಅಂಕಗಳು

***

4. ಜಲಾನಯನ ಪ್ರದೇಶಗಳ ಅಭಿವೃದ್ಧಿ

ರಾಜ್ಯದಲ್ಲಿ ಹರಿಯುವ ನದಿಗಳ ಜಲಾನಯನ ಪ್ರದೇಶಗಳಲ್ಲಿ ಇರುವ ಜಲಮೂಲಗಳ ಸಂರಕ್ಷಣೆಯನ್ನು ಕಡೆಗಣಿಸಲಾಗಿದೆ. ಜಲಾನಯನ ಪ್ರದೇಶಗಳಲ್ಲಿ ಇರುವ ಕೆರೆ–ಕಟ್ಟೆಗಳು, ರಾಜಕಾಲುವೆಗಳ ಒತ್ತುವರಿ ನಡೆದಿದೆ. ಇದರಿಂದ ಮಳೆ ನೀರಿನ ಇಂಗುವಿಕೆ ಅಪಾಯಕಾರಿ ಮಟ್ಟದಲ್ಲಿ ಕುಸಿದಿದೆ. ಮಳೆ ನೀರಿನ ಸಂಗ್ರಹಕ್ಕೆ ರಾಜ್ಯವು ಆದ್ಯತೆ ನೀಡಬೇಕಿದೆ

10 ಗರಿಷ್ಠ ಅಂಕಗಳು

5.5 ಕರ್ನಾಟಕ ಪಡೆದ ಅಂಕಗಳು

***

5. ನೀರಾವರಿ ಸದ್ಬಳಕೆ ಅಭ್ಯಾಸಗಳು

ನೀರಾವರಿ ಯೋಜನೆಗಳ ಅಂತಿಮ ಹಂತದ ಬಳಕೆದಾರರಾದ ರೈತರಲ್ಲಿ ನೀರಿನ ಸದ್ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮತ್ತು ಹಳ್ಳಿ–ಹಳ್ಳಿಗಳಲ್ಲಿ ನೀರಿನ ಬಳಕೆದಾರರ ಸಂಘಗಳನ್ನು ರಚಿಸಬೇಕಿತ್ತು. ರಾಜ್ಯದ ಕೆಲವೆಡೆ ಮಾತ್ರ ಇಂತಹ ಸಂಘಗಳು ಇವೆ. ಆದರೆ ಎಲ್ಲಾ ಫಲಾನುಭವಿಗಳನ್ನು ಒಗ್ಗೂಡಿಸಿ ಸಂಘ ರಚಿಸುವ ಕೆಲಸ ನನೆಗುದಿಗೆ ಬಿದ್ದಿದೆ. ಹೀಗಾಗಿ ನೀರಾವರಿ ಯೋಜನೆಗಳಲ್ಲಿ ಲಭ್ಯವಿರುವ ನೀರಿನ ಸದ್ಬಳಕೆ ಸಾಧ್ಯವಾಗಿಲ್ಲ

10 ಗರಿಷ್ಠ ಅಂಕಗಳು

6 ಕರ್ನಾಟಕ ಪಡೆದ ಅಂಕಗಳು 

***
6. ಕೃಷಿಯಲ್ಲಿ ನೀರಿನ ಸುಸ್ಥಿರ ಬಳಕೆ

ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಕೊಳವೆ ಬಾವಿಗಳ ಮೂಲಕ ಕೃಷಿಗೆ ನೀರು ಒದಗಿಸಲಾಗುತ್ತದೆ. ಕೃಷಿ ಹೊಂಡಗಳನ್ನು ನಿರ್ಮಿಸಿ, ಅವುಗಳ ಮೂಲಕ ಮಳೆ ನೀರನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಆದರೆ, ಇದರ ಪ್ರಮಾಣ ತೀರಾ ಕಡಿಮೆ. ಕಡಿಮೆ ನೀರು ಬೇಡುವ ಹನಿ ನೀರಾವರಿ ಪದ್ಧತಿ, ಹೈಡ್ರೊಫೋನಿಕ್ಸ್‌ ಪದ್ಧತಿಗಳ ಬಳಕೆ ತೀರಾ ಕಡಿಮೆ ಇದೆ. ಕೃಷಿಯಲ್ಲಿ ನೀರನ್ನು ಅನಗತ್ಯವಾಗಿ ಪೋಲು ಮಾಡಲಾಗುತ್ತಿದೆ

10 ಗರಿಷ್ಠ ಅಂಕಗಳು

6 ಕರ್ನಾಟಕ ಪಡೆದ ಅಂಕಗಳು

***

7. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು

ಕರ್ನಾಟಕದಲ್ಲಿ ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಆಗುತ್ತಿದೆ. ಆದರೆ ಇದನ್ನು ಎಲ್ಲಾ ಹಳ್ಳಿಗಳಿಗೆ ವಿಸ್ತರಿಸಲು ಆಗಿಲ್ಲ. ಶುದ್ಧೀಕರಿಸಿದ ನೀರಿನ ಪೂರೈಕೆ ಕೆಲವು ಹಳ್ಳಿಗಳಿಗೆ ಮಾತ್ರ ಸೀಮಿತವಾಗಿದೆ. ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ರಾಜ್ಯವು ತೀರಾ ಹಿಂದೆ ಬಿದ್ದಿದೆ

10 ಗರಿಷ್ಠ ಅಂಕಗಳು

2.2 ಕರ್ನಾಟಕದ ಅಂಕಗಳು

***

8. ಕೊಳಚೆ ನೀರು ನಿರ್ವಹಣೆ

ರಾಜ್ಯದ ನಗರ ಪ್ರದೇಶಗಳ ಶೇ 90ಕ್ಕೂ ಹೆಚ್ಚು ಜನರಿಗೆ ಕುಡಿಯುವ ಮತ್ತು ಬಳಸುವ ನೀರನ್ನು ಕೊಳವೆ ಮಾರ್ಗಗಳ ಮೂಲಕ ಪೂರೈಸಲಾಗುತ್ತಿದೆ. ಆದರೆ ಕೊಳಚೆ ನೀರಿನ ಸಂಸ್ಕರಣೆ ಮತ್ತು ಮರುಬಳಕೆಯನ್ನು ಕಡೆಗಣಿಸಲಾಗಿದೆ. ಕೊಳಚೆ ನೀರಿನ ಸಂಸ್ಕರಣೆ ಮತ್ತು ಮರುಬಳಕೆ ಪ್ರಮಾಣ ಶೇ 50ಕ್ಕಿಂತಲೂ ಕಡಿಮೆ ಇದೆ. ಕೊಳಚೆ ನೀರನ್ನು ಕೆರೆ ಮತ್ತು ನದಿಗಳಿಗೆ ನೇರವಾಗಿ ಬಿಡಲಾಗುತ್ತಿದೆ. ಇದರಿಂದ ಭೂಮಿಯ ಮೇಲ್ಮೈನ ನೀರಿನ ಮೂಲಗಳು ಮತ್ತು ಅಂತರ್ಜಲ ಕಲುಷಿತವಾಗುತ್ತಿದೆ

10 ಗರಿಷ್ಠ ಅಂಕಗಳು

7 ಕರ್ನಾಟಕ ಪಡೆದ ಅಂಕಗಳು

***

9. ನೀತಿ ಮತ್ತು ನಿರ್ವಹಣೆ

ನೀರಿನ ಬಳಕೆಯನ್ನು ನಿಯಂತ್ರಿಸಲು, ನೀರಿನ ಮೂಲಗಳ ರಕ್ಷಣೆ ಉದ್ದೇಶದಿಂದ ಕರ್ನಾಟಕವೂ ಹಲವು ನಿಯಮಾವಳಿಗಳನ್ನು ಅನುಷ್ಠಾನಕ್ಕೆ ತಂದಿದೆ. ಆದರೆ ನೀರಾವರಿ, ಕುಡಿಯುವ ನೀರು, ನೀರಿನ ಮೂಲಗಳ ರಕ್ಷಣೆಗೆ ಸಂಬಂಧಿಸಿದ ದತ್ತಾಂಶಗಳ ಸಂಗ್ರಹದಲ್ಲಿ ಇನ್ನೂ ಸಾಕಷ್ಟು ಕೆಲಸವಾಗಬೇಕಿದೆ. ದತ್ತಾಂಶ ಲಭ್ಯವಿಲ್ಲದೆ, ಯಾವುದೇ ನೀತಿಯನ್ನು ಜಾರಿಗೆ ತರುವುದು ಮತ್ತು ಅನುಷ್ಠಾನ ಮಾಡುವುದು ಕಷ್ಟಸಾಧ್ಯ

15 ಗರಿಷ್ಠ ಅಂಕಗಳು

11.8 ಕರ್ನಾಟಕ ಪಡೆದ ಅಂಕಗಳು
 

ಆಧಾರ: ನೀರಿನ ನಿರ್ವಹಣೆ ಸೂಚ್ಯಂಕ ವರದಿ–2019, ನೀತಿ ಆಯೋಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು