ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಿಸಿ, ಇದು ಉನ್ನತ ಶಿಕ್ಷಣವಲ್ಲ...

Last Updated 3 ಜೂನ್ 2020, 20:00 IST
ಅಕ್ಷರ ಗಾತ್ರ

ಆನ್‌ಲೈನ್‌ ಶಿಕ್ಷಣಕ್ಕೆ ಸಂಬಂಧಿಸಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ವಿಧಾನವನ್ನು ವ್ಯಾಪಕವಾಗಿ ಅಳವಡಿಕೆ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನಗಳು ಹಾಗೂ ದುಷ್ಪರಿಣಾಮಗಳ ಬಗ್ಗೆ ವಾದ–ಪ್ರತಿವಾದಗಳು ಜೋರಾಗಿವೆ. ಆನ್‌ಲೈನ್‌ ಶಿಕ್ಷಣದ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲಲು ‘ಪ್ರಜಾವಾಣಿ’ ಇಂದಿನಿಂದ ಈ ಹೊಸ ಚರ್ಚಾ ಸರಣಿಯನ್ನು ಆರಂಭಿಸಿದೆ...

ಪ್ರಾಥಮಿಕ ಶಿಕ್ಷಣದಲ್ಲಿ ಆನ್‌ಲೈನ್‌ ಪಾಠ ನಡೆಸುವುದಕ್ಕೆ ಸಂಬಂಧಿಸಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಹಿರಿಯ ವಿಜ್ಞಾನಿ ಸಿ.ಎನ್.ಆರ್ ರಾವ್ ಅಂತಹವರು ಈ ವಿಧಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವುದರ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ. ಮಾತ್ರವಲ್ಲ, ಪೂರ್ವಪ್ರಾಥಮಿಕ ಹಂತದಲ್ಲಿ ಆನ್‌ಲೈನ್‌ ತರಗತಿ ನಡೆಸುವುದನ್ನು ಸಂಪೂರ್ಣ ನಿಷೇಧಿಸಬೇಕು ಎಂದೂ ಹೇಳಿದ್ದಾರೆ. ಆ ಚರ್ಚೆ ಏನೇ ಇರಲಿ, ಈ ಲೇಖನ ಉನ್ನತ ಶಿಕ್ಷಣದಲ್ಲಿ ಆನ್‌ಲೈನ್‌ ವಿಧಾನಗಳನ್ನು ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಮಾತ್ರ ಸೀಮಿತವಾಗಿದೆ.

ಭಾರತದ ಉನ್ನತ ಶಿಕ್ಷಣ ರಂಗಕ್ಕೆ ಇಂದು ಅಗತ್ಯವಾಗಿ ಬೇಕಾಗಿರುವುದು ಆನ್‌ಲೈನ್‌ ಶಿಕ್ಷಣವೆಂದು ಕೆಲವರು ವಾದಿಸುತ್ತಿದ್ದಾರೆ. ಉನ್ನತ ಶಿಕ್ಷಣದಲ್ಲಿ ಈಗಾಗಲೇ ವಿಳಂಬವಾಗಿರುವ ಆನ್‌ಲೈನ್‌ ಶಿಕ್ಷಣದ ಆಗಮನ, ಕೊರೊನಾ ಸಂಕಷ್ಟದ ಪರಿಣಾಮ, ಅಂದುಕೊಂಡದ್ದಕ್ಕಿಂತ ಶೀಘ್ರವಾಗಿ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಭಾವಿಸುವ ಜನ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಹೀಗೆ ವಾದಿಸುವವರು ಮತ್ತು ಭಾವಿಸುವವರು ಇದ್ದಾರೆ ಎನ್ನುವುದೇ ಈ ದೇಶದ ಉನ್ನತ ಶಿಕ್ಷಣ ರಂಗ ವಿಫಲವಾಗಿರುವುದರ ದ್ಯೋತಕ.

ಉನ್ನತ ಶಿಕ್ಷಣ ಯಾವ ಉದ್ದೇಶವನ್ನು ಈಡೇರಿಸಬೇಕೋ ಆ ಉದ್ದೇಶ ಈಡೇರಿದ್ದರೆ ಉನ್ನತ ಶಿಕ್ಷಣದ ಇಂದಿನ ಸವಾಲುಗಳಿಗೆ ಪರಿಹಾರವೆಂಬಂತೆ ಯಾರೂ ಆನ್‌ಲೈನ್‌ ಶಿಕ್ಷಣದ ಪರವಾಗಿ ವಕಾಲತ್ತು ವಹಿಸಲು ಸಾಧ್ಯವೇ ಇರಲಿಲ್ಲ. ಕನಿಷ್ಠ ಯಾವ ಹಂತದ ಶಿಕ್ಷಣ, ಏನು ಎನ್ನುವುದರ ಬಗ್ಗೆ ಯೋಚಿಸಲು ಕೂಡಾ ಈ ದೇಶದ ಉನ್ನತ ಶಿಕ್ಷಣವು ಕಲಿಸಿಲ್ಲ ಎನ್ನುವುದನ್ನು ಆನ್‌ಲೈನ್‌ ಉನ್ನತ ಶಿಕ್ಷಣದ ಅಗತ್ಯದ ದೊಡ್ಡಮಟ್ಟಿನ ಪ್ರತಿಪಾದನೆಯಲ್ಲಿ ಕಾಣುತ್ತೇವೆ.

ಲಾಕ್‌ಡೌನ್‌ನ ಸೂಚನೆ ದೊರೆಯುವ ಮೊದಲೇ ದೇಶದ 100 ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ಪೂರ್ಣಪ್ರಮಾಣದ ಆನ್‌ಲೈನ್‌ ಪದವಿ ಶಿಕ್ಷಣ ನೀಡುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿತ್ತು. ಆಗ ಅದನ್ನು ಒಂದು ಪತ್ರಿಕೆ ಇದು ಉನ್ನತ ಶಿಕ್ಷಣ ರಂಗದ 'ಗೇಮ್ ಚೇಂಜರ್' ಅಂತ ಕೊಂಡಾಡಿತ್ತು! ಭಾರತದಲ್ಲಿ ಈಗ ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣ (Gross Enrollment Ratio) ಶೇ 25ರಷ್ಟಿದ್ದು, ಅಮೆರಿಕಾದಂತಹ ಮುಂದುವರಿದ ದೇಶಗಳಲ್ಲಿ ಇದು ಸುಮಾರು ಶೇ 90ಕ್ಕಿಂತ ಹೆಚ್ಚಿದೆ. ಈ ಅಂತರವನ್ನು ಸರಿದೂಗಲು ಆನ್‌ಲೈನ್‌ ಮೂಲಕ ಶಿಕ್ಷಣ ನೀಡಿ, ಪದವಿ ನೀಡುವುದು ಸೂಕ್ತ ಎನ್ನುವುದು ಲೆಕ್ಕಾಚಾರ.

ಮಾಹಿತಿ, ಜ್ಞಾನ ಮತ್ತು ವಿದ್ವತ್ತು ವಿಭಿನ್ನವಾದ ವಿಚಾರಗಳು. ಒಂದು ಸಮಾಜಕ್ಕೆ ಇವುಗಳ ನಡುವಣ ಸೂಕ್ಷ್ಮವಾದ ವ್ಯತ್ಯಾಸ ತಿಳಿಯದಾದಾಗ ಏನೇನು ಆಗಬೇಕೋ ಅವೆಲ್ಲವೂ ಇಂದು ಭಾರತದ ಉನ್ನತ ಶಿಕ್ಷಣ ರಂಗದಲ್ಲಿ ಆಗುತ್ತಿವೆ. ಉನ್ನತ ಶಿಕ್ಷಣದ ನಿರ್ವಹಣೆ ಆನ್‌ಲೈನ್‌ ಮೂಲಕ ಸಾಧ್ಯ ಅಂತ ಕೆಲವರು ಭಾವಿಸಿರುವುದು ಕೂಡಾ ಈ ಗೊಂದಲದ ಭಾಗವೇ ಆಗಿದೆ. ಉನ್ನತ ಶಿಕ್ಷಣದ ಉದ್ದೇಶ ವಿದ್ಯಾರ್ಥಿಗಳಲ್ಲಿ ಸ್ವತಂತ್ರವಾಗಿ ಮತ್ತು ಆಳವಾಗಿ ಯೋಚನೆ ಮಾಡುವ ಶಕ್ತಿಯನ್ನು ಬೆಳೆಸುವುದು; ವಿದ್ಯಾರ್ಥಿಗಳ ತಲೆಯಲ್ಲಿ ಮಾಹಿತಿಯನ್ನು ತುಂಬುವುದಲ್ಲ.

ಹೇಳಿಕೇಳಿ ಇದು ಮಾಹಿತಿ ಸ್ಫೋಟದ ಕಾಲ. ಈಗ ಉನ್ನತ ಶಿಕ್ಷಣ ನೀಡಬೇಕಾದದ್ದು ಮಾಹಿತಿಗಾಗಿ ಅಲ್ಲ. ಮಾಹಿತಿಯ ಮಹಾಪೂರದಲ್ಲಿ ಕೊಚ್ಚಿ ಹೋಗದೆ, ಗೊಂದಲಕ್ಕೀಡಾಗದೆ ಪರಿಸರ-ಪರಿಸ್ಥಿತಿಯನ್ನು ಸಮಪ್ರಜ್ಞೆಯಿಂದ ಅರ್ಥಮಾಡಿಕೊಳ್ಳಬಲ್ಲ ಯೋಚನಾ-ವಿವೇಚನಾ ಶಕ್ತಿಯನ್ನು ವಿದ್ಯಾರ್ಥಿಗಳ ತಲೆಯಲ್ಲಿ ಮತ್ತು ಹೃದಯದಲ್ಲಿ ಗಟ್ಟಿಗೊಳಿಸಲು ಉನ್ನತ ಶಿಕ್ಷಣ ಬೇಕಾಗಿರುವುದು. ಈ ಗುಣಗಳನ್ನು ಬೆಳೆಸಲು ಯಾವುದೇ ಕಿರುಮಾರ್ಗಗಳಿಲ್ಲ. ಇದನ್ನು ಬೆಳೆಸಬೇಕಾಗಿರುವುದು ಸಂವಹನ, ಸಂವಾದ, ಸಹ-ಚಿಂತನೆ ಇತ್ಯಾದಿಗಳ ಮೂಲಕ.

ಸಂವಹನ, ಸಂವಾದ ಮತ್ತು ಸಹಚಿಂತನೆ ಯಾವತ್ತೂ ಮುಕ್ತವಾಗಿ ಸಾಧ್ಯವಾಗುವುದು ಕಲಿಸುವವರ ಮತ್ತು ಕಲಿಯುವವರ ನಡುವೆ ಏರ್ಪಡುವ ಒಂದು ವಿಶಿಷ್ಟವಾದ ಸಂಬಂಧದಿಂದ. ಆ ಸಂಬಂಧವನ್ನು ಮೂರನೆಯ ಯಾರಿಗೇ ಆದರೂ ಅರ್ಥ ಮಾಡಿಕೊಳ್ಳಲು ಅಥವಾ ಪರಿಶೀಲಿಸಲು ಸಾಧ್ಯವಿಲ್ಲ. ತರಗತಿ (Class room) ಎಂಬ ಒಂದು ಪರಿಸರವನ್ನು ವಿದ್ಯಾಭ್ಯಾಸದ ಭಾಗವಾಗಿ ಮಾನವ ಸಮಾಜ ನಿರ್ಮಿಸಿಕೊಂಡದ್ದು ಈ ಕಾರಣಕ್ಕಾಗಿ. ಇದಕ್ಕೆ ಪರ್ಯಾಯವೊಂದು ಸದ್ಯಕ್ಕೆ ಇಲ್ಲ. ಆನ್‌ಲೈನ್‌ ವೇದಿಕೆಗಳು ತರಗತಿಗಳಿಗೆ ಪರ್ಯಾಯ ಅಂತ ಯಾರಾದರೂ ಭಾವಿಸಿದರೆ ಅದೊಂದು ಜೋಕ್. ಭಾರತದ ಉನ್ನತ ಶಿಕ್ಷಣ ಇಲ್ಲಿ ವಿವರಿಸಿದ ರೀತಿಯಲ್ಲಿ ಆಗುತ್ತಿಲ್ಲ ಎನ್ನುವುದು ಸಮಸ್ಯೆ. ಇದನ್ನು ಪರಿಹರಿಸದೆ ಈಗ ಇರುವ ರೀತಿಯ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಹೆಚ್ಚಿಸಿದರೆಷ್ಟು, ಬಿಟ್ಟರೆಷ್ಟು?

ಆನ್‌ಲೈನ್‌ ತರಗತಿಗಳ ಹೆಸರಿನಲ್ಲಿ ಶೈಕ್ಷಣಿಕ ವಿಡಿಯೊಗಳೆಂಬ ಕಸವನ್ನು ಯುಟ್ಯೂಬ್ ಎಂಬ ಅಂತರ್ಜಾಲದ ಮೈದಾನದ ತುಂಬಾ ಹರಡಲಾಗಿದೆ. ಇದಕ್ಕೆ ಅಪವಾದ ಎನ್ನಬಹುದಾದ ವಿಡಿಯೊಗಳ ಸಂಖ್ಯೆ ಅಲ್ಲಿ ಬೆರಳೆಣಿಕೆಯಲ್ಲಷ್ಟೇ ಇರಬಹುದು. ಒಂದಷ್ಟು ಪವರ್ ಪಾಯಿಂಟ್ ಸ್ಲೈಡ್‌ಗಳನ್ನು ತಯಾರಿಸುವುದು, ಅದರಲ್ಲಿ ಪುಸ್ತಕದಲ್ಲಿರುವ ಪಠ್ಯಗಳ ವಿವರಣೆಯನ್ನು ಹಾಗೆಯೇ ಭಟ್ಟಿ ಇಳಿಸುವುದು, ನಂತರ ಅದನ್ನು ಕ್ಯಾಮೆರಾದ ಎದುರು ಓದಿ ಹೇಳುವುದು (ಕೆಲವರು ಸ್ಲೈಡ್‌ಗಳಲ್ಲಿ ಇರುವ ಒಕ್ಕಣೆಗೆ ಒಂದೋ, ಎರಡೋ ವಾಕ್ಯಗಳ ಒಣ ವಿವರಣೆ ಸೇರಿಸುವುದಿದೆ). ಕ್ಷಮಿಸಿ, ಇದು ಉನ್ನತ ಶಿಕ್ಷಣವಲ್ಲ.

ಹಾಗೆಂದು, ಡಿಜಿಟಲ್ ತಂತ್ರಜ್ಞಾನ ಒದಗಿಸಿರುವ ಅವಕಾಶಗಳನ್ನು ಉನ್ನತ ಶಿಕ್ಷಣ ರಂಗದಲ್ಲಿ ತಿರಸ್ಕರಿಸಬೇಕು ಎನ್ನುವ ತಂತ್ರಜ್ಞಾನ-ವಿರೋಧಿ ವಾದವನ್ನು ಇಲ್ಲಿ ಮಂಡಿಸುತ್ತಿಲ್ಲ. ಒಂದು ವೇಳೆ ಕೊರೊನಾದಂತಹ ಕಾರಣಗಳಿಂದಾಗಿ ತರಗತಿಗಳನ್ನು ಪ್ರಾರಂಭಿಸುವುದಕ್ಕೆ ವಿಳಂಬವಾದಾಗ ತಾತ್ಕಾಲಿಕವಾದ ಪರ್ಯಾಯ ವ್ಯವಸ್ಥೆಯಾಗಿ ಆನ್‌ಲೈನ್‌ ಶಿಕ್ಷಣವನ್ನು ಅಳವಡಿಸಿಕೊಳ್ಳಬಹುದು. ಈಗಾಗಲೇ ಒಂದು ವಿಷಯದಲ್ಲಿ ಪದವಿ ಪಡೆದಿದ್ದು ಆ ವಿಷಯದಲ್ಲಿ ಕೆಲ ಸೂಕ್ಷ್ಮ ಪರಿಣತಿಗಳನ್ನು ಹೆಚ್ಚುವರಿಯಾಗಿ ಸಂಪಾದಿಸುವರಿಗೆ ಅದನ್ನು ಆನ್‌ಲೈನ್‌ ಮೂಲಕ ಒದಗಿಸಬಹುದು. ಮಾಹಿತಿ-ಕೇಂದ್ರಿತ ಕೋಚಿಂಗ್ ನೀಡಬಹುದು. ತರಗತಿಯ ಪಾಠಪ್ರವಚನಗಳಿಗೆ ಪೂರಕವಾದ ಪರಿಕರಗಳನ್ನು ಒದಗಿಸಲು ಡಿಜಿಟಲ್ ತಂತ್ರಜ್ಞಾನ ಬಳಸಿಕೊಳ್ಳಬಹುದು.

ಮುಂದೊಂದುದಿನ ನಮ್ಮ ಭೌತಿಕ-ಸಾಮಾಜಿಕ ಪರಿಸರದಲ್ಲಿ ಬದಲಾವಣೆಗಳಾಗಿ ಕ್ಯಾಂಪಸ್‌ಗಳೇ ಇಲ್ಲದಾಗಿ, ತರಗತಿಗಳ ಪರಿಕಲ್ಪನೆಯೇ ಮರೆಯಾಗಿ ಆನ್‌ಲೈನ್‌ ಮೂಲಕವೇ ಶಿಕ್ಷಣವನ್ನು ಒದಗಿಸಬೇಕಾದ ಸಂದರ್ಭ ಒದಗಿದ್ದೇ ಆದರೂ ಆಗ ಕಲಿಸುವಿಕೆ-ಕಲಿಯುವಿಕೆಗೆ (teaching and learning) ಸಂಬಂಧಿಸಿದಂತೆ ಒಂದು ಹೊಸತಾದ ಶೈಕ್ಷಣಿಕ ವಿಧಾನ, ಪರಿಕರ ಮತ್ತು ಪರಿಸರವನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ಈ ರೀತಿಯಾಗಿ ಯೋಚಿಸದೆ, ಶತಶತಮಾನಗಳಿಂದ ಸಾಂದ್ರೀಕೃತಗೊಂಡ ಬೌದ್ಧಿಕ-ಸಾಮಾಜಿಕ-ಮನೋವೈಜ್ಞಾನಿಕ ಪ್ರಕ್ರಿಯೆಯನ್ನು ಇದ್ದಕ್ಕಿದ್ದಂತೆಯೇ ದೂರಗಾಮಿ-ಡಿಜಿಟಲ್ ಪ್ರಕ್ರಿಯೆಯಾಗಿ ಪರಿವರ್ತಿಸಿಬಿಡುತ್ತೇವೆ ಎನ್ನುವುದು ಒಂದು ರೊಬೋಟಿಕ್ ಯೋಚನೆ-ಯೋಜನೆ.

ನಮ್ಮ ಉನ್ನತ ಶಿಕ್ಷಣ ರಂಗವನ್ನು ಸರಿಪಡಿಸುವ ಇರಾದೆ ಅಧಿಕಾರದಲ್ಲಿದ್ದ ಮಂದಿಗೆ ಇದ್ದದ್ದೇ ಆದರೆ ಕೊರೊನಾ ಸಂಕಷ್ಟ ಮುಗಿದ ಕೂಡಲೇ ಕಲಿಸಲು ಬೇಕಾದಷ್ಟು ಜ್ಞಾನ ಮತ್ತು ನೈಪುಣ್ಯ ಇರುವ ಶಿಕ್ಷಕರನ್ನು ಮತ್ತು ಕಲಿಯಲು ಬೇಕಾದಷ್ಟು ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ತರುವ ಪ್ರಯತ್ನ ಮಾಡಬಹುದು. ಈಗ ಯುಟ್ಯೂಬ್‌ನಲ್ಲಿ ರಾಶಿ ಬಿದ್ದಿರುವ ಪಠ್ಯ-ಪ್ರವಚನಗಳನ್ನು ಶಿಕ್ಷಣ ತಜ್ಞರ ಮತ್ತು ನಿವೃತ್ತ ಕುಲಪತಿಗಳ (1990 ಅಥವಾ ಅದಕ್ಕಿಂತ ಹಿಂದಿನ) ಮೂಲಕ ಪರಿಶೀಲನೆ ನಡೆಸಿ ಉನ್ನತ ಶಿಕ್ಷಣದಲ್ಲಿ ಕಲಿಸುವಿಕೆ ಮತ್ತು ಕಲಿಕೆ ಹೇಗೆ, ಏನು ಎನ್ನುವುದರ ಬಗ್ಗೆ ಒಂದಷ್ಟು ಸ್ಪಷ್ಟನೆಗೆ ಬರುವ ಅಗತ್ಯವಿದೆ. ಅದರ ಆಧಾರದಲ್ಲಿ ಉನ್ನತ ಶಿಕ್ಷಣವನ್ನು ಭವಿಷ್ಯದ ಅಗತ್ಯಕ್ಕೆ ಪೂರಕವಾಗಿ ಮುರಿದುಕಟ್ಟಿದ ನಂತರ ಅಗತ್ಯವಿದ್ದರೆ ಆನ್‌ಲೈನ್‌ ಪಾಠ ಪದ್ಧತಿಗಳ ಬಗ್ಗೆ ಯೋಚಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT