ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಇದೆ ‘ಆಪರೇಷನ್ ಕಮಲ’?

ದಕ್ಷಿಣದವರ ಮೇಲೆ ಇಲ್ಲ ನಂಬಿಕೆ: ಉತ್ತರದ ಶಾಸಕರತ್ತ ಕೇಸರಿ ಪಡೆ ಕಣ್ಣು
Last Updated 20 ಜುಲೈ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ರಾಜೀನಾಮೆ ಕೊಟ್ಟಿರುವ ಶಾಸಕರ ಪೈಕಿ ಎಲ್ಲರೂ ಉಪಚುನಾವಣೆಯಲ್ಲಿ ಗೆಲ್ಲುವ ಭರವಸೆ ಇಲ್ಲದೇ ಇರುವುದರಿಂದ ಮತ್ತೊಂದು ಸುತ್ತಿನ ‘ಆಪರೇಷನ್ ಕಮಲ’ ನಡೆಸಲು ಬಿಜೆಪಿ ನಾಯಕರು ಸಿದ್ಧತೆ ನಡೆಸಿದ್ದಾರೆ.

‘ಆಪರೇಷನ್ ಕಮಲ ಮಾಡುತ್ತಿಲ್ಲ; ಅತೃಪ್ತ ಶಾಸಕರು ತಮ್ಮ ಪಾಡಿಗೆ ರಾಜೀನಾಮೆ ಕೊಟ್ಟು ಹೋಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲ ನಾಯಕರೂ ಪ್ರತಿಪಾದಿಸುತ್ತಿದ್ದಾರೆ. ಅತೃಪ್ತ ಶಾಸಕರನ್ನು ಮುಂಬೈಗೆ ಕರೆದೊಯ್ದು ಸರ್ಕಾರ ಪತನವಾಗುವವರೆಗೂ ಅವರೆಲ್ಲರನ್ನು ‘ಸುರಕ್ಷಿತ’ವಾಗಿ ಕಾಪಾಡುವ ಹೊಣೆ ಹೊತ್ತಿರುವುದು ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್.ಆರ್. ಸಂತೋಷ್ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಶಾಸಕರನ್ನು ಕರೆದೊಯ್ಯಲು ಬೇಕು ಬೇಕೆಂದಾಗ ಎಚ್ಎಎಲ್‌ ವಿಮಾನ ನಿಲ್ದಾಣದಿಂದ ವಿಮಾನಗಳು ಹಾರಾಡುತ್ತಿರುವುದನ್ನು ನೋಡಿದರೆ, ಬಿಜೆಪಿಯ ‘ಕೈ’ವಾಡ ಇದರ ಹಿಂದೆ ಇರುವುದಕ್ಕೆ ಸಾಕ್ಷ್ಯವೂ ಬೇಕಾಗಿಲ್ಲ.

15 ಶಾಸಕರು ನೀಡಿರುವ ರಾಜೀನಾಮೆ ಅಂಗೀಕಾರವಾಗಿದ್ದರೆ ಈ ಹೊತ್ತಿಗೆ ಕಾಂಗ್ರೆಸ್–ಜೆಡಿಎಸ್‌ ತೊರೆದವರ ಸಂಖ್ಯೆ 22 ಅನ್ನು ದಾಟುತ್ತಿತ್ತು. ‘ರಾಜೀನಾಮೆಯ ಹಿಂದೆ ಯಾವುದೇ ಒತ್ತಡವಿಲ್ಲ, ವೈಯಕ್ತಿಕ ಕಾರಣದಿಂದ ಕೊಟ್ಟಿದ್ದಾರೆ ಎಂದು ಮನವರಿಕೆಯಾದರೆ ಮಾತ್ರ ಅಂಗೀಕರಿಸುವೆ’ ಎಂದು ಸಭಾಧ್ಯಕ್ಷ ಸ್ಥಾನದ ವಿವೇಚನಾಧಿಕಾರವನ್ನು ಬಳಸಿರುವ ಕೆ.ಆರ್. ರಮೇಶ್‌ ಕುಮಾರ್‌, ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವಿಚಾರಣೆಗೆ ಬರುವಂತೆ ಸಭಾಧ್ಯಕ್ಷರು ನೀಡಿದ ನೋಟಿಸ್‌ಗೆ ಅತೃಪ್ತ ಶಾಸಕರು ಸ್ಪಂದನೆಯನ್ನೂ ನೀಡಿಲ್ಲ. ಹೀಗಾಗಿ ಈ ವಿಷಯ ನನೆಗುದಿಗೆ ಬಿದ್ದಿದೆ.

ಉತ್ತರದತ್ತ ಚಿತ್ತ: ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರ ಹಿಡಿದ ಬಳಿಕವೂ ಆಪರೇಷನ್‌ ಮುಂದುವರಿಯಲಿದೆ. ಕಾಂಗ್ರೆಸ್‌ನ 27 ಶಾಸಕರನ್ನು ಗುರುತು ಮಾಡಲಾಗಿತ್ತು. ಆದರೆ, ರಾಮಲಿಂಗಾರೆಡ್ಡಿ, ಸೌಮ್ಯಾರೆಡ್ಡಿ ಹಾಗೂ ಆನೇಕಲ್‌ನ ಶಿವಣ್ಣ ಮನಸ್ಸು ಬದಲಾಯಿಸಿದ್ದಾರೆ. ಹೀಗಾಗಿ ಈಗ ರಾಜೀನಾಮೆ ಕೊಟ್ಟಿರುವ ಶಾಸಕರೂ ಸೇರಿ ಕಾಂಗ್ರೆಸ್‌ನ 24 ಹಾಗೂ ಜೆಡಿಎಸ್‌ನ 9 ಶಾಸಕರ ಮೇಲೆ ಗುರಿಯಿಟ್ಟು ಕಾರ್ಯಾಚರಣೆ ಕಾಯ್ದಿರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜೀನಾಮೆ ಕೊಟ್ಟಿರುವ ಹೆಚ್ಚಿನವರು ಮೈಸೂರು, ಬೆಂಗಳೂರು, ಮಂಡ್ಯಕ್ಕೆ ಸೇರಿದವರಾಗಿದ್ದಾರೆ. ಈ ಭಾಗದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್ ನೆಲೆ ಪ್ರಬಲವಾಗಿದೆ. ಸರ್ಕಾರ ಪತನದ ಬಳಿಕ ಎಚ್.ಡಿ. ದೇವೇಗೌಡರು ಮತ್ತು ಸಿದ್ದರಾಮಯ್ಯ ಪರಸ್ಪರ ಟೀಕಾಪ್ರಹಾರ ನಡೆಸಿಕೊಳ್ಳಬಹುದು. ಆದರೆ, ಮೈತ್ರಿಗೆ ಕೈಕೊಟ್ಟು ಹೋಗಿ ಉಪಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವವರನ್ನು ಸೋಲಿಸುವ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ. ಹೀಗಿರುವಾಗ ಮತ್ತೆ ಬಿಜೆಪಿ ಬಲ ಕುಗ್ಗುವ ಸಾಧ್ಯತೆ ಹೆಚ್ಚಿದೆ.

ಇದಕ್ಕೆ ಪರ್ಯಾಯವಾಗಿ, ಬಿಜೆಪಿಗೆ ಭದ್ರ ನೆಲೆ ಇರುವ ಹಾಗೂ ಲಿಂಗಾಯತ ಪ್ರಾಬಲ್ಯದ ಮತ ಕ್ಷೇತ್ರಗಳ ಶಾಸಕರನ್ನು ಸೆಳೆಯುವುದು ಮುಂದಿನ ನಡೆಯಾಗಿದೆ. ಬೆಳಗಾವಿ, ಉತ್ತರ ಕನ್ನಡ, ಬೀದರ್, ಕಲಬುರ್ಗಿ ಜಿಲ್ಲೆಗಳ ಶಾಸಕರನ್ನು ಪಕ್ಷಕ್ಕೆ ಕರೆತರುವ ಯತ್ನ ನಡೆಯುತ್ತಿದೆ. ‘ಸರ್ಕಾರ ಬಿದ್ದ ಬಳಿಕ ಬರುತ್ತೇವೆ’ ಎಂದು ಅನೇಕರು ಭರವಸೆ ನೀಡಿದ್ದಾರೆ. ‘ಸರ್ಕಾರ ಬೀಳುವ ಮುನ್ನ ಬಂದರೆ ನಿಮಗೆ ಕಿಮ್ಮತ್ತು ಜಾಸ್ತಿ. ಲಾಭದ ಹುದ್ದೆಯೂ ಸಿಗಬಹುದು. ಬಿದ್ದ ಮೇಲೆ ಬಂದರೆ, ಚುನಾವಣೆ ಖರ್ಚು ನೋಡಿಕೊಂಡು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಮಾತ್ರ ಹೊರಲು ಸಾಧ್ಯ’ ಎಂದು ಹೇಳಿದ್ದೇವೆ. ಹೀಗಾಗಿ ಶ್ರೀಮಂತ ಪಾಟೀಲ ಒಂದು ಹೆಜ್ಜೆ ಮುಂದಿಟ್ಟರು. ಅಪ್ಪನನ್ನು ಕೇಳಿಕೊಂಡು ಬರುವುದಾಗಿ ಹೇಳಿದ ಮತ್ತೊಬ್ಬರು ಬರಲೇ ಇಲ್ಲ’ ಎಂದು ಬೆಳಗಾವಿಯ ಪ್ರಭಾವಿ ಶಾಸಕ
ರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘8 ಗೆದ್ದರೆ ಸಾಕು’
‘ಈಗಾಗಲೇ 15 ಶಾಸಕರು ಬಂದಿದ್ದರೂ ಅವರಲ್ಲಿ 8 ಮಂದಿ ಗೆದ್ದರೆ ಸಾಕು. ಸರ್ಕಾರ ಭದ್ರವಾಗುತ್ತದೆ. ಉಳಿದವರೆಲ್ಲ ಸೋತ ಮೇಲೆ ಅವರಿಗೆ ಸಚಿವ ಸ್ಥಾನ ಕೊಡುವ ಪ್ರಮೇಯ ಇರುವುದಿಲ್ಲ. ಅಧಿಕಾರ ಕಳೆದು
ಕೊಂಡ ಎದುರಾಳಿಗಳು ಸುಮ್ಮನಿರುವುದಿಲ್ಲ. ಅವರು ಪ್ರತಿ ಆಪರೇಷನ್‌ಗೆ ಕೈ ಹಾಕಬಹುದು. ಹೀಗಾಗಿ, ಮತ್ತೆ ‘ಆಪರೇಷನ್‌’ ಮಾಡಲೇಬೇಕಾಗುತ್ತದೆ’ ಎಂದು ಈಗಿನ ಕಾರ್ಯಾಚರಣೆಯ ರೂವಾರಿಗಳಲ್ಲಿ ಒಬ್ಬರಾದ ಬೆಂಗಳೂರಿನ ಶಾಸಕರೊಬ್ಬರು ಹೇಳಿದರು.

ಆಪರೇಷನ್‌ ಕಮಲ ಹೇಗೆ

27:ಒಟ್ಟು ‘ಕೈ’ ಶಾಸಕರು

3:ಕಾಂಗ್ರೆಸ್‌ ಶಾಸಕರ ಮನಸು ಬದಲು

9:ಒಟ್ಟು ಜೆಡಿಎಸ್‌ ಶಾಸಕರು

15:ಈಗಾಗಲೇ ರಾಜೀನಾಮೆ ಕೊಟ್ಟವರು(ಕಾಂಗ್ರೆಸ್‌ 12 , ಜೆಡಿಎಸ್‌ 3)

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT