ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಕೊಟ್ಟವರಿಗೆ ವಿಪ್ ಅನ್ವಯಿಸದು: ತಜ್ಞರು

ವಿಧಾನಸಭೆ ವಿಸರ್ಜಿಸುವ ಸಾಧ್ಯತೆಯೂ ಕ್ಷೀಣ– ಕಾನೂನು ತಜ್ಞರ ಅಭಿಮತ
Last Updated 10 ಜುಲೈ 2019, 2:13 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಾಸಮತ ಸಾಬೀತುಪಡಿಸುವ ಸನ್ನಿವೇಶ ಸೃಷ್ಟಿಯಾದರೆ ಶಾಸಕರಿಗೆ ವಿಪ್ ಜಾರಿ ಮಾಡುವ ಅವಕಾಶ ಇಲ್ಲ ಹಾಗೂ ಸರ್ಕಾರ ಅಲ್ಪಮತದತ್ತ ಸಾಗಿರುವುದರಿಂದ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವ ದಾರಿಯೂ ಇಲ್ಲ ಎಂಬುದು ಕಾನೂನು ತಜ್ಞರ ಅಭಿಮತ.

‘ಈ ಹಂತದಲ್ಲಿ ಸರ್ಕಾರ ವಿಸರ್ಜನೆಯ ತೀರ್ಮಾನ ಮಾಡಲು ಮುಖ್ಯಮಂತ್ರಿ ಅವರಿಗೆ ಸಾಧ್ಯವಿಲ್ಲ’ ಎಂದು ಕೆಲವು ಕಾನೂನು ತಜ್ಞರು ಹೇಳಿದರೆ, ಮತ್ತೆ ಕೆಲವರು, ‘ಸದ್ಯದ ಬೆಳವಣಿಗೆ ಮೇಲ್ನೋಟಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಅಪರಾಧವಾಗಿ ಕಂಡು ಬರುತ್ತಿದೆ. ಹೀಗಾಗಿ ವಿಧಾನಸಭಾಧ್ಯಕ್ಷರು ರಾಜೀನಾಮೆಗಳನ್ನು ಸಾರಾಸಗಟು ತಿರಸ್ಕರಿಸಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಈ ಕುರಿತಂತೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಂವಿಧಾನ ತಜ್ಞರೂ ಆದ ಹೆಸರು ಹೇಳಲು ಬಯಸದ ಹಿರಿಯ ವಕೀಲರೊಬ್ಬರು, ‘ಈ ಹಂತದಲ್ಲಿ ಸರ್ಕಾರ ವಿಸರ್ಜನೆಗೆ ಶಿಫಾರಸು ಮಾಡಲು ಆಡಳಿತಾರೂಢ ಸರ್ಕಾರ ಬಹುಮತ ಹೊಂದಿರಲೇಬೇಕಾಗುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಬೇಕಾದ ವಿಸರ್ಜನೆಯ ಠರಾವನ್ನು ರಾಜ್ಯಪಾಲರು ಪರಾಮರ್ಶೆ ನಡೆಸುತ್ತಾರೆ. ಆ ಸಂದರ್ಭದಲ್ಲಿ ಸರ್ಕಾರ ಅಲ್ಪಮತದಲ್ಲಿದೆ ಎಂಬುದು ಅವರಿಗೆ ವೇದ್ಯವಾಗಿದ್ದರೆ ಬಹುಮತ ಸಾಬೀತುಪಡಿಸುವಂತೆ ಕೇಳಬಹುದು’ ಎನ್ನುತ್ತಾರೆ.

‘ಈಗ ರಾಜೀನಾಮೆ ಸಲ್ಲಿಸಿರುವ ಶಾಸಕರು ಈಗಾಗಲೇ ರಾಜ್ಯಪಾಲರನ್ನೂ ಭೇಟಿ ಮಾಡಿರುವುದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತಿರುವುದು ವೇದ್ಯವಾಗುತ್ತಿದೆ. ಒಂದು ವೇಳೆ ವಿಸರ್ಜನೆಗೆ ಶಿಫಾರಸು ಮಾಡುವುದೇ ಆಗಿದ್ದಲ್ಲಿ ಶುಕ್ರವಾರವೇ (ಜುಲೈ 5)
ಪ್ರಯತ್ನಿಸಬಹುದಿತ್ತು’ ಎಂದು ಹೇಳಿದ್ದಾರೆ.

‘ವಿಪ್‌ ಜಾರಿ ಮಾಡಿದರೂ ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅವರೆಲ್ಲಾ ತಮ್ಮ ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವಾಗ ಅವರು ಸದನದ ಸದಸ್ಯರಾಗಿ ಉಳಿದಿಲ್ಲ’ ಎನ್ನುತ್ತಾರೆ ಹಿರಿಯ ವಕೀಲ ಬಿ.ವಿ.ಆಚಾರ್ಯ.

ತಿರಸ್ಕರಿಸಬಹುದು

‘ಶಾಸಕರ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷರು ತಿರಸ್ಕರಿಸಬಹುದು’ ಎಂಬುದು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅವರ ಅಭಿಮತ.

‘ರಾಜೀನಾಮೆ ಅಂಗೀಕಾರ ಆಗುವತನಕ ಸದಸ್ಯರು ಆ ಪಕ್ಷದ ಎಲ್ಲ ನಿರ್ದೇಶನಗಳಿಗೆ ಒಳಪಟ್ಟವರೇ ಆಗಿರುತ್ತಾರೆ. ಹಾಗಾಗಿ ವಿಪ್‌ ಜಾರಿ ಮಾಡಿದರೂ ಅದು ಅನ್ವಯ ಆಗುತ್ತದೆ’ ಎಂದು ಅವರು ಹೇಳಿದರು.

‘ಈ ಹಿಂದೆ ಉಮೇಶ್ ಜಾಧವ್‌ ಪ್ರಕರಣದಲ್ಲಿ ವಿಧಾನಸಭಾಧ್ಯಕ್ಷರು ರಾಜೀನಾಮೆ ಅಂಗೀಕರಿಸುವ ಮುನ್ನ ನಡೆಸಿದ ವಿಚಾರಣೆ ನಮ್ಮ ನೆನಪಿನಲ್ಲಿ ಇದೆ. ಹೀಗಾಗಿ ಈ ವಿಷಯದಲ್ಲಿ ವಿಧಾನಸಭಾಧ್ಯಕ್ಷರ ವಿವೇಚನಾ ಅಧಿಕಾರವೇ ಅಂತಿಮವಾಗುತ್ತದೆ. ರಾಜೀನಾಮೆ ತಿರಸ್ಕರಿಸಿದರೆ ಅದನ್ನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದರೂ ಅದರ ವಿಚಾರಣೆ ನಡೆದು ತೀರ್ಪು ಹೊರಬರಲು ಸಾಕಷ್ಟು ಸಮಯ ಹಿಡಿ
ಯುತ್ತದೆ’ ಎಂಬುದು ಅವರ ಅಭಿಪ್ರಾಯ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT