ಮಂಗಳವಾರ, ಏಪ್ರಿಲ್ 7, 2020
19 °C

ಪಾಕ್‌ ಪರ ಅಮೂಲ್ಯ ಲಿಯೋನ್‌ ಘೋಷಣೆ: ಅಕ್ಷಮ್ಯ ಎಂದ ಗಣ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗಿರುವುದು ಅಕ್ಷಮ್ಯ ಎಂದು ಅನೇಕ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಪಾಕಿಸ್ತಾನ್ ಜಿಂದಾಬಾದ್‌ ಅಂತ ಹಲವರು ಕೂಗಿದ್ದಾರೆ. ಇದು ಸರಿಯಲ್ಲ. ಅವರ ವಿರುದ್ಧ ಗಂಭೀರ ಕ್ರಮ ಜರುಗಿಸಬೇಕು’ ಎಂದು ಬಿಜೆಪಿ ಮುಖಂಡೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

‘ಪಾಕ್‌ ಪರ ಘೋಷಣೆ ಕೂಗುವವರನ್ನು ನಾವು ಸಮರ್ಥಿಸುವುದಿಲ್ಲ. ಅವರು ಕೂಗಿದ್ದು ನಿಜವೇ ಆಗಿದ್ದರೆ ಗಂಭೀರ ಕ್ರಮ ತೆಗೆದುಕೊಳ್ಳಬೇಕು’ ಎಂದು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಇಂಥ ಘೋಷಣೆ ಕೂಗುತ್ತಿರುವ ವಿಚಾರವನ್ನು ಬಹಳ ಹಗುವರವಾಗಿ ತೆಗೆದುಕೊಳ್ಳಬಾರದು. ಇಂಥವರನ್ನು ಎನ್‌ಕೌಂಟರ್ ಮಾಡಬೆಕು. ಆಗ ಮಾತ್ರ ದೇಶದ್ರೋಹಿ ಚಟುವಟಿಕೆ ನಿಲ್ಲುತ್ತದೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

‘ಪಾಕಿಸ್ತಾನ್ ಜಿಂದಾಬಾದ್ ಎಂದವರನ್ನು ಗಲ್ಲಿಗೆ ಹಾಕಬೇಕು. ನಾನು ಆಕೆಗೆ (ಅಮೂಲ್ಯ) ಆಹ್ವಾನ ಕೊಟ್ಟಿರಲಿಲ್ಲ. ಅವರೇ ಬಂದು ಕೂಗಿದ್ದಾರೆ. ಅವರ ವಿರುದ್ದ ಶಿಸ್ತುಕ್ರಮ ಜರುಗಿಸಬೇಕು’ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಒತ್ತಾಯಿಸಿದರು.

‘ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡು ಹಾರಿಸಬೇಕು. ಗಲ್ಲಿಗೇರಿಸಬೇಕು’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

‘ಅಮೂಲ್ಯ ಅಥವಾ ಮತ್ಯಾರೇ ಆಗಲಿ, ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಆಕೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಬಗ್ಗೆ ಹೆಚ್ಚಿನ ತನಿಖೆ ಆಗಬೇಕು. ದೇಶವಿರೋಧಿ ಚಟುವಟಿಕೆಗೆ ಯಾವುದೇ ವೇದಿಕೆ ಆಗಲಿ ದುರ್ಬಳಕೆ ಆಗಬಾರದು. ದೇಶಭಕ್ತಿ, ದೇಶ ಕಟ್ಟುವ ವಿಚಾರದಲ್ಲಿ ಎಲ್ಲ ಭಾರತೀಯರ ಅಭಿಪ್ರಾಯವೂ ಒಂದೇ’ ಎಂದು ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್ ಟ್ವೀಟ್‌ ಮಾಡಿದ್ದಾರೆ.

‘ಬೆಂಗಳೂರಿನಲ್ಲಿ ಸಿಎಎ ವಿರುದ್ಧದ ಸಮಾವೇಶದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಲಿಯೋನ. ಕಳಚಿ ಬೀಳುತ್ತಿವೆ ಹೋರಾಟದ ಅಸಲಿ ಮುಖಗಳು’ ಎಂದು ಬಿಜೆಪಿ ಶಾಸಕ ಸಿ.ಪಿ. ಯೋಗೇಶ್ವರ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಭಾರತೀಯರಿಗೆ ಯಾವ ರೀತಿಯಲ್ಲೂ ತೊಂದರೆಯೇ ಆಗದ ಸಿಎಎ ವಿರುದ್ಧ ಪ್ರತಿಭಟನೆ ಮಾಡುವುದು ಮೂರ್ಖತನ, ಆ ಪ್ರತಿಭಟನೆಯ ಹೆಸರಿನಲ್ಲಿ ದೇಶ ವಿರೋಧಿಯಾಗಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವುದು ಮಾತೃ ದ್ರೋಹ. ಇಂತಹ ಮಾತೃ ವಂಚಕರು ಭಾರತವೆಂಬ ಸ್ವರ್ಗವನ್ನು ಬಿಟ್ಟು ಪಾಕಿಸ್ತಾನವೆಂಬ ನರಕಕ್ಕೆ ಹೋಗಲಿ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

 

‘ಪಾಕ್‌ ಪರ ಘೋಷಣೆ ಕೂಗುವುದು ನಮ್ಮ ದೇಶದಲ್ಲಿ ನಡೆಯುತ್ತಿರುವ ಅನಾರೋಗ್ಯಕರ ಬೆಳವಣಿಗೆಗಳ ಸಂಕೇತ. ಇಂತಹ ಸಂದರ್ಭದಲ್ಲಿ ನಾವೆಲ್ಲ ಈ ದೇಶವಿರೋಧಿ ಕೃತ್ಯಗಳನ್ನು ಖಂಡಿಸಬೇಕಾಗಿದೆ. ಅದರ ಜೊತೆ ಜೊತೆಗೆ ಸರ್ಕಾರಗಳ ಜನವಿರೋಧಿ ಕೃತ್ಯಗಳ ಖಂಡನೆಯು ದೇಶವಿರೋಧಿಯಲ್ಲ ಎಂಬ ವಿವೇಕವನ್ನೂ ಉಸಿಕೊಳ್ಳಬೇಕು. ವಿಶೇಷವಾಗಿ ಪೌರತ್ವ ಪ್ರಶ್ನೆಗೆ ಸಂಬಂಧಿಸಿದ ಪ್ರತಿಭಟನೆಗಳು ಪಾಕ್‌ ಪರ ಘೋಷಣೆಗಳನ್ನು ಖಂಡಿಸಿ ನಮ್ಮದು ಸರ್ಕಾರದ ನೀತಿ ನಿಲುವುಗಳ ಪ್ರತಿರೋಧ ಮಾತ್ರ ಎಂದು ಸ್ಪಷ್ಟವಾಗಿ ಸಾರಬೇಕಿದೆ’ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು