ಬುಧವಾರ, ಜನವರಿ 29, 2020
24 °C
ಅಗತ್ಯ ವಸ್ತುಗಳಿಗಾಗಿ ಜನರ ಪರದಾಟ

ಮಂಗಳೂರಿನಲ್ಲಿ ಬೆಳಿಗ್ಗೆ ಸಹಜ ಸ್ಥಿತಿ: 8ರ ನಂತರ ಕರ್ಫ್ಯೂ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕರ್ಫ್ಯೂ ಜಾರಿಯಲ್ಲಿರುವ ನಗರದಲ್ಲಿ ಜನರ ಅಗತ್ಯ ವಸ್ತುಗಳ ಖರೀದಿಗಾಗಿ ಶನಿವಾರ ಬೆಳಿಗ್ಗೆ ಎರಡು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿತ್ತು. ನಂತರ ಅಂಗಡಿಗಳನ್ನು ಪೊಲೀಸರೇ ಬಂದ್ ಮಾಡಿಸಿದ್ದರಿಂದ ಜನರು ದಿನಬಳಕೆ ವಸ್ತುಗಳಿಗಾಗಿ ಪರದಾಡುವಂತಾಗಿದೆ.

ಬೆಳಿಗ್ಗೆ 6 ರಿಂದ 8 ಗಂಟೆವರೆಗೆ ಇಲ್ಲಿನ ಸೆಂಟ್ರಲ್ ಮಾರುಕಟ್ಟೆ ಪ್ರದೇಶದಲ್ಲಿ ತರಕಾರಿ ಹಾಗೂ ದಿನಬಳಕೆ ವಸ್ತುಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ಸಾಮಾನು ಖರೀದಿಸಲು ಜನರು ಮುಗಿಬಿದ್ದಿದ್ದರು. ಸ್ವಲ್ಪ ಸಮಯದಲ್ಲಿ ಬೇಕಾದ ವಸ್ತುಗಳನ್ನು ಖರೀದಿಸಿ ಕೆಲವರು ಮಾತ್ರ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಕರ್ಫ್ಯೂ ಸಡಿಲಿಕೆ ವಿಷಯ ತಿಳಿಯದ ಕೆಲ ಜನರು ದಿನಬಳಕೆ ವಸ್ತುಗಳನ್ನು ಖರೀದಿಸಲು ಪರದಾಡುತ್ತಿದ್ದಾರೆ. ಇಲ್ಲಿನ ಬಂಟ್ಸ್ ಹಾಸ್ಟೆಲ್ ಸರ್ಕಲ್, ಜ್ಯೋತಿ ಸರ್ಕಲ್‌‌ಗಳಲ್ಲಿ ಜನರ ಓಡಾಟ ಹೆಚ್ಚಿನ ಸಂಖ್ಯೆಯಲ್ಲಿತ್ತು. ಬೆಳಿಗ್ಗೆ 8ರ ನಂತರವೂ ನಾಲ್ಕು ಮಂದಿಗಿಂತ ಹೆಚ್ಚು ಜನರು ಗುಂಪಾಗಿ ಓಡಾಡುವುದನ್ನು ಕಂಡರೆ, ಪೊಲೀಸರು ಅವರನ್ನು ಚದುರಿಸುತ್ತಿದ್ದಾರೆ. ಇದರಿಂದಾಗಿ ಪೊಲೀಸರನ್ನು ಕಂಡರೆ ಸಾಕು ಜನರು ಓಡುತ್ತಿರುವುದು ಸಾಮಾನ್ಯವಾಗಿದೆ.

ಬಸ್ ಸಂಚಾರ ಸ್ಥಗಿತ

ಕರ್ಫ್ಯೂ ಡಿಸೆಂಬರ್ 22 ರವರೆಗೆ ಜಾರಿಯಲ್ಲಿದ್ದು, ಅಲ್ಲಿಯವರೆಗೆ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಬಸ್ ಮಾಲೀಕರು ತಿಳಿಸಿದ್ದಾರೆ. ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳು ಬೆಂಗಳೂರಿನಿಂದ ಉಪ್ಪಿನಂಗಡಿವರೆಗೆ ಮಾತ್ರ ಸಂಚರಿಸುತ್ತಿವೆ. ಮಂಗಳೂರು ಪ್ರವೇಶಿಸುತ್ತಿಲ್ಲ. ಹುಬ್ಬಳ್ಳಿಯಿಂದ ಬರುವ ಬಸ್ಸುಗಳು ಉಡುಪಿಯವರೆಗೆ ಮಾತ್ರ ಸಂಚರಿಸುತ್ತಿವೆ. ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿದೆ. ಮಂಗಳೂರು ನಗರ ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತಗೊಳಿಸಲು ಪೊಲೀಸರೇ ಸೂಚನೆ ನೀಡಿರುವುದರಿಂದ ಬಸ್ ಸಂಚರಿಸುತ್ತಿಲ್ಲ. 

ಬೆಳಿಗ್ಗೆ ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಅಂಗಡಿಗಳು ತೆರೆದಿದ್ದು, ವಾಹನ ಸಂಚಾರ ಆರಂಭಗೊಂಡಿದೆ. ಕೆಲವು ಪೆಟ್ರೋಲ್ ಬಂಕ್‌ಗಳು ಮುಂಜಾನೆಯೇ ತೆರೆದಿದ್ದು ಎಂದಿನಂತೆ ವಹಿವಾಟು ನಡೆಸಿವೆ. ಗ್ರಾಹಕರು ಸರತಿ ಸಾಲಿನಲ್ಲಿ ಪೆಟ್ರೋಲ್ ತುಂಬಿಸಿಕೊಂಡರು.

ಜಿಲ್ಲಾಧಿಕಾರಿ ಕಚೇರಿ, ಕಂದಕ್, ಕುದ್ರೋಳಿ, ಬಂದರು, ಪಳ್ನೀರು, ಸ್ಟೇಟ್ ಬ್ಯಾಂಕ್ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಅಲ್ಲಲ್ಲಿ ಪೊಲೀಸ್ ತುಕಡಿಗಳು ನಿಗಾವಹಿಸಿವೆ. 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳೂರು ಭೇಟಿ ನೀಡಲಿದ್ದು,ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.ಗುರುವಾರ ನಡೆದಿದ್ದ ಪ್ರತಿಭಟನೆಯಲ್ಲಿ ಪೊಲೀಸರು ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಲ್ಲು ತೂರಿದ್ದರಿಂದ ಪೊಲೀಸರು ಪ್ರತಿಯಾಗಿ ಗೋಲಿಬಾರ್ ನಡೆಸಿದ್ದು, ಇಬ್ಬರು ಬಲಿಯಾಗಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು