ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೆಮನೆಯಲ್ಲಿ ಪ್ಲಾಸ್ಟಿಕ್‌ ದಹನ: ಕ್ಯಾನ್ಸರ್‌ ಭೀತಿ!

ಮಂಡ್ಯ ಜಿಲ್ಲೆ ಸೇರುತ್ತಿದೆ ಕೇರಳದ ತ್ಯಾಜ್ಯ; ಚಿಮಣಿಯಲ್ಲಿ ಕಡುಗಪ್ಪು, ವಿಷಕಾರಿ ಹೊಗೆ
Last Updated 27 ಆಗಸ್ಟ್ 2019, 19:41 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಬಹುತೇಕ ಆಲೆಮನೆಗಳಲ್ಲಿ ಉರುವಲಾಗಿ ಪ್ಲಾಸ್ಟಿಕ್‌ ಹಾಗೂ ರಬ್ಬರ್‌ ತ್ಯಾಜ್ಯವನ್ನು ಬಳಸಲಾಗುತ್ತಿದೆ. ಚಿಮಣಿಯಿಂದ ಹೊರಬರುತ್ತಿರುವ ಕಡುಗಪ್ಪು, ವಿಷಕಾರಿ ಹೊಗೆಯಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಕ್ಯಾನ್ಸರ್‌ ಭೀತಿ ಎದುರಾಗಿದೆ.

ಕೇರಳದಲ್ಲಿ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅಲ್ಲಿಯ ತ್ಯಾಜ್ಯ ಜಿಲ್ಲೆಯ ಆಲೆಮನೆ ಸೇರುತ್ತಿದೆ. ಅಲ್ಲಿನ ಪ್ಲಾಸ್ಟಿಕ್‌ ವಸ್ತು ತಯಾರಿಕಾ ಕಾರ್ಖಾನೆಗಳಲ್ಲಿ ಉಳಿಯುವ ಪಾದರಕ್ಷೆ ಘಟಕದ ತ್ಯಾಜ್ಯ, ರೆಗ್ಸಿನ್‌, ಲೆದರ್‌,ತೈಲ ಕಾರ್ಖಾನೆಗಳ ಕಸ ಬಳಕೆಯಾಗುತ್ತಿವೆ.

ಇದಕ್ಕಾಗಿ, ನಾಗಮಂಗಲ ತಾಲ್ಲೂಕು ದೇವಲಾಪುರ ಗ್ರಾಮದ ಹೊರವಲಯದಲ್ಲಿ ತ್ಯಾಜ್ಯದ ಯಾರ್ಡ್‌ ನಿರ್ಮಿಸಲಾಗಿದ್ದು, ಅಲ್ಲಿಂದಲೇ ಆಲೆಮನೆಗಳಿಗೆ ಪೂರೈಸಲಾಗುತ್ತಿದೆ. ಮಂಡ್ಯ, ನಾಗಮಂಗಲ, ಕೆ.ಆರ್‌.ಪೇಟೆ ತಾಲ್ಲೂಕುಗಳ ಆಲೆಮನೆಗಳು ಈ ತ್ಯಾಜ್ಯವನ್ನು ಅವಲಂಬಿಸಿವೆ.

ಕೇವಲ ₹→1,500ಕ್ಕೆ ಒಂದು ಟನ್‌ ತ್ಯಾಜ್ಯ ಸಿಗುತ್ತಿದೆ. ಮಳೆಗಾಲ ಆರಂಭವಾದ ನಂತರ ಉರುವಲು ಕೊರತೆ ಇದೆ. ಶೇ 60ರಷ್ಟು ಆಲೆಮನೆಗಳು ಇದೇ ತ್ಯಾಜ್ಯಕ್ಕೇ ಮೊರೆ ಹೋಗಿವೆ. ಚಿಮಣಿ ಹೊರಸೂಸುತ್ತಿರುವ ಹೊಗೆಯಿಂದ ಹಳ್ಳಿಗಳ ಮನೆಗಳ ಗೋಡೆ ಕಪ್ಪಾಗಿದ್ದು ಮಕ್ಕಳು, ವೃದ್ಧರಿಗೆ ಶ್ವಾಸಕೋಶ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಮಂಡ್ಯ ತಾಲ್ಲೂಕಿನ ಬಿಳಿದೇಗಲು ಗ್ರಾಮವೊಂದರಲ್ಲೇ ಮೂವರಲ್ಲಿ ಕ್ಯಾನ್ಸರ್‌ ಪತ್ತೆಯಾಗಿದೆ. ‘ವೃದ್ಧರಿಗೆ ದಮ್ಮು ಜಾಸ್ತಿಯಾಗಿದ್ದು, ಮಕ್ಕಳಿಗೆ ನೆಗಡಿ, ಕೆಮ್ಮು ಕಾಣಿಸಿಕೊಂಡಿದೆ’ ಎಂದು ವೈದ್ಯರು ತಿಳಿಸಿದ್ದಾರೆ.

ಬಿಳಿದೇಗಲು ಗ್ರಾಮದ ಬಳಿ ಕೇಂದ್ರೀಯ ವಿದ್ಯಾಲಯ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹೊರಾಂಗಣ ಕೇಂದ್ರವಿದ್ದು, ತ್ಯಾಜ್ಯವನ್ನು ಉರುವಲಾಗಿ ಬಳಸುತ್ತಿರುವುದರ ಪರಿಣಾಮದ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

‘ತೆಂಗಿನಗರಿ ಬೆಲೆ ಏರಿದೆ. ಮಳೆಯಿಂದಾಗಿ ಕಬ್ಬಿನ ರಚ್ಚು ಒಣಗುತ್ತಿಲ್ಲ. ಹೀಗಾಗಿ, ಪ್ಲಾಸ್ಟಿಕ್‌ ತ್ಯಾಜ್ಯ ಬಳಸುತ್ತಿದ್ದೇವೆ.
10 ಚೀಲ ತ್ಯಾಜ್ಯ ಹಾಕಿದರೆ ಒಂದು ಕೊಪ್ಪರಿಗೆ ಬೆಲ್ಲ ತೆಗೆಯಬಹುದು’ ಎಂದು ಆಲೆಮನೆ ಮಾಲೀಕರೊಬ್ಬರು ತಿಳಿಸಿದರು.

ಗಡುವು: ಬಿ.ಹೊಸೂರು ಗ್ರಾಮ ಪಂಚಾ
ಯಿತಿ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಆಲೆಮನೆಗಳಿವೆ. ಸ್ಥಳೀಯರು ಗ್ರಾಮ ಪಂಚಾಯಿತಿ ಕಚೇರಿಗೆ ದೂರು ಕೊಟ್ಟಿದ್ದಾರೆ.

‘ಸಾಮಾನ್ಯ ಸಭೆಯಲ್ಲೇ ನಿರ್ಣಯ ಕೈಗೊಂಡು ಅಂತಿಮ ನೋಟಿಸ್‌ ನೀಡಿ ಆ.25ರವರೆಗೆ ಗಡುವು ನೀಡಲಾಗಿತ್ತು. ತ್ಯಾಜ್ಯ ಬಳಕೆ ಸ್ಥಗಿತಗೊಂಡಿಲ್ಲ. ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ವರದಿ ನೀಡಿದ್ದೇವೆ. ಮಾಲಿನ್ಯ ನಿಯಂತ್ರಣ ಮಂಡಳಿಗೂ ಪತ್ರ ಬರೆದಿದ್ದೇವೆ’ ಎಂದು ಪಿಡಿಒ ಬಿ.ಆರ್‌.ಚಂದ್ರು ಹೇಳಿದರು.

ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಆಲೆಮನೆಗಳಿವೆ. ‘ಹೊರ ರಾಜ್ಯದ ಕಾರ್ಮಿಕರು ಜಿಲ್ಲೆಯ ಆಲೆಮನೆ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ’ ಎಂದು ರೈತ ಮುಖಂಡ ಶಂಭೂನಹಳ್ಳಿ ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಸಿಯೋಜೆನಿಕ್‌ ಅನಿಲ ಅಪಾಯಕಾರಿ

‘ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌, ರಬ್ಬರ್‌ ಸುಡಬಾರದು. ಹೂತು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ದಹಿಸಿದರೆ ಅಪಾಯಕಾರಿ ಕಾರ್ಸಿಯೋಜೆನಿಕ್‌ ಅನಿಲ ಉತ್ಪತ್ತಿಯಾಗುತ್ತದೆ. ಇದರ ಸೇವನೆಯಿಂದ ಶ್ವಾಸಕೋಶದ ಸಮಸ್ಯೆಯಾಗಿ ಗಂಟಲು ಕ್ಯಾನ್ಸರ್‌ ಕಾಣಿಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಆಲೆಮನೆಗಳಲ್ಲಿ ಪ್ಲಾಸ್ಟಿಕ್‌ ಸುಡುತ್ತಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದರ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಗುವುದು

-ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT