ಸೋಮವಾರ, ಮೇ 17, 2021
31 °C
ಫೆ.7ರಿಂದ ನಾಲ್ಕು ದಿನ ಮಂಜಿನ ನಗರಿಯಲ್ಲಿ ಫಲಪುಷ್ಪ ಪ್ರದರ್ಶನ, ಬರಲಿದ್ದಾರೆ ಪುಷ್ಪ ರಾಣಿಯರು

ಮಡಿಕೇರಿಯಲ್ಲಿ ‘ಪುಷ್ಪ ವೈಭವ’ಕ್ಕೆ ಅಂತಿಮ ಸಿದ್ಧತೆ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಪ್ರವಾಸಿಗರ ನೆಚ್ಚಿನ ತಾಣ, ‘ಮಂಜಿನ ನಗರಿ’ಯ ಹಾಟ್‌ ಸ್ಪಾಟ್‌ ಹಾಗೂ ಪ್ರಕೃತಿ ಮಡಿಲು ರಾಜಾಸೀಟ್‌ನಲ್ಲಿ ಫೆ.7ರಿಂದ 10ರ ತನಕ ಫಲಪುಷ್ಪ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗುತ್ತಿದೆ. ಅದಕ್ಕಾಗಿಯೇ ಕಳೆದ ಹದಿನೈದು ದಿನಗಳಿಂದ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ‘ಹೂವು ಚೆಲುವೆಲ್ಲಾ ನಂದೆಂದಿತು...’ ಎನ್ನುವ ದಿನಗಳು ಸಮೀಪಿಸಿವೆ.

ತೋಟಗಾರಿಕೆ ಇಲಾಖೆಗೆ ಸೇರಿದ್ದ ನರ್ಸರಿಗಳಲ್ಲಿ ಬೆಳೆಸಿದ್ದ ಬಗೆಬಗೆಯ ಹೂವಿನ ಕುಂಡಗಳನ್ನು ತಂದು ಜೋಡಿಸಲಾಗುತ್ತಿದೆ. ಅತ್ತ ಕಾರ್ಮಿಕರು ಪ್ರವಾಸಿಗರ ಸೆಳೆಯಲು ಅತ್ಯಾಕರ್ಷವಾಗಿ ಹೂಕುಂಡಗಳ ಜೋಡಣಾ ಕೆಲಸದಲ್ಲಿ ಮಗ್ನರಾಗಿದ್ದಾರೆ. 2019ರ ಜನವರಿಯಲ್ಲಿ ನಡೆದಿದ್ದ ‘ಕೊಡಗು ಉತ್ಸವ’ದ ಅಂಗವಾಗಿ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿತ್ತು. ಅದಾದ ನಂತರ, ಈ ವರ್ಷವೂ ಪ್ರವಾಸಿಗರ ಸೆಳೆಯಲು ಹಾಗೂ ‘ಮಂಜಿನ ನಗರಿ’ಯ ಜನರ ಮನತಣಿಸಲು ಫಲಪುಷ್ಪ ಪ್ರದರ್ಶನ ನಡೆಸಬೇಕು ಎಂಬ ಆಗ್ರಹಗಳು ಕೇಳಿಬಂದಿದ್ದವು. ಅದಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಎಷ್ಟು ವೆಚ್ಚ?: ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಅಂದಾಜು ₹ 20 ಲಕ್ಷ ವೆಚ್ಚದಲ್ಲಿ ಆಯೋಜಿಸಲಾಗುತ್ತಿದೆ. 2018 ಹಾಗೂ 2019ರಲ್ಲಿ ಸುರಿದ ಭಾರಿ ಮಳೆಯಿಂದ ರಾಜಾಸೀಟ್‌ ಉದ್ಯಾನಕ್ಕೆ ಹಾನಿಯಾಗಿತ್ತು. ಅಲ್ಲದೇ ಪಕ್ಕದಲ್ಲಿಯೇ ಇದ್ದ ಚಾಮುಂಡೇಶ್ವರಿ ನಗರದಲ್ಲಿ ಹಲವು ಮನೆಗಳೂ ಧರೆಗೆ ಉರುಳಿದ್ದವು. ಉದ್ಯಾನದಲ್ಲಿದ್ದ ಹೂವಿನ ರಾಶಿಯೂ ಕೊಳೆತು ಹೋಗಿತ್ತು. ಈಗ ಸಸ್ಯಕಾಶಿಯೂ ಹಸಿರಾಗಿದ್ದು, ಬೆಟ್ಟದ ಸಾಲು ಪ್ರವಾಸಿಗರ ಸೆಳಯುತ್ತಿದೆ.  ಈಗ ಪ್ರವಾಸೋದ್ಯಮವೂ ಚೇತರಿಕೆಯತ್ತ ಹೆಜ್ಜೆ ಇಟ್ಟಿದೆ. ಹೀಗಾಗಿಯೇ, ಕೊಡಗು ಸಹಜ ಸ್ಥಿತಿಯತ್ತ ದಾಪುಗಾಲು ಇಡುತ್ತಿದ್ದು, ಪ್ರವಾಸೋದ್ಯಮವನ್ನೇ ನಂಬಿದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ: ಕಳೆದ ನವೆಂಬರ್‌, ಡಿಸೆಂಬರ್‌ ಹಾಗೂ ಜನವರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿಗೆ ಬಂದಿದ್ದರು. ಇದರಿಂದ ರಾಜಾಸೀಟ್‌ ಆದಾಯದಲ್ಲೂ ಏರಿಕೆ ಕಂಡುಬಂದಿದೆ. ರಾಜಾಸೀಟ್‌ ಪ್ರವೇಶ ಶುಲ್ಕದಿಂದಲೇ ₹ 70 ಲಕ್ಷ ಅದಾಯ ಬಂದಿದೆ ಎನ್ನುತ್ತಾರೆ ಅಧಿಕಾರಿಗಳು.

ಹಗಲು ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಿದರೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಮನತಣಿಸಲಿವೆ. ಮಹಿಳೆಯರಿಗಾಗಿ ರಂಗೋಲಿ ಹಾಗೂ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ. ರೈತರು, ತಾವು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ತೋಟಗಾರಿಕೆ ಇಲಾಖೆಯ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಡಬಹುದು. ಅದರಲ್ಲಿ ಆಕರ್ಷಣೀಯ ತರಕಾರಿ ಹಾಗೂ ಹಣ್ಣುಗಳನ್ನು ಗುರುತಿಸಿ ಅವರಿಗೆ ಬಹುಮಾನ ನೀಡಲು ಉದ್ದೇಶಿಸಲಾಗಿದೆ. ಕೊಡಗಿನ ತೋಟಗಾರಿಕೆ, ಕೃಷಿ, ಜೇನು ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ಪ್ರವಾಸಿಗರಿಗೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಣ್ಣದಿಂದ ಸಿಂಗಾರಗೊಂಡಿರುವ ರಾಜಾಸೀಟ್‌ ಎಲ್ಲರ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು